ಆಗಿನ್ನು ಅಮೇರಿಕಾದಲ್ಲಿ ಸಿವಿಲ್ ವಾರ್ ಶುರುವಾಗಿರಲಿಲ್ಲ. ವರ್ಣಬೇಧ ನೀತಿ ಮತ್ತು ಗುಲಾಮಗಿರಿ ಪದ್ದತಿಗಳು ಜೀವಂತವಾಗಿದ್ದ ಕಾಲವದು.ಬರೀ ಮೈ ಬಣ್ಣ ಮಾತ್ರದಿಂದಾಗಿ ಒಂದಿಡೀ ಜನಾಂಗವನ್ನೇ ಗುಲಾಮರು ಎಂದು ಪರಿಗಣಿಸಿ, ಅವರುಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಅಮಾನುಷ ಪದ್ಧತಿ ಉತ್ತುಂಗದಲ್ಲಿತ್ತು.ಆ ಕಾಲದಲ್ಲಿ ಪರಸ್ಪರ ಅವರನ್ನು ಮಾರಾಟಮಾಡುವ, ಅವರ ಕೈ ಕಾಲಿಗೆ ಸಂಕೋಲೆ ಹಾಕಿ ಕೆಲಸ ಮಾಡಿಕೊಳ್ಳುವುದನ್ನು ಬಿಳಿಯರು ತಮ್ಮ ಜನ್ಮ ಸಿದ್ಧ ಹಕ್ಕು ಎಂದೆ ಸ್ವಘೋಷಿತ ನಿಯಮವನ್ನು ಪಾಲಿಸುತ್ತಿದ್ದರಲ್ಲದೆ , ಕರಿಯರು ತಮ್ಮ ಸೇವೆ ಮಾಡುವುದಕ್ಕಾಗಿಯೇ ಹುಟ್ಟಿದ್ದಾರೆ ಎಂದೇ ನಂಬಿದ್ದರು. ಅವರಿಗೆ ಅಂದರೆ ಕರಿಯರಿಗೆ ಮನುಷ್ಯರಿಗಿರುವ ಯಾವ ಹಕ್ಕುಗಳು, ಸವಲತ್ತುಗಳೂ ಇರಲಿಲ್ಲ. ಸ್ಪೆಕ್ ಸಹೋದರರು ಇಂತಹ ಕರಿಯ ಗುಲಾಮರನ್ನು ಕೊಳ್ಳುವ ಮಾರುವ ಕಾರ್ಯ ನಿರ್ವಹಿಸುತ್ತಿದ್ದ ಖದೀಮರು. ಜಾಂಗೋ ಸೇರಿದಂತೆ ಹಲವಾರು ಜನರನ್ನು ಸಂಕೋಲೆ ಹಾಕಿಕೊಂಡು ನಡುಗುವ ಛಳಿಯಲ್ಲಿ ಬರಿಗಾಲಿನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಅವರಿಗೆ ಎದುರಾಗುವುದು ಡಾ.ಕಿಂಗ್ ಶುಲ್ಜ್. ಜರ್ಮನ್ ಮೂಲದ ಕಿಂಗ್ ತನ್ನನ್ನು ತಾನು ದಂತವೈದ್ಯ ಎಂದೆ ಹೇಳಿಕೊಳ್ಳುತ್ತಾನೆ. ಅಪ್ರತಿಮ ಮಾತುಗಾರ. ಮತ್ತು ಅಷ್ಟೇ ನಿಖರವಾದ ಗುರಿಕಾರ ಕೂಡ. ಯಾವ ಸಂದರ್ಭದಲ್ಲಿ ಏನು ಮಾಡುತ್ತಾನೆ ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಆ ಬ್ರಹ್ಮನಿಂದಲೂ ಊಹಿಸಲಾಗದು.

ಜಾಂಗೋನ ಕಾಲಿನಲ್ಲಿದ್ದ ಸರಪಳಿ ಬಿಚ್ಚುವ ಮೂಲಕ ಅವನನ್ನು ಸ್ವತಂತ್ರ ವ್ಯಕ್ತಿ ಎಂದು ಘೋಷಿಸುತ್ತಾನೆ.
