Friday, December 7, 2012

ಜೋಗಿ ಲೇಖನಗಳೂ, ಚಿತ್ರರಂಗವೂ....

ಕಳೆದ ವಾರದ ಉದಯವಾಣಿಯ ಸಿನೆಮಾ ಪುರವಣಿಯಲ್ಲಿ ಮತ್ತು ಈ ವಾರದ ಸಿನೆಮಾ ಪುರವಣಿಯಲ್ಲಿ ಜೋಗಿಯವರ ಎರಡು ಲೇಖನಗಳು ಪ್ರಕಟವಾಗಿವೆ. ಒಂದು ಒಟ್ಟಾರೆಯಾಗಿ ನಿರ್ದೇಶಕರುಗಳ ಬಗ್ಗೆ ಮತ್ತೊಂದು ಕಥೆಯ ಬಗ್ಗೆ. ನಿಜಕ್ಕೂ ಎರಡೂ ಲೇಖನಗಳೂ ಒಳ್ಳೆಯ ಚಿಂತನೆಯನ್ನು ಬಡಿದೆಬ್ಬಿಸುವ ಲೇಖನಗಳು.
ಹೇಗೆ ಒಬ್ಬ ಕಲಾವಿದ/ಕಲಾವಿದೆ  ಒಂದೇ ಪಾತ್ರಕ್ಕೆ ಸೀಮಿತವಾಗಬಾರದೋ ಹಾಗೆಯೇ ಒಬ್ಬ  ನಿರ್ದೇಶಕ ಒಂದೇ ಶೈಲಿಗೆ ಜೋತು ಬೀಳಬಾರದು. ಹಾಗಂತ ಎಲ್ಲಾ ರೀತಿಯ ಎಲ್ಲಾ ವಿಭಾಗದ ಚಿತ್ರಗಳನ್ನೂ ಮಾಡಿಯೇ ತೀರಬೇಕೆಂದು ಹಠ ತೊಡಬೇಕಾಗಿಲ್ಲ. ಆದರೆ ತಮಗೆ ಆಗಿಬರುವ,ತಮ್ಮ ಮನಸ್ಸಿಗೆ, ಯೋಚನಾಲಹರಿಯ ಪರಿಧಿಯೊಳಗೆ ಬರುವ ಭಿನ್ನ ಭಿನ್ನ ರೀತಿಯ ಕಥಾವಸ್ತುವನ್ನು ದೃಶ್ಯ ಮಾಧ್ಯಮಕ್ಕೆ ತರಲು ಪ್ರಯತ್ನ ಪಡಬಹುದೇನೋ. ಅಥವಾ ತಮಗೊಲಿದ/ತಮಗೊಪ್ಪಿದ ಶೈಲಿಯಲ್ಲಿಯೇ ಬೇರೆ ಬೇರೆ ಕಥೆಯನ್ನೂ ಹೇಳಬಹುದು. ನಾವು  ಹಾಲಿವುಡ್ಡಿನ ನಿರ್ದೇಶಕ ರೋಲಂಡ್ ಎಮರಿಚ್ ನ ಸಿನೆಮಾಗಳನ್ನ ಗಮನಿಸಿದಾಗ ಆತನ ಹೆಚ್ಚಿನ ಸಿನೆಮಾಗಳು VFX ಅಥವಾ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಹೆಚ್ಚಾಗಿ ಹೊಂದಿರುವಂತಹ ಚಿತ್ರಗಳು ಕಂಡುಬರುತ್ತವೆ.. 2012 , 10000 B.C., ದಿ ಡೇ ಆಫ್ಟರ್ ಟುಮಾರೋ, ಗಾಡ್ಜಿಲ್ಲಾ, ಯೂನಿವೆರ್ಸಲ್ ಸೋಲ್ದರ್ , ಇಂಡೆಪೆಂಡೆನ್ಸ್ ಡೇ, ಅನಾನಿಮಸ್ ಮುಂತಾದವುಗಳು ಗ್ರಾಫಿಕ್ಸ್ ತಂತ್ರವನ್ನು ಹೆಚ್ಚಾಗಿ ನಂಬಿಕೊಂಡಿದ್ದರೂ   ವಸ್ತು ಮಾತ್ರ ಭಿನ್ನವಾದವುಗಳಾಗಿವೆ. ಹಾಗೆಯೇ ನಿರ್ದೇಶಕ ಸ್ಪೀಲ್ ಬರ್ಗ್ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ. ವಸ್ತು ವಿಷಯದಲ್ಲಿ, ಶೈಲಿಯಲ್ಲಿ ಬೇರೆ ತರಹದ ಚಿತ್ರಗಳನ್ನ ಕೊಟ್ಟಿದ್ದಾನೆ ಸ್ಪೀಲ್ ಬರ್ಗ್.ಆತನ ಜಾಸ್ , ಈ.ಟಿ , ಇಂಡಿಯಾನ ಜೋನ್ಸ್, ದಿ ಕಲರ್ ಪರ್ಪಲ್, ಜುರಾಸಿಕ್ ಪಾರ್ಕ್, ಶಿಂಡ್ಲರ್ಸ್ ಲಿಸ್ಟ್, ಟರ್ಮಿನಲ್ ಹೀಗೆ. ಅದೇ ರೀತಿ ನಾವು ಸುಮಾರು ನಿರ್ದೇಶಕರನ್ನು ಗುರುತಿಸಬಹುದು. ಕನ್ನಡದಲ್ಲೂ ನಿರ್ದೇಶಕ ಉಪೇಂದ್ರರ ಮೊದಲ ನಾಲ್ಕು ಸಿನೆಮಾಗಳೂ ಎಲ್ಲಾ ರೀತಿಯಿಂದಲೂ ಭಿನ್ನವಾದವು.