Wednesday, November 21, 2012

ಯೋಗರಾಜ್ ಭಟ್ ರ ಡ್ರಾಮಾ ...

 ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾ ಈ ವಾರ ತೆರೆಕಾಣುತ್ತಿದೆ. ಭಟ್ಟರು ಈಗೇನು ಮಾಡಿರಬಹುದು ಅಥವಾ ಇದನ್ನು ಎಷ್ಟು ಚೆನ್ನಾಗಿ ಮಾಡಿರಬಹುದು ಎನ್ನುವ ಕುತೂಹಲವಿದೆ. ಮುಂಗಾರುಮಳೆಯ ಪ್ರತಿಯೊಂದು ಅಂಶವು ಒಬ್ಬ ಚಿತ್ರಕರ್ಮಿಗೆ ಅದ್ಯಯನಕ್ಕೆ ಅರ್ಹವಾದದ್ದು. ಮೇಲ್ನೋಟಕ್ಕೆ ಆ ಸಿನಿಮಾದಲ್ಲಿ ಏನಿದೆ ಎನಿಸಿದರೂ ಸುಮ್ಮನೆ ಚಿತ್ರಕಥೆಯ ತಿರುವುಗಳನ್ನು ಗಮನಿಸುತ್ತಾ ಹೋದಂತೆ ಅದರ ವಿಶೇಷತೆ ನಮಗೆ ಗೊತ್ತಾಗುತ್ತದೆ. ಮೊದಲ  ನೋಟಕ್ಕೆ ತೀರ ಸಾದಾರಣ ಎನಿಸುವ ಮುಂಗಾರುಮಳೆಯ ಚಿತ್ರಕಥೆ ನಿಜಕ್ಕೂ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿದೆ . ಸುಮ್ಮನೆ ಗಮನಿಸಿ. ನೋಡಿದ ಕೂಡಲೇ ನಾಯಕಿಗೆ ಮನಸೋಲುವ ನಾಯಕ ಶತಾಯಗತಾಯ ಆಕೆಯನ್ನು ಪ್ರೀತಿಸಿ ಮದುವೆಯಾಗಲೇಬೇಕು ಎಂಬ ನಿರ್ಧಾರಕೆ ಬಂದು ಬಿಡುತ್ತಾನೆ. ಆಕೆಯ ಹಿಂದೆ ಬೀಳುತ್ತಾನೆ. ಆದರೆ ಆಕೆಗೆ ಮದುವೆ ನಿಶ್ಚಿತಾರ್ಥವಾಗಿರುತ್ತದೆ.ಇದು ಮೊದಲ ತಿರುವು. ಅದು ಗೊತ್ತಾಗುತ್ತಿದ್ದಂತೆಯೇ ನಾಯಕ ಆಕೆಯ ಸಹವಾಸವೇ ಬೇಡ ಎಂದು ಹಿಂದಿರುಗಿ ಹೊರಟು ಬಿಡುತ್ತಾನೆ . ಆದರೆ ನಾಯಕಿ ತಮಾಷೆಗೆ ಕಿಚಾಯಿಸುತ್ತಾಳೆ, ಆತ ವಾಪಸ್ಸು ಬರುತ್ತಾನೆ . ಅದು ಎರಡನೇ ತಿರುವು. ಹಿಂದೆ ಬಂದವ ಆಕೆಯ ಹಿಂದೆ ಬಿದ್ದು ಬಿದ್ದು ರೋಸಿಹೋಗಿ ಆಕೆಯ/ಪ್ರೀತಿಯ  ಸಹವಾಸ ಬೇಡ ಎಂದು ಆಕೆಯನ್ನು ಬಿಡಲು ತಯಾರಾಗುತ್ತಾನೆ . ಆದರೆ ಅಷ್ಟರಲ್ಲಿ ಆಕೆಯೇ ಅವನಿಗೆ ಮನಸೋತಿರುತ್ತಾಳೆ. ಇದು ಮೂರನೆಯ ತಿರುವು. ಇಬ್ಬರ ಪ್ರೀತಿಯೂ ಒಂದಾಗಿ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಆತ ಪರಿಸ್ಥಿತಿಯ ಒತ್ತಡಕ್ಕೆ ಮಣಿದು  ಬದಲಾಗುತ್ತಾನೆ. ಉಲ್ಟಾ ಹೊಡೆಯುತ್ತಾನೆ. ಇದು ಮತ್ತೊಂದು ತಿರುವು. ಹೀಗೆ ಇಡೀ ಚಿತ್ರವೇ ಗಿರಕಿ ಹೊಡೆಯುತ್ತಾ ಸಾಗುತ್ತದೆ. ಏನೋ ಆಗುವುದೆಂದು ಊಹಿಸಿದರೆ  ಇನ್ನೇನೋ ಆಗುತ್ತದೆ. ಯಾವುದೂ ಬೇಕು ಎಂದಾಗ ಸಿಗುವುದಿಲ್ಲ. ಸಿಕ್ಕಾಗ ಅದರ ಬಗ್ಗೆ ಒಲವಿರುವುದಿಲ್ಲ ಅಥವಾ ಅದು ಬೇಕಿರುವುದಿಲ್ಲ ಎಂಬ ಸಿದ್ಧಾಂತ ಚಿತ್ರಕ್ಕೆ ಚೆನ್ನಾಗಿ ಒಪ್ಪುತ್ತದೆ. ನಾನು ಮೊದಲಿಗೆ ಸಿನೆಮಾ ನೋಡಿದ ಮೇಲೆ ಸುಮ್ಮನೆ ಅದನ್ನೇ ಮೆಲುಕು ಹಾಕುತ್ತಿದ್ದಾಗ ಅದರ ಮಧ್ಯಂತರ ಎಲ್ಲಿ ಎಂಬುದೇ ಮರೆತುಹೋಗಿತ್ತು. ಅಷ್ಟರ ಮಟ್ಟಿಗೆ ಭಟ್ಟರ ತಂಡ ಪ್ರೇಕ್ಷಕನನ್ನು ಹಿಡಿದುಕೂರಿಸಿದ್ದಂತೂ ನಿಜ. 
