Thursday, August 15, 2013

ಇಂತ ಪ್ರೇಮದ ಪರಿಯ ನಾನರಿಯೆ..



 ಆತ ಸೊಗಸುಗಾರ. ಶ್ರೀಮಂತ.ರಸಿಕ. ಇಡೀ ಊರಲ್ಲೇ ಆತ ತನ್ನ ಸರಸ ಸಲ್ಲಾಪಕ್ಕೆ ಹೆಸರುವಾಸಿಯಾದ ವ್ಯಕ್ತಿ. ಅದೆಷ್ಟು ಸುಂದರಿಯನ್ನು ತನ್ನ ಪಲ್ಲಂಗದಲ್ಲಿ ಶೃಂಗಾರ ಲೋಕದಲ್ಲಿ ವಿಹರಿಸುವಂತೆ ಮಾಡಿದ್ದರೂ ಆತನ ಕಣ್ಣು ಆಕೆಯ ಮೇಲೆ. ಹಾಗಂತ ಆಕೆ ಅವಿವಾಹಿತೆಯಲ್ಲ. ಕಾಮಾತುರಾಣಂ ನ ಭಯಂ ನ ಲಜ್ಜಾ.... ಅದಕ್ಕೆ ಆಕೆ ಒಂದು ಪಣ ಒಡ್ಡುತ್ತಾಳೆ. ಇವನು ಇನ್ನೊಬ್ಬಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕು...ಸೋತರೆ ಆಕೆಗೆ ಸಂಪತ್ತು...ಅವನು ಗೆದ್ದರೆ ಅವಳೇ ಅವನ ಸಂಪತ್ತು. ಇಲ್ಲಿ ಗೆದ್ದ ನಮ್ಮ ಮೊಜುಗಾರನಿಗೆ ಇಬ್ಬರು ಸುಂದರಿಯರು ಸಿಗುತ್ತಾರೆ. ಒಂದು ಆಕೆ ಮತ್ತೊಬ್ಬಳು ಈಕೆ.. ಆದರೆ ಸವಾಲಿನಂತೆ ಗೆಲ್ಲಬೇಕಾದ ಅಪರೂಪದ ಸುಂದರಿ ವಿಧವೆ. ಗಂಡನನ್ನು ಅತಿಯಾಗಿ ಪ್ರೀತಿಸುತ್ತಿದ್ದವಳು. ಗಂಡ ಸತ್ತ ಮೇಲೆ ಇನ್ನೂ ಆತನ ನೆನಪಲ್ಲೇ ವಿಹರಿಸುತ್ತಿರುವವಳು. ಬೇರೆ ಗಂಡಸರನ್ನು ಕಣ್ಣೆತ್ತಿಯೂ ನೋಡದ ಅಪ್ಸರೆಯ ಹೃದಯವನ್ನು ಅಪಹರಿಸುವುದು ಹೇಗೆ...?
ನಾಯಕ ಬಿಡುವ ಹಾಗೆಯೇ ಇಲ್ಲ. ಈಗ ಶುರುವಾಗುತ್ತದೆ ನೋಡಿ ನಿಜವಾದ ಪ್ರೇಮದಾಟ...ಮೋಸದಾಟ..ಇಲ್ಲಿ ಗೆಲ್ಲುವರ್ಯಾರು...? ಸವಾಲಿನಲ್ಲಿ ಇನ್ನೂ ಒಂದು ಷರತ್ತಿದೆ. ರಸಿಕ ಆಕೆಯನ್ನು ತನ್ನವಳಾಗಿ ಮಾಡಿಕೊಳ್ಳಬೇಕು ನಿಜ. ಆದ್ರೆ ಆಕೆಯನ್ನು ತಾನು ಪ್ರೀತಿಸಬಾರದು...
ಮುಂದೆ..?
