Tuesday, February 4, 2014

ಉದ್ದವನ್ನು ತುಂಡರಿಸುತ್ತಾ...

ಚಿತ್ರಕರ್ಮಿಗಳು ಸಿನಿಮಾ ಮಾಡುವಾಗ ಎದುರಾಗುವ ಸಮಸ್ಯೆ ಅದರ ಅವಧಿಯದ್ದು. ಅಂದರೆ ಬರಹದ ರೂಪದ ಸಿನಿಮಾ ದೃಶ್ಯ ರೂಪಕ್ಕೆ ಬಂದಾಗ ಎಷ್ಟು ಉದ್ದ ಬರುತ್ತದೆ, ಎಷ್ಟು ಉದ್ದ ಮಾಡಿದರೆ ಸರಿಯಾಗುತ್ತದೆ ಎಂಬುದನ್ನು ಅಂದಾಜು ಮಾಡುವುದು ಅಷ್ಟು ಸುಲಭವಲ್ಲ. ಮೊದಲಿಗೆ ಒಂದು ಕತೆಯನ್ನು ಮನಸ್ಸಿನಲ್ಲಿ ಅಂದುಕೊಂಡ ನಂತರ ಅದರ ಚಿತ್ರಕತೆ ರಚಿಸಿದ ನಂತರ ಅದು ಎಷ್ಟು ಅವಧಿಯ ಚಿತ್ರ ಆಗಬಹುದು ಎಂಬ ಅಂದಾಜು ಮಾಡಲು ಒಬ್ಬ ನಿರ್ದೇಶಕ ಮುಂದಾಗುತ್ತಾನೆ. ಮೊದಲೆಲ್ಲಾ ಐದು ಹಾಡು ನಾಲ್ಕು ಫೈಟ್ ಗಳಿದ್ದರೆ ಮುಕ್ಕಾಲು ಘಂಟೆ ಎಗರಿ ಹೋಗುತ್ತಿತ್ತು. ಆನಂತರ ಉಳಿದ ಒಂದು ಮುಕ್ಕಾಲು ಘಂಟೆಗೆ ಕತೆಯನ್ನು ಹೆಣೆಯ ಬೇಕಿರುತ್ತಿತ್ತು. 
ನನಗೆ ಗೊತ್ತಿರುವಂತೆ ಪ್ರತಿ ದೃಶ್ಯವನ್ನು ರಚಿಸಿದ ಮೇಲೆ ಅದರ ಅಂತಿಮ ಪ್ರತಿ ಬರೆದಾದ ನಂತರ ಸ್ಟಾಪ್ ಕ್ಲಾಕ್ ಇಟ್ಟುಕೊಂಡು ಆ ದೃಶ್ಯವನ್ನು ಸಂಪೂರ್ಣ ಶಾಟ್ಸ್ ಜೊತೆಗೆ ಹಿನ್ನೆಲೆ ಸಂಗೀತವನ್ನು ಸೇರಿಸಿಕೊಂಡು ಕಲ್ಪಿಸುತ್ತಾ ನಟಿಸಿಕೊಂಡು ಅಂದಾಜು ಮಾಡುತ್ತೇವೆ. ಆಗ ಆ ದೃಶ್ಯ ಎಷ್ಟು ಉದ್ದ ಬರಬಹುದು ಎಂಬ ಅಂದಾಜು ನಮಗೆ ಸಿಕ್ಕಿ ಬಿಡುತ್ತದೆ. ಆದರೆ ಚಿತ್ರೀಕರಣದ ಸಮಯದಲ್ಲಿ ಮತ್ತು ಚಿತ್ರೀಕರಣದ ನಂತರ ಅದು ಗಮನಾರ್ಹ ಬದಲಾವಣೆ ಕಂಡು ಬಿಡುತ್ತದೆ. ಅದಕ್ಕೆ ನಿರೂಪಣೆಯ ಗತಿ ಮತ್ತು ಕಲಾವಿದರ ಅಭಿನಯ ಶೈಲಿ ಕೂಡ ಕಾರಣವಾಗುತ್ತದೆ. ಉದಾಹರಣೆಗೆ ಒಂದು ಪೇಜ್ ಉದ್ದದ್ದ ಸಂಭಾಷಣೆ ಇರುವ ದೃಶ್ಯವೊಂದನ್ನು ರಘುವರಣ್, ಸಾಯಿಕುಮಾರ್ ಇಬ್ಬರಿಗೂ ಕೊಟ್ಟರೇ ಅವರು ಅವರದೇ ಶೈಲಿಯಲ್ಲಿ ಅಭಿನಯಿಸಿದರೆ ಅದರ ಉದ್ದ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸ ಹೊಂದುತ್ತದೆ. ಸಾಯಿಕುಮಾರ್ ಇರುವ ಅಷ್ಟೂ ಸಂಭಾಷಣೆಯನ್ನು ಪಟಪಟನೆ ಉದುರಿಸಿ ಅಥವಾ ಅಬ್ಬರಿಸಿ ಬಾಯೊರೆಸಿಕೊಂಡು ಕಣ್ಣು ಕೆಕ್ಕರಿಸಿಕೊಂಡು ನಿಂತು ಬಿಡುತ್ತಾರೆ. ಆದರೆ ರಘುವರಣ್ ಹಾಗಲ್ಲ. ಒಂದೊಂದೇ ಮಾತನ್ನು ಅಳೆದು ತೂಗಿ ಗುಣಿಸಿ ಭಾಗಿಸಿ ಎದುರಿರುವವನು ಕೇಳಿಸಿಕೊಳ್ಳುತ್ತಿದ್ದಾನೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವವರಂತೆ ಆಗಾಗ ಅವನ ಮುಖ ನೋಡುತ್ತಾ ನಿಧಾನಕ್ಕೆ ಅದು ಯಾವುದೇ ವಿಷಯವಾದರೂ ತಲೆಕೆಡಿಸಿಕೊಳ್ಳದೆ ಸಾವಧಾನ ಚಿತ್ತರಾಗಿ ಹೇಳುತ್ತಾರೆ. ಸಾಯಿಕುಮಾರ್ ಒಂದೇ ನಿಮಿಷಕ್ಕೆ ಹಿನೆಲೆ ಸಂಗೀತ, ಪರಿಣಾಮ ಜೊತೆಗೆ ಅಷ್ಟನ್ನು ಮುಗಿಸಿದ್ದರೆ, ರಘುವರಣ್ ಗೆ ಎರಡೂವರೆ ನಿಮಿಷವಾದರೂ ಬೇಕಾಗುತ್ತದೆ. 
ಹಾಗೆಯೇ ಕೆಲವು ಚಿತ್ರಗಳು ಮಂದಗತಿಯನ್ನು ಬೇಡುತ್ತವೆ. ಅಥವಾ ನಿರ್ದೇಶಕರ ಕಲ್ಪನೆ ಮತ್ತು ಸೃಜನ ಶೀಲತೆಯ ನಿರೂಪಣೆಯಲ್ಲಿ ಮಂದಗತಿ ಇರುತ್ತದೆ. ಆವಾಗ ಬರಹದ ಪ್ರತಿ ಹಿಡಿದುಕೊಂಡು ನಿರ್ದೇಶಕನನ್ನು ಹೊರತುಪಡಿಸಿ ಬೇರೆಯವರು ಅಂದಾಜು ಮಾಡುವುದು ಕಷ್ಟ. ಉದಾಹರಣೆಗೆ ಹಿಂದಿಯಲ್ಲಿ ಬಂದ ಲೂಟೆರ ಚಿತ್ರವನ್ನು ಗಮನಿಸಿದರೇ ಗೊತ್ತಾಗುತ್ತದೆ. ಸುಮ್ಮನೆ ಕುಳಿತು ಅದರ ಸ್ಕ್ರಿಪ್ಟ್ ಅನ್ನು ನೋಡಿಕೊಂಡು ನಾವು ರಚಿಸಿದರೂ ಅದು ಬರಹದ ರೂಪದಲ್ಲಿ ಮಾಮೂಲಿ ಚಿತ್ರಗಳಿಗಿಂತ ಕಡಿಮೆ ಪುಟಗಳಲ್ಲಿ ಮುಗಿದುಹೋಗುತ್ತದೆ.