 ಆದರೆ ಆಮೇಲಿನ ಭಟ್ಟರ ಚಿತ್ರಗಳು ಅದೇಕೋ ಅಷ್ಟು ರುಚಿಸಲಿಲ್ಲ. ಪುನರಾವರ್ತನೆ ಎನಿಸಿತು. ದೃಶ್ಯ ವೈಭವ, ಸಂಗೀತ, ಸಾಹಿತ್ಯ, ಸಂಭಾಷಣೆ ಹೀಗೆ ಪ್ರತಿ ಕ್ಷೇತ್ರದಲ್ಲೂ ದಕ್ಷತೆ ಮೆರೆದಿದ್ದ ಮುಂಗಾರುಮಳೆಯ ನಂತರದ ಚಿತ್ರಗಳು ಬರೀ ಸಂಭಾಷಣೆ-ಹಾಡುಗಳಷ್ಟೇ ಚಂದ ಎನಿಸುವಂತಾಗಿತ್ತು.
ಚಿತ್ರದಿಂದ  ಚಿತ್ರಕ್ಕೆ ಬೆಳೆಯುತ್ತಾ ಭಟ್ಟರು ಎಲ್ಲೋ ಸಾಗಿಹೋಗಬಹುದಿತ್ತೇನೋ ಎನಿಸುತ್ತದೆ. ಬಾಲಿವುಡ್ನಲ್ಲಿ ತಮಿಳರು ಮಾಡಿದ್ದನ್ನು ನಮ್ಮಲ್ಲಿನ ಶ್ರೇಷ್ಠ ನಿರ್ದೇಶಕರೇಕೆ ಮಾಡುವುದಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.. ಉದಾಹರಣೆಗೆ ಮುರುಗದಾಸ್ ದೀನ ಚಿತ್ರದಿಂದ ತಮ್ಮ ಪಯಣ ಪ್ರಾರಂಭಿಸಿ ಈವತ್ತಿನ ತುಪಾಕಿಯವರೆಗೆ ಅವರ ಬೆಳವಣಿಗೆ ಏರುಮುಖವಾಗಿಯೇ ಇದೆ. ತುಪಾಕಿ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ . ಹಾಗೆ ಶಂಕರ್ ಕೂಡ. ಆದರೆ ನಮ್ಮಲ್ಲಿ ಅದೇಕೆ ಅದಾಗುತ್ತಿಲ್ಲ. ಮುಂಗಾರುಮಳೆಯ ನಂತರ ಭಟ್ ಚಿತ್ರಗಳೇಕೆ ಯಾವರೀತಿಯಲ್ಲೂ ಅದಕ್ಕಿಂತ ಮುಂದಾಗಲಿಲ್ಲವಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಚಿತ್ರದಿಂದ ಚಿತ್ರಕ್ಕೆ ಮಾರುಕಟ್ಟೆಯನ್ನೂ, ತಮ್ಮದೇ ಚಾಪನ್ನೂ ಹೆಚ್ಚಿಸಿಕೊಳ್ಳುವ ತಮಿಳರ ಛಾತಿ ನಮಗೇಕೆ ಬರುವುದಿಲ್ಲ. ಬಹುತೇಕ  ಹೊಸತನ, ಹೊಸ ಪ್ರಯೋಗಗಳು ನಮ್ಮಲ್ಲೇ ಮೊದಲು ಮೊಳಕೆ ಹೊಡೆದರೂ ನಾವೇಕೆ ನಮ್ಮ ಚಿತ್ರರಂಗದಿಂದಾಚೆಗೆ ನಮ್ಮ ಹೆಜ್ಜೆ ಇಡಲು ಸಾಧ್ಯವಾಗಿಲ್ಲ ಎನಿಸುತ್ತದೆ.ಬರೀ ರೀಮೇಕ್ ಮಾಡಿಕೊಂಡಿ ಹಿಂದಿಯಲ್ಲಿ ನೆಲೆಕಂಡುಕೊಂಡ ಪ್ರಿಯದರ್ಶನ್, ಪ್ರಭುದೇವ  ತಮ್ಮದೇ ಸಿನಿಮಾಗಳನ್ನು ಮತ್ತೊಮ್ಮೆ ನಿರ್ದೇಶಿಸಿ ಹೆಸರುಗಳಿಸಿದ ಶಂಕರ್, ಮುರುಗದಾಸ್, ಅಮೀರ್ ಮುಂತಾದವರನ್ನು ನೋಡಿದಾಗ ನಮ್ಮಲ್ಲಿನ ಟಾಪ್ ನಿರ್ದೇಶಕರೇಕೆ ಅಲ್ಲಿ ಬರೀ ಹೆಜ್ಜೆ ಇಡಲೂ  ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.
ನನ್ನ  ಮೆಚ್ಚಿನ ನಿರ್ದೇಶಕ ಯೋಗರಾಜ್ ಭಟ್ ರಿಗೆ ಈವತ್ತು ಎಲ್ಲವೂ ಅವರ ಕೈಯಲ್ಲಿದೆ. ಅವರ ಸಿನೆಮಾಕ್ಕೆ ಬೇಕಾದ ಹೀರೋ, ತಂತ್ರಜ್ಞರನ್ನು  ಕೊಡುವ ನಿರ್ಮಾಪಕರಿದ್ದಾರೆ. ಅದೆಲ್ಲವನ್ನೂ ತಮ್ಮ ಅನುಭವ, ಬುದ್ದಿವಂತಿಕೆಯ ಜೊತೆ ಬೆರೆಸಿ ಇಡೀ ಭಾರತವೇ ತಿರುಗಿನೋಡುವಂತಹ  ಚಿತ್ರ ನೀಡಲಿ, ಮತ್ತು ನಮ್ಮದೂ ಚಿತ್ರರಂಗ ಸಮರ್ಥವಾಗಿದೆ ಎಂಬುದನ್ನು ಭಟ್ ತರಹದ ನಿರ್ದೇಶಕರು ಪರಭಾಷೆಯ ಚಿತ್ರರಂಗಕ್ಕೆ ತೋರಿಸಿಕೊಡಲಿ ಎಂಬುದು ನಮ್ಮಂತಹ ಬಹುತೇಕ ಅಭಿಮಾನಿಗಳ ಆಶಯ.
ಡ್ರಾಮಾವನ್ನ ಕಣ್ತುಂಬಿಕೊಳ್ಳಲು ಕ್ಷಣಗಣನೆ ಮಾಡುತ್ತಿದ್ದೇನೆ...

