Thursday, August 22, 2013

ಅಮಾಯಕರ ರಕ್ಷಕ....ಕಾಂಸ್ಟಂಟ್ ಗಾರ್ಡ್ನರ್


ಕಾಂಸ್ಟಂಟ್ ಗಾರ್ಡ್ನರ್ ಚಿತ್ರವನ್ನ ನೋಡಲೇಬೇಕು ಎನ್ನುವುದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು. ನಾಲ್ಕು ಆಸ್ಕರ ಪ್ರಶಸ್ತಿಗಳಿಗೆ ನಾಮಾಂಕಿತವಾಗಿದ್ದ ಮತ್ತೊಂದು ನೋಡಲೇಬೇಕಾದ ಚಿತ್ರ ಸಿಟಿ ಆಫ್ ಗಾಡ್ ಚಿತ್ರದ ನಿರ್ದೇಶಕ ಮೆರೆಲ್ಲಿ ಫರ್ನಾ೦ಡಿಸ್ ನಿರ್ದೇಶನದ ಚಿತ್ರವಿದು ಎಂಬುದು ಮೊದಲನೆಯ ಕಾರಣವಾದರೆ ಕಲಾವಿದರ ಅಭಿನಯ, ಹಿನ್ನೆಲೆ ಸಂಗೀತ ಮತ್ತಿವೆಲ್ಲಕ್ಕಿ೦ತ ಹೆಚ್ಚಾಗಿ ಸಂಕಲನಕ್ಕಾಗಿ ಈ ಚಿತ್ರವನ್ನ ನೋಡಲೆಬೇಕಾಗುತ್ತದೆ.
ಇದೊಂದು ಕಾದಂಬರಿ ಆಧರಿಸಿದ ಚಿತ್ರ. ಕಥೆ ಸರಳವಾದದ್ದು. ಬಹುರಾಷ್ಟ್ರೀಯ ಔಷಧ ಕಂಪನಿಗಳ ದೌರ್ಜನ್ಯವನ್ನೂ ಕುರಿತಾದ ಚಿತ್ರವಿದು. ಯಂಡಮೂರಿ ವೀರೇಂದ್ರನಾಥರ ಕಾದಂಬರಿ 'ಪ್ರಾರ್ಥನಾ' ಹಾಗೆ ತಮಿಳಿನ ಜೀವ ಅಭಿನಯದ ಚಲನಚಿತ್ರ 'ಈ' ಚಿತ್ರವೂ ಕೂಡ ಇದೆ ಸಂಬಂಧಿ ಕಥೆಯನ್ನ ಒಳಗೊಂಡಿದ್ದವು.
ಸರ್ಕಾರೇತರ ಸಮಾಜಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ನಾಯಕಿ ತೆಸ್ಸಾಳ ಕೊಲೆ ಕೆನ್ಯಾದಲ್ಲಾಗುತ್ತದೆ.ನಾಯಕ ಹೆಂಡತಿಯ ಕೊಲೆಗೆ ಕಾರಣವನ್ನು ಹುಡುಕುತ್ತಾ ಸಾಗುತ್ತಾನೆ. ಕ್ಷಯ ರೋಗಕ್ಕೆ ಸಂಬಂಧ ಪಟ್ಟ ಔಷಧಗಳ ಪರೀಕ್ಷೆಗಾಗಿ ಕೀನ್ಯಾದ ಅಮಾಯಕ ಜನರನ್ನು ಬಲಿಪಶು ಮಾಡುತ್ತಿರುವ ಔಷಧ ಕಂಪನಿಯ ದುಷ್ಕೃತ್ಯವನ್ನು ತೆಸ್ಸಾ ಬಯಲಿಗೆಳೆಯುವ ಪ್ರಯತ್ನದಲ್ಲಿರುತ್ತಾಳೆ. ಆಕೆಯನ್ನು ತಡೆಯುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ದುಷ್ಕರ್ಮಿಗಳಿಗೆ ಅವಳನ್ನು ಕೊಲೆಮಾಡುವುದು ಅನಿವಾರ್ಯವಾಗಿರುತ್ತದೆ. ನಾಯಕ ಒಂದೊಂದೆ ಅಂಶಗಳನ್ನೂ ಬಿಡಿಸುತ್ತಾ ಸಾಗಿದಂತೆ ಮೃತ್ಯು ಅವನನ್ನು ಬೆನ್ನುಬೀಳಲು ಪ್ರಾರಂಭಿಸುತ್ತದೆ.
ಚಿತ್ರದಲ್ಲಿ  ಗಮನ ಸೆಳೆಯುವುದು ನಿರೂಪಣೆ. ಇಡೀ ಚಿತ್ರವನ್ನ ನಾವು ಕಣ್ಣು ಮಿಟುಕಿಸದೆ ನೋಡಬೇಕಾಗುತ್ತದೆ. ವಾಸ್ತವ ಮತ್ತು ಫ್ಲಾಶ್ ಬ್ಯಾಕ್ ಗಳನ್ನ ಕ್ಷಣಾರ್ಧದಲ್ಲಿ ಬದಲಿಸುತ್ತಾ , ಮಿಶ್ರ ಮಾಡುತ್ತಾ ಸಾಗುವ ನಿರ್ದೇಶಕ ನೋಡುಗರಿಗೆ ಗೊಂದಲವನ್ನು೦ಟು ಮಾಡಿಬಿಡುತ್ತಾನೆ. ಹಾಗಾಗಿ ಸಿನೆಮಾವನ್ನೂ ಅರ್ಥೈಸಿಕೊಳ್ಳಲು ಗಮನವನ್ನ ಕೇಂದ್ರಿಕರಿಸುವುದು ಅತ್ಯಗತ್ಯವಾಗುತ್ತದೆ. ಚಿತ್ರದ ಪ್ರಾರಂಭದಲ್ಲಿ ವಿಮಾನ ನಿಲ್ದಾಣದಲ್ಲಿ ಹೆಂಡತಿಯನ್ನೂ ಬೀಳ್ಕೊಡುವ ದೃಶ್ಯದ ಜೊತೆಗೆ ಪಟ್ಟನೆ ಅಪಘಾತದ ದೃಶ್ಯವನ್ನು ತೋರಿಸಿ ವಿಮಾನವೇ ಅಪಘಾತವಾಯಿತೇನೋ ಎಂಬ ಶಾಕ್ ಕೊಡುತ್ತಾನೆ ನಿರ್ದೇಶಕ. ಇದೆ ತಂತ್ರ ಸಿನಿಮಾ ಪೂರ್ತಿ ಮುಂದುವರೆದಿದೆ. ಇಲ್ಲಿ ಸಂಕಲನಕಾರ ಕ್ಲೈರ್ ಸಿಮ್ಪ್ಸೋನ್ ನ ಕೈಚಳಕವನ್ನ ನಾವು ಮೆಚ್ಚಲೇಬೇಕು.
ಇದೆ ಸಿನಿಮಾವನ್ನಾಧರಿಸಿ ಕನ್ನಡಲ್ಲಿ ರಮೇಶ್ ಅರವಿಂದ್ 'ಆಕ್ಸಿಡೆಂಟ್ ' ಎನ್ನುವ ಸಿನೆಮಾ ಮಾಡಿದ್ದರು.

1 comment:

  1. I am just movie lover working pvt. ltd. following your blog from the day one , would like to to meet in person when you are free , please reach me balu@merlinhawk.com, balu2112@gmail.com, 98455 19387 regards -balu - just to spend quality time with you 

    ReplyDelete