Wednesday, November 21, 2012

ಆತ ಹಂತಕ , ನಾನು ಚಿತ್ರಕಥೆಗಾರ-ಯಾಮಾರಿದರೆ ಕೊಲೆ.

ನಿಮಗೆ ಚೆಟ್ ಲೋಗನ್ ಬಗ್ಗೆ ಗೊತ್ತಿರಲಿಕ್ಕಿಲ್ಲ. ಭಯಾನಕ ಮನುಷ್ಯ ಅವನು . ತನ್ನ ದಾರಿಗೆ ಅಡ್ಡ ಬಂದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ . ಬೇರೆ ಮಾತೆ ಇಲ್ಲ . ಮುಗಿಸಿಬಿಡುವುದೇ.. ! ಕುಳಿತು ಮಾತಾಡುವುದು , ತರ್ಕದಿಂದ ವರ್ತಿಸುವುದು ಅದೆಲ್ಲಾ ಅವನ ಜಾಯಮಾನದಲ್ಲಿ ಇಲ್ಲವೇ ಇಲ್ಲ. ಅವನಿಗೆ ಗೊತ್ತಿರುವುದು ಒಂದೇ ಎದುರು ನಿಂತವರೆಲ್ಲಾ ಶತ್ರುಗಳು ಮತ್ತು ಅವರನ್ನು ಕೊಲ್ಲಲೇಬೇಕು.ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ ಎಂಬುದು ಅವನ ಸಿದ್ಧಾಂತ. ಜೈಲಿನಿಂದ ತಪ್ಪಿಸಿಕೊಂಡವನು ಒಂದೇ ರಾತ್ರಿಯಲ್ಲಿ  ಆತ ಮಾಡಿದ ಕೊಲೆಗಳ ಸಂಖ್ಯೆ ಆರು. ಅದೂ ಬರ್ಬರವಾಗಿ. ಅವಳು..ಪಾಪಾ ಆ ಹುಡುಗಿಗೆ ಆತನ ಆಕ್ರಮಣ ಹೇಗಿತ್ತೆಂದರೆ ಅವಳ ತಲೆ  ಚೂರುಚೂರಾಗಿತ್ತು. ಇಡೀ ಮಿದುಳು ರಕ್ತ ಕೂದಲು ಎಲ್ಲವೂ ಮಿಕ್ಸಾಗಿದ್ದವು ಎಂದರೆ ಅದರ ಬರ್ಬರತೆಯನ್ನು ನೀವು ಊಹಿಸಬಹುದು. ಈಗ ಒಬ್ಬ ಪೋಲಿಸನನ್ನು ಕೂಡ ಕೊಲೆಮಾಡಿ ಅವನ ಟೋಪಿ ಮತ್ತು ಪಿಸ್ತೂಲ್  ಅನ್ನು ತನ್ನ ವಶಕ್ಕೆ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅದೂ ಪೋಲಿಸ್ ವಾಹನದಲ್ಲೇ. ಈಗ ಇಡೀ ಪೋಲಿಸ್ ವ್ಯವಸ್ಥೆ ಆತನ ಹಿಂದೆ ಬಿದ್ದಿದ್ದೆ. ಎಲ್ಲ ಕಡೆ ರೇಡಿಯೋ  ಸಂದೇಶಹೋಗಿದೆ.
ಅಂಥವನು ಈಗ ನನ್ನ ಮುಂದಿದ್ದಾನೆ. ನನಗೆ ಪೋಲಿಸ್ ಅಪರಾಧಿಗಳು, ರಕ್ತ, ಕೊಲೆಗಳ ಅನುಭವವಿಲ್ಲ. ಅವೆಲ್ಲಾ ಸಿನಿಮಾಗಳಿಂದ ಮಾತ್ರ ನನಗೆ ಪರಿಚಿತ .ಯಾಕೆಂದರೆ ನಾನು ಚಿತ್ರರಂಗದಲ್ಲಿ ಬರಹಗಾರನಾಗಿ ತೊಡಗಿಸಿಕೊಂಡಿರುವವನು. ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದು ನನ್ನ ಕೆಲಸ . ಚಲನಚಿತ್ರಗಳಲ್ಲಿ ನನ್ನ ಪಾತ್ರದ ಮೂಲಕ ಹಲವಾರು ಕೊಲೆಗಳನ್ನೂ ಅತ್ಯಾಚಾರಗಳನ್ನೂ ಮಾಡಿಸಿದ್ದೇನೆ . ಆದರೆ ನಿಜ ಜೀವನದಲ್ಲಿ  ಅದರ ಬಗ್ಗೆ ಯೋಚಿಸಲೂ ನನಗೆ ಸಾಧ್ಯವಿಲ್ಲ . ಯಾವುದೋ ಸಿನೆಮಾದ ಕಥೆ ಬೆಳವಣಿಗೆಯ ಸಮಯದಲ್ಲಿ ಅದ್ಯಯನಕ್ಕಾಗಿ ಜೈಲಿನ ಒಳಗೆ ಹೋಗಿದ್ದೆ .
