Monday, January 14, 2013

VFX-ಮಾಯಾಜಾಲದ ಬೆನ್ನುಬಿದ್ದು-3

1910 ರ ವೇಳೆಗಾಗಲೇ ಸಿನೆಮಾ ಒಂದು ದೊಡ್ಡ ಮಾಧ್ಯಮವಾಗಿ ಬೆಳೆದಿತ್ತಲ್ಲದೆ, ಸಿನೆಮಾದಿಂದ ಹಣವನ್ನ ಸಂಪಾದಿಸಬಹುದೆಂಬ ಸತ್ಯ  ಚಿತ್ರಕರ್ಮಿಗಳಿಗೆ ಅರ್ಥವಾಗಿತ್ತು. ಈ ಸಮಯದಲ್ಲಿ ರೆಕ್ಸ್ ನಂತಹ ಚಿಕ್ಕ ಚಿಕ್ಕ ಚಿತ್ರ ನಿರ್ಮಾಣ ಸಂಸ್ಥೆಗಳು ಹುಟ್ಟಿಕೊಂಡವಾದರೂ ಬಂದಹಾಗೆ ಅದೇ ವೇಗದಲ್ಲಿ ಮರೆಯಾದವು ಕೂಡ. ಆದರೆ ಚಿತ್ರೋದ್ಯಮ ಒಂದು ನೆಲ ಕಂಡುಕೊಂಡಂತೆ ಚಿತ್ರಕರ್ಮಿಗಳು ಸಿನೆಮಾಗಳ ತಯಾರಿಕೆಯನ್ನು  ಮುಂದುವರೆಸಿದ್ದರು. 1907 ರ ವೇಳೆಗೆ ಚಿತ್ರ ನಿರ್ಮಾಣ ಸಂಸ್ಥೆ ಬಯೋಗ್ರಾಪ್ಹ್ ಗೆ ಸೇರಿದ ಡಿ.ಡಬ್ಲ್ಯೂ.ಗ್ರಿಪಿತ್ ತನ್ನ ತಾಂತ್ರಿಕ ಕೌಶಲ್ಯ ಮತ್ತು ಕಥೆ ಹೇಳುವ ಹೊಸ ಹೊಸ ತಂತ್ರಗಳಿಂದ  ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಎನ್ನಬಹುದು. ಅಲ್ಲಿಯವೆರೆಗೆ ಚಿತ್ರಗಳೆಂದರೆ ಪರದೆಯ ಮೇಲೆ ನಡೆಯುವ ನಿರಂತರ ಚಟುವಟಿಕೆಗಳಾಗಿದ್ದವು. ಆದರೆ ಗ್ರಿಪಿತ್ ಸಂಕಲನ ಮೇಜಿನ ಮಹತ್ವವನ್ನ ಚಿತ್ರರಂಗಕ್ಕೆ ಅರಿವಾಗಿಸಿ ದೃಶ್ಯ ಮಾಧ್ಯಮದಲ್ಲಿ ಹೊಸ ಬಾಗಿಲು ತೆರೆದುಬಿಟ್ಟ. ಕ್ಯಾಮೆರಾ ಚಲನೆ, ಸಂಕಲನ, ಶಾಟ್ ಗಳ ಸಂಯೋಜನೆ ಮುಂತಾದವುಗಳನ್ನು ಒಂದು ಚಿತ್ರದಲ್ಲಿ ಅಳವಡಿಸಿ ಅದನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವ ಇದೆ ಗ್ರಿಪಿತ್. ಕಾಲದ ವ್ಯತ್ಯಾಸಗಳನ್ನು ವಿಷದಪಡಿಸಲು ಫೇಡ್ ಇನ್, ಫೇಡ್ ಔಟ್ ತಂತ್ರಗಳನ್ನು ಮೊದಲ ಭಾರಿಗೆ ಬಳಸಿದ ಗ್ರಿಪಿತ್ ಇದಕ್ಕಾಗಿ ಕ್ಯಾಮೆರಾ ಒಪರ್ಚರ್ ಡಯಾಪ್ರಾಗಂ ನ್ನು ತೆರೆಯುವ, ಮುಚ್ಚುವ ಮೂಲಕ ಬೆಳಕನ್ನು ನಿಯಂತ್ರಿಸಿ ಈ ಪರಿಣಾಮ ಸಾಧಿಸಿದ್ದ. ಆನಂತರ ಐರಿಸ್ ಎನ್ನುವ ಚಿಕ್ಕದಾದ ಉಪಕರಣವನ್ನು ಕಂಡುಕೊಂಡಿದ್ದ. ಈ ಪರಿಣಾಮ ಬೇಕಾದಾಗ ಅದನ್ನು ಕ್ಯಾಮೆರಾದ ಮುಂದೆ ಇಟ್ಟು ನಿಧಾನವಾಗಿ ಸರಿಸುವ ಮೂಲಕ ದೃಶ್ಯಕ್ಕೆ ಬೇಕಾದಂತೆ ಪರಿಣಾಮವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದ.ಹಾಗೆ ಒಂದೇ ಶಾಟ್ ನಲ್ಲಿ ಎರಡು ದೃಶ್ಯಗಳನ್ನು ಸಂಯೋಜಿಸುವಾಗಲೂ ಇದೆ ಐರಿಸ ಉಪಯೋಗವಾಗುತ್ತಿತ್ತು.
ಮುಂದೆ  ಚಿತ್ರದ ಚಿತ್ರೀಕರಣದಲ್ಲಿ ಹಿನ್ನೆಲೆಯಲ್ಲಿ ಚಿತ್ರಗಳನ್ನೂ ದೊಡ್ಡ ದೊಡ್ಡ ಪೇಂಟಿಂಗ್ ಬಳಸಿಕೊಳ್ಳುವ ಯೋಚನೆ ಮಾಡಿದ್ದು ನೋರ್ಮ.ಓ.ಡಾನ್.ಈತನ ಈ ಉಪಾಯದಿಂದಾಗಿ ಈಗಾಗಲೇ ಇದ್ದ ಸ್ಟುಡಿಯೋಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿಕೊಳ್ಳುವಂತಾಗಿತ್ತು. ಚಿತ್ರಗಳ ಅವಧಿ ಚಿಕ್ಕದಾಗಿದ್ದರೂ ಅದರಲ್ಲಿನ ನಟ/ನಟಿಯರನ್ನು ಜನ ಗುರುತಿಸುತ್ತಿದ್ದರು.ಆದರೆ ಗ್ರಿಫಿತ್ ನ ಸಿನೆಮಾ ಪ್ರವೇಶದ ನಂತರ ಚಿತ್ರಗಳ ಉದ್ದ ಹೆಚ್ಚಾಗತೊಡಗಿತ್ತು. ಕಾರಣ ಗ್ರಿಫಿತ್ ಚಿತ್ರದಲ್ಲಿ ಕಥೆ ಹೇಳಲು ಶುರುಮಾಡಿದ್ದ. ಏನೋ ಅಂಡ್ ಆರ್ದೆನ್ನ ಚಿತ್ರದ ಉದ್ದ ಎರಡು ರೀಲುಗಳಿಗೂ ಅಂದರೆ 30 ನಿಮಿಷಕ್ಕೂ ಹೆಚ್ಚು ಉದ್ದವಿತ್ತು.

