Monday, December 24, 2012

ಚಿತ್ರೋತ್ಸವದ ಚಿತ್ರಗಳು: ಪರ್ವಿಜ್ ಮತ್ತು ಹೋಮ್

ತನ್ನ ರೈನಿ ಸೀಸನ್ [2010] ಚಿತ್ರದಿಂದ ಗಮನಸೆಳೆದಿದ್ದ ನಿರ್ದೇಶಕ ಮಾಜಿದ್ ಬರ್ಜೆಗರ್ ನಿರ್ದೇಶನದ ಚಲನಚಿತ್ರ ಪರ್ವಿಜ್. ಚಿತ್ರದ ಪ್ರಮುಖ ಪಾತ್ರಧಾರಿ ಪರ್ವಿಜ್ ಗೀಗ ಐವತ್ತು ವರ್ಷ ವಯಸ್ಸು. ತನ್ನ ಜೀವಮಾನದಲ್ಲೇ ಏನೊಂದು ಕೆಲಸವನ್ನೂ ಮಾಡದೆ ಅಪ್ಪನ ಮನೆಯಲ್ಲಿ ಉಂಡಾಡಿ ಗುಂಡನಂತೆ ಕಾಲ ಕಳೆದವ. ಅವನ ಸುತ್ತಮುತ್ತಲ ಜನರಿಗೆ ಪರ್ವಿಜ್ ಎಂದರೆ ಏತಕ್ಕೂ ಬಾರದ ನಾಲಾಯಕ್ಕು, ನಿರುಪಯೋಗಿ ಎನ್ನುವ ಭಾವವಿದೆ. ಅದನ್ನು ಯಾವತ್ತೂ ಮುರಿಯುವ, ಅವರ ಅನಿಸಿಕೆಯನ್ನು ಸುಳ್ಳುಮಾಡುವ ಯಾವ  ಉಮ್ಮೇದು ಎಮ್ಮೆಕಿವಿಯ ಪರ್ವಿಜ್ ಗೆ ಇಲ್ಲ. 
ಆದರೆ ಬದುಕು ಅಂದುಕೊಂಡ ಹಾಗೆ ಇರುವುದಿಲ್ಲವಲ್ಲ. ಪರ್ವಿಜ್ ನ ತಂದೆ ಮತ್ತೆ ಮರುಮದುವೆಯಾಗಲು ಯೋಚಿಸಿ, ನಿಶ್ಚಯಿಸಿಕೊಂಡ ಮೇಲೆ ಮಗನನ್ನು ಮನೆಯಿಂದ ಹೊರಗಿರಿಸಲು ಯೋಚಿಸುತ್ತಾನೆ. ಅಷ್ಟೇ ಅಲ್ಲ ಅವನ ದೈನಂದಿನ ಖರ್ಚುವೆಚ್ಚವನ್ನು ತಾನೇ ವಹಿಸಿಕೊಂಡು ಅವನಿಗೊಂದು ಮನೆಯನ್ನೂ ಹುಡುಕಿ ಅದರ ಬಾಡಿಗೆಯನ್ನು ತನ್ನ ಜೇಬಿನಿಂದಲೇ ಕೊಡಲು ನಿರ್ಧರಿಸುತ್ತಾನೆ. ಪರ್ವಿಜ್ ಗೆ ಈ ವಿಷಯ ಇರುಸುಮುರುಸಾದರೂ ಅವನ ನಿರ್ಧಾರಕ್ಕಿಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವಾದ್ದರಿಂದ ಮರುಮಾತಾಡದೆ ಅಪ್ಪ ನೋಡಿದ ಇನ್ನೊಂದು ಮನೆಗೆ ವಾಸ್ತವ್ಯ ಬದಲಿಸುತ್ತಾನೆ. ಹೊಸಮನೆಯಲ್ಲಿ ಪಕ್ಕದ ಮನೆಯ ಹುಡುಗ ಕೂಡ ಪರ್ವಿಜ್ ನ ಮಾತಿಗೆ ಬೆಲೆಕೊಡದೆ ತನ್ನಿಷ್ಟದಂತೆ ಪರ್ವಿಜ್ ಮನೆಯನ್ನ ಬಳಸಿಕೊಳ್ಳತೊಡಗುತ್ತಾನೆ.
