Thursday, December 27, 2012

ಬೆಂಗಳೂರು ಸಿನೆಮೋತ್ಸವ-3

ಇವಾನ'ಸ್ ವುಮನ್: ಮಹಿಳಾ ನಿರ್ದೇಶಕಿ ಫ್ರಾನ್ಸಿಸ್ಕಾ ಸಿಲ್ವ ನಿರ್ದೇಶನದ ಸುಮಾರು 88 ನಿಮಿಷಗಳ ಅವಧಿಯ ಚಿಲಿಯನ್ ಚಲನಚಿತ್ರ ಇವಾನ'ಸ್ ವುಮನ್ 2011 ರಲ್ಲಿ ತೆರೆಗೆ ಬಂದಂತಹ ಚಲನಚಿತ್ರ. ಚಿತ್ರದ ನಾಯಕ ಇವಾನ್. ನಾಯಕಿ ನತಾಲಿಯನ್ನು ಒಂದು ಕೋಣೆಯೊಳಗೆ ಬಂಧಿಯನ್ನಾಗಿಸಿದ್ದಾನೆ. ಆಕೆಗೆ ಹೊತ್ತಿಗೊತ್ತಿಗೆ ಊಟ ತಿಂಡಿ ಕೊಡುತ್ತಿದ್ದಾನಾದರೂ ಆಕೆಯ ಪಾಲಿಗೆ ಸ್ವಾತಂತ್ರ್ಯ  ಮರೀಚಿಕೆಯಾಗಿದೆ. ನತಾಲಿ ಚಿಕ್ಕಂದಿನಿಂದಲೂ ಆತನ ಬಂಧನದಲ್ಲೇ ಇದ್ದಾಳೆ. ಬರುಬರುತ್ತಾ ಆಕೆಯ ಆಸೆಗಳಿಗೆ ಅಪಹರಣಕಾರ ಸ್ಪಂಧಿಸತೊಡಗುತ್ತಾನೆ. ಎಷ್ಟೇ ಅಂತರವನ್ನು ಕಾಪಾಡಿಕೊಳ್ಳಬೇಕೆನಿಸಿದರೂ ಆಕೆಯ ವರ್ತನೆಯಿಂದಾಗಿ ಹಲವಾರು ಸಾರಿ ಅಂತರಕಾಪಾಡಿಕೊಳ್ಳಲಾರದೆ ಸೋಲುತ್ತಾನೆ. ಕೊನೆಗೆ ಆಕೆಯ ಮೇಲೆ ಪ್ರೀತಿ ಹುಟ್ಟಿ ಯಾವಾಗಲೂ ನನ್ನೊಡನೆಯೇ ಇರು ಎಂದು ಭಾಷೆ ತೆಗೆದುಕೊಳ್ಳುತ್ತಾನೆ. ನತಾಲಿ 'ಹೂಂ' ಎನ್ನುತ್ತಾಳಾದರೂ ಸಮಯ ಸಾಧಿಸಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ. 
ಇಡೀ ಚಿತ್ರವನ್ನ  ಎರಡೇ ಪಾತ್ರಗಳು ಒಂದು ಕೋಣೆ/ಮನೆ ಆವರಿಸಿಕೊಂಡಿವೆ. ನತಾಲಿಯ ಒಂಟಿತನವನ್ನೂ ತೋರಿಸುತ್ತಾ ಹೋಗುವ ನಿರ್ದೇಶಕರು ಅದೇ ಹಾದಿಯಲ್ಲಿ ಅಪಹರಣಕಾರನ ಮನಸ್ಥಿತಿಯನ್ನೂ ತೋರಿಸುತ್ತಾರೆ. ಆದರೆ ಚಿತ್ರಕ್ಕೊಂದು ಅಥವಾ ಕಥೆಗೊಂದು ಹಿನ್ನೆಲೆ ಇಲ್ಲದಿರುವುದು ಸಿನಿಮಾದಲ್ಲಿ ಏನೋ ಕೊರತೆಯಿರುವುದನ್ನು ಎತ್ತಿ ತೋರಿಸುತ್ತದೆ. ಚಿತ್ರದಲ್ಲಿರುವ  ನತಾಲಿ-ಇವಾನ ರ ಸನ್ನಿವೇಶಗಳು ನಿಗೂಢತೆಯನ್ನು ಹುಟ್ಟಿಸಿದರೂ ಅದೂ ಕೆಲವೊಮ್ಮೆ ಬೇಸರ ತರಿಸುತ್ತದೆ.