ಶ್, ಆಪರೇಶನ್ ಅಂತ, ಓಂ, ಎ  ಹಾರರ್, ಆಕ್ಷನ್ ಹೀಗ.ಆದರೆ ನಮ್ಮಲ್ಲಿ ಇತ್ತೀಚಿಗೆ ಯಾಕೆ ಆ ಕೆಲಸ ಆಗುತ್ತಿಲ್ಲ. ಒಬ್ಬ ನಿರ್ದೇಶಕ ಯಾಕೆ ಒಂದು ಯಶಸ್ಸಿನ ಸೂತ್ರಕ್ಕೆ ಹಿಡಿದುಕೊಂಡು ಅದಕ್ಕೆ ಜೋತಾಡುತ್ತಾನೆ ಎಂಬ ಪ್ರಶ್ನೆ ಕಾಡುವುದು ಸಹಜ. ಚಿತ್ರರಂಗದಲ್ಲಿ ತಮ್ಮ ಗುರುತೇ ಇರದಿದ್ದ ಸಮಯದಲ್ಲಿ ರಾಜಿಯಾಗದೆ , ತಮಗೆ ಅನಿಸಿದ ಚಿತ್ರವನ್ನ ಕಿತ್ತಾಡಿಕೊಂಡು ಜಗಳವಾಡಿಕೊಂಡು ಸಿನೆಮಾ ಮಾಡುವ ನಿರ್ದೇಶಕರು ತಮ್ಮ ದಿನಗಳು ಶುರುವಾದಾಗ ಯಾಕೆ ಸುಮ್ಮನಿದ್ದು ಬಿಡುತ್ತಾರೆ ಎನ್ನುವ ಪ್ರಶ್ನೆ ನನ್ನದು. ಪ್ರಾರಂಭದಲ್ಲಿ ಏನು ಮಾಡಲು ಹೊರಟರೂ ಅದಕ್ಕೆ ಉತ್ತರಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕಾಗುತ್ತದೆ. ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಅದ್ಯಾಕೆ, ಅವರ್ಯಾಕೆ ಎಂಬ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿದ್ದರೂ ಇವರೇ ಸಾಕು, ಇದೆ ಸಾಕು ಎಂಬ ನಿರ್ಣಯಕ್ಕೆ ತಲೆಬಾಗಬೇಕಾಗುತ್ತದೆ. ಆದರೆ ಹೆಸರಾದ ಮೇಲೆ ಕೇಳಿದ ನಟರನ್ನು, ವಸ್ತುವನ್ನೂ, ಸ್ಥಳವನ್ನೂ ಕೊಡಲಿಕ್ಕೆ ನಿರ್ಮಾಪಕರು ಸಿದ್ಧವಾದಾಗಲೂ ನಿರ್ದೇಶಕರ್ಯಾಕೆ ತಾವೇ ಒಂದು ವೃತ್ತದೊಳಗೆ ಸೇರಿಕೊಳ್ಳುತ್ತಾರೆ ಎನ್ನುವುದೂ ಪ್ರಶ್ನೆಯಾಗಿಯೇ ಉಳಿದಿದೆ. 
 ಇನ್ನು ಕಥೆಯ ವಿಷಯಕ್ಕೆ ಬಂದರೆ ಆಗಿಲಿಂದ ಈವತ್ತಿಗೂ ಕಥೆಯ ಕೊರತೆ ಎದ್ದು ಕಾಡತೊಡಗುತ್ತದೆ. ಅಥವಾ ಇರುವ ಕಥೆ ಕಾದಂಬರಿಗಳನ್ನೂ ಸಿನೆಮಾ ರೂಪಕ್ಕೆ ಅಳವಡಿಸುವ ಪರಿಣತಿಯ ನಿರ್ದೇಶಕರು ಅಲ್ಪ ಸಂಖ್ಯಾತರು ಎನಿಸುತ್ತದೆ.
ಜೋಗಿಯವರ ಲೇಖನ ಎಲ್ಲೋ ಮೂಲೆಯಲ್ಲಿ ಕುಳಿತ ಕೇವಲ ಒಂದೇ ಒಂದು ಚಿತ್ರ ನಿರ್ದೇಶಿಸಿರುವ ನನ್ನನ್ನೇ ಅಷ್ಟು ಪರಿಯಾಗಿ ಕಾಡಿದೆಯೆಂದರೆ ನಮ್ಮ ಬಾಸ್ ಗಳನ್ನೂ ಬಡಿದೆಬ್ಬಿಸಲು ಸಾಕು. ಆ ಕೆಲಸವಾಗಲಿ ಮಾತು ನಮ್ಮ ನಿರ್ದೇಶಕರು ಚಿತ್ರದಿಂದ ಚಿತ್ರಕ್ಕೆ ಬೆಳೆಯಲಿ, ನಮಗೆ ದಾರಿದೀಪವಾಗಲಿ ಎಂಬ ಆಶಯ ನನ್ನದು.

3 comments:

  1. ನನ್ನದೂ ಇದೇ ಆಶಯ. ಸ್ಟಾನ್ಲಿ ಕ್ಯೂಬ್ರಿಕ್ ಎಲ್ಲಾ ಜೆನ್ರ್ ನಲ್ಲೂ ಉತ್ತು೦ಗದ ಚಿತ್ರಗಳನ್ನು ಕೊಟ್ಟ ಏಕೈಕ ನಿರ್ದೇಶಕ. ನ೦ತರದ ಸ್ಥಾನದಲ್ಲಿ ಈಸ್ಟ್ ವುಡ್, ಸ್ಪೀಲ್ ಬರ್ಗ್, ರಾನ್ ಹಾವರ್ಡ್ ಇತ್ಯಾದಿ.

    ReplyDelete
  2. ಎಲ್ಲ ಜೆನೆರ್ ನಲ್ಲಿ ಅದ್ಭುತ ಕೆಲಸ ಮಾಡಿದ ಇನ್ನಷ್ಟು ಪರಿಣಾಮಕಾರಿ ನಿರ್ದೇಶಕ ಮಹಶಾಯರು ಎಂದರೆ ಮಾರ್ಟೀನ್ ಸ್ಕಾರ್ಸೀಸ್ ಮತ್ತು ಕೊಎನ್ ಸಹೋದರರು .. ಸ್ಟಾನ್ಲಿ ಕ್ಯುಬ್ರಿಕ್ ರ ಕಲಾಕೃತಿಗಳಿಗಿಂತಲೂ ಇವರ ಕೆಲಸಗಳು ಬಹಳ ಇಂಟೆನ್ಸ್ ಆಗಿದ್ವು ಎಂಬುದು ನನ್ನ ಭಾವನೆ ...

    ಸಿನೆಮಾನೆ ಉಸಿರು ಮಾಡಿಕೊಂಡ - ವಿವಿಧ ಜೆನೆರ್ ಲಿ ಕುಸುರಿ ಕೆಲಸ ಮಾಡಿದ ಅದೆಷ್ಟು ಲೆಜೆಂಡ್ ಗಳು ನಮ್ಮಲಿಲ್ಲ ಹೇಳಿ ??

    ಸಿದ್ಧಲಿಂಗಯ್ಯ , ಪುಟ್ಟಣ್ಣ ದಿ ಗ್ರೇಟ್ , ಕೆ.ವಿ.ರಾಜು, ಸುನೀಲ್ ಕುಮಾರ್ ದೇಸಾಯಿ , ಎಸ.ವಿ.ರಾಜೇಂದ್ರ ಸಿಂಗ್ ಬಾಬು, ನಾಗಾಭರಣ, ದೊರೈ ಭಗವಾನ್ , ಇತರದಲ್ಲಿ ಸತ್ಯಜಿತ್ ರೇ ,ಭರತನ್ , ಮಣಿರತ್ನಂ, ಬಾಲ ಚಂದೆರ್, ಹ್ರಿಷಿಕೆಶ್ ದಾ, ರಾಜ್ ಕುಮಾರ್ ಸಂತೋಷಿ , ಪಟ್ಟಿ ಉದ್ದ ಇದೆ .. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಸಿನಿ ಉದ್ಯಾನದಲ್ಲಿ ಇಂತಹ ಮೇರು ಪುಷ್ಪಗಳ ಕೊರತೆ ಎದುರಾಗಿರುವುದು ವಿಷಾದನೀಯ ಸತ್ಯ .

    ReplyDelete
    Replies
    1. ಹೌದು. ಎಲ್ಲರೂ ಯಶಸ್ಸಿನ ಬಾಲ ಹಿಡಿಯುತ್ತಿದ್ದಾರೋ ಅಥವಾ ಅವರು ಅಷ್ಟೇ ಯೋ ಗೊತ್ತಾಗುತ್ತಿಲ್ಲ.

      Delete