Thursday, December 6, 2012

VFX-ಮಾಯಾಜಾಲದ ಬೆನ್ನುಬಿದ್ದು-2

ಅರೆ ಪಾರದರ್ಶಕ ಭೂತವನ್ನು  ಬೆಳ್ಳಿ ಬೆಳ್ಳಿಪರದೆಯ ಮೇಲೆ ತಂದದ್ದು ಇದೆ ಸ್ಮಿತ್. 1909ರಲ್ಲೇ ತೆರೆಗೆ ಬಂದ 'ದಿ  ಕಾರ್ಸಿಕಾನ್  ಬ್ರದರ್ಸ್ ' ಚಿತ್ರದಲ್ಲಿ ಭೂತವನ್ನು ನೋಡಿದ ಜನ ರೋಮಾಂಚಿತರಾಗಿದ್ದರಂತೆ ಹಾಗೆ ಡಬಲ್ ಎಕ್ಸ್ ಪೋಸರ್ ಗೆ ಇಂಗ್ಲಿಷ್ ಪೇಟೆಂಟ್ ಪಡೆದ ಸ್ಮಿತ್ ಆನಂತರ ಮತ್ತೊಬ್ಬ ವ್ಯವಹಾರಸ್ಥ ಚಾರ್ಲ್ಸ್ ಅರ್ಬನ್ ಜೊತೆ ಸೇರಿ ಹಲವಾರು ಸಿನೆಮಾಗಳನ್ನು ನಿರ್ಮಿಸಿದ ಅವುಗಳಲ್ಲಿ ಮುಖ್ಯವಾದುದೆಂದರೆ ಡಬ್ಲ್ಯೂ.ಆರ್ .ಬೂತ್ ನಿರ್ದೇಶನದ ಏರ್ ಶಿಪ್ ಡೆಸ್ಟ್ರಾಯರ್ . 1909ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥೆ ಇಂತಿದೆ . ಅಂತರಿಕ್ಷಾವಾಹನವೊಂದು ಲಂಡನ್ ನಗರದ ಮೇಲೆ ಬಂದಿಳಿದು ಇಡೀ ನಗರವನ್ನು ಸುಟ್ಟುಹಾಕಲು ಹವಣಿಸುತ್ತದೆ . ಆಗ ನಾಯಕ ಅದರ ತಂತ್ರಜ್ಞಾನವನ್ನು ತಿಳಿದು ತನ್ನ ಬುದ್ದಿಶಕ್ತಿ  ಮತ್ತು  ತಂತ್ರಜ್ಞಾನದ  ಸಹಾಯದಿಂದ ಲಂಡನ್ ನಗರವನ್ನು ಉಳಿಸುವನು.ಇದೆ ಕಾಲ ಘಟ್ಟದಲ್ಲಿ ಹೆಸರಿಸಬಹುದಾದ  ಮತ್ತೊಬ್ಬ ಚಿತ್ರಕರ್ಮಿ ಎಂದರೆ ಸಿಸಿಲ್ ಎಂ. ಹೆಪ್ ವರ್ತ್ .ಹೆಪ್ ವರ್ತ್ ನಿರ್ದೇಶನದ  ಎಕ್ಷ್ ಪ್ಲೋಶನ್  ಆಫ್ ಎ ಮೋಟಾರ್ ಕಾರ್ ಬ್ರಿಟಿಶ್ ಟ್ರಿಕ್ಸ್ ಸಿನೆಮಗಳಲ್ಲೇ ಗಮನಾರ್ಹ ಸಿನೆಮಾ ಎಂದೇ ಹೇಳಬಹುದು ಕೇವಲ  ಒಂದೂವರೆ ನಿಮಿಷದ ಈ ಮೂಕಿ ಚಿತ್ರದ ಪರಿಣಾಮ ಮಾತ್ರ ಆ ಕಾಲಕ್ಕೆ ಅಗಾಧವಾದದ್ದು ಎಂದೇ ಹೇಳಬಹುದು. ಆಲಿಸ್ ಇನ್ ವಂಡರ್ ಲ್ಯಾಂಡ್ 1900 ಮತ್ತು ಹೌ ಇಟ್ ಫೀಲ್ಸ್ ಟು ಬಿ ರನ್ ಓವರ್ ಈತನ ಹೆಸರಿಸಬಹುದಾದ ಟ್ರಿಕಿ ಚಿತ್ರಗಳು.
ಬ್ರಿಟನ್ ಚಿತ್ರಕರ್ಮಿಗಳು vfx  ವಿಷಯದಲ್ಲಿ ಇಷ್ಟೆಲ್ಲಾ ತಲೆ ಕೆಡಿಸಿಕೊಳ್ಳು ತ್ತಿದ್ದರೂ ಅಮೆರಿಕನ್ ಚಿತ್ರಕರ್ಮಿಗಳು ಆ  ವಿಷಯದಲ್ಲಿ ಸ್ವಲ್ಪ  ಹಿಂದುಳಿದಿದ್ದರು  ಎಂದೇ ಹೇಳಬಹುದು. ಹಾಗಂತ ಅವರಿಗೆ ಇದೇನೂ ಹೊಸದಾಗಿರಲಿಲ್ಲ 1895ರಲ್ಲೇ ದಿ ಎಕ್ಸಿಕ್ಯೂಶನ್ ಆಫ್ ಮೇರಿ ಚಿತ್ರದಲ್ಲೇ ತಮ್ಮ vfx ಜ್ಞಾನ ಮೆರೆದಿದ್ದರು . ಆದರೂ ಆನಂತರದ ದಿನಗಳಲ್ಲಿ ಪ್ರಸ್ತುತ ಸುದ್ದಿಗಳನ್ನು ಚಿತ್ರರೂಪಕ್ಕೆ ತರಲು  ಆಸಕ್ತಿ ತೋರಿಸಿದರೆ ವಿನಾ ದೃಶ್ಯ ವೈಭವದ ಕಡೆಗೆ ಅಷ್ಟಾಗಿ ಒಲವು ತೋರಿರಲಿಲ್ಲ .
