Tuesday, July 31, 2012

'ಚ೦ದಮಾಮ'ನ ಮಾಯಲೋಕವೂ 'ಈಗ' ಎಂಬ ನೊಣದ ಸಿನಿಮಾವೂ..

ಹಾಭಾರತದ ಒ೦ದು ಪ್ರಸ೦ಗದಲ್ಲಿ ಅರ್ಜುನ ಕೃಷ್ಣನ ಹತ್ತಿರ ಬಂದು ಮೂರು ವರಗಳನ್ನು ಕೇಳಬೇಕು ಏನನ್ನು ಕೇಳಲಿ ಎಂದು ಪ್ರಶ್ನಿಸುತ್ತಾನೆ. ಆಗ ಕೃಷ್ಣ 'ಕಾಗೆಯ ದೃಷ್ಟಿ, ಇರುವೆಯ ಶಕ್ತಿ, ಹೆ೦ಗಸಿನ ಧೈರ್ಯವನ್ನ ಕೇಳಿಕೋ ಎಂದು ಹೇಳಿದಾಗ ಅರ್ಜುನನಿಗೆ ಆಶ್ಚರ್ಯವಾಗುತ್ತದೆ. ಇದೇನಿದು ..ಕಾಗೆಯ ದೃಷ್ಟಿ ಅಷ್ಟು ತೀಕ್ಷಣವಾದದ್ದೇ..ಇರಲಿ ಇರುವೆಯ ಶಕ್ತಿಯ ಬಗ್ಗೆ ಅರ್ಜುನನಿಗೆ ನಗು ಬಂದುಬಿಡುತ್ತದೆ. ಬಾಯಲ್ಲಿ ಊದಿದರೆ ತೂರಿ ಹೋಗುವ ಇರುವೆಯ ಶಕ್ತಿ ಗಣನೀಯವೇ? ಇನ್ನು ಹೆ೦ಗಸಿನ ಧೈರ್ಯ..? ತನಗೆ ಬಂದ ಅನುಮಾನಗಳನ್ನು ಕೃಷ್ಣನಲ್ಲಿ ಕೇಳುತ್ತಾನೆ. ಆಗ ಶ್ರೀಕೃಷ್ಣಪರಮಾತ್ಮ ಕಾಗೆಯ ದೃಷ್ಟಿ, ಇರುವೆಯ ಶಕ್ತಿ ಮತ್ತು ಹೆ೦ಗಸಿನ ಧೈರ್ಯವನ್ನೂ ಪ್ರಾಯೋಗಿಕವಾಗಿ ತೋರಿಸುತ್ತಾ ಹೋಗುತ್ತಾನಲ್ಲ..ಆಗ ಬರುವ ಘಟನೆಗಳು ತು೦ಬಾ  ರೋಚಕವಾಗಿಯೂ ಆಸಕ್ತಿಕರವಾಗಿಯೂ ಇವೆ.ಇ೦ತಹ ಕಥೆಗಳನ್ನ ಕೇಳಿದಾಗಲೆಲ್ಲ ಅದನ್ನು ನಾನು ದೃಶ್ಯ ರೂಪದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆ.  
ಚಂದಮಾಮ,  ಬಾಲಮಿತ್ರ , ಬೊಂಬೆಮನೆ ಮು೦ತಾದ ಮಕ್ಕಳ ನಿಯತಕಾಲಿಕಗಳಲ್ಲಿ ಬರುತ್ತಿದ್ದ ಕಥೆಗಳೆಲ್ಲಾ ಸಿನಿಮಾಗಳಾದರೆ ಅದೆಷ್ಟು ಚೆನ್ನ ಎನಿಸುತ್ತಿತ್ತು. ಪ್ರತಿ ಕಥೆಯಲ್ಲೂ ಒ೦ದು ನೀತಿ ಅದ್ಭುತ ಪಾತ್ರಗಳು, ರೋಚಕ ಸಾಹಸಮಯ ಸನ್ನಿವೇಶಗಳಿರುತ್ತಿದ್ದದ್ದೆ ಆ ಕಥೆಗಳ ವಿಶೇಷತೆ. ಆಮೇಲೆ ಅಲ್ಲಿ ಕೊನೆಗೆ ಗೆಲ್ಲುತ್ತಿದ್ದದ್ದು ಒಳ್ಳೆತನವೇ. ಯಾವತ್ತೂ ಸೋಲುತ್ತಿದ್ದದ್ದು  ದುಷ್ಟತನವೇ. ಅದರ ಕಥೆಗಳನ್ನ ಸಿನಿಮಾ ಮಾಡುತ್ತಾ ಹೋದರೆ ನಮ್ಮಲ್ಲೇ ಪ್ರಿನ್ಸ್ ಆಫ್ ಪರ್ಶಿಯ, ಅನಾನಿಮಸ್, ಪ್ಯಾನ್ಸ್ ಲಬ್ರಿಯತ್ ಮು೦ತಾದ ಚಿತ್ರಗಳ ರೀತಿಯಲ್ಲಿನ ಸಿನಿಮಾಗಳನ್ನು ನೋಡಬಹುದು.ಆದರೆ ನಮಗೆ ಸಿಕ್ಕಿದ್ದೆಲ್ಲಾ..'ಹ್ಯಾರಿ ಪಾಟರ್', ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್ ಮು೦ತಾದ ವಿದೇಶೀ ಅತಿ ಮಾನವರೆ. ನಮ್ಮದೇ 'ಡಿ೦ಗ' ಅದೆಷ್ಟು ಜನರನ್ನು ಕಾಪಾಡಿಲ್ಲ. ಆದರೆ ಆತ ಸಿನಿಮಾದಲ್ಲಿ ಬ೦ದಿಲ್ಲವೆ೦ಬ ಕೊರಗು ಇದ್ದೆ ಇದೆ. ಗೊತ್ತೇ ಇರದ ಡೈನೋಸಾರ್, ಗಾಡ್ಜಿಲ್ಲಗಳೆಲ್ಲಾ ತೆರೆಯ ಮೇಲೆ ಬ೦ದಿವೆ. ಆದರೆ ನಮ್ಮ ನೆಲದ ಶಾರ್ದುಲ, ಗ೦ಡಭೇರು೦ಡಗಳನ್ನಾಧರಿಸಿದ ಸಿನಿಮಾಗಳು ಬ೦ದೆ ಇಲ್ಲವಲ್ಲ ಎಂಬ ಬೇಸರ ತು೦ಬಾ ಹಳೆಯದು.ಆದರೆ ರಾಜಮೌಳಿ ನಿರ್ದೇಶನದ , ಕನ್ನಡದ ಸುದೀಪ ಅಭಿನಯದ 'ಈಗ' ಚಿತ್ರ ನೋಡಿದಾಗ ಒ೦ದು ರೀತಿಯ ಆಶಾಭಾವನೆ ಹುಟ್ಟಿದ೦ತಾಯಿತು.ನಮ್ಮಲ್ಲಿರುವ ಅಸ೦ಖ್ಯಾತ  

ಕುತೂಹಲಕಾರಿ ಭ್ರಾಮಕ ಲೋಕದ ಕಥೆಗಳೂ ಕೂಡ ಇನ್ನು ಮು೦ದೆ ದೃಶ್ಯರೂಪ ತಾಳುವುದು ಕಷ್ಟವೇನಲ್ಲ ಎಂಬುದನ್ನು ಸಾಬೀತು ಪಡಿಸಿದ೦ತಾಯಿತು. ಹಾಗ೦ತ ಅದೂ ಸುಲಭದ ಮಾತೂ ಅಲ್ಲ. ಒ೦ದು VFX ಅನ್ನು ಅವಲ೦ಭಿಸಿರುವ ಸಿನಿಮಾ ಮಾಡಲು ನಿರ್ದೇಶಕನಿಗೆ ತಾ೦ತ್ರಿಕ ಜ್ಞಾನ ಅತ್ಯಗತ್ಯ. ಅದರ ಜೊತೆಗೆ ಪೂರ್ವ ಯೋಜನೆ, ಪೂರ್ವ ತಯಾರಿಗಳು ಬೇಕೇ ಬೇಕು. ಒ೦ದು  ದೃಶ್ಯದ ಚಿತ್ರಿಕೆಯಲ್ಲಿ ಏನೇನು ಬರುತ್ತದೆ ಎಂಬುದರ ಸ್ಪಷ್ಟ ಕಲ್ಪನೆ,  ಚಿತ್ರಣ  ನಿರ್ದೇಶಕನಲ್ಲಿರಬೇಕು. ಅದರ ಜೊತೆಗೆ ಚಿತ್ರೀಕರಣದ ನ೦ತರ ಸ೦ಕಲನ ಮೇಜಿನ ಮೇಲೆ ಏನು ಮಾಡಬೇಕು, ಅದಕ್ಕೆ ಯಾವ್ಯಾವ ತ೦ತ್ರಾ೦ಶದ ಬಳಕೆ ಹೇಗಿರುತ್ತದೆ ಎಂಬುದರ ಜ್ಞಾನವೂ ಇರಬೇಕಾಗುತ್ತದೆ.ಆಗ ಮಾತ್ರ ನಮ್ಮಲ್ಲಿನ ಮಾರುಕಟ್ಟೆಗೆ ತಕ್ಕ೦ತೆ ಉತ್ತಮ ದೃಶ್ಯ ವೈಭವವಿರುವ ಕಾಲ್ಪನಿಕ ಕಥೆಗಳ ಸಿನೆಮಾವನ್ನು ತಯಾರಿಸಲು ಸಾಧ್ಯ.
ರಾಜಮೌಳಿ ರಾಗ ದ್ವೇಷಗಳಲ್ಲಿ ದ್ವೇಷಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ನಿರ್ದೇಶಕ. ಒ೦ದು ಸಿಂಪಲ್ ಕಥೆಯನ್ನೇ ಮನರಂಜನಾತ್ಮಕ ಚಿತ್ರಕಥೆಯ ಮೂಲಕ ಹಾಗೂ ಅದ್ಭುತ ದೃಶ್ಯ ವೈಭವದ ಸಹಾಯದಿ೦ದ ನಿರೂಪಿಸಿ ಯಶಸ್ವಿಯಾಗಿರುವ ವ್ಯಕ್ತಿ. ಆತನ  ಸ್ಟುಡೆಂಟ್ ನ೦.1, ಸಿಂಹಾದ್ರಿ, ಸೈ, ಛತ್ರಪತಿ, ವಿಕ್ರಮಾರ್ಕುಡು, ಯಮದೊ೦ಗ, ಮಗಧೀರ, ಮರ್ಯಾದೆ ರಾಮನ್ನ ಎಲ್ಲವೂ ಯಶಸ್ವೀ ಚಿತ್ರಗಳೇ. ಆದರೆ ಅವುಗಳಾವುವು ಮಾಮೂಲಿ ತೆಲುಗು ಫಾರ್ಮುಲಾದಿ೦ದ ಹೊರತಾದ  
ಚಿತ್ರಗಳಲ್ಲ. ನಮಗೆಲ್ಲ ಗೊತ್ತಿರುವ೦ತೆ ತೆಲುಗು ಚಿತ್ರಕರ್ಮಿಗಳ ವಿಶೇಷತೆ ಬೇರೆ. ಅವರು ಯಾವುದೇ ಗಂಭೀರ ವಿಷಯವನ್ನೂ ಹಾಡು ಹೊಡೆದಾಟದ ಹೊರತಾಗಿ ಹೇಳುವುದಿಲ್ಲ. ಮ೦ದಗತಿಯ ನಿರೂಪಣೆ, ನಿಧಾನಗತಿಯ ಕೆಮೆರಾ ಚಲನೆ, ಮು೦ತಾದವುಗಳಿಗಿ೦ತ ಒ೦ದು ಕಾಮಿಡಿ ಟ್ರ್ಯಾಕ್, ಒ೦ದಷ್ಟು ಹೊಡೆದಾಟ ಹಾಡುಗಳನ್ನ ಹೊರತು ಪಡಿಸಿ ಸಿನಿಮಾ ಮಾಡುವುದು ಕಡಿಮೆ. ಹಾಗ೦ತ ಅವರು  ಪ್ರಯೋಗಾತ್ಮಕ ಚಿತ್ರಗಳನ್ನ ಮಾಡುವುದಿಲ್ಲ ಎಂದರ್ಥವಲ್ಲ. ಭಾನುಪ್ರಕಾಶ್ ನಿರ್ದೇಶನದ 'ಪ್ರಯೋಗಂ', ವಿಕ್ರಂ ಅಭಿನಯದ 9 ನಿಲವು ಮು೦ತಾದ     ಕೆಲವೇ     ಕೆಲವು ಸಿನಿಮಾಗಳು ಪ್ರಯೋಗದ ವಿಷಯದಲ್ಲಿ ಪ್ರಶ೦ಸಿಸಬಹುದಾದ೦ತಹವು.ಆ ನಿಟ್ಟಿನಲ್ಲಿ 'ಈಗ'  ಸಿದ್ಧಸೂತ್ರ ದಿ೦ದ ಹೊರತಾದ ಚಿತ್ರ ಎ೦ದೆ ಹೇಳಬಹುದು.ಏನೇ ವಿಶುಯಲ್ ಎಫೆಕ್ಟ್ಸ್ ಇದ್ದರೂ ಸಿನಿಮಾ ಹಿಡಿಸದಿದ್ದರೆ ಅದೆಲ್ಲಾ ವ್ಯರ್ಥವೇ. ಆದರೆ ಸರಿಯಾಗಿ ಹಾಡುಗಳ ಹ೦ಗಿಲ್ಲದೆ, ಹೊಡಿದಾಟವಿಲ್ಲದೆ ಸಿನಿಮಾ ಮಾಡಿ  ಗೆಲ್ಲಿಸುವುದಿದೆಯಲ್ಲ..ಅದು ನಿರ್ದೇಶಕನ ತಾಕತ್ತಿನ ಪರೀಕ್ಷೆಯೇ ಸರಿ.ಇದರಲ್ಲಿ ಶ್ರೀಶೈಲ ರಾಜಮೌಳಿ ಪ್ರಥಮ ರಾ೦ಕಿನಲ್ಲಿ ಪಾಸಾಗಿದ್ದಾರೆ. ಚಿತ್ರರಂಗದ ಕಥೆ/ಚಿತ್ರಕಥೆಯ ಜಗತ್ತಿಗೆ ಹೊಸ ದಾರಿ ಕಲ್ಪಿಸಿಕೊಟ್ಟಿದ್ದಾರೆ.
  ಬೇತಾಳನ ಕಥೆಗಳ ಸರಣಿ, ಪುಟ್ಟೂನ ಅವಾ೦ತರಗಳು, ಡಿ೦ಗನ ಸಾಹಸಗಳು ಮು೦ತಾದವುಗಳ ನಿರೀಕ್ಷೆಯಲ್ಲಿ 'ಈಗ' ಚಿತ್ರಕ್ಕೊ೦ದು ಸಲಾಮು ಹೊಡೆಯೋಣ. 

3 comments:

  1. ನಮ್ಮ ಬಾಲ್ಯದ ಗತ ಇತಿಹಾಸದಲ್ಲಿ ಡಿ೦ಗ, ಲ೦ಬೋದರರು ಅಜರಾಮರರು :)

    ReplyDelete