ನಮ್ಮ ಚಿತ್ರದ ಬಗ್ಗೆ ಮಾತಾಡುವುದಾದರೆ ಮೊದಲಿಗೆ ಬರಹದ ರೂಪದಲ್ಲಿದ್ದ ಸಿನೆಮಾ ಎರಡು ಘಂಟೆ ಹತ್ತು ನಿಮಿಷ ಬರುತ್ತದೆ ಎಂದು ಅಂದಾಜು ಮಾಡಿದ್ದೆ. ಸ್ಟಾಪ್ ಕ್ಲಾಕ್ ಹಾಕಿಕೊಂಡು ರೂಮಿನ ಬಾಗಿಲು ಹಾಕಿಕೊಂಡು ಇಡೀ ದೃಶ್ಯವನ್ನು ಕಣ್ಣಮುಂದೆ ನಡೆಯುತ್ತಿರುವಂತೆ ಶಾಟ್ ವಿಭಜನೆಯ ಜೊತೆಗೆ ಕಲ್ಪಿಸಿ ಪಾತ್ರಗಳ ಸಂಭಾಷಣೆಯನ್ನು ಒಪ್ಪಿಸಿಕೊಂಡು ಅಂದಾಜು ಮಾಡಿದ್ದೆ. ನನ್ನ ಪ್ರಕಾರ ಅದು ಕರಾರುವಕ್ಕಾಗಿ ಅಷ್ಟೇ ಸಮಯ ಬರುತ್ತದೆ ಎನಿಸಿತ್ತು. ಆದರೆ ಚಿತ್ರೀಕರಣದ ನಂತರ ಸಂಕಲನ ಮಾಡಿ ಚಿತ್ರ ನೋಡಿದಾಗ ನನ್ನ ಅಂದಾಜು ತಲೆಕೆಳಗಾಗಿತ್ತು . ಚಿತ್ರ ಅನಾಮತ್ತು ಎರಡು ಘಂಟೆ ಮೂವತ್ತಾರು ನಿಮಿಷ ಬಂದಿತ್ತು. ಅಂದರೆ ಇಪ್ಪತ್ತು ನಿಮಿಷ ಹೆಚ್ಚಿಗೆ ಬಂದಿತ್ತು. ನಾನು ಅಂದುಕೊಂಡಷ್ಟನ್ನೇ ಅಂದುಕೊಂಡ ಹಾಗೆಯೇ ಚಿತ್ರೀಕರಿಸಿದ್ದೆ. ಆದರೂ ಇಪ್ಪತ್ತಾರು ನಿಮಿಷ ಹೆಚ್ಚಿತ್ತು. ಅದೂ ಹಾಡು ಇಲ್ಲದೆ. ಈಗ ನಮಗೆ ಪೀಕಲಾಟಕ್ಕಿಟ್ಟುಕೊಂಡದ್ದು ಎಲ್ಲಿ ಯಾವುದನ್ನು ಕತ್ತರಿಸಬೇಕು ಎಂಬುದು. ಪೂರ್ತಿ ಎರಡು ಘಂಟೆ ಮೂವತ್ತಾರು ನಿಮಿಷವನ್ನು ಪರದೆಗೆ ತಂದುಬಿಡೋಣ ಎಂದರೆ ನಮ್ಮವರು ಇಲ್ಲ...ಅನಗತ್ಯ ಲ್ಯಾಗ್ ಆಗುತ್ತದೆ. ಜನಕ್ಕೆ ಬೋರ್ ಹೊಡೆಸಬಹುದು ಎಂಬರ್ಥದ ಮಾತುಗಳನ್ನು ಆಡಿದರು.