5 comments:

  1. You are correct.Bhat has become monotonus. Never grown above very average film mugaru male. same thing is true for nagathi halli chandrashekar also.after america he was not impressive

    ReplyDelete
  2. COrrect sir.
    I completely agree with you.
    Yesterday I was just talking the same with my friends.
    Yograj Bhat is a very good director.
    But since audience liked one kind of dialogue, he should not continue the same in next movies also!!

    ReplyDelete
    Replies
    1. But his films are lighter, nd has no violence factors. Also stresses on love, life nd emotions.

      Delete
  3. he is a fabulous director. but he's making films only in the romantic genre. he should try a thriller and an action movie.

    ReplyDelete
  4. ಮುಂಗಾರು ಮಳೆ ಹೊರತುಪಡಿಸಿದರೆ ಭಟ್ಟರ ಸಿನಿಮಾಗಳಾವುವು ನೋಡಲು ಅಹ‍‍‍್ವಲ್ಲ. ನಂತರ ಬಂಧಂಥಹ ಗಾಳಿಪಟ ಭಟ್ಟರು ಮಳೆ ಹ್ಯಾಂಗೋವರ್ ಲ್ಲಿ ಇರುವುದಕ್ಕೆ ಸಾಕ್ಷಿ. ಮನಸಾರೆ ಪಂಚರಂಗಿ ಸಿನಿಮಾಗಳು ನೋಡಲಸಾಧ್ಯವಾದಂತಹವು. ಇನ್ನು ಫ್ಲಾಪ್ ಆಗದಂತಹ ನಮ್ಮ ಅಪ್ಪು ರವರನ್ನು ಪರಮಾತ್ಮ ಎಂದು ಮಕ್ಕಡೆ ಮಲಗಿಸಿದರು. ಭಟ್ಟರೆ ದಯಮಾಡಿ ನೀವು ಸಿನಿಮಾ ಮಾಡಲು ನಿಲ್ಲಿಸುವಿರ

    ReplyDelete