ಈ ಸಾರಿ ನಮ್ಮ ನಿರ್ಮಾಪಕರು   ಹೇಳಿಬಿಟ್ಟಿದ್ದರು. ಈ  ಸಾರಿಯ ಕಥೆಯಲ್ಲಿ ಎಲ್ಲಾ ರೀತಿಯ ರೋಚಕತೆ ಇರಬೇಕು. ಕೊಲೆ ಸುಲಿಗೆ ಶೃಂಗಾರ, ಹಾಸ್ಯ..ಹೀಗೆ ನವರಸಗಳೂ ತುಂಬಿ ತುಳುಕಬೇಕು ಎಂದು . ಅದಕ್ಕಾಗಿಯೇ ನಾನು ಪಟ್ಟಣದಲ್ಲಿದ್ದರೆ ಆ ಜನಜಂಗುಳಿಯಲ್ಲಿ ಏಕಾಗ್ರತೆ  ಸಾಧ್ಯವಿಲ್ಲವೆಂದು  ಈ  ಕಾಡೊಳಗೆ ವಾಸ್ತವ್ಯ ಮಾಡಿಕೊಟ್ಟಿದ್ದರು. ನಾನು ಏನು ಬರೆಯಬೇಕು ಯಾವ ರೀತಿಯ ಕಥೆ ಮಾಡಬೇಕು ಅಂಬ ಗೊಂದಲದಲ್ಲಿದ್ದಾಗಲೇ ಚೆಟ್ ನನ್ನ ಮನೆಗೆ ನುಗ್ಗಿದ್ದು . ಅವನ ಪರಿಚಯವಾದ ಮೇಲೆ ನಾನು ದಂಗು ಬಡಿದಿದ್ದೆ. ಈಗ ಅವನನ್ನು ಹೊರಗೆ ಕಳುಹಿಸುವುದೆಂತು ?..ಹಾಗೆ ಮಾತಾಡಿಸುತ್ತಿದ್ದಾಗ ಅವನು ತಾನು ಮಾಡಿದ ಕೊಲೆಗಳ ಬಗ್ಗೆ ಹೇಳಿದಾಗ ಅವನ ಕಥೆಯನ್ನು ಸಂಪೂರ್ಣ ಕೇಳಿಕೊಂಡು ಅದಕ್ಕೊಂದಿಷ್ಟು  ಸೇರಿಸಿ ಕಥೆ ಮಾಡಿದರೆ ನೈಜತೆಯ ಸ್ಪರ್ಶ ಸಿಗುತ್ತದೆ ಎನಿಸಿತು. . ಚೆಟ್ ನಿಗೆ ಪೂರ್ತಿ ಕಥೆ ಹೇಳುವಂತೆ ಕೇಳಿಕೊಂಡೆ .
'ನಾನೀಗಾಗಲೇ ಆರು ಕೊಲೆ ಮಾಡಿದ್ದೇನೆ. ಅವುಗಳ ಕಾರಣ  ಕೇಳಿದರೆ ನಿನಗೆ ಕ್ಷುಲ್ಲಕ ಎನಿಸಬಹುದು . ಆದರೆ ನನಗೆ ಹಾಗನ್ನಿಸುವುದಿಲ್ಲ . ಸುಮ್ಮನೆ ಕೇಳಿಸಿಕೊಳ್ಳುತ್ತಾ ಹೋಗು. ಸ್ವಲ್ಪ  ಹೆಚ್ಚುಕಡಿಮೆಯಾದರೂ ಏಳನೆಯವನು ನೀನಾಗಬಹುದು...' ಎಂದ ಚೆಟ್ ಕಣ್ಣಲ್ಲಿ   ಕ್ರೌರ್ಯ ತುಂಬಿ ತುಳುಕುತ್ತಿತ್ತು.
ಇದು ಜೇಮ್ಸ್ ಹಾಡ್ಲಿ ಚೇಸ್ ನ ಕಾದಂಬರಿ 'ವೀ ವಿಲ್ ಶೇರ್ ಎ ಡಬಲ್ ಫ್ಯೂನರಲ್ ' ನ ಪ್ರಾರಂಭದ ಪುಟಗಳ ಸಾರಾಂಶ . ನಾನು ಒಂದಷ್ಟು ಓದಿಯಾದ ಮೇಲೆ , ಬರೆದಾದ ಮೇಲೆ, ಸಿನಿಮಾಗಳನ್ನು ನೋಡಿಯಾದ ಮೇಲೆ ಬ್ರೇಕ್ ಎಂಬಂತೆ ಚೇಸ್ ಕಾದಂಬರಿಗಳನ್ನ ಓದುತ್ತೇನೆ . ಚೇಸ್ ನ ಕಾದಂಬರಿಗಳು ನನಗ್ಯಾವತ್ತೂ ಮೋಸ ಮಾಡಿಲ್ಲ ಅಥವಾ ಅದರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಇದೂ ಕೂಡ ಹಾಗೆಯೇ. ಪ್ರಾರಂಭದಲ್ಲೇ ಹಿಡಿದು ಕೂರಿಸಿಬಿಡುವ ಕಾದಂಬರಿ.   ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸುತ್ತಾ ಸಾಗುವ ಕಾದಂಬರಿಯ ಅಂತ್ಯ ಬಹಳ ರೋಚಕವಾಗಿದೆ. ಉತ್ತಮ ಟೈಮ್ ಪಾಸ್ ಕಾದಂಬರಿ. ಸುಮ್ಮನೆ ಓದಿ ಎಂದು ಶಿಫಾರಸ್ಸು ಮಾಡಬಹುದು .
..

No comments:

Post a Comment