ಹಾಗೆ ನೋಡಿದರೆ ಮೊದಲೆಲ್ಲಾ ನೆಗೆಟಿವ್ ನಲ್ಲಿ ಶೂಟ್ ಮಾಡುವ ಸೆನ್ಸಾರ್ ಗೆ ಹದಿಮೂರು ಸಾವಿರದ ಚಿಲ್ಲರೆ ಅಡಿಗಳಷ್ಟು ಉದ್ದವಿರಲೇ ಬೇಕಿತ್ತು. ಎಷ್ಟೋ ಚಿತ್ರಗಳು ಚಿತ್ರೀಕರಣವಾಗಿ ಅದರ ಉದ್ದ ಸಾಲದೇ ಮತ್ತೆ ಒಂದೆರೆಡು ದೃಶ್ಯವನ್ನೂ ಹಾಡನ್ನೂ ಸೇರಿಸಿ ಉದ್ದವನ್ನು ಸರಿ ಪಡಿಸುತ್ತಿದ್ದರು. ನನಗೆ ಗೊತ್ತಿರುವಂತೆ ಒಂದು ಚಿತ್ರದ ಉದ್ದ ಕಡಿಮೆಯಾದಾಗ ಅದಕ್ಕೆ ಒಂದು ಹಾಡನ್ನು ಕೈಗೆ ಸಿಕ್ಕಿದ ಕ್ಯಾಮೆರಾ ದಲ್ಲಿ ಚಿತ್ರಿಸಿ ಸೇರಿಸಲಾಗಿತ್ತು. ಆಗಲೂ ಕಡಿಮೆಯಾದಾಗ ಆ ಚಿತ್ರತಂಡ ಚಿತ್ರದಲ್ಲಿದ್ದ ಓಕೆ ಆಗದ ಶಾಟ್ಸ್ ಗಳನ್ನೂ ಚಿತ್ರದ ಕೊನೆಯಲ್ಲಿ ಸೇರಿಸಿ ಅದಕ್ಕೆ ಮೇಕಿಂಗ್' ಎಂಬ ಬರಹ ಹಾಕಿ ಅದನ್ನೇ ಉಲ್ಪಾ ಪಲ್ಟಾ ತಿರುಗಿಸಿ ಹಿಗ್ಗಿಸಿದ್ದರು.
ಆದರೆ ನಮ್ಮ ಚಿತ್ರರಂಗದ ಮಟ್ಟಿಗೆ ಈ ಉದಾಹರಣೆ ತುಂಬಾ ಕಡಿಮೆ ಎನ್ನಬಹುದು. ಒಬ್ಬ ನಿರ್ದೇಶಕ ಚಿತ್ರೀಕರಣ ಸ್ಥಳದಲ್ಲಿ ಹೇಗೆ ಬೇಕೋ ಹಾಗೆಲ್ಲಾ ಶಾಟ್ಸ್ ತೆಗೆಯಲು ಮುಂದಾಗಿಬಿಡುತ್ತಾನೆ. ಅಲ್ಲಿಗೆ ಹೋಗುವವರೆಗೆ ಒಂದು ಮನಸ್ಸಿನಲ್ಲಿ ಇಷ್ಟನ್ನು ಚಿತ್ರಿಸಬೇಕು ಎಂದೇ ಕೊಂಡೆ ಹೋಗುತ್ತಾನಾದರೂ ಅಲ್ಲಿ ಹೋದ ಮೇಲೆ ತಲೆ ಎಲ್ಲೆಲ್ಲೋ ಓಡಿ ಅಗತ್ಯವಿರಲಿ ಇಲ್ಲದಿರಲಿ ಚಿತ್ರಿಸಿಬಿಡುತ್ತಾನೆ. ಬೇಕಾದರೆ ಬಳಸಿಕೊಂಡರಾಯಿತು..ಇಲ್ಲದಿದ್ದರೆ ಬೇಡ..ಮತ್ತೆ ಇದೆ ಜಾಗಕ್ಕೆ ಬರಲು ಸಾಧ್ಯವಾಗುತ್ತದೆಯೇ ಎಂಬ ಸಮರ್ಥನೆ ಅವನದ್ದಾಗಿರುತ್ತದೆ.
ಆದರೆ ನಾನು ತಿಳಿದ ಮಟ್ಟಿಗೆ ಇದು ಹಾಲಿವುಡ್ ನಲ್ಲಿ ಕಡಿಮೆಯೇ. ಯಾಕೆಂದರೆ ಅಲ್ಲಿ ವಿಸ್ತೃತವಾದ ಸ್ಟೋರಿಬೋರ್ಡ್ ಇರುತ್ತದೆ. ಇಷ್ಟನ್ನೇ ಹೀಗೆಯೇ ಚಿತ್ರಿಸಬೇಕು ಎಂಬುದು ಮೊದಲೇ ಕರಾರುವಕ್ಕಾಗಿರುತ್ತದೆ. ಹಾಗಾಗಿ ಅಲ್ಲಿ ಅಷ್ಟಾಗಿ ಸಮಸ್ಯೆಯಾಗುವುದಿಲ್ಲ.