ಹೀಗೆ ಎಲ್ಲ ಕಡೆಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುವ ಪರ್ವಿಜ್ ತನ್ನ ಅಸ್ತಿತ್ವವನ್ನು, ಇರುವಿಕೆಯನ್ನು ತೋರಿಸುವ ಪ್ರಯತ್ನ ಪಡುತ್ತಾನೆ. ಅದು ಚಿತ್ರವನ್ನೂ ಏಕಾಏಕಿ ಆಸಕ್ತಿಕರವನ್ನಾಗಿ ಮಾಡುವುದಲ್ಲದೆ, ಚಿತ್ರದ ಮಗ್ಗಲಿಗೆ ಹೊಸ ಚೈತನ್ಯ ತುಂಬುತ್ತದೆ. ಮುಂದಿನ ಕಥೆ ಇಷ್ಟೆ. ಅಪ್ಪನಿಗೆ,  ತನ್ನನ್ನು ರೇಗಿಸುತ್ತಿದ್ದ ಲಾಂಡ್ರಿಯವನಿಗೆ, ತನ್ನಪ್ಪನ ಮಾತನ್ನು ಕೇಳಿಕೊಂಡು ಪರ್ವಿಜ್ ನನ್ನು ಮನೆಯಿಂದ ಖಾಲಿ ಮಾಡಿಸಲು ಬಂದ ಮನೆ ಮಾಲೀಕನಿಗೆ, ಸದಾ ಗೋಳು ಹೊಯ್ದುಕೊಳ್ಳುತ್ತಿದ್ದ ಪಕ್ಕದ ಮನೆಯ ಹುಡುಗನಿಗೆ ಎಲ್ಲರಿಗೂ ಪಾಠ ಕಲಿಸಲು ಪರ್ವಿಜ್ ನಿರ್ಧರಿಸುತ್ತಾನೆ. ಆವಾಗ ನಡೆಯುವ ಘಟನೆಗಳು ಅಥವಾ  ಪರ್ವಿಜ್ ಕೃತ್ಯಗಳು ಇಡೀ ಚಿತ್ರಕ್ಕೆ ಹೊಸ ಆಯಾಮವನ್ನು ಕೊಡುತ್ತದೆ.
ಚಿತ್ರದ ನಿರೂಪಣೆಯಲ್ಲಿ ಹೊಸತನವೇನಿಲ್ಲವಾದರೂ ಇರಾನಿ ಚಿತ್ರಗಳಂತೆ ವಾಸ್ತವಕ್ಕೆ ಹತ್ತಿರವಾದ ಕಥೆ ಚಿತ್ರಕಥೆ ಇದೆ. ಯಾವುದೇ ಅವಸರವಿಲ್ಲದೆ ಯಾರನ್ನೂ ನಾಯಕನನ್ನಾಗಿಯೂ ಖಳನಾಯಕನನ್ನಾಗಿಯೂ ಮಾಡದೆ ಪಾತ್ರಗಳು ಸಂದರ್ಭಕ್ಕನುಸಾರವಾಗಿ ವರ್ತಿಸುವಂತೆ ಕಥೆ ಹೆಣೆದಿರುವ/ನಿರೂಪಿಸಿರುವ ನಿರ್ದೇಶಕ ಆ ಕಾರಣದಿಂದಾಗಿಯೇ ನಮಗಿಷ್ಟವಾಗುತ್ತಾನೆ. ಪರ್ವಿಜ್ ನ ಪ್ರತಿ ವರ್ತನೆಯಲ್ಲೂ ವಾಸ್ತವದ ಅಂಶವಿದೆ.ಹಾಗಾಗಿಯೇ ಚಿತ್ರ ನೈಜ ಘಟನೆಯ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆಯೇ ಹೊರತು ಎಲ್ಲೂ ಸಿನಿಮೀಯ ಎನಿಸುವುದಿಲ್ಲ. ಅತನ ವರ್ತನೆಯಲ್ಲಿ ಹತಾಶೆಯಿದೆ, ಕ್ರೌರ್ಯವಿದೆ ಹಾಗೆ ನ್ಯಾಯವೂ ಇದೆ. ಹೀಗಾಗಿ ಪರ್ವಿಜ್ ಚಿತ್ರವನ್ನೂ ಒಂದು ವಿಭಾಗಕ್ಕೆ ಅಥವ ಪರ್ವಿಜ್ ಪಾತ್ರವನ್ನ ಒಂದು ಮಾನದಂಡಕ್ಕೆ ಒಳಪಡಿಸಿ ಕೈತೊಳೆದುಕೊಳ್ಳಲಾಗುವುದಿಲ್ಲ. ಚಿತ್ರದ ಶಕ್ತಿ ಇದೆ ಎನ್ನಬಹುದು.
