Monday, August 19, 2013

ನರರೂಪಿ ರಕ್ಕಸನನ್ನು ಕಂಡಿರಾ..?

ರಾತ್ರಿಯಾಗಿದೆ.ಆಕೆ ಬಸ್ಸಿಗಾಗಿ ಕಾಯುತ್ತಿದ್ದಾಳೆ. ಅಲ್ಲಿಗೆ ತನ್ನ ವ್ಯಾನ್ ಚಾಲನೆ ಮಾಡಿಕೊಂಡು ಅಲ್ಲಿಗೆ ಆತ ಬರುತ್ತಾನೆ. ಯಾವ ಕಡೆ ಹೋಗಬೇಕು? ಅವನ ಪ್ರಶ್ನೆ. ಅವಳು ಉತ್ತರ ಹೇಳುತ್ತಾಳೆ. ಹೌದು ನಾನು ಅಲ್ಲಿಗೆ ಹೋಗಬೇಕು ಎಂದು ಒಂದು ನಗು ನಗುತ್ತಾನೆ. ಆತ ಮಧ್ಯವಯಸ್ಕ. ಬನ್ನಿ ಡ್ರಾಪ್ ಮಾಡುತ್ತೇನೆ..ಈ ಹೊತ್ತಿನಲ್ಲಿ ಬೇರೆ ಬಸ್ಸು ಬರುವ ಸಾಧ್ಯತೆಯಿಲ್ಲ. ಜೊತೆಗೆ ಈ ಜಾಗ ಸುರಕ್ಷಿತವೂ ಅಲ್ಲ.. ಎಂದಾಗ ಆಕೆ ಅವನನ್ನು ನಂಬಿ ಆತನ ವಾಹನ ಇರುತ್ತಾಳೆ. ಅವನು ಅಷ್ಟು ದೂರ ಹೋಗಿ ಒಂದು ಕೈಯಲ್ಲಿ ಚಾಲನೆ ಮಾಡುತ್ತಲೇ  ಇನ್ನೊಂದು ಕೈಯಿಂದ ಏನನ್ನೋ ಹುಡುಕಲು ತೊಡಗುತ್ತಾನೆ. ಎಲ್ಲಿಟ್ಟೆ ನಾನು..ಅವನಿಗೆ ಹೇಳಿಕೊಳ್ಳುತ್ತಾನೆ. ಅವಳಿಗೆ ಏನೂ ಅರ್ಥವಾಗುವುದಿಲ್ಲ. ಕೊನೆಗೆ ಹುಡುಕಿ ತೆಗೆದರೆ ಅದೊಂದು ಕಬ್ಬಿಣದ ರಾದಿನಂತಹ ಪೈಪು. ರಸ್ತೆಯ ಪಕ್ಕಕ್ಕೆ ವಾಹನ ನಿಲ್ಲಿಸಿ ಅವಳೆಡೆಗೆ ನೋಡುತ್ತಾನೆ. ಆಕೆ ಭಯದಿಂದ ಇವನನ್ನೇ ನೋಡುತ್ತಾಳೆ. "ಯಾಕೆ ಅಷ್ಟೊಂದು ಭಯದಿಂದ ನೋಡುತ್ತಿ..ಈ ಪೈಪನ್ನು ನೀನು ಈ ಮೊದಲು ನೋಡೇ ಇಲ್ಲವಾ..? " ಎನ್ನುತ್ತಾನೆ. ಆಕೆ ಪ್ರತಿಕ್ರಿಯಿಸುವ ಮೊದಲೇ ಅದರಿಂದ ಅವಳ ತಲೆಗೆ ನಾಲ್ಕು ಏಟು ಭಾರಿಸಿಬಿಡುತ್ತಾನೆ. ಆಕೆ ಅಲ್ಲೇ ಸ್ಪಾಟ್ ಔಟ್.
ಅವನು ಹಿಂಸಾ ವಿನೋದಿ.ಅವನು ಕೊಲೆಗಳನ್ನು ವಿನೋದಕ್ಕಾಗಿಯೇ ಮಾಡುತ್ತಾನೆ. ಅದಕ್ಕೆ ಅವನಿಗೆ ಯಾವ ಕಾರಣಗಳೂ ಬೇಕಿಲ್ಲ. ಅವನ ಮುಂದೆ ನೀವು ಯಾವುದೇ ವಿಷಯ ಹೇಳಿ ಕರುಣೆ ಗಿಟ್ಟಿಸಲಾರಿರಿ. ಅವನು ಸುಮ್ಮನೆ ಒಂದೆ ಏಟಿಗೂ ಸಾಯಿಸುವುದಿಲ್ಲ. ಬರ್ಬರವಾಗಿ ಸಾಯುವುದನ್ನು ಸಾಯುವಾಗ ಕಿರುಚುವುದನ್ನು ನೋಡಿ ಖುಷಿಪಡುತ್ತಾ ಸಾಯಿಸುತ್ತಾನೆ. ಕೊಲೆ ಮಾಡಿದ ಮೇಲೂ ಅವನು ಸುಮ್ಮನಿರುವುದಿಲ್ಲ. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವಂತೆ ಸತ್ತವರ ದೇಹದ ಭಾಗಗಳನ್ನು ನಿಧಾನಕ್ಕೆ ಯಾವುದೇ ಧಾವಂತವಿಲ್ಲದೆ ಬೇರ್ಪಡಿಸುತ್ತಾನೆ. ಆನಂತರ ಅವುಗಳನ್ನು ಎಲ್ಲೆಂದರಲ್ಲಿ ಚೆಲ್ಲಿ ಬಿಡುತ್ತಾನೆ. ಅವನ ಗುರಿಯಿರುವುದು ಒಂಟಿ ಮಹಿಳೆಯರ ಮೇಲೆ...