Wednesday, November 21, 2012

ನಾನು ನಾನಲ್ಲ...ದೇವರಾಣೆಗೂ ಅವನೇ..?

ವರಿಬ್ಬರೂ  ತುಂಬಾ  ಅನೋನ್ಯವಾಗಿರುವ ಸಹೋದರರು. ಅಣ್ಣನಿಗೆ ಕಲೆಯಲ್ಲಿ  ಆಸಕ್ತಿ.   ಅಣ್ಣನಿಗೆ ಮದುವೆಯಾಗಿ ಸುಂದರವಾದ, ಒಳ್ಳೆಯ ಹೆಂಡತಿ ಇದ್ದಾಳೆ. ತಮ್ಮನಿಗೆ ಪ್ರೇಯಸಿ ಇದ್ದಾಳೆ ಆದರೂ ಮದುವೆಯಾಗಿಲ್ಲ. ಮರದಲ್ಲಿ ಕೆತ್ತನೆಯ ಕೆಲಸಗಳನ್ನು  ಮಾಡುವುದೆಂದರೆ ಖುಷಿ . ಆದರೆ ತಮ್ಮನಿಗೆ  ಕಾರ್ ರೇಸ್  ಹುಚ್ಚು.ಕಾರನ್ನು  ಶರವೇಗದಲ್ಲಿ ಓಡಿಸುವುದೆಂದರೆ  ಎಲ್ಲಿಲ್ಲದ ಉತ್ಸಾಹ . ಆದರೆ  ಅದು ಅಪಾಯಕಾರಿಯಾದ್ದರಿಂದ ಅಣ್ಣನಿಗೆ ಅದು  ಇಷ್ಟವಿರುವುದಿಲ್ಲ. ಆದರೆ  ಹೇಗೋ ಅಣ್ಣನ ಮನವೊಲಿಸುತ್ತಾನೆ . 'ಸರಿ ಇದೆ ಕೊನೆಯ ಪಂದ್ಯ. ಆಮೇಲಿನಿಂದ ಇದರಲ್ಲಿ ಭಾಗವಹಿಸುವಂತಿಲ್ಲ ' ಎಂದು ಹೇಳುವ ಅಣ್ಣ ಆ ಕಾರ್ ರೇಸ್ ಗೆ ತಮ್ಮನಿಗೆ ಪ್ರೋತ್ಸಾಹ ಕೊಡಲು  ತಾನೂ ಬರುತ್ತಾನೆ. ಪಂದ್ಯ ಮುಗಿಸಿ ಬರುವಾಗ ಅಪಘಾತವಾಗುತ್ತದೆ. ಅಣ್ಣತಮ್ಮ ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗುತ್ತವೆ. ಇಬ್ಬರೂ ಕೋಮ ಸ್ಥಿತಿ ತಲುಪುತ್ತಾರೆ. ಒಂದು ವರ್ಷದ ನಂತರ ತಮ್ಮ ಕೋಮ ಸ್ಥಿತಿಯಿಂದ ಹೊರಬರುತ್ತಾನೆ. ಆಸ್ಪತ್ರೆಯಿಂದ ಮನೆಗೆ ಕರೆತಂದ ಅತ್ತಿಗೆಗೆ ಆತ ತಾನು 'ಅಣ್ಣ' ಎಂದೆ ಪರಿಚಯಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಆತನ ನಡೆ, ನುಡಿ ಎಲ್ಲಾ ಪಕ್ಕಾ ಅಣ್ಣನಂತೆಯೇ. ಅತನ ಪ್ರತಿಯೊಂದು ಸೂಕ್ಷ್ಮಾತಿಸೂಕ್ಷ್ಮ ಅಂಶಗಳೂ ಅಣ್ಣನಂತೆಯೇ ಇರುತ್ತವೆ. ಅತ್ತಿಗೆಗೆ ಗಾಬರಿಯಾಗುತ್ತದೆ. ಅದೇಗೆ ಆತನನ್ನು ಗಂಡನೆಂದು ಸ್ವೀಕರಿಸುವುದು? ಇದು ಆಕೆಗಷ್ಟೇ ಅಲ್ಲ ವೈದ್ಯಲೋಕದಲ್ಲೂ ಗೊಂದಲಗಳಿಗೆ ಕಾರಣವಾಗುತ್ತದೆ. ವೈದ್ಯರುಗಳಿಗೆ ಇದೊಂದು ಸವಾಲೆನಿಸುತ್ತದೆ. ಕೊನೆಗೆ ಕೋಮಾದಲ್ಲಿರುವ ಅಣ್ಣನ ಆತ್ಮ ತಮ್ಮನ ದೇಹಕ್ಕೆ ಸೇರಿಕೊಂಡಿರಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ.
