Thursday, January 30, 2014

ರೀಮೇಕ್...1

ಪ್ರತಿ ಸಾರಿ ರೀಮೇಕ್ ಚಿತ್ರಗಳನ್ನು ನೋಡಿದ ಮೇಲೆ ನನಗೆ ಹೀಗೆಯೇ ಯೋಚನೆ ಕಾಡತೊಡಗುತ್ತದೆ. ಸುಮ್ಮನೆ ಈ ಚಿತ್ರ ಎಲ್ಲೂ ಬಂದಿಲ್ಲ, ಇದರ ಬಗ್ಗೆ ನಾನು ಓದೂ ಇಲ್ಲ, ನೋಡೂ ಇಲ್ಲ  ಎಂದೆಲ್ಲಾ ಮನಸ್ಸಿನಲ್ಲಿ ಅಂದುಕೊಂಡು ಖಾಲಿ ತಲೆಯಲ್ಲಿಯೇ ಸಿನಿಮಾ ನೋಡುವ ಪ್ರಯತ್ನ ಮಾಡುತ್ತೇನೆ. ಆದರೂ ನೋಡಿಯಾದ ಮೇಲೆ ಅಯ್ಯೋ ಅದೇ ಚೆನ್ನಾಗಿತ್ತಲ್ಲ ಎನಿಸುತ್ತದೆ. ಅದೇ ರೀತಿ ಕೆಲವು ಚಿತ್ರದ ಕನ್ನಡ ಅವತರಣಿಕೆ ಎಂದಾಗ ಅದರಲ್ಲಿನ ಅದ್ಭುತವಾಗಿದ್ದ ಅಂಶಗಳನ್ನು ಕನ್ನಡದಲ್ಲೂ ನೋಡುವ ಖುಷಿಗೆ ಚಿತ್ರ ಮಂದಿರಕ್ಕೆ ಹೊಕ್ಕಿರುತ್ತೇನೆ. ಅದು ಕೆಲವೊಮ್ಮೆ ಕೈ ಕೊಡುತ್ತವೆ.
ನಾನು ಚಿನ್ನತಂಬಿ, ಚಿಂಟಿ, ಅನಾರಿ ರಾಮಾಚಾರಿ ನಾಲ್ಕು ಚಿತ್ರಗಳನ್ನು ನೋಡಿದ್ದೇನೆ. ರವಿಚಂದ್ರನ್, ಶಿವಾಜಿ ಪ್ರಭು, ವೆಂಕಟೇಶ್ ಎಲ್ಲರೂ ಕಣ್ಣಲ್ಲೇ ಇದ್ದಾರೆ. ಆದರೆ ರವಿಚಂದ್ರನ್ ಮುಂದೆ ಅವರೆಲ್ಲರೂ ಒಂದು ಹೆಜ್ಜೆ ಕಮ್ಮಿಯೇ. ಯಾಕೆಂದರೆ ಶಿವಾಜಿ ಪ್ರಭು ಗುಂಡ ಗುಂಡಕ್ಕೆ ತೀರಾ ಪೆದ್ದನಂತೆ ಕಾಣುತ್ತಾರೆ..ವೆಂಕಟೇಶ್ ಚುರುಕಾಗಿದ್ದು ಪೆದ್ದನಿಗಿಂತ ಸ್ವಲ್ಪ ಮೇಲೆ ಅನಿಸುತ್ತಾರೆ. ಆದರೆ ಆ ರಾಮಾಚಾರಿಯ ಅಮಾಯಕ ಮನಸ್ಸಿನ ಮುಗ್ಧ ಯುವಕನ ಪಾತ್ರವಿದೆಯಲ್ಲ ಅದು ರವಿಚಂದ್ರನ್ ದೇ ಎನಿಸುತ್ತದೆ. ಅದೇ ರೀತಿ ಶಂಕರ್ ನಾಗ್ ಅಭಿನಯದ ಹೊಸ ಜೀವನ, ಕಾಶೀನಾಥ್ ಅಭಿನಯದ ಲವ್ ಮಾಡಿ ನೋಡು ಚಿತ್ರಗಳನ್ನು ಗಮನಿಸಬಹುದು.ಎರಡರ ಮೂಲ ರೂಪಕ್ಕಿಂತ ನಮ್ಮದು ಚೆನ್ನಾಗಿದೆ ಎನಿಸುತ್ತದೆ. ಅದೇ ಅ ಕಿಸ್ ಬಿಫೋರ್ ಡೈಯಿಂಗ್ ಚಿತ್ರದ ಹಳೆಯ ಆನಂತರ ಮ್ಯಾಟ್ ದಿಲ್ಲೊನ್ ಅಭಿನಯದ ಆನಂತರ ಮಲಯಾಳಂ ಭಾಷೆಯ ಚಿತ್ರಗಳನ್ನು ನೋಡಿದ ಮೇಲೆ ಬಾಜಿಗರ್ ಸೂಪರ್ ಎನಿಸುತ್ತದೆ. ಪ್ರತೀಕಾರ, ಪ್ರೀತಿ ತಾಯಿ ಮಮತೆ ಎಲ್ಲವನ್ನೂ ಹದವಾಗಿ ಬೆರೆಸಿದ್ದ ಚಿತ್ರವದು. ಅದರ ಎಲ್ಲಾ ಅಂತ್ಯಗಳನ್ನು ಸುಮ್ಮನೆ ಗಮನಿಸಿ. ಆಂಗ್ಲ ಭಾಷೆಯ ಚಿತ್ರದಲ್ಲಿ ನಾಯಕಿಯನ್ನು ಅಟ್ಟಿಸಿಕೊಂಡು ಬರುವಾಗ ನಾಯಕ ಸಾಯುತ್ತಾನೆ. ಮಲಯಾಳಂ ಚಿತ್ರದಲ್ಲಿ ನಾಯಕಿಯ ತಂಗಿ ನಾಯಕನನ್ನು ಸಾಯಿಸುತ್ತಾಳೆ.ಆದರೆ ಬಾಜಿಗರ್ ಚಿತ್ರದ ಅಂತ್ಯದಲ್ಲಿ ಖಳನೆ ಸಾಯಿಸಿದರೂ ಅದರಲ್ಲಿನ ಫೋರ್ಸ್ ಬೇರೆ. ನಾಯಕ ಸಮರ್ಥನೆ ಇದ್ದರೂ  ಅನ್ಯಾಯವಾಗಿ ಮೂರು ಕೊಲೆಗಳನ್ನು ಮಾಡುತ್ತಾನೆ. ಹಾಗಾಗಿ ಅವನು ಅವನ ದಾರಿಯಲ್ಲಿ ಸರಿ ಎನಿಸಿದರೂ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದಾಗ ಅದು ತಪ್ಪು. ಹಾಗೆಯೇ ಪ್ರತೀಕಾರದ ಬೆಂಕಿ ನಮ್ಮನ್ನೂ ಸುಡುತ್ತದೆ ಎನ್ನುವದನ್ನು ಚಿತ್ರದಲ್ಲಿ ಸೇರಿಸಲೇ ಬೇಕಿತ್ತು. ಆದರೆ ಕನ್ನಡದಲ್ಲಿ ಆ ಎಲ್ಲಾ ಆಶಯವನ್ನೂ ಒಂದೇ ಏಟಿಗೆ ತೆಗೆದು ಬೀಸಾಕಿದರು. ನಾಯಕ ಖಳನನ್ನು ಸಾಯಿಸಿ ನಾನು ಕೊಲೆ ಮಾಡಿರುವುದು ನನಗೆ ಗೊತ್ತು, ನಿನಗೆ ಗೊತ್ತು ಆ ದೇವರಿಗೆ ಗೊತ್ತು ಶಿಕ್ಷೆ ಅವನೇ ಕೊಡಲಿ ಎಂದು ಆರಾಮವಾಗಿ ನಡೆದುಕೊಂಡು ಹೋಗಿಬಿಡುತ್ತಾನೆ, ನಾಯಕಿಯ ಜೊತೆಗೆ. ಇಲ್ಲಿ ನಿರ್ದೇಶಕ ನಾಯಕನನ್ನ್ಯಾಕೆ ಉಳಿಸಿದರು? ಜೊತೆಗೆ ಏನನ್ನು ಹೇಳಲು ಹೊರಟರು ..ಮತ್ತದು ಸರಿಯಾಯಿತಾ..? ನಾವು ಸಾವಿರ ಮಾತನಾಡಬಹುದು. ಆದರೆ ಫಲಿತಾಂಶ ನಮ್ಮಲ್ಲೇ ಇದೆ. ಚಿತ್ರ ಸೋತದ್ದು ಗೊತ್ತೇ ಇದೆ.
ಅದೇ ರೀತಿ ಅಲ್ಲಿನ ಪ್ರಮುಖ ಅಂಶಗಳನ್ನು ಇಲ್ಲಿ ಪೇಲವ ಮಾಡಿದ್ದರು. ನನ್ನ ವಿಷಯವೇ ಅದು. ಒಂದು ರೀಮೇಕ್ ಮಾಡುವಾಗ ಅದರಲ್ಲಿನ ಭಾವತೀವ್ರತೆ, ಅದರಲ್ಲಿನ ಪ್ರಮುಖ ಅಂಶ ಮತ್ತು ಅದರಲ್ಲಿದ್ದ ಜನ ಸೆಳೆಯುತ್ತಿದ್ದ ಅಂಶ ಯಾಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಅದೇ ಪ್ರಮುಖವಾದ ಅಂಶವಾಗಿರುತ್ತದೆ. ಬಹುತೇಕ ನಮ್ಮವರ್ಯಾಕೆ[ಬರೀ ಕನ್ನಡ ಸಿನೆಮಾ ಬಗ್ಗೆ ಮಾತಾಡುತ್ತಿರುವುದರಿಂದ] ಅದನ್ನು ಸರಿಯಾಗಿ ಗಮನಿಸುವುದಿಲ್ಲ. ಬಾಜಿಗರ್ ವಿಷಯದಲ್ಲಿ ಕ್ಲೈಮಾಕ್ಸ್ ಮುಖ್ಯವಾದ ಜನರನ್ನು ಆಕರ್ಷಿಸಿದ ಅಂಶ ಎನ್ನಬಹುದು. ಹೊಟ್ಟೆಯಲ್ಲಿ ರಾಡು ಚುಚ್ಚಿಸಿಕೊಂಡ ನಾಯಕ ಖಳನನ್ನು ನೋಡುತ್ತಿದ್ದರೆ, ಖಳ ಅಟ್ಟಹಾಸದ ನಗು ನಗುತ್ತಿರುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ನಾಯಕನೂ ನಗತೊಡಗಿದಾಗ ಖಳನಿಗೆ ಗಾಬರಿ, ಆಶ್ಚರ್ಯ..ನಿನ್ನನ್ನು ಕೊಲ್ಲಲು ನನಗೆ ಕಾರಣ ಸಿಕ್ಕಿತು ಎನ್ನುವ ಭಾವ ಆ ನಗೆಯಲ್ಲಿರಬಹುದಾ..? ಒಟ್ಟಿನಲ್ಲಿ ಆ ದೃಶ್ಯ ರೋಮಾಂಚನ ಉಂಟುಮಾಡುವುದು ಸಹಜ. ಆದರೆ ಅದೇ ಕನ್ನಡ ಅವತರಣಿಕೆಯಲ್ಲಿಲ್ಲ.
ಪೊರ್ಕಿ ಮತ್ತು ಪೋಕಿರಿಯ ಸಮಸ್ಯೆಯೂ ಅದೆ. ಅಲ್ಲಿನ ಪವರ್, ಫೋರ್ಸ್ ಕನ್ನಡದಲ್ಲಿರಲಿಲ್ಲ. ಹಾಗೆ ನೋಡಿದರೆ ತೆಲುಗಿನ ಮಹೇಶ್ ಬಾಬು ಪವರ್ ಗೆ ತಾರಾಮೌಲ್ಯಕ್ಕೆ ದರ್ಶನ್ ಎಲ್ಲಾ ದಿಕ್ಕಿನಿಂದಲೂ ಜಾಸ್ತಿ ಎನ್ನಬಹುದು. ಆದರೆ ಅಲ್ಲಿನ ಅವರ ಕೇಶ ಶೈಲಿ ಮತ್ತು ಅಭಿನಯ ಶೈಲಿ ಸಿನಿಮದ ಮೊದಲ ಋಣಾತ್ಮಕ ಅಂಶ ಎನ್ನಬಹುದು. ಆದರೆ ಅಣ್ಣಯ್ಯ, ಗಡಿಬಿಡಿ ಗಂಡ ಮುಂತಾದ ರವೀಚಂದ್ರನ್ ಅವರ ಅಭಿನಯದ ರೀಮೇಕ್ ಚಿತ್ರಗಳಲ್ಲಿ ಮೂಲಕ್ಕಿಂತ ಒಂದು ಕೈ ಹೆಚ್ಚಗಿನ ಸೊಗಸಿದೆ ಎನ್ನಬಹುದು. ಹಾಗೆಯೇ ತಮಿಳಿನ ರಜನಿಕಾಂತ್ ಅಭಿನಯದ ಭಾಷಾ ಕನ್ನಡದಲ್ಲಿ ಬರುತ್ತದೆ ಎಂದಾಗ ಕುತೂಹಲ ಇದ್ದೇ ಇತ್ತು. ಆದರೆ ಇಲ್ಲಿನ ಕೋಟಿಗೊಬ್ಬ ಚೆನ್ನಾಗಿತ್ತು. ಅದೇ ಮಾತನ್ನು ವಿಷ್ಣುಸೇನಾಗೆ ಹೇಳಲಿಕ್ಕೆ ಬರುವುದಿಲ್ಲ. ಇದೆಲ್ಲಾ ದೊಡ್ಡವರ ಸಿನಿಮಾಗಳು. ಫ್ರೆಂಚ್ ನ ಪ್ರಾನ್ಸಿಸ್ ವಬೇರ್ ನಿರ್ದೇಶನದ ಡಿನ್ನರ್ ಗೇಮ್ ಹಿಂದಿಯಲ್ಲಿ ಭೇಜಾ ಫ್ರೈ ಆಗಿ ಬಂದಾಗ ಮೂಲಕ್ಕಿಂತ ಹೆಚ್ಚಿನ ನಗು ದೇಸಿ ಸಿನಿಮಾದಲ್ಲಿತ್ತು. ವಿನಯ್ ಪಾಠಕ್ ಅಭಿನಯ ಅದ್ಭುತ ಎಂದೇ ಹೇಳಬಹುದು. ಯಾಕೆಂದರೆ ಇಲ್ಲಿ ವಿನಯ್ ಪಾಠಕ್ ನಾನು ಹಾಸ್ಯಗಾರ ಎಂದುಕೊಳ್ಳದೆ ಅಭಿನಯಿಸಿದ್ದರು. ಮೂಲದಲ್ಲಿ ಚಿತ್ರಕಲಾವಿದನ ಪಾತ್ರ ಹಿಂದಿಯಲ್ಲಿ ಗಾಯಕನಾಗಿ ಬದಲಾಗಿತ್ತು. ಆದರೆ ಅದೇ ಕನ್ನಡಕ್ಕೆ ದಿನೇಶ್ ಬಾಬು ನಿರ್ದೇಶನದಲ್ಲಿ ಮಿಸ್ಟರ್ ಗರಗಸ ಆಗಿ ಮೂಡಿಬಂದಾಗ ಅಲ್ಲಿ ನಗು ಬರಲು ಕಾರಣವೇ ಇರಲಿಲ್ಲ. ಕೋಮಲ್ ಪ್ರತಿ ದೃಶ್ಯದಲ್ಲೂ ಕೃತಕವಾಗಿ ಕಾಣಿಸಿದ್ದರು, ಅಭಿನಯಿಸಿದ್ದರು... ಒಬ್ಬ ಚಿತ್ರ ನಿರ್ದೇಶಕನಾಗಿ ಬರಹಗಾರನಾಗಿ ಬೇಕೆಂತಲೇ ನಗಿಸಲು ಪ್ರಯತ್ನಿಸಿದ್ದರು.
ಹಿಂದಿಯಲ್ಲೂ ಇದು ಹಲವಾರು ಸಾರಿ ಆಗಿದ್ದಿದೆ. ಇಂಗ್ಲಿಷಿನಲ್ಲಿ ಎರಡು ಇಟಾಲಿಯನ್ ಜಾಬ್ ಚಿತ್ರಗಳಿವೆ. ಎರಡರಲ್ಲೂ ಮುಖ್ಯವಾದ ಅಂಶವೆಂದರೆ ತುಂಬಿದ ಜನನಿಬಿಡ ನಗರದಲ್ಲಿನ ಟ್ರಾಫಿಕ್ ಜಾಮ್ ಕುರಿತಾದದ್ದು. ಟ್ರಾಫಿಕ್ ಜಾಮ್ ಬಳಸಿಕೊಂಡು ದೊಡ್ಡ ಕಳ್ಳತನ ಮಾಡುವುದು ಚಿತ್ರದ ಮುಖ್ಯ ಅಂಶ.ಆದರೆ ಅಬ್ಬಾಸ್ ಮಸ್ತಾನ್ ತಲೆಯನ್ನು ಎಲ್ಲಿ ಇಟ್ಟಿದ್ದರೋ..? ಆ ಮುಖ್ಯಾಂಶವನ್ನೇ ತೆಗೆದು ಬಿಟ್ಟಿದ್ದರು. ಸಿನಿಮಾ ಅಟ್ಟರ್ ಪ್ಲಾಪ್ ಆದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ..
ಒಂದು ಚಿತ್ರವನ್ನು ಅಥವಾ ಕಾದಂಬರಿಯನ್ನು ರೂಪಾಂತರ ಭಾಷಾಂತರ ಗೊಳಿಸುವಾಗ  ಮೂಲದಲ್ಲಿ ಮುಖ್ಯವಾದ ಅಂಶ ಏನಿತ್ತು ಎಂಬುದನ್ನು ತಿಳಿದುಕೊಳ್ಳದೇ ರೀಮೇಕ್ ಮಾಡಿದಾಗ ಈ ರೀತಿ ಫಲಿತಾಂಶ ಬರುವುದು ಖಂಡಿತವೆ ಅಲ್ಲವೇ.

3 comments:

 1. A kiss before dying pustaka kooDa oddiddeeni naanu. loved Baazigar for all the points u have mentioned.
  neevu heLida mele Dinner game nOdidivi. me and girls enjoyed it. bheja fry kooda chennagi maaDidaare.
  as usual chennagi baredidderi
  thank you
  ms

  ReplyDelete