ಮೊದಲ ಇಪ್ಪತ್ತು ನಿಮಿಷ ಮಂದಗತಿಯ ನಿರೂಪಣೆ ಆಕಳಿಕೆ ತರಿಸಿದರೂ ತದನಂತರ ಮಂದಗತಿ ಹಾಗೆ ಇರುತ್ತದೆ. ಆದರೆ ಚಿತ್ರದ ಕಥೆ ಆಸಕ್ತಿಕರವಾಗಿ ಶರವೇಗವನ್ನೂ, ತಿರುವುಗಳನ್ನೂ ಪಡೆದುಕೊಳ್ಳುತ್ತದೆ. ಒಮ್ಮೆ ನೋಡಲೇಬೇಕಾದ ಚಿತ್ರ ಪರ್ವಿಜ್.
ಹೋಮ್:ಒಂದು ತುಂಬು ಕುಟುಂಬ. ಅದಕ್ಕೊಬ್ಬ ಯಜಮಾನ. ಅವನಿಗೆ ಎಲ್ಲವೂ ಆತನ ಅಣತಿಯಂತೆ ನಡೆಯಬೇಕೆನ್ನುವ ಬಯಕೆ.ಅವನ ಮಕ್ಕಳೂ ಅಷ್ಟೇ ಒಬ್ಬನನ್ನು ಹೊರೆತುಪಡಿಸಿ, ಎಲ್ಲರೂ ಅವನು ಹಾಕಿದ ಲಕ್ಷ್ಮಣ ರೇಖೆ ದಾಟುವುದಿಲ್ಲ . ಹಿರಿಯ  ಮಗ ಒಂದು ಕೊಲೆ ಮಾಡಿ ಜೈಲು ಸೇರಿಕೊಂಡವನು ಹಾಗೆಯೇ ಕತ್ತಲ ರಾಜ್ಯಕ್ಕೆ ಅಧಿಪತಿಯಾಗುತ್ತಾನೆ. ಇಂತಹ ಮನೆಯಲ್ಲಿ ಹೊರಬರದ ಹಲವಾರು ಸೂಕ್ಷ್ಮವೆನಿಸಿದರೂ ಸಹಿಸಲಾಗದ ಹಲವಾರು ಸಮಸ್ಯೆಗಳಿರುತ್ತವೆ . ತಾತನ ಶತಮಾನೋತ್ಸವದ ಆಚರಣೆಗಾಗಿ ಇಡೀ ಕುಟುಂಬ ಸಂಭ್ರಮದಿಂದ ಸಿದ್ಧವಾಗುತ್ತದೆ. ಅಲ್ಲಿಗೆ ಹಿರಿಯ ಮಗ ಕೂಡ ಬರುತ್ತಾನೆ. ಆದರೆ  ಶತಮಾನದ ಸಂಭ್ರಮಾಚರಣೆ ಬದಲಿಗೆ ಅಲ್ಲಿ ಮಾರಣಹೋಮ ನಡೆಯುತ್ತದೆ. ಹಿರಿಯ ಮಗನ ಪಾಪಕೃತ್ಯಗಳು ಅವನ ಜೊತೆಗೆ ಮನೆಯ ಸದಸ್ಯರನ್ನೂ ಆಪೋಶನ ತೆಗೆದುಕೊಳ್ಳುತ್ತವೆ .
2011ರಲ್ಲಿ ಬಿಡುಗಡೆಯಾದ ರಶಿಯನ್ ಭಾಷೆಯ ಚಲನಚಿತ್ರ ಹೋಮ್.ಎರಡು ಘಂಟೆ ಏಳು ನಿಮಿಷಗಳಷ್ಟು ಅವಧಿಯ ಈ ಚಿತ್ರದ ನಿರ್ದೇಶಕ ಒಲೆಗ್ ಪೋಗೊದೀನ್. ಚಿತ್ರದಲ್ಲಿ ಮುಖ್ಯವಾಗಿ ಹರವಾಗಿರುವುದು ಕುಟುಂಬದೊಳಗಿನ ಸಂಬಂಧದಲ್ಲಿನ ಸೂಕ್ಷ್ಮತೆ ಮತ್ತು ದ್ವೇಷ. ಇವುಗಳನ್ನು ಬಿಚ್ಚಿಡುತ್ತಾ ಒಂದೊಂದೆ ಪಾತ್ರಗಳನ್ನೂ ಪರಿಚಯಿಸುತ್ತಾ ಹೋಗುವ ನಿರ್ದೇಶಕ ಕಡಿಮೆ ಸಂಖ್ಯೆಯ ದೃಶ್ಯಗಳಲ್ಲಿ ಚಿತ್ರದ ಹಂದರ, ಮತ್ತು ಅಲ್ಲಿನ ಜನಜೀವನವನ್ನು ಬಿಚ್ಚಿಟ್ಟು ಬಿಡುತ್ತಾನೆ. ಒಮ್ಮೆಲೆ ಮನೆಗೆ ಹಿರಿಯ ಮಗ ಹಿಂದಿರುಗಿದ ನಂತರ ಒಂದಷ್ಟು ಹಳೆಯ ರಹಸ್ಯಗಳ ಹಿನ್ನೆಲೆ ಬಯಲಾಗುವುದರೊಂದಿಗೆ ಚಿತ್ರ ಸಾಹಸಮಯ ಮತ್ತು ಕುತೂಹಲಭರಿತ ರೋಮಾಂಚಕ ಮಗ್ಗಲಿಗೆ ಹೊರಳುತ್ತದೆ. ಅಮೇಲಿನದೆಲ್ಲಾ ಹುಡುಕಾಟ, ಹೊಡೆದಾಟ, ಕೊಲೆ ಇಷ್ಟೇ. ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರ ತೀರಾ ಮಹತ್ವದ ಚಿತ್ರವಾಗಿಲ್ಲದಿದ್ದರೂ ಒಮ್ಮೆ ನೋಡಲಡ್ಡಿಯಿಲ್ಲ.

ಓದಿ ಮೆಚ್ಚಿದ್ದು: 

 ಅಪ್ಪ ಯಾವತ್ತಿಗೂ ನನ್ನ ಹೀರೋ . ಈವತ್ತಿನ 'ನಾನು' ಗೆ ಕಾರಣ ನನ್ನಪ್ಪ. ನನಗೆ ಯಾವತ್ತೂ ನನಸು  ಮಾಡಿಕೊಳ್ಳಲಾಗದ ಕನಸನ್ನು ಹಾಗೆ ಕನಸಾಗಿಸಿ ಹೋದ ಅಪ್ಪನ ನೆನಪು  ದಿನವಿಲ್ಲ ನನಗೆ. ನಿನ್ನೆ ಜೀವನ್ಮುಖಿ ಬ್ಲಾಗ್ ನಲ್ಲಿದ್ದ  ಛೆ ಅಪ್ಪನಿಗೂ ವಯಸ್ಸಾಗಿ ಬಿಡ್ತೆ ಲೇಖನ ನನ್ನ ಕಣ್ಣನ್ನು ಆರ್ದ್ರವಾಗಿಸಿತು ಹಾಗೆ ಅದರಲ್ಲಿನ ಇನ್ನು ಕೆಲವು ಲೇಖನಗಳು ತೀರ ಆತ್ಮೀಯ ಎನಿಸಿದವು. ಬಿಡುವಾದಾಗ ನೀವು ಒಮ್ಮೆ ಲಗ್ಗೆಯಿಡಿ.

No comments:

Post a Comment