ಹಾಗೆ ಜಾಂಗೋ ಬಂಧಮುಕ್ತನಾಗುತ್ತಾನೆ.
ಜಾಂಗೋನನ್ನು ಬಂಧ ಮುಕ್ತನ್ನಾಗಿಸಿದ್ದರ ಹಿಂದೆ ಡಾಕ್ಟರ್ ಕಿಂಗನಿಗೆ ಬೇರೆಯದೇ ಆದ ಉದ್ದೇಶವಿದೆ. ಹಾಗೆ ಸ್ವತಂತ್ರನಾದ ಜಾಂಗೋನಿಗೂ ಅವನದೇ ಆದ ಒಂದು ಘನಕೆಲಸವಿದೆ. ಇಬ್ಬರು ಸೇರಿ ತಮ್ಮ ಗುರಿಯೆಡೆಗೆ ಹೆಜ್ಜೆ ಹಾಕುತ್ತಾರೆ. ಮುಂದೆ ಅವರ ಗುರಿ ನೆರೆವೇರಿಸಿಕೊಳ್ಳುವಲ್ಲಿನ ಪಯಣವಿದೆಯಲ್ಲ..ಅದು ರೋಚಕವೂ ಹೌದು ಕುತೂಹಲಕಾರಿಯೂ ಹೌದು. ಅದನ್ನು ನೋಡಿ ಸವಿಯಲಷ್ಟೇ ಸಾಧ್ಯ.
ಅತ್ಯುತ್ತಮ ಚಿತ್ರಕಥೆಗಾಗಿ ತನ್ನದೇ ನಿರ್ದೇಶನದ ಪಲ್ಪ್ ಪಿಕ್ಶನ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ನಿರ್ದೇಶಕ, ನಟ, ಛಾಯಾಗ್ರಾಹಕ,ಸಂಕಲನಗಾರ, ನಿರ್ಮಾಪಕ ಕ್ವೆ೦ಟಿನ್ ಟರಂಟಿನೋ ವಿಭಿನ್ನವಾದ ಚಿತ್ರಕರ್ಮಿ. ವಿಶಿಷ್ಟ ನಿರೂಪಣೆಯಿಂದ ವಿಚಿತ್ರವಾದ ಕಥೆಯಿಂದಾಗಿ ಚಿತ್ರರಂಗದಲ್ಲಿ ತನ್ನದೇ ಚಾಪು ಮೂಡಿಸಿರುವ ಪ್ರತಿಭಾವಂತ.ಕಿಲ್ ಬಿಲ್ 1,2., ಪಲ್ಪ್ ಪಿಕ್ಷನ್, ಇನ್ಗ್ಲೋರಿಯಸ್ ಬಾಸ್ಟರ್ಡ್ಸ್, ಜಾಕಿ ಬ್ರೌನ್, ರೆಸಾರ್ವೈರ್ ಡಾಗ್ಸ್ ಮುಂತಾದವುಗಳು ಕ್ವೆ೦ಟಿನ್ ಟರಂಟಿನೋನ ಜನಪ್ರಿಯ ಚಿತ್ರಗಳು.

ಸರಳವಾದ ನೆರವಾದ ಕಥೆ, ಅದ್ಭುತ ನಟರು ಅತ್ಯುತ್ತಮ ಹಿನ್ನೆಲೆ ಸಂಗೀತವಿರುವ ಜಾಂಗೋ ಅತ್ಯುತ್ತಮ ಮನರಂಜನೆ ಕೊಡುವ ಚಿತ್ರ.ನೋಡಿ ನಕ್ಕು ಆನಂದಿಸಬಹುದಾದ ಈ ಚಿತ್ರ ಯಾವ ಯಾವ ವಿಭಾಗದಲ್ಲಿ ಆಸ್ಕರ್ ಗಳಿಸಬಹುದೆನ್ನುವ ಕುತೂಹಲ ನನಗಿದೆ.
ಚಿತ್ರ ನೋಡಬೇಕು. ಟಾರ೦ಟಿನೋ ಯಾವತ್ತೂ ಮೋಸ ಮಾಡಲ್ಲ. ಕಥೆಗಳನ್ನು ಉಲ್ಟಾ ಮಾಡುವ ಪರಿ ಅದ್ಭುತ.
ReplyDelete