Friday, June 15, 2012

ವಿ'ಚಿತ್ರ'ಗಳು-2


ಸಿನಿಮಾ ನೋಡುತ್ತಿದ್ದ ಹಾಗೆಯೇ ಕಥೆ ಒಂದು ಘಟ್ಟಕ್ಕೆ ತಲುಪಿದ ಮೇಲೆ ಇನ್ನೇನು ಕೊನೆಯ ಹಂತ ಬಂತು ಎನ್ನುವಷ್ಟರಲ್ಲಿ ತೆರೆಯ ಮೇಲೆ ನೀವು ಅಂಜುಬುರುಕರಾಗಿದ್ದಲ್ಲಿ, ಮೆದು ಹೃದಯದವರಾಗಿದ್ದಲ್ಲಿ ಮುಂದಿನ ದೃಶ್ಯಗಳನ್ನು ನೋಡಲುಸಾಧ್ಯವಿಲ್ಲ.. ಈಗಲೇ ಚಿತ್ರಮಂದಿರದಿಂದ ಹೊರಟುಬಿಡಿ..ಎಂದು ಮೂಡಿದರೆ ನಿಮಗೇನಾಗಬೇಡ..ಇದು ಗ್ಯಾಸ್ಪರ್‌ನೋ ಎಂಬ ನಿರ್ದೇಶಕನ ಐ ಸ್ಟ್ಯಾಂಡ್ ಆಲೋನ್ ಚಿತ್ರದಲ್ಲಿ ಕ್ಲೈಮ್ಯಾಕ್ಸಿಗೂ ಮುನ್ನ ಬರುವ ತೆರೆಬರಹ. ಇದೇ ನಿರ್ದೇಶಕನ ಮತ್ತೊಂದು ಸಿನಿಮಾ ಇದೆ. ಅದೇ ಇರಿವರ್ಸಿಬಲ್. 2002 ರಲ್ಲಿ ತೆರೆಗೆ ಬಂದ ಈ ಚಿತ್ರದ ತಾರಾಗಣದಲ್ಲಿ ಖ್ಯಾತ ನಟಿ ಮೋನಿಕಾ ಬೆಲ್ಲುಚಿ, ವಿನ್ಸೆ೦ಟ ಕೇಸಲ್ ಆಲ್ಬರ್ಟ್  ದ್ಯೂಪನಲ್ ಅಭಿನಯಿಸಿದ್ದಾರೆ.. ಆ ನುಡಿವಾಕ್ಯ ಐ ಸ್ಟ್ಯಾಂಡ್ ಆಲೋನ್ ಸಿನಿಮಾದ ಕೊನೆಯ ದೃಶ್ಯಕ್ಕೆ ಮಾತ್ರ ಅನ್ವಯಿಸಿದರೆ ಇರಿವರ್ಸಿಬಲ್ ಸಿನಿಮಾಗೆ  ಇಡೀ ಚಿತ್ರಕ್ಕೆ ಅನ್ವಯಿಸುತ್ತದೆ.
ಹೆಸರೇ ಸೂಚಿಸುವಂತೆ ಇಡೀ ಚಿತ್ರವೇ ಹಿಂದುಮುಂದಾಗಿದೆ. ಅಂದರೆ ಸಿನಿಮಾದ ಕ್ಲೈಮ್ಯಾಕ್ಸ್ ಮೊದಲು ಬಂದರೆ ಮೊದಲ ದೃಶ್ಯ ಕೊನೆಯಲ್ಲಿ ಬಂದು ಚಿತ್ರ ಮುಗಿಯುತ್ತದೆ. ಒಂದು ಸುಂದರ ಕುಟುಂಬ ಒಂದು ರಾತ್ರಿಯಲ್ಲಿ ನಿರ್ನಾಮವಾಗುವುದೇ ಚಿತ್ರದ ಕಥಾಹಂದರ.
ಈ ತರಹದ ತಿರುಗುಮುರುಗು ನಿರೂಪಣೆಯನ್ನು ನಿರ್ದೇಶಕ ಯಾಕಾಗಿ ಆಯ್ಕೆ ಮಾಡಿಕೊಂಡ ಎಂಬುದಕ್ಕೆ ಇಡೀ ಸಿನಿಮಾದಲ್ಲಿ ಸ್ಪಷ್ಟ ನಿದರ್ಶನವೇನೂ ಕಾಣುವುದಿಲ್ಲ. ಅಥವಾ ಹಾಗೆ ತಿರುಗುಮುರುಗು ಮಾಡಿರುವುದರ ಹಿಂದೆ ಬುದ್ದಿವಂತಿಕೆಯ, ಅಚ್ಚರಿ ತರಿಸುವ ಯಾವ ಅಂಶವೂ ಕಂಡುಬರುವುದಿಲ್ಲ. ಬರೇ ವಿಚಿತ್ರ ನಿರೂಪಣೆಗೋಸ್ಕರ ಈ ಚಿತ್ರ ಆಯ್ದಕೊಂಡಿರಬೇಕೇನೋ ಎನಿಸುತ್ತದೆ.
ಸಿನಿಮಾವೂ ಅಷ್ಟೆ. ತುಂಬಾ ಹಿಂಸಾತ್ಮಕವಾಗಿದೆ. ಅದರಲ್ಲೂ ಕ್ಯಾಮೆರಾ ಚಲನೆಯಂತೂ ಯಾರೋ ಕ್ಯಾಮೆರ ಕೈಯಲ್ಲಿ ಹಿಡಿದು ಧಾವಂತದಿಂದ ದಿಕ್ಕುದೆಸೆಯಿಲ್ಲದೇ ಎತ್ತೆತ್ತಲೋ ಹೆಜ್ಜೆ ಹಾಕಿದಂತಿದೆ. ಸಿನಿಮಾದ ಮಧ್ಯದಲ್ಲಿ ಬರುವ ಅತ್ಯಾಚಾರದ ಸನ್ನಿವೇಶ ಬಿಟ್ಟರೇ ಬೇರಾವ ದೃಶ್ಯದಲ್ಲೂ ಕ್ಯಾಮೆರಾ ನಿಲ್ಲುವುದೇ ಇಲ್ಲ. ಜೊತೆಗೆ ಗುಂಯ್ ಎನ್ನುವ ಹಿನ್ನೆಲೆ ಸಂಗೀತ ಬೇರೆ. ದೃಶ್ಯಗಳು ಅದೆಷ್ಟು ನೈಜವಾಗಿವೆಯೆಂದರೆ ನೋಡಿ ಅರಗಿಸಿಕೊಳ್ಳುವುದು ಅಸಾಧ್ಯ. ಅದರಲ್ಲೂ ಸಲಿಂಗಿಗಳ ಕ್ಲಬ್ಬಿನಲ್ಲಿ ನಡೆಯುವ ಬರ್ಬರ ಹತ್ಯೆ ಚಿತ್ರೀಕರಿಸಿರುವ ಪರಿಗೆ ನೋಡಲಾಗದೆ  ಕಣ್ಣುಮುಚ್ಚಿಕೊಳ್ಳಲೇ ಬೇಕಾಗುತ್ತದೆ. ಅದೇ ರೀತಿ ಅತ್ಯಾಚಾರದ ಸನ್ನಿವೇಶದಲ್ಲೂ. 
ಸುಮಾರು ಒಂಬತ್ತು ನಿಮಿಷಗಳಷ್ಟು ಉದ್ದವಿರುವ ಈ ಅತ್ಯಾಚಾರದ ದೃಶ್ಯದಲ್ಲಿ ಕ್ಯಾಮೆರಾ ಒಂದುಕಡೆ ಸ್ಥಿರವಾಗಿಬಿಡುತ್ತದೆ. ಆದರೆ ಆ ಇಬ್ಬರು ಕಲಾವಿದರ ಅಭಿನಯ, ದೃಶ್ಯದ ಬರ್ಬರತೆ, ಹಿನ್ನೆಲೆ ಸಂಗೀತ ಮತ್ತು ಬೆಳಕಿನ ಸಂಯೋಜನೆ ಎಲ್ಲಾ ಸೇರಿ ನೋಡುಗನ ಮನಸ್ಸನ್ನು ಘಾಸಿಗೊಳಿಸಿಬಿಡುತ್ತದೆ.
ಒಂದು ಭಿನ್ನ ಪ್ರಯತ್ನ, ವಿಚಿತ್ರ ಪ್ರಯೋಗ ಹಾಗೆ ಹಿಂಸಾತ್ಮಕ ಸಿನಿಮಾಗಳೆಡೆಗೆ ನಿಮ್ಮ ಒಲವಿದ್ದರೆ ಒಮ್ಮೆ ನೋಡಿ ಎನ್ನುವ ಧೈರ್ಯಮಾಡಬಹುದು.
ಇಲ್ಲದಿದ್ದರೆ ಯಾರಿಗೂ ನೋಡಿ ಎಂದು ಹೇಳದಿರುವುದೇ ಒಳ್ಳೆಯದು.


2 comments:

  1. ಚಿತ್ರ ನೋಡಿದ ದಿನಗಳಲ್ಲಿ ಅರಗಿಸಿಕೊಳ್ಳೆದೇ ಕಷ್ಟ ಆಗಿತ್ತು. ಹಾ೦ಟಿ೦ಗ್

    ReplyDelete
    Replies
    1. ನಿಜ ಹೇಳಬೇಕ೦ದ್ರೆ ನನಗೆ ತು೦ಬಾ ಸಿಟ್ಟು ಬ೦ದಿತ್ತು ನಿರ್ದೇಶಕನ ಮೇಲೆ...ಯಾವ ಘನೋದ್ದೆಶಕ್ಕಾಗಿ ಈ ಸಿನಿಮಾ ಮಾಡಿದನೋ ಅಂತ ,,,

      Delete