] 1912 ರಲ್ಲಿ ಬಿಡುಗಡೆಯಾದ ಕ್ವೀನ್ ಎಲಿಜ್ಯಬೇತ್ ಫ್ರೆಂಚ್ ಸಿನೆಮಾ ನಲವತ್ತನಾಲ್ಕು ನಿಮಿಷಗಳಷ್ಟು ಉದ್ದವಿದ್ದು ಸೂಪರ್ ಹಿಟ್ ಆಯಿತಲ್ಲದೇ ಅದರಲ್ಲಿ ಅಭಿನಯಿಸಿದ್ದ ನಟಿ ಸಾರಾ ಜನರ ದೃಷ್ಟಿಯಲ್ಲಿ ಸ್ಟಾರ್ ಆಗಿ ಹೊರಹೊಮ್ಮಿದ್ದಳು.ಈ ಬೆಳವಣಿಗೆಯ ನಂತರ ಚಿತ್ರ ಕರ್ಮಿಗಳು ಸಿನೆಮಾಗಳನ್ನು ಹೆಚ್ಚು ಉತ್ಸಾಹದಿಂದ ನಿರ್ಮಿಸತೊಡಗಿದ್ದರಲ್ಲದೆ,  ದಶಕದ ಕೊನೆಕೊನೆಗೆ ಚಿತ್ರದ ಉದ್ದ ಒಂದೂವರೆ ಘಂಟೆಗೆ ಬಂದು ನಿಂತಿತ್ತು.
ಈ  ದಶಕದಲ್ಲಿ ಬಂದ ಗ್ರಿಫಿತ್ ನ ಗಮನಾರ್ಹ ಚಿತ್ರವೆಂದರೆ ಬರ್ತ್ ಒಫ್ ಎ ನೇಷನ್. 1915ರಲ್ಲೇ ತೆರೆಗೆ ಬಂದ ಈ ಚಿತ್ರ ಅಮೆರಿಕಾದ ರಾಜ ಮನೆತನಗಳ ನಡುವಿನ ಯುದ್ಧದ ಇತಿಹಾಸವನ್ನು ಹೊಂದಿತ್ತು. ಒಂದು ಪರಿಪೂರ್ಣ ಚಿತ್ರವಾದ ಎ ಬರ್ತ್ ಒಫ್ ಎ ನೇಷನ್ ಅದ್ಭುತ ಯಶಸ್ಸು ಗಳಿಸಿದ್ದಷ್ಟೇ ಅಲ್ಲ ಅಮೆರಿಕಾದ ವೈಟ್ ಹೌಸ್ ನಲ್ಲೂ ಪ್ರದರ್ಶನ ಗೊಂಡ ಈ ಚಿತ್ರ ಅನೇಕ ವಿವಾದಗಳನ್ನೂ ಹುಟ್ಟುಹಾಕಿತ್ತಲ್ಲದೆ, ಕೆಲವೊಂದು ನಗರಗಳಲ್ಲಿ ನಿಶೇಧಕ್ಕೊಳಗಾಗಿತ್ತು.
ಈ  ನಿಟ್ಟಿನಲ್ಲಿ ಹೇಳುವುದಾದರೆ ಚಿತ್ರರಂಗದ ಇತಿಹಾಸದಲ್ಲಿ 1910 ರ ದಶಕ ಒಂದು ಮೈಲಿಗಲ್ಲು ಎನ್ನಬಹುದು. ಬರೀ ಒಂದೆರೆಡು ದೃಶ್ಯಗಳು ಅಥವಾ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಕ್ಕಷ್ಟೇ ಮೀಸಲಾಗಿದ್ದ ಚಿತ್ರರಂಗ ಆ ಮೂಲಕ ಕಥೆ ಹೇಳಲು ಪ್ರಾರಂಭಿಸಿದ್ದು ಈ ದಶಕದಲ್ಲೇ. ಒಂದು ಕಥೆಯನ್ನೂ, ಕಾದಂಬರಿಯನ್ನೂ, ನಾಟಕವನ್ನೂ ಸಿನೆಮಾ ರೂಪಕ್ಕೆ ಯಶಸ್ವಿಯಾಗಿ ತರಲಾಯಿತು. ಹಾಗೆ ಚಿತ್ರದ ಅವಧಿಯೂ ಈ ದಶಕದಲ್ಲಿ ಗಮನಾರ್ಹವಾಗಿ ಬೆಳೆಯಿತು. ಕೇವಲ ಒಂದು ರೀಲಿಗಷ್ಟೇ ಸೀಮಿತವಾಗಿದ್ದ ಚಿತ್ರಗಳು, ಆನಂತರ ಕಥೆಗೆ ತಕ್ಕಂತೆ ಚಿತ್ರದ ಉದ್ದವನ್ನು ಹೆಚ್ಚಿಸಿಕೊಂಡವು. ಜೊತೆಗೆ ಸಂಕಲನ ಮತ್ತು ಕ್ಯಾಮೆರಾ ಚಲನೆ, ತಂತ್ರಗಳಲ್ಲಿ ಸಾಕಷ್ಟು ಮುಂದುವರೆದಿದ್ದಲ್ಲದೆ, ಜನರ ಮನಸ್ಸಿನಲ್ಲಿ ಸಿನೆಮಾ ಒಂದು ಪರಿಪೂರ್ಣ ಮನರಂಜನಾ ಮಾಧ್ಯಮವಾಗಿ ರೂಪುಗೊಂಡಿತ್ತು.                                                                                  [ಸಶೇಷ ]