1898ರಲ್ಲಿ  ಅಲ್ಬರ್ಟ್ ಈ ಸ್ಮಿತ್  ಮತ್ತು ಸ್ಟುವಾರ್ಟ್ ಬ್ಲಾಕ್ಟನ್ ಸೇರಿಕೊಂಡು ತಮ್ಮ ವಿಟಾಗ್ರಾಫ್ ಕಂಪನಿಯ ಮೂಲಕ ದಿ ಬ್ಯಾಟಲ್ ಆಫ್ ಸ್ಯಾಂಟಿಯಾಗೊ ಬೇ ಚಿತ್ರವನ್ನು ನಿರ್ಮಿಸಿದರು. ಆ ಕಾಲಕ್ಕೆ  ವಿಭಿನ್ನ  ಪ್ರಯತ್ನವಾಗಿತ್ತು. ಯುಧ್ಧ ಭೂಮಿ, ಕಣಿವೆ,  ನೌಕೆಗಳು, ಪ್ರವಾಹ, ಬಾಂಬ್  ಮುಂತಾದವುಗಳನ್ನು ಆ ಕಾಲಕ್ಕೆ  ಭಿನ್ನ ಐಡಿಯ ಉಪಯೋಗಿಸಿ ಚಿತ್ರೀಕರಿಸಲಾಗಿತ್ತು ಅದಕ್ಕಾಗಿ ಸಣ್ಣ ಸಣ್ಣ ಮಾದರಿಗಳನ್ನು ಬಳಸಲಾಗಿತ್ತು . ಯುದ್ಧಭೂಮಿಯ ಪರಿಣಾಮ ತರುವುದಕ್ಕಾಗಿ  ಸಿಗಾರ್ ಮೂಲಕ ಹೊಗೆಬಿಟ್ಟು ಆನಂತರ ಚಿತ್ರದಲ್ಲಿ ಸಂಯೋಜಿಸಲಾಗಿತ್ತು .ಇದೆಲ್ಲದರ ಫಲಿತಾಂಶ ಅದ್ಭುತವಾಗಿತ್ತು ಈ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯ ನಂತರ ಇದೆ ವಿಟಾಗ್ರಾಫ್ ಕಂಪನಿ 1899ರಲ್ಲಿ ದಿ ವಿಂಡ್ಸರ್ ಹೋಟೆಲ್ ಫೈರ್ ಚಿತ್ರ ನಿರ್ಮಿಸಿತು .ಈ ಚಿತ್ರದಲ್ಲೂ ಬೆಂಕಿ, ಹೊಗೆ ಮುಂತಾದ ಪರಿಣಾಮಗಳಿಗಾಗಿ ಹಲವಾರು ಹೊಸ ಹೊಸ ತಂತ್ರಗಳನ್ನು ಬಳಸಲಾಗಿತ್ತು.
1903ರಲ್ಲಿ ಬಂದ ದಿ ಗ್ರೇಟ್ ಟ್ರೈನ್ ರಾಬರಿ ಚಿತ್ರ ಚಿತ್ರಜಗತ್ತಿನ ಹಲವಾರು ಹೊಸಹೊಸ ಸಾಧ್ಯತೆಗಳಿಗೆ ಮೆಟ್ಟಿಲಾಯಿತು ಎಂದರೆ ತಪ್ಪಾಗಲಾರದು .ಇದರ  ನಿರ್ದೇಶಕ ಎಡ್ವಿನ್ .ಎಸ್  ಪೋರ್ಟರ್ .1900ರಲ್ಲಿ ಎಡಿಸನ್ ಕಂಪನಿಗೆ ಬರೀ ಪ್ರೊಜೆಕ್ಟರ್ ಆಪರೇಟರ್ ಆಗಿ ಸೇರಿದ ಪೋರ್ಟರ್  ತನ್ನ ಪ್ರತಿಭೆಯಿಂದಾಗಿ  ಬೇಗನೆ ನಿರ್ದೇಶಕನ ಪಟ್ಟ ಗಳಿಸಿದ ವ್ಯಕ್ತಿ .ಆತನ ದಿ ಗ್ರೇಟ್ ಟ್ರೈನ್ ರಾಬರಿ ಆ ಕಾಲಕ್ಕೆ ಒಂದು ಉತ್ತಮ ಪ್ರಯತ್ನವಷ್ಟೇ ಅಲ್ಲ. ಕ್ಲೋಸ್ ಅಪ್ , ಲಾಂಗ್ ಶಾಟ್ಸ್ ಮುಂತಾದ ದೃಶ್ಯ ವಿಭಜನೆಯ ಸಂಯೋಜನೆಗಳನ್ನು ಗಳನ್ನು ದೃಶ್ಯವೊಂದಕ್ಕೆ ಸಮರ್ಥವಾಗಿ ಬಳಸಿಕೊಂಡಂತಹ ಚಿತ್ರ. ಈ ಚಿತ್ರದಲ್ಲಿ ಡಬಲ್ ಎಕ್ಸ್ ಪೋಸರ್ ಜೊತೆಗೆ ಗನ್ ಫೈರಿಂಗ್ ಪರಿಣಾಮಕ್ಕಾಗಿ ಚಿತ್ರದ ಫ್ರೇಮುಗಳನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸಿದ್ದ.
ಮೆಲಿಸ್ ಮತ್ತು ಅವರ ಹಿಂದಿನ ಚಿತ್ರಕರ್ಮಿಗಳನ್ನು ಈ ಸ್ಪೆಷಲ್ ತಂತ್ರಜ್ಞಾನವನ್ನು ಪ್ರಯೋಗಾತ್ಮಕವಾಗಿ ಅಥವಾ ಆ ಪರಿಣಾಮವನ್ನು ತೋರಿಸುವುದಕ್ಕಾಗಿ, ಸಾಧಿಸುವುದಕ್ಕಾಗಿ ಬಳಸಿಕೊಂಡರೆ, ಪೋರ್ಟರ್ ಅದನ್ನು ಕಥೆಗೆ ಪೂರಕವಾಗಿ ಬಳಸಿಕೊಂಡ. ಸಿನೆಮಾದಲ್ಲಿನ ಕಥೆಯ ಅವಶ್ಯಕತೆಗೆ ತಕ್ಕಂತೆ ಪರಿಣಾಮಗಳನ್ನು ಬಳಸಿದ ಚಿತ್ರಕರ್ಮಿಗಳಲ್ಲಿ ಪೋರ್ಟರ್ ಮೊದಲಿಗ ಎನ್ನಬಹುದು.[ಸಶೇಷ]