ನಮ್ಮಲ್ಲಿ ಎಷ್ಟೋ ಚಿತ್ರಗಳು ಮೊದಲ ಹಂತದ ಸಂಕಲನವಾದ ಮೇಲೆ ನೋಡಿದರೆ ನಾಲ್ಕು ಘಂಟೆಗೂ ಹೆಚ್ಚು ಬಂದು ಬಿಟ್ಟಿರುತ್ತದೆ. ಅದರಲ್ಲೂ ಸ್ಟಾರ್ ಸಿನೆಮಾಗಳು ಉದ್ದುದ್ದ ಬರುತ್ತವೆ. ಅದರಲ್ಲಿ ಬಿಲ್ಡ್ ಅಪ್ ಶಾಟ್ಸ್ ಗಳು ಎಕ್ಸ್ಟ್ರಾ ಶಾಟ್ಸ್ ಗಳು...ಆನಂತರ ಟ್ರಿಮ್ಮಿ೦ಗ್ ಗೆ ಕುಳಿತುಕೊಂಡರೆ ಮೊದಲಿಗೆ ಶಾಟ್ಸ್ ಲೆಕ್ಕದಲ್ಲಿ ಕತ್ತರಿಸುತ್ತಾ ಕೊನೆ ಕೊನೆಗೆ ದೃಶ್ಯವನ್ನೇ ಎಗರಿಸಬೇಕಾಗುತ್ತದೆ. ಕೊನೆಗೂ ಅಂತೂ ಇಂತೂ ಅಂತಿಮ ಪ್ರತಿ ಮೂರು ಘಂಟೆಯಷ್ಟು ಬಂದರೆ ಇನ್ನೇನೂ ಕತ್ತರಿಸಲು ಸಾಧ್ಯವಿಲ್ಲ ಎನಿಸಿ ಬಿಡುಗಡೆ ಮಾಡಿಬಿಡುತ್ತಾರೆ. ಆದರೆ ಬಿಡುಗಡೆಯಾದ ಮೇಲೆ ಮತ್ತೆ ಚಿತ್ರ ಎಳೆತ ಎನಿಸಿದರೆ ಆಗ ಮತ್ತಷ್ಟು ಕತ್ತರಿಸಬೇಕಾಗುತ್ತದೆ. ಇತ್ತೀಚಿಗೆ ಬೃಂದಾವನ, ಮಾತ್ರನ್. ಜಿಲ್ಲಾ, ನೆನೋಕ್ಕಡಿನೆ ಮುಂತಾದ ಚಿತ್ರಗಳು ಹದಿನೈದು ನಿಮಿಷಗಳಷ್ಟು ಕಡಿತಗೊಂದಿದ್ದವು. ಕೆಲವು ಚಿತ್ರಗಳಂತೂ ಆರುಘಂಟೆಗಳಷ್ಟು ಉದ್ದವಿದ್ದದ್ದು , ನಾಲ್ಕು ಘಂಟೆ ಉದ್ದವಿದ್ದದ್ದು ನಮ್ಮಲ್ಲಿ ಉದಾಹರಣೆಗಳಿವೆ.
