Monday, December 10, 2012

ಅಡ್ಡ-ಒಂದು ಗಿಡ್ಡ ವಿಮರ್ಶೆ

ಒಂದು ರೀಮೇಕ್ ಚಿತ್ರದ ಬಗ್ಗೆ ಮಾತಾಡುವಾಗ, ನೋಡುವಾಗ , ವಿಮರ್ಶೆ ಮಾಡುವಾಗ ಅನೂಚಿತವಾಗಿ ಮೂಲಚಿತ್ರದ ನೆನಪು ಬಂದೆ ಬರುತ್ತದೆ. ಬೇಡ ಬೇಡ ವೆಂದರೂ ಎರಡೂ ಚಿತ್ರಕ್ಕೆ ತಾಳೆ ಹಾಕುವ ಮನಸ್ಸು, ಅದು ಅಲ್ಲೇ ಚೆನ್ನಾಗಿತ್ತು, ಈ ದೃಶ್ಯವನ್ನು ಇಲ್ಲಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ, ಅಲ್ಲೊಂದು ಬೋರಿನ ದೃಶ್ಯವನ್ನು ಇಲ್ಲಿ ತೆಗೆದುಹಾಕಿದ್ದು ಚಿತ್ರಕ್ಕೆ ಲಾಭವಾಗಿದೆ ಎಂದೆಲ್ಲಾ ತಪ್ಪು ಸರಿಗಳ ಲೆಕ್ಕಾಚಾರದಲ್ಲಿ ತೊಡಗುತ್ತದೆ. ಆದರೆ ಒಂದು ಸಿನೆಮಾವನ್ನು ಬರೀ ಸಿನೆಮಾವನ್ನಾಗಿ, ಇಲ್ಲಿನ ಸಿನೆಮಾವನ್ನಾಗಿ ನೋಡಲು ಪ್ರಯತ್ನಿಸಿದಾಗ ಆ ಚಿತ್ರದ ನಿಜವಾದ ವಿಮರ್ಶೆ ಸಾಧ್ಯವಾಗುತ್ತೇನೋ. ಆಮೇಲಿನಿಂದ ಬೇಕಾದರೆ ಹೋಲಿಕೆ ಮಾಡಬಹುದೇನೋ.
ಪ್ರೇಮ್ ಅಡ್ಡದ ಕಥೆ 2012ರಲ್ಲಿ  ಪ್ರಾರಂಭವಾಗಿ 1981 ಕ್ಕೆ ಹೋಗಿ ನಿಲ್ಲುತ್ತದೆ. 1981ರಲ್ಲಿ ನಡೆದ ಮಾರಣ ಹೋಮದ ಕಥೆ ಚಿತ್ರದ್ದು. ನಾಲ್ವರು ಹಾದಿಬೀದಿ ಹುಡುಗರು ಕೊಲೆಗಳನ್ನು ಮಾಡುತ್ತಾ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ತಾವೂ ಕೊಲೆಯಾಗುವುದೇ ಕಥೆ. ಆದರೆ ಚಿತ್ರ ನೋಡ ನೋಡುತ್ತಾ ನಮ್ಮ ನಾಯಕರ ಮೇಲೆ ಪ್ರೇಕ್ಷಕರಿಗೆ ಕರುಣೆ ಹುಟ್ಟಿಸುವುದರ ಬದಲು 'ಅಯ್ಯೋ ಯಾಕೀಗೆ ಮಾಡಿಬಿಟ್ಟರು..' ಎನಿಸುತ್ತದೆ. ಆದರೆ ಮತ್ತೆ ಅದೇ ತಪ್ಪನ್ನು ಮಾಡಿದಾಗ ನೋಡುಗನಿಗೆ ಅವರ ಮೇಲೆಯೇ ಬೇಸರವಾಗುತ್ತದೆ. ಆದರೆ ಬರುಬರುತ್ತಾ ಮನೆಗೆ ಮಗನಾಗದ, ಯಾರಿಗೂ ಒಳ್ಳೆಯವರಾಗದ ನಾಲ್ವರು ಕತ್ತು ಕುಯ್ಯುತ್ತಾ ಜೀವನ ನಡೆಸುವುದು ಅರಗಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಚಿತ್ರದ ಬಿಡಿ ಬಿಡಿ ದೃಶ್ಯಗಳು ಚೆನ್ನಾಗಿವೆ. ಆದರೆ ಒಟ್ಟಾರೆಯಾಗಿ ಪಾತ್ರ ಪೋಷಣೆ ಮತ್ತು ಕಥೆಯ ಗತಿ ತೃಪ್ತಿಕರವಾಗಿಲ್ಲ. ಹಾಗಾಗಿಯೇ ಚಿತ್ರ ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸೋಲುತ್ತದೆ. ರಾಜಕೀಯದ ದೊಂಬರಾಟದಲ್ಲಿ ಯಾರೋ ಅಮಾಯಕನನ್ನು ಕೊಲೆ ಮಾಡುವ ನಾಯಕರ ತಂಡ ನಮಗೆಂದೂ[ನನಗೆಂದೂ] ಒಳ್ಳೆಯವರು, ಅಥವಾ ಮಾಡಿದ್ದು ಸರಿಯಾದ ಕೆಲಸ ಎನಿಸುವುದಿಲ್ಲ.
ಚಿತ್ರದ ತಾಂತ್ರಿಕ ಅಂಶಗಳು ಚೆನ್ನಾಗಿವೆ. ಪಾತ್ರಧಾರಿಗಳೂ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಆದರೆ ಭಾವಕ್ಕಿಂತ ಹೆಚ್ಚಾಗಿ ಹಿಂಸೆ ವೈಭವೀಕರಿಸಿದೆ.ಮೊದಲ ಕೊಲೆಯಲ್ಲಿ ಚಾಕುವಿನಿಂದ ಇರಿದು ಆಮೇಲೆ ಮತ್ತೆ ಓಡಿ ಬಂದು ಕತ್ತು ಕುಯ್ಯುವುದು ಬರ್ಬರ ಎನಿಸುತ್ತದೆ. ಹಾಗೆ ಪ್ರಾರಂಭದಿಂದಲೂ ಏನೊಂದು ಒಳ್ಳೆಯ ಕೆಲಸವನ್ನ ನಾಯಕರು ಮಾಡದಿರುವುದು ಅವರ ವ್ಯಕ್ತಿತ್ವವನ್ನ ಅಧಪತನಕ್ಕಿಳಿಸುತ್ತದೆ.
ಚಿತ್ರದ ಋಣಾತ್ಮಕ ಮತ್ತು ಧನಾತ್ಮಕ ಅಂಶವೆಂದರೆ ಸಂಭಾಷಣೆ. ಹೆಸರಿಗೆ ಚಾಮರಾಜನಗರದ ಪಕ್ಕದ ಹಳ್ಳಿ, 1981 ರ ಇಸವಿ ಎಂದರೂ ಕೆಲವೇ ಕೆಲವೇ ಪಾತ್ರಗಳು ಹಳ್ಳಿಗಾಡಿನ ಮಾತಾಡುತ್ತವೆ. ನಾಯಕಿಯೂ ಸೇರಿದಂತೆ ಕೆಲವು ಪಾತ್ರಗಳು ಇದ್ದಕಿದ್ದಂತೆ ಬೆಂಗಳೂರು ಮಾತಿಗೆ ಶುರು ಹಚ್ಚಿ ಕೊಳ್ಳುತ್ತವೆ. ಚಾಮರಾಜನಗರದ ಮಾತುಗಳು ಕೆಲವೊಮ್ಮೆ ಮಂಡ್ಯದ ಮಾತಿನಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಪ್ರೀತಿ, ತಾಯಿ ಮಮತೆ, ಸ್ನೇಹ,ಮಿತ್ರದ್ರೋಹ, ತ್ಯಾಗ ಎಲ್ಲವೂ ಇದೆ. ಆದರೆ ಹಿಂಸೆ, ಕ್ರೌರ್ಯ ಅದೆಲ್ಲವನ್ನೂ ಮೆಟ್ಟಿ ನಿಂತಿದೆ. ಹಾಗೆ ಚಿತ್ರವೂ 1981ರಲ್ಲಿ ಪ್ರಾರಂಭವಾದರೂ ಮುಂದುವರೆದಂತೆ ಪ್ರೇಕ್ಷಕರನ್ನು 1981ರ ಕಾಲಘಟ್ಟಕ್ಕೆ ಹೊತ್ತೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎನ್ನಬಹುದು.
2008ರಲ್ಲಿ  ಬಿಡುಗಡೆಯಾದ ತಮಿಳಿನ ಸುಬ್ರಮಣ್ಯ ಪುರಂ ಒಂದು ಕಡಿಮೆ ಬಜೆಟ್ಟಿನ ಚಿತ್ರ. ಅದರ ಒಟ್ಟು ಬಂಡವಾಳದಷ್ಟೇ ಹಣ ಕೇವಲ ತೆಲುಗು ಡಬ್ಬಿಂಗ್ ಹಕ್ಕಿನಿಂದ ಬಂತೆಂದರೆ ಅದರ ಯಶಸ್ಸಿನ ಅಂದಾಜು ಮಾಡಬಹುದು. ಆ ಚಿತ್ರದ ಭಾವ, ನಾಯಕ-ನಾಯಕಿಯ ವಸ್ತ್ರ, ಸಂಭಾಷಣೆಯ ಶೈಲಿ ಎಲ್ಲಕ್ಕಿಂತ ಹೆಚ್ಚಾಗಿ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿತ್ತಲ್ಲದೆ, ಪರಿಣಾಮಕಾರಿಯನ್ನಾಗಿ ಮಾಡಿತ್ತು.
ಆದರೆ ಇಲ್ಲಿ ಎಲ್ಲವೂ ಇದ್ದು ಏನೋ ಇಲ್ಲಾ ಎನ್ನುವ ಭಾವ ಕಾಡುವುದು ಏಕೋ ಗೊತ್ತಾಗಲಿಲ್ಲ. ಅಂದ ಹಾಗೆ ಚಿತ್ರ ನೋಡಿದ ಮೇಲೆ ಹಿರಿಯರು ಕಿರಿಯರಿಗೆ ಬುದ್ದಿ ಹೇಳುವಾಗ 'ನಮ್ಮ  ಕಾಲದಲ್ಲಿ ಹೀಗಿರಲಿಲ್ಲ ನೋಡು..' ಎನ್ನುವ ಹಾಗಿಲ್ಲ. ಆ ಕಾಲದಲ್ಲಿ ಒಂದಷ್ಟು ಕೊಲೆ , ರಕ್ತ , ಮೋಸ ಬಿಟ್ಟರೆ ಇನ್ನೇನಿತ್ತು ಎನಿಸಿದರೆ ಅದಕ್ಕೆ ಈ ಸಿನೆಮಾ ಜವಾಬ್ದಾರಿಯಲ್ಲ.