ಆಕೆಗೆ ತುಂಬಾ ಪ್ರೀತಿಸುವ ಗಂಡನಿದ್ದಾನೆ..ಆಕೆ ಗರ್ಭಿಣಿ ..ಅದೊಂದು ದುರಾದೃಷ್ಟವಶಾತ್ ಅವನ ಕೈಗೆ ಸಿಕ್ಕಿ ಸಾಯಬಾರದ ಸಾವು ಸಾಯುತ್ತಾಳೆ...ಚಿತ್ರದ ನಾಯಕನಿಗೆ ಅವಳಿಲ್ಲದೆ ಬದುಕಲು ಕಾರಣವಿದೆಯೇ..? ಖಂಡಿತ ಇದೆ...ಅದು ದ್ವೇಷ...ಅವನನ್ನು ಬಿಡಬಾರದು..
ಕೊರಿಯನ್ ಭಾಷೆಯ ನಟ ಮಿನ್ ಸಿಕ್ ಚೊಇ ನಿಮಗೆ ಗೊತ್ತಿರಬಹುದು. ಓಲ್ಡ್ ಬಾಯ್ ಸೂಪರ್ ಹಿಟ್ ಚಿತ್ರದ ನಾಯಕ.  ಅವನದು ಇಲ್ಲಿ ಆ ಹಿಂಸಾ ವಿನೋದಿಯ ಪಾತ್ರ. ಅದ್ಭುತವಾಗಿ ಅಭಿನಯಿಸಿರುವ ಅವನ ಅಭಿನಯ ತಣ್ಣನೆಯ ಕ್ರೌರ್ಯ ಅವನು ನಿಜವಾಗಲೂ ಸೈಕೋ ಇರಬಹುದಾ ಎನ್ನುವ ಅನುಮಾನ ಹುಟ್ಟಿಸದೆ ಇರದು. ಹಾಲಿವುಡ್ ಚಿತ್ರ ದಿ ಲಾಸ್ಟ್ ಸ್ಟಾಂಡ್ ಎನ್ನುವ ಸಾಹಸಮಯ ಚಿತ್ರದ ನಿರ್ದೇಶಕ ಕಿಂ ಜೀ ವೂನ್ ನಿರ್ದೇಶನದ ಈ ಚಿತ್ರದ ಹೆಸರು ಐ ಸಾ ದಿ ಡೆವಿಲ್ ಎಂಬುದಾಗಿದೆ. 2010 ರಲ್ಲೇ ತೆರೆಗೆ ಬಂದ ಈ ಚಿತ್ರ ಅತ್ಯುತ್ತಮ ರೋಮಾಂಚಕ ಚಿತ್ರ. ಎರಡು ಘಂಟೆ ಇಪ್ಪತ್ತು ನಿಮಿಷದಷ್ಟು ಉದ್ದವಿರುವ ಈ ಚಿತ್ರ ಯಾವ ಸಮಯದಲ್ಲೂ ಬೇಸರ ತರಿಸುವುದಿಲ್ಲ. ಅದಕ್ಕೆ ಕಾರಣ ಚಿತ್ರಕಥೆ. ಕ್ಷಣಕ್ಷಣಕ್ಕೆ ಕುತೂಹಲ ಕೆರಳಿಸುತ್ತಾ ಸಾಗುವ ಚಿತ್ರ ಪ್ರತಿ ದೃಶ್ಯದಲ್ಲೂ ಮೈ ನವಿರೇಳಿಸುತ್ತದೆ. ಅಷ್ಟೇ ಅಲ್ಲ..ಅಲ್ಲಲ್ಲಿ ಭಯ ತರಿಸುತ್ತದೆ.
ಕೊರಿಯನ್ ಚಿತ್ರಗಳಲ್ಲಿ ಏನೋ ವಿಶೇಷವಿದ್ದೆ ವಿರುತ್ತದೆ. ಅದರಲ್ಲೂ ಥ್ರಿಲ್ಲರ್ ಚಿತ್ರಗಳ ಕಥಾವಸ್ತು ಮತ್ತು ಚಿತ್ರಕಥೆ ಉತ್ತಮವಾಗಿರುತ್ತದೆ. ಪ್ರತಿ ದೃಶ್ಯ ಮೇಕಿಂಗ್ ಮುಂತಾದವುಗಳ ಬಗ್ಗೆ ಹೆಚ್ಚೆಚ್ಚು ಗಮನವಹಿಸುವ ಅಲ್ಲಿನ ನಿರ್ದೇಶಕರು, ಅಲ್ಲಿನ ಚಿತ್ರಗಳು ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸುತ್ತವೆ. ಈ ಚಿತ್ರ ಥ್ರಿಲ್ಲರ್ ಚಿತ್ರ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.ನೀವಿನ್ನೂ ನೋಡಿಲ್ಲವಾದರೆ ಈಗಲೇ ನೋಡಿ..ಥ್ರಿಲ್ ಅನುಭವಿಸಿ.

No comments:

Post a Comment