Tuesday, July 24, 2012

ನೀಲಚಿತ್ರಿಕೆಗಳು -2


ಪಿವಿಸಿ  - 1
ಒಂದೇ ಒಂದು ಉದ್ದನೆಯ ಚಿತ್ರಿಕೆಯ ಮೂಲಕ ಒಂದು ಘಟನೆಯನ್ನು ನಿರೂಪಿಸುವ ಮತ್ತೊಂದು ಚಿತ್ರವೆಂದರೆ        ಪಿವಿಸಿ-1.          ಇದು ಕೊಲಂಬಿಯಾದ ನಿರ್ದೇಶಕ ಸ್ಪೈರೋಸ್ ಸ್ಟಾಥೊಪೊಲಸ್ ನ ಮೊದಲ ಚಲನಚಿತ್ರ 2007 ರ ಕಾನ್ಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆದ ಈ ಚಿತ್ರದ ಅವಧಿ 81  ನಿಮಿಷಗಳು. ಚಿತ್ರದಲ್ಲಿನ ಕಥೆಯ ಅವಧಿಯು 81 ನಿಮಿಷಗಳೇ. ಈ ಚಿತ್ರವು 2000 ರಲ್ಲಿ ಕೊಲಂಬಿಯಾದಲ್ಲಿ ನಡೆದಂತಹ ಸತ್ಯಘಟನೆಯಧಾರಿಸಿದ್ದಾಗಿದೆ.
ಮುಖವಾಡಗಳನ್ನು  ಧರಿಸಿದ ದರೋಡೆಕೋರರ ತಂಡವೊಂದು ಮನೆಗೆ ನುಗ್ಗುವುದರೊಂದಿಗೆ ಚಿತ್ರದ ಕತೆ ಪ್ರಾರಂಭವಾಗುತ್ತದೆ. ಇಡೀ ಮನೆಯವರನ್ನೆಲ್ಲಾ ಒಂದೆಡೆ ಕಲೆಹಾಕಿ, 15 ಮಿಲಿಯನ್ ಪೆಸೋಗಳ ಬೇಡಿಕೆಯನ್ನು ಮುಂದಿಡುತ್ತಾರೆ. ಆದರೆ ಕುಟುಂಬದ ಯಜಮಾನ ತನ್ನ ಹತ್ತಿರ ಹಣವಿಲ್ಲವೆಂದು ಪ್ರಮಾಣಮಾಡಿ ಹೇಳಿದಾಗ, ಅವರಿಗೆ ಅರಿವಾದಾಗ, ಅವನ ಹೆಂಡತಿಯ ಕೊರಳಿಗೆ ಪಿ ವಿ ಸಿ ಪೈಪಿನಿಂದ ಮಾಡಿದ ರಿಮೋಟ್ ಚಾಲಿತ ಬಾಂಬ್ ಕಟ್ಟಿ ಹಣ ತಂದುಕೊಡದ ಹೊರೆತು ಬದುಕುವ ಯಾವ ಅವಕಾಶವನ್ನು ಕೊಡುವುದಿಲ್ಲವೆಂದು ಹೇಳಿ ಹೊರಟುಹೋಗಿಬಿಡುತ್ತಾರೆ. ಪಕ್ಕದ ಪುಟ್ಟನಗರಕ್ಕೆ ಹೋಗಿ ವಿಶೇಷ ಕಾರ್ಯಪಡೆಯ ಸಹಾಯದಿಂದ ಆ ಬಾಂಬ್ ಅನ್ನು ನಿರ್ಜೀವಗೊಳಿಸಲು ಪ್ರಯತ್ನಿಸುವುದೇ ಚಿತ್ರದ ಕಥಾ ಹಂದರ. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶಿಸುವ ಜೊತೆಗೆ ಛಾಯಾನಿರ್ದೇಶನವನ್ನೂ  ಸ್ಪೈರೋಸನೇ ಯಶಸ್ವಿಯಾಗಿ ನಿರ್ವಹಿಸಿದ್ದಾನೆ.
ಚಿತ್ರದ ಅಂತ್ಯದಲ್ಲಿ ದುರಂತವಾದರೂ, ಅಲ್ಲಿಯವರೆಗೆ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಅಷ್ಟೆಲ್ಲಾ ಪ್ರಯತ್ನದ ನಂತರವೂ ಮುಖ್ಯ ಪಾತ್ರಧಾರಿ ಸಾಯುವುದು ಮನಸ್ಸಿಗೆ ಪಿಚ್ಚೆನಿಸಿ , ಅಷ್ಟೆಲ್ಲಾ ಪ್ರಯತ್ನಕ್ಕೂ ಸಿನಿಮಾದ ರೋಮಾಂಚನೀಯ ಕ್ಷಣಗಳಿಗೂ ಸಾರ್ಥಕತೆ ಸಿಗುವುದಿಲ್ಲ. ಏನೋ ಕೆಡುಕು ಆಗುತ್ತದೆ.. ಅದು ಆಗುತ್ತದಾ.. ಅಯ್ಯಯ್ಯೋ.. ಆಗಿಬಿಟ್ಟರೆ ಅನ್ನುವ ಉದ್ವೇಗವನ್ನು ಕೊನೇವರೆಗೂ ಕಾಯ್ದಿರಿಸಿಕೊಳ್ಳುವ ನಿರ್ದೇಶಕ ಕೊನೆಯಲ್ಲಿ ಟುಸ್ ಎನಿಸಿಬಿಟ್ಟನೇನೋ ಅನಿಸಿದರೂ ಸತ್ಯಕಥೆ ಯಾಧಾರಿತವಾದ್ದರಿಂದ ಕಥೆಯ ಬಗ್ಗೆ ಏನೂ ಹೇಳುವಹಾಗಿಲ್ಲ.
ಇರಲಿ ! ಮೊದಲು ಮನೆಯ ಹೊರಾಂಗಣದಿಂದ ಒಳಾಂಗಣಕ್ಕೆ ಅಲ್ಲಿಂದ ಮತ್ತೆ ಹೊರಕ್ಕೆ, ಆನಂತರ ರೈಲ್ವೆ ಟ್ರ್ಯಾಕ್ ಮೇಲೆ, ಕಾಡ ಮಧ್ಯದ ದಾರಿಯ ಮೂಲಕ ಕಾರ್ಯಪಡೆಯ ಅಧಿಕಾರಿಗಳಿರುವ ಸ್ಥಳದವರೆಗೆ ಇಡೀ ಸಿನಿಮಾ ಓಡುತ್ತಲೇ ಇರುತ್ತದೆ, ತನ್ನ ಕ್ಯಾಮೆರಾ ಕಣ್ಣಿನ ಮೂಲಕ.
ತನ್ನ ಕೊರಳ ಸುತ್ತ ಬಾಂಬ್ ಕಟ್ಟಿಸಿಕೊಂಡ ಮಹಿಳೆಯಾಗಿ ಮೆರಿಡಾ ಉರ್ಕಿಯಾ ಅಭಿನಯ ಅದ್ಭುತ. ತನ್ನನ್ನು ತಾನೇ ಸಮಾಧಾನ ಪಡಿಸಿಕೊಳ್ಳುವ, ಕೆಲವೊಮ್ಮೆ ಹುಚ್ಚಿಯಂತೆ ಹೆದರಿ ಚೀರಾಡುವ, ಇನ್ನ ಕೆಲವೊಮ್ಮೆ ವಿಧಿಬರಹವೆನ್ನುತ್ತಾ ಅಸಹಾಯಕಥೆಯಿಂದ ಸುಮ್ಮನೆ ಕುಳಿತುಬಿಡುವ, ರೋಷಗೊಂಡು ರೊಚ್ಚಿ ಗೇಳುವ, ಬಾಂಬ್ ನ ಬೀಪ್ ಶಬ್ಧಕ್ಕೆ ಬೆಚ್ಚುವ ಸಂದರ್ಭೋಚಿತ ಅಭಿನಯವನ್ನು ಅಭಿವ್ಯಕ್ತಗೊಳಿಸುವಲ್ಲಿ ಮೆರಿಡಾಳ ನಟನೆ ಅವಿಸ್ಮರಣೀಯ. ಚಿತ್ರಕಥೆ, ಅಭಿನಯ ಮತ್ತು ಸಿನಿಮಾ ಮೇಕಿಂಗ್ ಗಾಗಿ ನೋಡಲೇಬೇಕಾದಂತಹ ಚಿತ್ರ ಇದಾಗಿದೆ. ಸಂಕಲನವೇ ಇಲ್ಲದ ಈ ಚಿತ್ರದ ಚಿತ್ರೀಕರಣಕ್ಕೂ ಮುನ್ನ ನಿರ್ದೇಶಕ ಮೂರು ತಿಂಗಳುಗಳ ಪೂರ್ವಸಿದ್ಧತೆ ಮಾಡಿಕೊಂಡು, ತೀರ ಕಡಿಮೆ ಚಿತ್ರತಂಡದೊಂದಿಗೆ   ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾನೆ. ಕೊಸ್ಮೊಕ್ರೇಟರ್ ಸಿನೆಮಾ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ಮೆರಿಡಾ ಉರ್ಕಿಯಾ, ಡೇನಿಯಲ್ ಪಯೆಜ್, ಅಲ್ಬೆರ್ಟೋ ಸೊರ್ನೋಜ್, ಹುಗೋ ಪೇರೀರಾ, ಪ್ಯಾಟ್ರಿಕಾರ್ಯೂಡ. ಮುಂತಾದವರ  ತಾರಾಬಳಗವಿದೆ. ಸಂಗೀತ ಪ್ಯಾಸ್ಕಲ್ ಟೈಗರ್.

No comments:

Post a Comment