Wednesday, August 14, 2013

ಚಿತ್ರಕಥೆಯ ಮೇಲೆ ಚಿಕ್ಕ ಟಿಪ್ಪಣಿ

ಚಿತ್ರಕಥೆ ಎಂದರೇನು..? ಅದನ್ನು ಬರೆಯುವುದು ಹೇಗೆ..?
ಎಂಬೊಂದು ಪ್ರಶ್ನೆ ನನ್ನನ್ನು ಬೆನ್ನತ್ತಿದ್ದು ನಾನು ಪಿಯುಸಿ ಓದುತ್ತಿದ್ದಾಗ.ನಂಜನಗೂಡಿನ ಗ್ರಂಥಾಲಯವನ್ನೆಲ್ಲಾ ಈ ಒಂದು ವಿಷಯಕ್ಕ್ಕಾಗಿ ಹುಡುಕಾಡಿದ್ದೆ. ಸಿನಿಮಾದ ಶೀರ್ಷಿಕೆಯಲ್ಲಿ ಕಥೆ-ಚಿತ್ರಕಥೆ ಎಂದು ಬರುತ್ತಿತ್ತಲ್ಲ...ಕಥೆಗೂ ಚಿತ್ರಕಥೆಗೂ ಏನು ಸಂಬಂಧ ..? ಏನು ವ್ಯತ್ಯಾಸ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತ್ತು. ಅಲ್ಲಿ ಅಂದರೆ ನಂಜನಗೂಡಿನ ಗ್ರಂಥಾಲಯದಲ್ಲಿ ಕೆಲವೇ ಕೆಲವು ಸಿನಿಮಾ ಸಂಬಂಧಿ ಪುಸ್ತಕಗಳಿದ್ದವು. ಆದರೆ ಅವ್ಯಾವೂ ನನಗೆ ತೃಪ್ತಿಕರವಾದ ವಿವರಣೆ ನೀಡಿರಲಿಲ್ಲ.
ಹಾಗೆ ನನಗೆ ಹೊಳೆದದ್ದು .ಸಂಸ್ಕಾರ ಚಲನಚಿತ್ರ. ಹಾಗೆ ಘಟಶ್ರಾದ್ಧ ಚಲನಚಿತ್ರ. ಯಾಕೆಂದರೆ ಅವೆರಡೂ ಕಾದಂಬರಿ ಆಧರಿಸಿದ ಚಿತ್ರಗಳು. ಅಂದರೆ ಕಥೆ ಎಂದರೆ ಕಾದಂಬರಿಯ ರೂಪ. ಚಿತ್ರಕಥೆ ಎಂದರೆ ಸಿನಿಮಾಕ್ಕೆ ಪರಿವರ್ತಿಸಬೇಕಾದಾಗ ಬರೆಯಬೇಕಾದ ಬರಹದ ರೂಪ. ಮೊದಲಿಗೆ ಅವೆರಡೂ ಚಿತ್ರಗಳ ಮೂಲ ಕಾದಂಬರಿಯನ್ನು ನಾಲ್ಕಾರು ಸಾರಿ ಓದಿಕೊಂಡು ಮನನ ಮಾಡಿಕೊಂಡಿದ್ದೆ. ಅಂದರೆ ಅದರ ಪ್ರತಿ ಪುಟವೂ, ಅದರಲ್ಲಿನ ದ್ರವ್ಯವೂ ನೆನಪಿರಬೇಕು ಹಾಗೆ..ಆನಂತರ ಸಿನಿಮಾವನ್ನು ನಾಲ್ಕಾರು ಸಾರಿ ನೋಡಿ ಅದರ ದೃಶ್ಯರೂಪವನ್ನು ನನಗೆ ತೋಚಿದಂತೆ ನೋಟ್ ಮಾಡಿಕೊಂಡಿದ್ದೆ. ಕಾದಂಬರಿಯಲ್ಲಿನ ದೃಶ್ಯಕ್ಕೂ ಸಿನಿಮಾದಲ್ಲಿನ ಚಿತ್ರಣಕ್ಕೂ ತಾಳೆ ಹಾಕುತ್ತಾ ಹೋದಂತೆ ನನಗೆ ಚಿತ್ರಕಥೆ ಎಂಬುದರ ಮೂಲ ಅರಿವಾಗುತ್ತಾ ಹೋಯಿತು. ಆನಂತರ ಕಾದಂಬರಿ ಆಧಾರಿತ ಚಿತ್ರಗಳನ್ನು ಪಟ್ಟಿ ಮಾಡಿಕೊಂಡು ಆ ಕಾದಂಬರಿಗಳನ್ನು ನಂಜನಗೂಡಿನ ಗ್ರಂಥಾಲಯದಲ್ಲಿ ಹುಡುಕಾಡಿದ್ದೆ. ಆನಂತರ ಅದೇ ಕೆಲಸ ಪುಸ್ತಕ ಓದುವುದು..ಸಿನಿಮಾ ನೋಡುವುದು..ರೂಪಾಂತರವನ್ನು ಗಮನಿಸುವುದು...ಸುಮಾರು ಚಿತ್ರಗಳನ್ನು ಕಾದಂಬರಿಗಳನ್ನು ಓದಿ ನೋಡಿ ತಾಳೆ ಹಾಕಿದ ನಂತರ ಚಿತ್ರಕಥೆಯ ಅಂದಾಜು ಬಂದಿತ್ತು.
