Wednesday, June 20, 2012

ಆಸ್ಕರ್ ಕಣದ ಚಿತ್ರಗಳು-3


ಸಾರಿಯಾ ಆಸ್ಕರ್ ಕಣದಲ್ಲಿ  ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡ ನಟಿ ಆಕ್ಟೇವಿಯಾ ಸ್ಪೆನ್ಸರ್. ಚಿತ್ರ ದಿ ಹೆಲ್ಪ್.  ಜಾತಿ, ಮತ ಅಂತಸ್ತಿನಂತೆಯೇ ವರ್ಣಬೇಧ ಕೂಡ ಒಂದು ಸಾಮಾಜಿಕ ಪಿಡುಗು. ತಮ್ಮದಲ್ಲದ ತಪ್ಪಿಗೆ ಮಾನಸಿಕ ಹಿಂಸೆ ಅನುಭವಿಸುವ ಕರಿಯರ ಬದುಕಿನ ಮಜಲುಗಳನ್ನು ತೆರೆದಿಟ್ಟ ಚಿತ್ರ ದಿ ಹೆಲ್ಪ್. ಕಾಥ್ರಿನ್ ಸ್ಟಾಕೆಟ್‌ರವರ ಕಾದಂಬರಿ ಆಧಾರಿತ ಈ ಚಿತ್ರದ ನಿರ್ದೇಶಕ ಟಾಟಾ ಟೇಲರ್.
ದಿ ಹೆಲ್ಪ್ ಇಷ್ಟವಾಗುವುದು ಅದರ ಸರಳತೆಯಿಂದಾಗಿ. ಯಾವುದನ್ನೂ ವೈಭವೀಕರಿಸದೇ, ಅಥವಾ ಓರೆಗಣ್ಣಿಂದ ನೋಡದೇ ವಾಸ್ತವತೆಯನ್ನು ತೆರೆದಿಡುತ್ತಾ ಹೋಗುವ ವಸ್ತು ನಿಷ್ಠತೆಗೆ. ಒಂದು ಸಾಮಾಜಿಕ ಪಿಡುಗು, ಒಂದು ಅವ್ಯವಸ್ಥೆ ಅಥವಾ ಒಂದು ಸಮಸ್ಯೆಯ ಕುರಿತಾದ ಸಿನಿಮಾ ಮಾಡುವಾಗ ಒಬ್ಬ ಚಿತ್ರಕರ್ಮಿ ಅಳವಡಿಸಿಕೊಳ್ಳಬೇಕಾದದ್ದು ಈ ಒಂದು ನಿಷ್ಪಕ್ಷಪಾತ ಭಾವನೆಯನ್ನು. ಯಾರನ್ನೂ ಕೆಟ್ಟವರನ್ನಾಗಿಸದೇ ಯಾರನ್ನೂ ಹೀರೋಗಳನ್ನಾಗಿ ಮಾಡದೇ ಪ್ರತಿ ಪಾತ್ರವನ್ನೂ ಅದರ ಗುಣಾವಗುಣಗಳಿಗೆ ತಕ್ಕಂತೆ ರೂಪಿಸುತ್ತಾ ಹೋಗುವ ಕುಶಲತೆ ಮೆಚ್ಚಬೇಕಾದುದೇ. ಇಲ್ಲಿ ಒಬ್ಬರ, ಒಂದು ಕುಟುಂಬದ ಕಥೆಯಿಲ್ಲ. ಒಂದು ಜನಾಂಗದ ಇತಿಹಾಸವಿದೆ. ನಮದಿಷ್ಟೇ, ನಾವಿಷ್ಟೇ ಎಂದು ಬದುಕಬೇಕಾದ ಜನ ಹಾಗೇ ಬದುಕಬೇಕಾ..? ಎಂಬ ಪ್ರಶ್ನೆಯಿದೆ. ಹಾಗೇ ಅದಕ್ಕೆ ಉತ್ತರವೂ ಇದೆ. ಮಕ್ಕಳನ್ನು ನೋಡಿಕೊಳ್ಳುವುದರಿಂದಾ ಹಿಡಿದು ಕಸಗುಡಿಸುವವರೆಗೇ ಎಲ್ಲ ಬಗೆಯ ಕೆಲಸಗಳಿಗೂ ಕರಿಜನಾಂಗದ ಮೇಲೆ ಅವಲಂಭಿತರಾಗಿರುವ ಬಿಳಿಯರು, ಎಲ್ಲಾ ರೀತಿಯಿಂದಲೂ ಸಮರ್ಥರಾಗಿದ್ದು, ಬಿಳಿಯರ ಎಲ್ಲಾ ಕೆಲಸಗಳನ್ನೂ ಮಾಡಿಕೊಟ್ಟು ಅವರ ಮೇಲೆಯೇ ಅವಲಂಭಿತರಾಗಿರುವ ಕರಿಯರು ಮತ್ತು ಅವರ ನಡುವಿನ ಭೇದಭಾವವನ್ನು ಚಿಕ್ಕ ಚಿಕ್ಕ ಘಟನೆಗಳ ಮೂಲಕ ತೆರೆದಿಡುತ್ತಾ ಸಾಗುವ ಈ ಚಿತ್ರ ಮನರಂಜನೆಯ ಜೊತೆಗೆ ಮನುಕುಲಕ್ಕೇ ಅಗತ್ಯವಾದ ಉತ್ತಮ ಸಂದೇಶವನ್ನೂ ಕೊಡುವಲ್ಲಿ ಯಶಸ್ವಿಯಾಗುತ್ತದೆ. ಕೆಲವು ದೃಶ್ಯಗಳಲ್ಲಿ ನಗುವಿದ್ದರೂ ಅದರ ಹಿಂದೆ ವಿಷಾದವಿದೆ. ಹಾಗೆ ಮನಕಲುಕುವ ದೃಶ್ಯದ ಹಿಂದೆ ತೆಳು ಹಾಸ್ಯದ ಲೇಪನವಿದೆ.
ಇಂಥ ಅತ್ಯುತ್ತಮ ಸಂದೇಶವಿರುವ, ಸಂವೇದನಾಶೀಲ, ಮನೋಜ್ಞ ಸಿನಿಮಾವನ್ನು ಟಾಟಾ ಟೇಲರ್ ತಂಡ ಮಾಡಿದೆ. ಒಮ್ಮೆ ನೋಡಿ.ಹಾಗೆಯೇ ನಿಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಈ ಸಿನಿಮಾ ನೋಡುವಂತೆ ಹೇಳಿ

No comments:

Post a Comment