2 comments:

  1. ಬರ್ತ್ ಒಫ್ ಎ ನೇಷನ್ ನೋಡಬೇಕು. ಡೌನ್ ಲೋಡ್ ಮಾಡಿದ್ದೇನೆ. ಗ್ರಿಫಿತ್ ನ "Intolerance: Love's Struggle Throughout the Ages (1916)" ಮೊನ್ನೆಯಷ್ಟೇ ನೋಡಿ ಮುಗಿಸಿದೆ. ಅದ್ಭುತವಾಗಿದೆ. ಎಡಿಟಿ೦ಗ್ ಎ ಕ್ಲಾಸ್. ನಾಲ್ಕು ಕಥೆಗಳನ್ನು ಸಮನಾ೦ತರವಾಗಿ ರೀಲ್ ನಲ್ಲಿ ಓಡಿಸಿ ಇ೦ಟರ್ ಕಟ್ ಮಾಡಲಾಗಿದೆ. ಸೆಟ್, ಪ್ರೊಡಕ್ಷನ್ ಲಾರ್ಡ್ ಆಪ್ ದಿ ರಿ೦ಗ್ಸ್ ಗಿ೦ತ ಏನೂ ಕಮ್ಮಿ ಇಲ್ಲ. ನಾಲ್ಕು ಗ೦ಟೆಯ ಚಿತ್ರ. ಸಹನೆಯ ಪರೀಕ್ಷೆ

    ReplyDelete
    Replies
    1. ಹೌದು. ನಾನು ನೋಡಿದ್ದೀನಿ. ಆ ಚಿತ್ರಗಳನ್ನೂ ಆ ಕಾಲಮಾನವನ್ನ ಕಲ್ಪಿಸಿಕೊಂಡು ನೋಡುವುದರಿಂದ ನನಗೆ ಬೋರ ಆಗಲಿಲ್ಲ. ಬದಲಿಗೆ ಪ್ರತಿಯೊಂದು ಅಚ್ಚರಿ ಎನಿಸಿತು. ಇಷ್ಟೆಲ್ಲಾ ಸವಲತ್ತುಗಲಿದ್ದು ಚಿತ್ರ ಮಾಡಲು ಒದ್ದಾಡುವ ನಮಗೂ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ ಎನಿಸಿತು.

      Delete