ಅಂದರೆ ಕಥೆಯನ್ನು ಚಿತ್ರೀಕರಣಕ್ಕೆ ಅನುವು ಮಾಡುವ, ಅದನ್ನು ಸಿನಿಮಾ ರೂಪಕ್ಕೆ ತರುವ ಪ್ರಕ್ರಿಯೆಯ ಬರಹ ರೂಪವೇ ಚಿತ್ರಕಥೆ ಎನಿಸಿತು.
ಆಮೇಲೆ ಬಿಡಿ. ಸುಮಾರು ಪುಸ್ತಕಗಳನ್ನು ಸಿನಿಮಾಗಳನ್ನು ನೋಡಿದೆ. ಅದರ ಬಗ್ಗೆ ಸಾಕಷ್ಟು ಅದ್ಯಯನ ಕೂಡ ಮಾಡಿದೆ.
ಹಾಗೆ ಒಂದು ಅದ್ಭುತವಾದ, ಯಶಸ್ವಿಯಾದ  ಚಿತ್ರಕಥೆ ರಚಿಸುವುದು ಹೇಗೆ,,? ಎಂಬೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ನೀವು/ನಾವು ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ.
ಕಥೆಗೆ ಪೂರಕವಾದ ಚಿತ್ರಕಥೆಯನ್ನಷ್ಟೇ ರಚಿಸಲು ಸಾಧ್ಯವೇ ಹೊರತು, ಯಶಸ್ವಿ ಅಥವಾ ಅದ್ಭುತ ಚಿತ್ರಕಥೆ ರಚಿಸಲು ಯಾವುದೇ ಸಿದ್ದ ಸೂತ್ರಗಳಿಲ್ಲ. 
ಒಂದು ಕಥೆಯನ್ನು ಆಸಕ್ತಿಕರವನ್ನಾಗಿ ಮಾಡುವ ಪ್ರಕ್ರಿಯೆಗೆ ಚಿತ್ರಕಥೆಗಾರನಲ್ಲಿ ಒಂದು ಅನುಭವ, ಸಿನಿಮಾ ನೋಡುಗನಿಗಿರುವ ದೃಷ್ಟಿ, ಆಸಕ್ತಿ ಎಲ್ಲವೂ ಇರಬೇಕಾಗುತ್ತದೆ. ಸುಮ್ಮನೆ ನಮ್ಮ ಕಲ್ಪನೆಯ ಚಿತ್ರಕಥೆಯನ್ನು ರಚಿಸಿ ಸಿನಿಮಾ ಮಾಡಿದರೆ ಅದು ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ.  ನಮ್ಮಲ್ಲಿ ಸುಮಾರು ಅದೇ ರೀತಿಯಾಗುತ್ತದೆ. ನನಗೆ ಗೊತ್ತಿರುವಂತೆ ಸುಮಾರು ಜನ ಚಿತ್ರಕರ್ಮಿಗಳು ಚಿತ್ರಕಥೆ ರಚಿಸುವಾಗ ಚರ್ಚೆ ಮಾಡುವುದಿಲ್ಲ. ಸುಮ್ಮನೆ ತಾವಂದು ಕೊಂಡದ್ದೇ ಅಂತಿಮ ಎನ್ನುವ ರೀತಿ ನಿರ್ಣಯ ಮಾಡಿಬಿಡುತ್ತಾರೆ. ಆದರೆ ಕಡಿಮೆಯೆಂದರೂ ಲಕ್ಷ್ಯಗಟ್ಟಲೆ ಹಣ ವ್ಯಯವಾದ ತಿಂಗಳುಗಟ್ಟಲೆ ಬೆವರು ಸುರುಸಿದ ಅರವತ್ತಕ್ಕೂ ಹೆಚ್ಚು ಜನರು ದುಡಿದ ಹಲವರ ಕನಸಿನ ಕೂಸಾದ ಚಿತ್ರಗಳು ಹೇಳ ಹೆಸರಿಲ್ಲದಂತೆ ನೆಲ ಕಚ್ಚಿದಾಗಲೆಲ್ಲಾ ಅದೆಷ್ಟು ನಷ್ಟವಾಗುತ್ತದೆ ನೀವೇ ಯೋಚಿಸಿ. ಸಿನಿಮಾದ ಗಲ್ಲಾ ಪೆಟ್ಟಿಗೆಯ ವಿಷಯ ಬಿಡಿ. ನೋಡಿದ ಕೆಲವರಿಗಾದರೂ ಪರವಾಗಿಲ್ಲ ಎನಿಸದಿದ್ದರೆ ಅದೆಂತ ಸಾಧನೆ ಎನಿಸುತ್ತದೆ ನನಗೆ. ಸುಮ್ಮನೆ ಏನೋ ಒಂದು ಕಥೆ ಮಾಡಿ, ಚಿತ್ರಕಥೆ ರಚಿಸಿ, ಹೇಗೋ ನಿರ್ಮಾಪಕರ ಕೈಯಲ್ಲಿ ಹಣ ಚೆಲ್ಲಿಸಿ ಸಿನೆಮಾ ಮಾಡುವುದಕ್ಕಿಂತ ಸ್ವಲ್ಪ ಯೋಚಿಸಿ, ಅದ್ಯಯನ ಮಾಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದರಿಂದ ಅವರಿಗೆ, ಚಿತ್ರರಂಗಕ್ಕೆ ಲಾಭವಿದೆ.
ಮೊನ್ನೆ ಒಂದು ಸಿನೆಮಾದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ದುಂಡಿರಾಜ್ ಬರೆದ ಹೆಸರುವಾಸಿ ಹನಿಗವನವನ್ನೇ ನಾನು ಬರೆದದ್ದು ಅಂದರೆಂದು ಪತ್ರಿಕೆಯಲ್ಲಿ ಪ್ರಕಟವಾಯಿತು. ಸಾಹಿತ್ಯದ ಬಗ್ಗೆ ಅಷ್ಟೂ ಅರಿವಿರದ ನಿರ್ದೇಶಕರು ಹೇಗೆ ತಮ್ಮ ಚಿತ್ರದ ಕಥೆ,ಚಿತ್ರಕಥೆ, ಸಂಭಾಷಣೆಯನ್ನು ರಚಿಸಿರಬಹುದೆಂಬ ಕುತೂಹಲ ನನಗೂ ಇದೆ.
ನಮ್ಮ ಚಿತ್ರದ ವಿಷಯಕ್ಕೆ ಬಂದರೆ ಒಂದು ಸಾದಾರಣ ಬಜೆಟ್ಟಿನಲ್ಲಿ ಥ್ರಿಲ್ಲರ್ ಮಾಡೋಣ ಎಂದು ಹೊರಟಾಗ ಚಿತ್ರಕಥೆ ಸ್ವಲ್ಪ ಕುತೂಹಲಕಾರಿಯಾಗಿರಲಿ ಎನಿಸಿತ್ತು. ಹಾಗಾಗಿ ಚಿತ್ರಕಥೆಗಾಗಿ ಮೂರು ತಿಂಗಳುಗಳ ಚರ್ಚೆ ಮಾಡಿದ್ದೆವು. ಆದರೆ ಚಿತ್ರ ಮುಗಿದು ಸಂಕಲನ ಮೇಜಿನ ಮೇಲೆ ಚಿತ್ರ ನೋಡಿದಾಗ ಮೊದಲಾರ್ಧ ಸ್ವಲ್ಪ ಮಂದಗತಿ ಎನಿಸಿತು. ಎಲ್ಲರೂ ಅದನ್ನು ಕತ್ತರಿಸಿ ಎಂದೇ ಸಲಹೆ ಕೊಟ್ಟರೂ ನಾನು ಸುಮ್ಮನಿದ್ದೆ. ಆದರೆ ನಾಲ್ಕಾರು ಜನರಿಗೆ ತೋರಿಸಿದಾಗ ಅದೇ ಅಭಿಪ್ರಾಯ ಬಂದಿತ್ತು. ವಿಧಿಯಿಲ್ಲದೇ ಮೊದಲಾರ್ಧದಲ್ಲಿ ಕಥೆಗೆಲ್ಲೂ ಧಕ್ಕೆಯಾಗದಂತೆ ಕತ್ತರಿ ಪ್ರಯೋಗ ಮಾಡಿದ್ದೆ.