ಒಂದು ಚಿತ್ರ ಇಷ್ಟವಾಗುವುದು ಏಕೆ..?ಅದರ ಕಥೆ, ಅಭಿನಯ ಚಿತ್ರಕಥೆ ನಾಯಕ ನಾಯಕಿ ಹೀಗೆ. ಅದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಈ ಚಿತ್ರದಲ್ಲಿ ಎಲ್ಲಾ ವಿಭಾಗಗಳ ಕೆಲಸಗಳೂ ಚಂದವೇ. ಚಿತ್ರೀಕರಣ ಸ್ಥಳ ಶೈಲಿ ಸೂಪರ್. ಚಿತ್ರದ ಪ್ರಾರಂಭದಲ್ಲೇ ನಾಯಕನ ಗುಣಾವಗುಣಗಳ ಪರಿಚಯವನ್ನು ಪರಿಚಯಿಸುವ ರೀತಿ ನಿಜಕ್ಕೂ ಅಪ್ಯಾಯಮಾನ.
ಇದು ಡೇಂಜರಸ್ ಲಿಯಾಸಂಸ್ ಚಿತ್ರದ ಕಥಾಸಾರ. ಫ್ರೆಂಚ್ ಕಾದಂಬರಿ ಆಧರಿಸಿದ ಈ ಚಿತ್ರದ ಸೊಬಗಿರುವುದು ದೃಶ್ಯೀಕರಣದಲ್ಲಿ ಮತ್ತು ಕಲಾವಿದರ ಅದ್ಭುತ ಅಭಿನಯದಲ್ಲಿ. .ಜಿನ್ ಹುರ್ ಹೋ ನಿರ್ದೇಶನದ ಈ ಚಿತ್ರಫ್ರೆಂಚ್ ಕಾದಂಬರಿಯನ್ನು ಆಧರಿಸಿದ್ದು. ಇದೆ ಕಾದಂಬರಿಯನ್ನು ಆಧರಿಸಿ ಇಲಿಯವರೆಗೆ ಸುಮಾರಷ್ಟು ಚಿತ್ರಗಳು ಬಂದಿವೆ. 1988 ರಲ್ಲಿ ತೆರೆಗೆ ಬಂದ ಇದೆ ಹೆಸರಿನ ಚಿತ್ರ ಮೂರು ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಕೋರಿಯನ್ ಭಾಷೆಯಲ್ಲಿ ಅನ್ ಟೋಲ್ಡ್ ಸ್ಕ್ಯಾಂಡಲ್ ಎಂಬ ಹೆಸರಿನಲ್ಲಿ ಚಿತ್ರ ಬಂದಿದೆಯಾದರೂ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳು ಜಾಸ್ತಿಯಿವೆ ಹೊರತು ಸೊಬಗಿಲ್ಲ. ಹಾಗಾಗಿ ಈ ಚೀನಾ ಭಾಷೆಯ ಚಿತ್ರವನ್ನು ನೋಡಿದ ಮೇಲೆ ಅದರ ಚಂದ ನಿಮ್ಮನ್ನಾವರಿಸಿ ಕಣ್ಣು ತಂಪು ಮಾಡಿ, ಹೃದಯವನ್ನು ಬೆಚ್ಚಗಾಗಿಸದಿದ್ದರೆ ಕೇಳಿ

1 comment:

  1. ಓ.. ಝಿಯೀ ಝಾ೦ಗ್(Ziyi Zhang ) ಚಿತ್ರ... ಚೆನ್ನಾಗಿರಬೇಕು. :) ನೀವಿದರ ಮ್ಯಾ೦ಡರೀನ್ ಟೈಟಲ್ (ಇ೦ಗ್ಲೀಷ್) ನಲ್ಲಿ ಹಾಕಿದರೆ ಹುಡುಕಲು ಸುಲಭವಾಗುತ್ತದೆ. ಇಲ್ಲದಿದ್ದರೆ ಡೈರಕ್ಟರ್ ಮೂಲಕ ಹೋಗಬೇಕು. ಕಷ್ಟದ ಹಾದಿ :)

    ReplyDelete