1 comment:

  1. ರವೀಂದ್ರ ಅವ್ರೆ ನೀವ್ ಕೊಟ್ಟ ಲಿಂಕ್ ಮೂಲಕ ಇಲ್ಲಿಗೆ ಬಂದೆ..(ಫೆಸ್ಬುಕ್ನಲಿ) ಬ್ಲಾಗ್ ತುಂಬಾ ನೀಟ್ ಆಗಿದ್ದು ಚೆನ್ನಾಗಿದೆ.. ಒಳ ಹೂರಣ ಹತ್ತು ಹಲವು ಮಾಹಿತಿ ಚಿತ್ರ ಸಮೇತ ಚೆನ್ನಾಗಿದೆ... ನನಗೂ ಸಿನಿಮಾ ಬಗ್ಗೆ ಬೇಜಾನ್ ಆಸಕ್ತಿ ಆ ಬಗ್ಗೆ ಬೇಜಾನ್ ಚರ್ಚಿಸುವೆ.ಆಗಾಗ ಕೆಲವು ಸಿನೆಮಾಗಳ ಬಗ್ಗೆ www .sampada .net ಮತ್ತು www .vismayanagari .com ನಲ್ಲಿ ಬರೆದು ಸೇರಿಸುವೆ..

    ಚಲನ ಚಿತ್ರ -ವೀಕ್ಷಣೆ ನಿಜಕ್ಕೂ ನನಗೆ ಖುಷಿ ಕೊಡುವ ವಿಚಾರ -ಹಾಗಂತ ಸಿಕ್ಕದ್ದನ್ನ ನೋಡಲ್ಲ..!! ಮೊದಲಿ ಐ ಎಂ ಡಿ ಬಿ (www .imdb .com )ನಲಿ ಉತ್ತಮ ಚಿತ್ರಗಳ ಬಗೆಗಿನ ವಿಮರ್ಶೆ ನೋಡಿ ಆಮೇಲೆ ಡೌನ್ಲೋಡ್ ಮಾಡಿ ನೋಡುವೆ...ಅಲಿಂದಲೇ ಹುಡುಕಿದ ಹಲವು ಚಿತ್ರಗಳನ್ನು ಡೌನ್ಲೋಡ್ ಮಾಡಿ ನೋಡಿರುವೆ.. ಮತ್ತು ಹಲವರಿಗೆ ಆ ಬಗ್ಗೆ ಹೇಳಿರುವೆ....

    ನಿಮ್ಮ ಬ್ಲಾಗ್ ಫಾಲೋ ಮಾಡುವೆ..

    ಶುಭವಾಗಲಿ.

    \|/

    ReplyDelete