ಈಗ ಅತ್ತಿಗೆಗೆ  ಈತ ನಿಜವಾಗಲೂ ತನ್ನ ಗಂಡನಾ..? ಎನ್ನುವ ಪ್ರಶ್ನೆ ಕಾಡತೊಡಗುತ್ತದೆ. ತನ್ನ ಮತ್ತು ಗಂಡನ ಜೀವನದಲ್ಲಿ ನಡೆದ ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದರೂ ಆತ ಅದಕ್ಕೆಲ್ಲಾ ನಿಖರವಾಗಿಯೇ 'ಅಣ್ಣ' ನಂತೆಯೇ ಉತ್ತರಿಸುತ್ತಾನೆ. ಆದರೂ ಆಕೆಗೆ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ತಮ್ಮನ ಪ್ರೇಯಸಿ ಕರೆದು ಆಕೆಯ ಹತ್ತಿರ ಹೇಗೆ ವರ್ತಿಸುತ್ತಾನೆ ಎಂದು ಪರೀಕ್ಷಿಸುತ್ತಾಳೆ. ಅಲ್ಲೂ ಆಕೆಗೆ  ಅಚ್ಚರಿಯೇ...ಅಣ್ಣನ ಆತ್ಮ ತಮ್ಮನಿಗೆ ಸೇರಿಕೊಂಡರೆ ತಮ್ಮನ ಆತ್ಮ ಎಲ್ಲಿ?
ಅದೊಂದು ದಿನ ಜೋರು ಮಳೆಯಲ್ಲಿ ಮನಗೆ ಬರುವ ತಮ್ಮನ ನಡವಳಿಕೆ ಅತ್ತಿಗೆಯನ್ನು ಅಚ್ಚರಿಗೊಳಿಸುತ್ತದೆ. ಹಿಂದೊಂದು ದಿನ ಇದೆ ತರಹದ ಸನ್ನಿವೇಶದಲ್ಲಿ ಅಣ್ಣ ಹೇಗೆ ನಡೆದುಕೊಂಡಿದ್ದನೋ ಹಾಗೆಯೇ ಈವತ್ತು ತಮ್ಮ ನಡೆದುಕೊಂಡಾಗ ಆಕೆಗೆ ಇದು ಅಣ್ಣನೆ , ತನ್ನ ಗಂಡನೆ ಎನಿಸಿಬಿಡುತ್ತದೆ.
ಆಕೆಯ ಅನುಮಾನಗಳು ಸಂಪೂರ್ಣ ಅಳಿಸಿಹೋಗಿ,  ಇದು ತಮ್ಮನ ದೇಹದಲ್ಲಿರುವ ತನ್ನ ಗಂಡ ಎನಿಸಿಬಿಡುತ್ತದೆ.
ಹೌದಾ ..? ಇದೆಲ್ಲಾ ಸಾಧ್ಯವಾ ಎನ್ನುವ ಪ್ರಶ್ನೆಗಳಿಗೆ ಉತ್ತರವೆಂದರೆ  ...ಅದೆಲ್ಲವನ್ನೂ ದೃಶ್ಯರೂಪದಲ್ಲಿ ನೋಡಿದರೆ ಮಜಾ ಎಂಬುದು ನನ್ನ ಅನಿಸಿಕೆ. 2003ರಲ್ಲಿ ಬಿಡುಗಡೆಯಾದ ಪಾರ್ಕ್ ಯಂಗ್ ಹೂ ನಿರ್ದೇಶನದ ಕೊರಿಯನ್ ಭಾಷಾ ಚಲನಚಿತ್ರ   ' ಅಡಿಕ್ಟಡ್ '  ಚಿತ್ರದ ಸಾರಾಂಶ ಇದು. ಪ್ರಾರಂಭದಲ್ಲಿ ಏನೋ ಎನಿಸಿದರೂ ಬರುಬರುತ್ತಾ ಕಥೆಯ ರೋಚಕತೆಯಿಂದಾಗಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕೊನೆಯವರೆಗೂ ಎಲ್ಲೂ ರಹಸ್ಯ ಬಿಟ್ಟುಕೊಡದ ನಿರ್ದೇಶಕ ಆ ಮೂಲಕ ತಮ್ಮ ಪ್ರಾವೀಣ್ಯತೆ ಮೆರೆದಿದ್ದಾರೆ ಎನ್ನಬಹುದು. ಒಂದು ಘಂಟೆ  ನಲವತ್ತಾರು ನಿಮಿಷವಿರುವ  ಈ ಚಿತ್ರವನ್ನೊಮ್ಮೆ ನೋಡಿ.

No comments:

Post a Comment