ಈ ಚಿತ್ರಕಥೆ ಎಂಬ ಸಿನಿಮಾದ ಜೀವಾಳ ಯಾವತ್ತಿಗೂ ಒಂದು ಸ್ಪಷ್ಟ ರೂಪ ತಾಳಿಲ್ಲವಾದರೂ ಅದಕ್ಕೆ ಅದರದೇ ಆದ ಸ್ವರೋಪವಂತೂ ಇದ್ದೆ ಇದೆ. ಅದೇನು ಎಂಬುದಕ್ಕೆ ನಾವು ಒಳ್ಳೆಯ ನೋಡುಗರಾಗಿರಬೇಕು ಎಂದೆನಿಸುತ್ತದೆ ನನಗೆ.ಮೊನ್ನೆ ಗೆಳೆಯ ವಾಸುಕಿ ಸಿಕ್ಕಿ ಚಿತ್ರಕಥೆಯ ಬಗ್ಗೆ ಒಂದಷ್ಟು ಚರ್ಚಿಸಿದರು. ಈವತ್ತಿಗೆ ಗೂಗಲ್ ನಮಗೆ ಎಲ್ಲವನ್ನೂ ಹುಡುಕಿಕೊಡುತ್ತದೆ. ಬರೆಯುವ ಶೈಲಿ, ಅದು ಹೇಗಿರಬೇಕು ಹಾಗಿರಬೇಕು ಅದು ಹಾಗಿತ್ತು ಎಂಬೆಲ್ಲಾ ವಿವರವನ್ನೂ ಕೊಡುತ್ತದೆ. ಆದರೆ ಅನುಭವ ಎಂಬುವುದನ್ನು ಅದೇಗೆ ಕೊಡಲು ಸಾಧ್ಯ ಹೇಳಿ.
ಮೊನ್ನೆ ಟೋನಿ ಚಿತ್ರ ನೋಡುವಾಗ ನನಗನ್ನಿಸಿದ್ದು ಇದೆ. ನಿರ್ದೇಶಕರು ಒಂದು ಒಳ್ಳೆಯ ಥ್ರಿಲ್ಲರ್ ಮಾಡಿದ್ದಾರೆ. ಮುಖ್ಯ ವಾಹಿನಿಯ ಕಥೆಗಳು ಮತ್ತು ಅದಕ್ಕೆ ಬೇಕಾದ ಹಿನ್ನೆಲೆಗಳು ಚೆನ್ನಾಗಿಯೇ ಇವೆ. ಚಿತ್ರದ ಪ್ರಾರಂಭದಲ್ಲಿ ಅದನ್ನು ತೋರಿಸುತ್ತಾ ಮಧ್ಯ ಮಧ್ಯ ನಾಯಕನ ಹಿನ್ನೆಲೆ ವ್ಯಕ್ತಿತ್ವ ಪರಿಚಯ ಮಾಡಿಕೊಡುತ್ತಾ ಸಾಗಿ ಅಂತ್ಯ ಬರುವಷ್ಟರಲ್ಲಿ ಅವನನ್ನು ಸಂಪೂರ್ಣ ಪರಿಚಯಿಸಿ ಈಗ ನಡೆಯುತ್ತಿರುವ ಘಟನೆ ಮುಂದೇನಾಗುತ್ತದೆ ಎಂಬುದನ್ನು ಅರಿವು ಮಾಡಿಸಿದ್ದರೆ ಸಾಕಾಗಿತ್ತು. ಆದರೆ ಚಿತ್ರದ ರೋಚಕತೆಯನ್ನು ಬೇಕಿರದ ಚಿತ್ರದ ಗತಿಗೆ ಪೂರಕವಾಗಿಲ್ಲದ ಉಪಕಥೆಗಳನ್ನೂ ತುರುಕುವುದರ ಮೂಲಕ ಕೊಂದುಹಾಕಿದ್ದಾರೆ. ಏನಾಗಿ ಹೊಯಿತಪ್ಪಾ  ಎನ್ನುವ ಉದ್ಗಾರ ಪ್ರೇಕ್ಷಕನಿಂದ ಬರುವ ಮುನ್ನವೇ ಅದನ್ನು ಉದ್ದ ಮಾಡುತ್ತಾ ಮಾಡುತ್ತಾ ಅದೇನೂ ಆಸಕ್ತಿಕರವಾದುದಲ್ಲ ಎನಿಸಿಬಿಡುತ್ತಾರೆ. ನನ್ನ ಪ್ರಕಾರ ಇದಕ್ಕೆ ನೇರ ಕಾರಣ ಚಿತ್ರಕಥೆಗಾರ. ಇಡೀ ಸಿನೆಮಾದ ಆಶಯ, ಅದರ ಭಾವವನ್ನು ಮನದಲ್ಲಿರಿಸಿಕೊಂಡು ಒಬ್ಬ ಪ್ರೇಕ್ಷಕನಾಗಿ ಚಿತ್ರವನ್ನು ಅನುಭವಿಸಿ ಆನಂತರ ಬರಹರೂಪಕ್ಕಿಳಿಸಿದ್ದರೆ ಚಿತ್ರ ಕನ್ನಡದ ಫೋನ್ ಬೂತ್ ಆಗುತ್ತಿತ್ತೇನೋ?
ಒಂದು ಸಸ್ಪೆನ್ಸ್ ಥ್ರಿಲ್ಲರ್ ಎಂದಾಗ ಕೊನೆಯ ಹಂತದ ರೋಚಕತೆ ಮತ್ತು ಬಯಲಾಗುವ ರಹಸ್ಯ ಬಹು ಮುಖ್ಯ ಪಾತ್ರವಹಿಸುತ್ತದೆ. ಆಮೇಲಿನದ್ದೆಲ್ಲಾ ಸುಮ್ಮನೆ ವಂದನಾರ್ಪಣೆ ಅಷ್ಟೇ. ಆದರೆ ಅಂತ್ಯವನ್ನೇ ವಂದನಾರ್ಪಣೆ ಮಾಡಿ ವಂದನಾರ್ಪಣೆಯನ್ನೇ ಅಂತ್ಯ ಮಾಡಿದರೆ ..?
ಇದು ಸುಮ್ಮನೆ ಉದಾಹರಣೆ ಅಷ್ಟೇ. ಅಂದರೆ ಯಾರೋ ಅನಾಮಿಕನೊಬ್ಬ ನಾಯಕನ ಹುಡುಗಿಯನ್ನು ಅಪಹರಿಸಿ ಅವನಿಗೊಂದು ಫೋನ್ ಕೊಟ್ಟು ನಾನು ಹೇಳಿದ ಕೆಲಸವನ್ನು ಸರಿ ತಪ್ಪೆನ್ನೆದೆ ಮಾಡಿದರೆ ನಿನ್ನ ಹುಡುಗಿ ನಿನಗೆ ಸಿಗುತ್ತಾಳೆ ಎಂದಾಗ ನಾಯಕ ಮಾಡುವ ಕೆಲಸಗಳು ಆ ತಲ್ಲಣಗಳಿಗಿಂತ ರೋಚಕತೆ ಏನಿತ್ತು ಹೇಳಿ..? ಆದರೆ ಅದರ ನಡುವಿನ ಭೂಮಿ ಕಥೆ ಮತ್ತು ಜನಪದ ಕಥೆಗಳು ಆಪ್ತವಾಗಿದ್ದರೂ ಟೋನಿ ಚಿತ್ರಕ್ಕೆ ಆತ್ಮೀಯವಾಗದೆ ಚಿತ್ರದ ಗತಿಯನ್ನು ಕಮ್ಮಿ ಮಾಡಿವೆ ..
ಹಾಗಾಗಿ ಚಿತ್ರಕಥೆಯನ್ನು ರಚಿಸುವ ಮುನ್ನ ಚಿತ್ರದ ಒಟ್ಟಾರೆ ಚಿತ್ರಣದ ಭಾವ ನಮ್ಮಲ್ಲಿದ್ದಾಗ ಅದಕ್ಕೆ ತಕ್ಕಂತೆ ದೃಶ್ಯ ರಚಿಸುತ್ತಾ ಸಾಗಬಹುದೇನೋ..?

2 comments:

  1. I feel that director's intention was mainly to tell a story on greed rather than making a thriller. Yes, it had the material to become a stand alone suspense thriller. Director would have been able to put across the message within the main story itself. But by adding the parallel tracks of Jogi Jangama and Leo Tolstoy's "How Much Land Does a Man Need?" director has been able to propagate the message with more depth. These tracks have only made the film more layered if you ask me. They could have made the film very messy but the way he has juxtaposed scenes between the main track is commendable. Some of the transitions between the stories were thing of pure joy. I am glad that this kind of experimentation happened in Kannada. I can think of only positives about this attempt. It was brave on the part of producers to go with this style of story-telling in a commercial movie.
    But seems like I am in the minority. My issue with the movie is restricted to addition of unnecessary MTV styled songs and the poor marketing strategy which never made an attempt to reach the audience who would have liked this kind of film.Anyway, the makers have decided to remove a track altogether as many are having issue with the parallel tracks (All the folk songs are chopped and climax has been modified if I am right). My only hope is that at least DVD will carry the original version.

    ReplyDelete