ಏಕೆ ಹೀಗೆ ಆಗುತ್ತವೆ.? ಎಂಬ ಪ್ರಶ್ನೆ ಕುರಿತು ಹಲವಾರು ಸಾರಿ ಯೋಚಿಸಿದ್ದೇನೆ. ಯಾಕೆಂದರೆ ಒಂದು ಚಿತ್ರದ ಪೂರ್ವ ಯೋಜನೆ ಬರಹದ ಹಂತದಲ್ಲಿ ನಿರ್ದೇಶಕ ಇರದೇ ಇದ್ದರೇ ಅಥವಾ ನಿರ್ದೇಶಕ ಚಿತ್ರದ ಮೂಡ್ ಅಥವಾ ಭಾವವನ್ನು ಅರಿತುಕೊಳ್ಳದಿದ್ದರೆ ಈ ರೀತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕೈಗೆ ಸಿಕ್ಕಿದ ದೃಶ್ಯದ ಬರಹದ ಪ್ರತಿಯನ್ನು ಸಂಕಲನದಲ್ಲಿ ತೊಂದರೆಯಾಗದಂತೆ ಶಾಟ್ಸ್ ವಿಭಜಿಸಿ ನಿರ್ದೇಶನ ಮಾಡಿದರೆ ಅದು ನಿರ್ದೇಶನವೇ ಅಲ್ಲ. ಇಷ್ಟಕ್ಕೂ ಸಿನಿಮಾದಲ್ಲಿ ಶಾಟ್ಸ್ ದೃಶ್ಯವನ್ನು ಚಿತ್ರೀಕರಿಸಲು ಉಪಯೋಗವಾಗುವಂತಹದ್ದು. ಆದರೆ ಚಿತ್ರದ ಭಾವಕ್ಕೆ ಯಾವ ಶಾಟ್ಸ್ ಇಟ್ಟರೆ ಪರಿಣಾಮಕಾರಿ ಎಲ್ಲಿಗೆ ಒಂದು ಶಾಟ್ಸ್ ಬದಲಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಚಿತ್ರದ ಒಟ್ಟಾರೆ ಆಶಯಕ್ಕೆ ಮತ್ತು ಗತಿಗೆ ಪೂರಕವಾಗಿರುತ್ತದೆ ಎಂಬುದನ್ನು ಅರಿತುಕೊಂಡು ಮಾಡುವುದು ನಿರ್ದೇಶನ ಎನ್ನಬಹುದು. ಅದರ ಹೊರತಾಗಿ ಸುಮ್ಮನೆ ಒಂದಷ್ಟು ಶಾಟ್ ವಿಭಜಿಸಿದರೆ ಭಾವ ಮನಸ್ಸಿಗೆ ತಟ್ಟುವುದಿಲ್ಲ. ಸಿನೆಮಾದಲ್ಲಿ ಗತಿ ಎಂಬುದು ಹೆಚ್ಚು ಅಗತ್ಯವಾದ ಅಂಶ. ಯಾಕೆಂದರೆ ಒಂದು ಥ್ರಿಲ್ಲರ್ , ಪತ್ತೆಧಾರಿ, ಭಯಾನಕ,.ಹಾಸ್ಯ ಹೀಗೆ ಆಯಾ ವಿಭಾಗಕ್ಕೆ ಅದರದೇ ಆದ ನಿರೂಪಣಶೈಲಿ ಇರುತ್ತದೆ. ಅದ್ಯಾವುದನ್ನೂ ಲೆಕ್ಕಿಸದೆ ಸುಮ್ಮನೆ ಶಾಟ್ ವಿಭಜನೆ ಮಾಡಿ ಚಿತ್ರೀಕರಿಸಿದರೆ ಉದ್ದ ಅಳತೆ ಸಿಗದೇ ಸಿನಿಮಾ ಏನೇನೋ ಆಗುತ್ತದೆ.
ಹೆಚ್ಚಾಗಿ ಕಿರುತೆರೆ ದೈನಂದಿನ ಧಾರಾವಾಹಿಗಳಲ್ಲಿ ಈ ಕೆಲಸವಾಗುತ್ತದೆ. ಎಲ್ಲೋ ಕುಳಿತು ಚಿತ್ರಕತೆ ಸಂಭಾಷಣೆ ಬರೆಯುವ ಬರಹದ ರೂಪ ಬೆಳಿಗ್ಗೆ ನಿರ್ದೇಶಕನ ಕೈ ಸೇರುತ್ತದೆ. ಅದನ್ನು ಸಂಜೆಯವರೆಗೆ ಚಿತ್ರಿಸಿಕೊಡಬೇಕಾಗುತ್ತದೆ. ಇತ್ತೀಚಿಗೆ ನಾನೊಂದು ಧಾರಾವಾಹಿಗೆ ಸಂಚಿಕೆ ನಿರ್ದೇಶಕನಾಗಿದ್ದೆ. ನನಗೆ ಬೆಳಿಗ್ಗೆ ಪ್ರತಿ ದೊರೆಯುತ್ತಿತ್ತು. ಕಲಾವಿದರಿರುತ್ತಿದ್ದರು. ಇದೇಕೆ, ಇದೇನು, ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರವೂ ಇರುತ್ತಿರಲಿಲ್ಲ. ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಆ ದಿನದಲ್ಲಿ ಅಷ್ಟನ್ನೂ ಹೆಚ್ಚು ಚಿತ್ರಿತ ಅವಧಿಯ ಜೊತೆಗೆ ಚಿತ್ರಿಸಿಕೊಡಬೇಕಾಗುತ್ತಿತ್ತು. ನಾನದನ್ನು ಮಾಡಿದೆ ಕೂಡ. ಅದು ಅಷ್ಟು ಖುಷಿ ಎನಿಸದಿದ್ದರೂ ಅದರದೇ ಆದ ಪ್ರಪಂಚದಲ್ಲಿ ಅದು ಅವಶ್ಯಕವೂ ಆಗಿತ್ತು.