3 comments:

 1. ಪೀರಿಯೋಡಿಕ್ ಡ್ರಾಮ ಮಾಡೋದಿಕ್ಕೆ, ಬಯೋಗ್ರಾಫಿ ಮಾಡೋದಿಕ್ಕೆ ನಮ್ಮ ಭಾರತೀಯ ನಿರ್ದೇಷಕರೆಲ್ಲರೂ ಫೇಲು.(ಹೆಚ್ಚಿನವರು).

  ReplyDelete
 2. ಭಾರತೀಯರಿಗೆ ಸಹಿಷ್ಣುತೆ ಎಂಬುದಿಲ್ಲವಾದ್ದರಿಂದ ಸತ್ಯನಿಷ್ಠ ಚಿತ್ರಗಳು-ಕೃತಿಗಳು ಅಷ್ಟಾಗಿ ಸಿಗದು .. ಒಬ್ಬರಿಗೆ ಮಂದಿರ ಒಡೆದು ಮಸೀದಿ ಕಟ್ಟಿದ್ದು ರಾಜರ ಆಳ್ವಿಕೆ ಇತಿಹಾಸದ ಸಹಜ ಭಾಗ ಎಂಬ ಸತ್ಯ ಸಹಿಸಲಾಗದು .. ಇನ್ನೊಬ್ಬರಿಗೆ ತಮ್ಮ ಹಿಂದಿನ ತಲೆಮಾರಿನವರು ಇತರ ಧರ್ಮದ ಮೇಲೆ ಮಾಡಿದ್ದು ಅಮಾನವೀಯ ದಬ್ಬಾಳಿಕೆ ಎಂಬುದ ಒಪ್ಪದ ಮನಸ್ಥಿತಿ .. ಇನ್ನೆಲಿಂದ ಬರಬೇಕು ಪೀರಿಯಡ್ ಪಿಕ್ಚರ್ !!! ನಮ್ಮಲ್ಲಿ ಏನಿದ್ರು ಯಾರಿಗೂ ಬೇಜಾರು ಮಾಡದ ವಸ್ತುಸ್ಥಿತಿಗೆ ವಿರುದ್ಧ ವಾಗಿ ಮೂಡಿಬರುವ ತಲೆಬುಡ ಇಲ್ಲದ ಪ್ರೆಮಕಥೆಗಳೇ ಅಪ್ಯಾಯಮಾನ (ಕೊನೆ ಸೀನಲ್ಲಿ ಉಡಾಳ ನಾಯಕ ಯಾರಿಗೋ ನಿಶ್ಚಯವಾದ ಹುಡುಗಿನ ಕರ್ಕೊಂಡ್ ಹೋಗೋ ಕ್ಲೀಷೆಗಳು ) .. ಅಥವಾ ಭಗತ್ ಸಿಂಗ್ , ಸಂಗೊಳ್ಳಿ ರಾಯಣ್ಣ ರಂತ ವೀರ ಸೇನಾನಿಗಳಿಗೂ ನಮ್ಮವರು ಹೇರುವ ಡ್ಯುಯೆಟ್ ಹಾಡಿನ ಹಂಗು !!

  ಸತ್ಯ ಘಟನೆ ಆಧಾರಿತ ಯಾ ನೈಜತೆಯ ಬೆನ್ನಟ್ಟಿ ಹೋಗುವ ಚಿತ್ರಗಳಿಗೆ ಆಗೋ ಗತಿಗೆ ಒಳ್ಳೆ ಉದಾಹರಣೆಯಾಗಿ ಬಿಡುಗಡೆಯಾಗಲು ಇನ್ನಿಲ್ಲದಂತೆ ಹವಣಿಸಿದ ಬ್ಲಾಕ್ ಫ್ರೈಡೆ , ಪಾಂಚ್ , ನಿಂತೇ ಹೋದ ಮರುದ ನಾಯಗನ್ , ಒಂದು ಕಾಲಕ್ಕೆ ನಿಂತುಹೋಗಿದ್ದ ಕುಮಾರರಾಮ ಪ್ರಾಜೆಕ್ಟು ಗಳೇ ನಿಲ್ಲುತ್ತವೆ ... ಅಷ್ಟೇ ಅಲ್ಲ .. ಆನುದೇವ ಹೊರಗಣದವನು, ಆವರಣ ನಂತ ಪುಸ್ತಕಗಳಿಗೂ ಅದೇ ಗತಿ

  ReplyDelete
  Replies
  1. ಹೌದು ನೀವು ಹೇಳಿದ್ದು ಸರಿಯಾಗಿದೆ. ಆದರೆ ಇತಿಹಾಸ ಬರೆದವರು ಇತಿಹಾಸವನ್ನೇ ತಿರುಚಿದರೂ ಎಂಬೆಲ್ಲಾ ಮಾತುಗಳಿವೆ. ನಾವದನ್ನು ಆಡಿದರೂ, ಅಥವಾ ಆಡದಿದ್ದರೂ ನಮ್ಮನ್ನು ವರ್ಗೀಕರಣ ಮಾಡುತ್ತಾರೆಯೇ ಹೊರತು ಸರಿ ಎನ್ನುವುದಿಲ್ಲ.

   Delete