ಚಿತ್ರದ ಪ್ರಾರಂಭದಲ್ಲಿ ಎಲ್ಲವೂ ಒಗಟು ಒಗಟಾಗಿ ಕಾಣುತ್ತದೆ. ಇವನ್ಯಾರು, ಇವಳ್ಯಾರು, ಹೀಗ್ಯಾಕೆ ಎಂಬ ಪ್ರಶ್ನೆಗಳನ್ನ ಹುಟ್ಟು ಹಾಕುತ್ತ ಸಾಗುವ ಚಿತ್ರಕಥೆ ಆಮೇಲೂ ಅದಕ್ಕೊಂದು ಪರಿಪೂರ್ಣ ಅರ್ಥ ಕೊಡುವಲ್ಲಿ ಯಶಸ್ಸಾಗುವುದಿಲ್ಲ. ಚಿತ್ರದ ನಿರೂಪಣೆ ಏಳು ಅದ್ಯಾಯಗಳಲ್ಲಿ ತೆರೆದುಕೊಳ್ಳುತ್ತದೆ. ನತಾಲಿ ಅಡಿಗೆ ಮಾಡಿದಳು, ನತಾಲಿ ಸಮುದ್ರ ತೀರಕ್ಕೆ ಹೋದಳು, ನತಾಲಿಗೆ ಕೊಡುಗೆ ಸಿಕ್ಕಿತು..ಹೀಗೆ ಕೊನೆಯ ಅದ್ಯಾಯ ನತಾಲಿಯೇ ಇವಾನನ ಹೆಂಗಸು ಎಂಬಲ್ಲಿಗೆ ಬಂದು ನಿಲ್ಲುತ್ತದೆ.
ಲೈಕ್  ಸಮ್ ಒನ್ ಇನ್ ಲವ್: ಅಬ್ಬಾಸ್ ಕೈರೋಸ್ತಮಿ ಇರಾನಿ ಚಿತ್ರರಂಗದಲ್ಲಿ ದೊಡ್ಡ ಹೆಸರು. ಚಿತ್ರೋತ್ಸವಗಳಲ್ಲಿ ಕೈರೋಸ್ತಮಿಯ ಒಂದಾದರೂ ಚಿತ್ರ ವಿದ್ದೆ ಇರುತ್ತದೆ.ಇರಾನಿ ಭಾಷೆಯಲ್ಲಿನ ಕ್ಲೋಸ್ ಅಪ್, ಥ್ರೂ ದಿ ಅಲಿವ್ ಟ್ರೀಸ್ , ಟೆನ್ ಚಿತ್ರಗಳು, ಫ್ರೆಂಚ್ ಭಾಷೆಯ ಸೆರ್ಟಿ ಫೈಡ ಕಾಪಿ ಚಿತ್ರಗಳಿಂದ ಹೆಸರುವಾಸಿಯಾದ ನಿರ್ದೇಶಕರು ಈಗ ಜಪಾನಿ ಭಾಷೆಯಲ್ಲಿ  ತುಂಬಾ ಚಂದನೆಯ ಹೆಸರಿಟ್ಟುಕೊಂಡು ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.ಚಿತ್ರದ ಕಥೆಯ ಬಗೆ ಹೇಳುವುದಾದರೆ ತನ್ನ ವಿದ್ಯಾಭ್ಯಾಸದ ಖರ್ಚಿಗಾಗಿ ವೇಶ್ಯಾವಾಟಿಕೆಗೆ ಇಳಿದಿರುವ ಹುಡುಗಿ ಅದೊಂದು ದಿನ ವಯಸ್ಸಾದ ಪ್ರೊಫೆಸ್ಸರ್ ಒಬ್ಬರ ಬಳಿಗೆ ಹೋಗಲೇಬೇಕಾಗುತ್ತದೆ. ಆದರೆ ತನ್ನ ಅನ್ಯಮನಸ್ಕತೆಯಿಂದಾಗಿ ಅಲ್ಲೇನೂ ನಡೆಯದಿದ್ದರೂ ಆ ಪ್ರೊಫೆಸ್ಸರ್ ಮಾರನೆಯ ದಿನ ಆಕೆಯನ್ನು ಅವಳ ಕಾಲೇಜಿಗೆ ಬಿಡಲು ತನ್ನ ಕಾರಿನಲ್ಲಿ ಕರೆತಂದಾಗ ಅವಳ ಹುಚ್ಚು ಪ್ರೇಮಿಯ ಪರಿಚಯವಾಗುತ್ತದೆ. ಅವನು ಪ್ರೋಫೆಸ್ಸರನನ್ನು ನಾಯಕಿಯ ಅಜ್ಜ ಎಂದು ತಿಳಿದುಕೊಳ್ಳುತ್ತಾನೆ. ಚಿತ್ರ ಮುಂದುವರೆದಂತೆ ಆತನಿಂದ ಪೆಟ್ಟು ತಿಂದ ನಾಯಕಿಯನ್ನ ಪ್ರೊಫೆಸ್ಸರ್ ತನ್ನ ಮನೆಗೆ ಕರೆತಂದು ಶುಶ್ರೂಷೆ ಮಾಡುತ್ತಿದ್ದಾಗ ಆ ಹುಚ್ಚು ಪ್ರೇಮಿ ಮನೆಗೆ ಬಂದು ಬಾಗಿಲು ತೆರೆಯುವಂತೆ ಕೂಗಾಡುತ್ತಾನಲ್ಲದೆ ಕೋಣೆಯ ಕಿಟಕಿ ಗಾಜನ್ನೂ ಒಡೆದುಹಾಕುತ್ತಾನೆ.
ಚಿತ್ರ ನಮ್ಮ ತಾಳ್ಮೆ ಪರೀಕ್ಷಿಸುವಷ್ಟು ಮಂದಗತಿಯಲ್ಲಿದೆ. ಮಾರುದ್ದ ಸಂಭಾಷಣೆಗಳು, ಉದ್ದನೆಯ ದೃಶ್ಯ/ದೃಶಿಕೆಗಳು ಏನೇನೂ ನಡೆಯದ ಘಟನೆಗಳಿಂದಾಗಿ ಚಿತ್ರ ಬೋರ್  ಹೊಡೆಯಲು ಪ್ರಾರಂಭಿಸುತ್ತದೆ.ಸಂಭಾಷಣೆ ಕೆಲವು ಕಡೆ ಚುರುಕು ಎನಿಸಿದರೂ ಮತ್ತೆ ಸಾದಾರಣ ಎನಿಸಿ ಎಲ್ಲೂ ಮನಕ್ಕೆ ತಾಗುವುದಿಲ್ಲ. ಕೊನೆಯಲ್ಲಿ ಅಂತ್ಯವಿಲ್ಲದ ಅಥವಾ ಅದಕ್ಕೊಂದು ಪರಿಪೂರ್ಣತೆಯಿಲ್ಲದೆ ಚಿತ್ರ ಅರ್ಧಕ್ಕೆ ಮುಗಿದಂತೆನಿಸುತ್ತದೆ.
ಓದಿ ಮೆಚ್ಚಿದ್ದು:
ಹೀಗೆ ಓದಲಿಕ್ಕೆ ಏನಾದರೂ ಹುಡುಕುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದದ್ದು ಕೊಳಲು ಎಂಬ ಬ್ಲಾಗ್ ಸ್ಪಾಟ್ . ಅಲ್ಲಿದ್ದ ಲೇಖನ ನಿಜಕ್ಕೂ ನನಗೆ ನಗು ತರಿಸಿತು. ಹೆಸರಿನಿಂದಾಗುವ ಅವಾಂತರಗಳು ಅನೇಕ. ಹೆಸರಿನಲ್ಲಿ ಹಾಸ್ಯ... ಅಂತಹದ್ದೇ ಒಂದು ಲೇಖನ. ಇಲ್ಲಿ ಅಂತಹದ್ದೆ ಸುಮಾರು ಲೇಖನಗಳಿವೆ. ಅನುಭವ ಕಥನಗಳಿವೆ. ನೀವು ಒಮ್ಮೆ ಓದಿ.

No comments:

Post a Comment