ಇಷ್ಟಕ್ಕೂ ಚಿತ್ರಗಳಲ್ಲಿ ಇಷ್ಟೇ ಅವಧಿಯಿರಬೇಕು ಎನ್ನುವ ಕಾನೂನು ಇಲ್ಲ. ಹಾಲಿವುಡ್ ರಂಗದಲ್ಲಿ ಒಂದೂವರೆ ಘಂಟೆಯಿಂದ ಚಿತ್ರದ ಕತೆ ಬೇಡುವಷ್ಟು ಅವಧಿಯಿರುತ್ತದೆ. ಟೈಟಾನಿಕ್ ಮೂರು ಘಂಟೆ ಹದಿನಾರು ನಿಮಿಷ, ಶಿಂಡ್ಲರ್ ಲಿಸ್ಟ್ ಮೂರುವರೆ ಘಂಟೆ ಹೀಗೆ. ಬರ್ನಾರ್ಡೊ ಬಾರ್ಟುಲೂಸಿ ನಿರ್ದೇಶನದ 1900 ಐದು ಘಂಟೆ, ವಾರ ಅಂಡ್ ಪೀಸ್ ಎಂಟುಘಂಟೆ ಅವಧಿಯದ್ದಾಗಿವೆ. ಆದರೆ ಅವುಗಳು ಬೋರ್ ಎನಿಸುವುದಿಲ್ಲ. ಯಾಕೆಂದರೆ ಚಿತ್ರೀಕರಿಸುವಾಗಲೇ ಅವರಿಗೆ ಚಿತ್ರದ ಅವಧಿಯ ಅಂದಾಜು ಇರುತ್ತದೆ. ಹಾಗಾಗಿ ತೀರಾ ಉದ್ದವಾಗಿ ಆನಂತರ ಕತ್ತರಿಸುವ ಪ್ರಮೇಯ ಬರುವುದಿಲ್ಲವೇನೋ?
ಒಟ್ಟಿನಲ್ಲಿ ಅಂದುಕೊಂಡ ಅವಧಿಗಿಂತ ಎರಡು ಪಟ್ಟು ಮೂರು ಪಟ್ಟು ಉದ್ದದ ಚಿತ್ರಗಳು ನಮ್ಮಲ್ಲೇ ಜಾಸ್ತಿ ಇರಬಹುದೇನೋ ಅನ್ನುವ ಅನುಮಾನ ನನ್ನದು. ಯಾಕೆಂದರೆ ನನಗೆ ಗೊತ್ತಿರುವಂತೆಯೇ ಎಷ್ಟೋ ಯಶಸ್ವೀ ನಿರ್ದೇಶಕರ ಯಶಸ್ವೀ ಚಿತ್ರಗಳು ನೀಳ ಚಿತ್ರಗಳಾಗಿದದ್ದು ಆನಂತರ ಚಿಕ್ಕದಾದದ್ದು ಅದನ್ನು ಕಡಿತಗೊಳಿಸಲು ಒದ್ದಾಡಿದ್ದು ಎಷ್ಟೋ ಅಂಶಗಳನ್ನು ಕಿತ್ತೆ ಹಾಕಿದ್ದು ನನಗೆ ಗೊತ್ತಿದೆ.

1 comment: