Friday, July 27, 2012

ಸಣ್ಣಕಥೆಗಳು, ಪುಟ್ಟ ಸಿನಿಮಾಗಳು...

.
ಕೆಲವೊಂದು ಸಣ್ಣ ಕಥೆಗಳು ತುಂಬಾ ಕಾಡುತ್ತವೆ. ಓದಿ ಅದೆಷ್ಟೇ ದಿನಗಳೇನೂ ವರುಷಗಳೇ ಕಳೆದಿರಲಿ...ತಟ್ಟಕ್ಕನೇ ಆವಾಗಾವಾಗ ಏನೇನೋ ನೆಪವೊಡ್ಡಿಕೊಂಡು ನೆನೆಪಿಗೆ ಬಂದುಬಿಡುತ್ತವೆ. ನಾನು ಮಯೂರ ಮಾಸಿಕದಲ್ಲಿ ಅದ್ಯಾವಾಗಲೋ ಎಮ್.ಎಚ್. ನಾಯಕಬಾಡಅನೂಗೆ ಪ್ರೀತಿಯಿಂದ ಸಣ್ಣಕಥೆ ಓದಿದ್ದೆ. ಓದಿ ಸುಮಾರು ವರ್ಷಗಳೇ ಕಳೆದುಹೋಗಿವೆ. ಆದರೂ ನನಗಿನ್ನೂ ಆ ಕಥೆ ಹಸಿಹಸಿಯಾಗಿ ನೆನಪಿದೆ. ಅದರ ಸಾಲುಗಳೂ ಕೂಡ ಅವಾಗಾವಾಗ ನೆನಪಿಗೆ ಬರುತ್ತವೆ. ಅದೊಂದು ದುರಂತ ಪ್ರೇಮ ಕಥೆ. ಹಾಗೆ ಶಾ.ಬಾಲುರಾವ್ರವರ ಚೀಫ್‌ಗೈಡ್ ಸೂರಿಯ ಪ್ರಣಯ ವೃತ್ತಾಂತ, ಜೋಗಿಯವರ ಸುಬ್ಬಣ್ಣ, ರವಿಬೆಳೆಗೆರೆಯವರ ವೇಷಗಳು, ಚಿತ್ತಾಲರ ಬೀಗ ಮತ್ತು ಬೀಗದ ಕೈ, ರೇಖಾ ಕಾಖಂಡಕಿಯವರ ದತ್ತೂ ಮಾಸ್ತರು, ವಸುಧೇಂದ್ರಅಪಸ್ವರದಲ್ಲೊಂದು ಆರ್ತನಾದ,   ಯುಗಾದಿ ಅಗಾಥಾ ಕ್ರಿಸ್ಟೀಯ ವೈರ್‌ಲೆಸ್, ನೇಮಿಚಂದ್ರರ ಹಲವಾರು ಕಥೆಗಳು, ಸುರೇಂದ್ರನಾಥ್ ಬರೆದ ನಾಥಲೀಲೆ..ಹೀಗೆ ಇನ್ನೂ ಹಲವಾರಿವೆ. ಆದರೆ ಅವುಗಳು ಇಲ್ಲಿ ಬರೆಯಲು ಕುಳಿತುಕೊಂಡಾಗ ನೆನಪಿಗೆ ಬರುವುದಿಲ್ಲ.
ಹಾಗೇ ಮಂಜುನಾಥ್ ಗೀತಾ ಬರೆದ ಕಂಗಳಲಿ ಬೆಳದಿಂಗಲಿಲ್ಲ ಕಥೆ ಓದಿ ಅದ ಮೇಲೆ ಆ ಕಥೆಗಾರನನ್ನು ಭೇಟಿಮಾಡಲೇ ಬೇಕೆನ್ನಿಸಿ ಅದೆಷ್ಟು ಹುಡುಕಾಡಿ ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭೇಟಿಯಾಗಿದ್ದೆ. ಮೊನ್ನೆ ಮೊನ್ನೆ ಪದ್ಮನಾಭ ಭಟ್ ಸೇವ್ಕಾರ್‌ರವರ ಕಥೆಯೊಂದು  ಸಾಪ್ತಾಹಿಕದಲ್ಲಿ ಪ್ರಕಟಗೊಂಡಿತ್ತು. ಓದಿದೆ. ತುಂಬಾ ಇಷ್ಟವಾಗಿತ್ತು. ಆಮೇಲೆ ಆ ಪತ್ರಿಕೆಯ ಪ್ರತಿ ಕಳೆದುಹೋಯಿತು. ಕಂಡಕಂಡವರಿಗೆಲ್ಲಾ ಆ ಕಥೆಯ ಬಗ್ಗೆ ಹೇಳಿ ಅದರ ಪ್ರತಿ ನಿಮ್ಮ ಹತ್ತಿರ ಇದೆಯಾ ಎಂದು ಕೇಳುತ್ತಿದೆ. ಮೊನ್ನೆ ವಸುಧೇಂದ್ರರ ಜೊತೆ ಮಾತನಾಡುತ್ತಿದ್ದಾಗ ಪದ್ಮನಾಭ ಬಗ್ಗೆ ಪ್ರಸ್ತಾಪಿಸಿದೆ. ಅವರು ಇರು ನಿನಗೆ ಅವರ ಜೊತೆ ಮಾತನಾಡಿ ನಿನ್ನ ಮೇಲ್ ಐಡಿ ಕೊಡುತ್ತೇನೆ.. ಎಂದು ಅವರ ಜೊತೆ ಮಾತನಾಡಿ ಮೇಲ್ ಐಡಿ ಕೊಟ್ಟರು. ಮೇಲ್ ಮೂಲಕ ಅವರ ಮೂರು ಕಥೆಗಳನ್ನು ಕಳುಹಿಸುವಂತೆ ಕೋರಿಕೊಂಡೆ. ಓದಿದ ಮೇಲೆಯೇ ನೆಮ್ಮದಿಯಾದದ್ದು.
ಹಾಗೆ ನನ್ನನ್ನು ಬಹುವಾಗಿ ಕಾಡಿದ ಕಥೆ ನಮ್ಮ ಆತ್ಮೀಯ ಹರಿಹರಪುರ ಮಂಜುನಾಥ್ ಬರೆದ ನಿರಾಕೃತ ಕಥೆ. ಮಗ ವಿದೇಶದಲ್ಲಿದ್ದಾನೆ. ಅವನ ವ್ಯವಹಾರ, ವಹಿವಾಟು, ಬದುಕು ಅಲ್ಲಿಗೆ ಲೀನವಾಗಿ ಹೋಗಿದೆ. ಇಲ್ಲಿ ಬರಲು ಮನಸ್ಸೊಪ್ಪುತ್ತಿಲ್ಲ. ಹಾಗೆ ಬರಬೇಕೆಂದರೂ ಅದು ಸಾಧ್ಯವಾಗುತ್ತಿಲ್ಲ. ತಿಂಗಳಿಗೊಂದಿಷ್ಟು ತಂದೆ-ತಾಯಿಗೆ ಕಳುಹಿಸಿ ಅಲ್ಲೆ ವಾಸವಾಗಿಬಿಟ್ಟಿದ್ದಾನೆ. ಆದರೆ ಅಚಾನಕ್ಕಾಗಿ ತಾಯಿ ಸತ್ತು ಹೋದಾಗ ಇಲ್ಲಿ ಅವನ ತಂದೆ ಒಬ್ಬರೇ ಆಗಿಹೋಗುತ್ತಾರೆ. ಈಗೇನು ಮಾಡುವುದು..ತಂದೆಯನ್ನು ಅಲ್ಲಿಗೆ ಬಾ ಎಂದು ಕರೆದರೆ ತಂದೆ ಬರಲು ಸಿದ್ಧವಿಲ್ಲ. ಹಾಗಂತ ತನ್ನೆಲ್ಲಾ ವ್ಯವಹಾರ ಬಿಟ್ಟು ತಾನು ಇಲ್ಲಿ ಬಂದಿರಲು ಸಾಧ್ಯವಿಲ್ಲ. ಮುಂದೇನು ಮಾಡುವುದು..?
ಆತನ ಮುಂದಿನ ಕಥೆಯನ್ನು ಓದಿದರೇ ಚಂದ. ಅವರೇ ಬಂದು ಅದನ್ನು ಕಿರುಚಿತ್ರ ಮಾಡೋಣ ಎಂದಾಕ್ಷಣ ಒಪ್ಪಿಕೊಂಡಿದ್ದೆ. ಅದರ ಪಾತ್ರವರ್ಗಕ್ಕೆ ಎಲ್ಲಾ ಹವ್ಯಾಸಿ ಕಲಾವಿದರನ್ನು ಹುಡುಕಿ ಚಿತ್ರೀಕರಿಸಿದೆವು. ನೋಡಿದ ಮೇಲೇ ನನಗೇ ಒಂದು ರೀತಿಯಾಯಿತು. ಅದರಲ್ಲೂ ತಂದೆಯ ಪಾತ್ರಧಾರಿಯ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡವರೇ...
ಹಾಗೆಯೇ ಇನ್ನು ಕೆಲವು ಕಥೆಗಳನ್ನು ಸಿನಿಮಾ ರೂಪಕ್ಕೆ ತರಬೇಕೆನ್ನಿಸುತ್ತದೆ. ಯಾಕೇಂದರೆ ಸಣ್ಣಸಣ್ಣ ಕಥೆಗಳಲ್ಲಿ ಅಂತಹ ಸತ್ವವಿರುತ್ತದೆ. ಹಾಗಂತ ಎಲ್ಲವನ್ನೂ ದೃಶ್ಯಮಾಧ್ಯಮಕ್ಕಿಳಿಸುವುದಷ್ಟು ಸುಲಭದ ಮಾತಲ್ಲ. ಮೊನ್ನೆ ತಮಿಳಿನಲ್ಲಿ ಬಂದ ಅಳಗಿರಿ ಸಾಮಿಯಿನ್ ಕುದುರೈ ಕೂಡ ಒಂದು ಸಣ್ಣ ಕಥೆಯಾಧಾರಿತವೇ.
ನಿರಾಕೃತ  ಕಿರುಚಿತ್ರ ಇಲ್ಲಿದೆ. ಒಮ್ಮೆ ನೋಡಿ.
ಕಾರ್ಲ್  ವೂಲ್ರಿಚ್ನ ಸಣ್ಣ ಕಥೆಯಾಧಾರಿತ ರೇರ್ ವಿಂಡೋ, ಸಾಮರ್ ಸೆಟ್ ಮಾಮ್ನ ಕಥೆಯಾಧಾರಿತ ದಿ ಲೆಟರ್ , ರುಡ್ಯಾರ್ಡ್ ಕಿಪ್ಲಿ೦ಗನ ಕಥೆಯಾಧಾರಿತ ವ್ಹು ವುಡ್ ಬಿ ದಿ ಕಿಂಗ್ , ಫಿಲಿಪ್ ಕೆ. ದಿಕ್ ಕಥೆಯಾಧಾರಿತ ಮೈನಾರಿಟಿ ರಿಪೋರ್ಟ್ , ಸ್ಯಾಮುವಲ್ ಹಾಪ್ಕಿನ್ ಆಡಮ್ಸ್ ಕಥೆಯಾಧಾರಿತ ಇಟ್ ಹಾಪೆ೦ಡ್ ಆನ್ ನೈಟ್, ಯೂ ಕಾಂಟ್ ರನ್ ಅವೇ ಫ್ರಂ ಇಟ್, ಕ್ಲಾರ್ಕ್ಸ್ ಕಥೆಯಾಧಾರಿತ 2001:ಸ್ಪೇಸ್ ಓಡಿಸ್ಸೀ, ಎಫ್,ಎಕ್ಸ್ .ತೂಲೆ ಕಥೆಯಾಧಾರಿತ ಮಿಲಿಯನ್ ಡಾಲರ ಬೇಬಿ, ಠಾಗೂರ್ ಕಥೆಯಾಧಾರಿತ ಸತ್ಯಜಿತ್ ರೆ ನಿರ್ದೇಶನದ ತೀನ್ ಕನ್ಯಾ, ಸಾವಾರಿಯಾ, ಯೂತ್ ವಿಥೌಟ್ ಯೂತ್ ಮುಂತಾದ ಸಿನೆಮಾಗಳನ್ನ ವೀಕ್ಸಿಸಿದಾಗ ನಮಗೆ ಗೊತ್ತಾಗುತ್ತದೆ ಸಣ್ಣ ಕಥೆಗಳ ಸಾಮರ್ಥ್ಯ ಎಂತಹದ್ದು ಎಂದು ..ಅಲ್ಲವೇ..?
ಈ ಲಿ೦ಕಿನಲ್ಲೂ ನೋಡಬಹುದು...
ಯೂ ಟ್ಯೂಬ್ ಲಿಂಕ್

2 comments: