Monday, July 3, 2017

ಕಿಂ ಕಿ ಡುಕ್ ಮಾತಾಡುತ್ತಿದ್ದಾನೆ..

ನಿಮಗೆ ಕಿಂ ಕಿ ಡುಕ್ ಗೊತ್ತಿರಬಹುದು. ಸಿನಿಪ್ರಿಯನಿಗೆ ಅವನು ತೀರಾ ಪರಿಚಿತ. ವಿಕ್ಷಿಪ್ತ, ವಿಚಿತ್ರ ಕೆಲವೊಮ್ಮೆ ಬರ್ಭರ, ಬೀಭತ್ಸ ಇವೆಲ್ಲಾ ವನ ಒಂದಿಲ್ಲೊಂದು ಸಿನಿಮಾದಲ್ಲಿರುತ್ತದೆ. ಆದರೆ ಎಲ್ಲದರಲ್ಲೂ ಸಾಮಾನ್ಯ ಅಂಶ ಎಂದರೆ ಮಾತು ಕಡಿಮೆ ಇರುವುದು. ಹೌದು. ಆತನ ಸಿನೆಮಾಗಳ ಪ್ಲಸ್ ಪಾಯಿಂಟ್ ಅದೆ.. ಪಾತ್ರಗಳು ತೀರಾ ಕಡಿಮೆ ಮಾತನಾಡುತ್ತವೆ, ಮಾತನಾಡದೆ ಪ್ರತಿಕ್ತಿಯೇಗಳಲ್ಲೇ ಭಾವವನ್ನು ಹೇಳಿಬಿಡುತ್ತವೆ, ನೋಡುತ್ತಾ ನೋಡುತ್ತಾ ಅರ್ಥವಾಗುವ ಸಿನಿಮಾ ಅವನದ್ದು, ಕೇಳಿಸಿಕೊಂಡಲ್ಲ.
ಅವನ ಕ್ರೊಕೊಡೈಲ್, ವೈಲ್ಡ್ ಅನಿಮಲ್ಸ್ ಮುಂತಾದ ಸಿನಿಮಾಗಳನ್ನ ಬಿಡಿ. ಅವನ ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ನೋಡಿದರೆ ಗೊತ್ತಾಗುತ್ತದೆ. ನಿಜಕ್ಕೂ ಕಿವುಡ ಕೂಡ ಅರ್ಥೈಸಿಕೊಳ್ಳಬಹುದಾದಂತಹ ಅದ್ಭುತವಾದ ದೃಶ್ಯಕಾವ್ಯ ಅದು. ಹಾಗಾಗಿಯೇ ಬರೀ ಚಟುವಟಿಕೆಯಿಂದಲೇ ಸಿನಿಮಾ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಡುತ್ತದೆ. ಆ ಸಿನಿಮಾದ ಶಕ್ತಿಯೇ ಅದು. ಹಾಗೆಯೇ ಸಮರಿಟನ್ ಗರ್ಲ್ ನೋಡಿದರೆ ನೀವು ಕಣ್ಣೀರಾಗದೇ ಇರಲಾರಿರಿ. ಗೆಳತಿಯ ಸಾಲವನ್ನು ತೀರಿಸಬೇಕು ಎಂದುಕೊಂಡು ಹೊರಡುವ ಸುಂದರಿಯ ಕತೆ ಅದು. ಋಣ ಸಂದಾಯ ಇಷ್ಟು ರೋಚಕವೇ ಎನಿಸದೆ ಇರದು. ಇನ್ನೂ 3 ಐರನ್ ನಿಶ್ಯಬ್ಧದ ಆರ್ತನಾದ ಎನ್ನಬಹುದು. ವಿವಾಹಿತ-ನೊಂದ ಸುಂದರಿ, ಒಬ್ಬ ಮನೆಗಳ್ಳ, ಮತ್ತು ಆಕೆಯ ಪತಿಯ ನಡುವ ಕತೆಯಿದು. ನೀವು ಸಿನಿಮಾ ನೋಡುತ್ತಾ ನೋಡುತ್ತಾ ಸಂಭಾಷಣೆಗಳನ್ನು ಎನಿಸಬಲ್ಲಿರಿ, ಅಷ್ಟು ಕಡಿಮೆ ಸಂಭಾಷಣೆ ಇರುವ ಚಿತ್ರವದು. ಚಿತ್ರದಲ್ಲಿನ ಹಿನ್ನೆಲೆ ಸಂಗೀತ ಈವತ್ತಿಗೂ ನನ್ನ ಕಿವಿಯಲ್ಲಿ ಮೊರೆಯುತ್ತದೆ, ಜೊತೆಗೆ ಅದರ ದೃಶ್ಯಗಳೂ ಕೂಡ.
ಆದರೆ ಆತನ ಮೊಬಿಯಸ್ ಅತೀ ಬೀಭತ್ಸ ಚಿತ್ರ. ಅದನ್ನು ನೋಡುವುದೇ, ತೆರೆಯ ಮೇಲೆ ಕಾಣಸಿಗುವುದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಅಷ್ಟೊಂದು ಸಧ್ಯಕ್ಕೆ ವಿಕೃತ ಎನ್ನಬಹುದಾದ ಚಿತ್ರವದು. ಒಂದು ಕುಟುಂಬದಲ್ಲಿ ನಡೆಯುವ ಕತೆಗೆ ಬಣ್ಣ ಹಚ್ಚಿರುವ ಕಿಂ ಕಿ ಡುಕ್ ಯಾಕಾದರೂ ಈ ಚಿತ್ರ ತೆಗೆದನೋ ಎನಿಸುವ ಮಟ್ಟಿಗಿನ ಚಿತ್ರವದು.
ಆದರೆ ಅವನ ಇತ್ತೀಚಿನ ಚಿತ್ರವಾದ ದಿ ನೆಟ್ ಮಾತ್ರ ಅವನ ಚಿತ್ರಗಳಿಗಿಂತ ಭಿನ್ನವಾದ ಚಿತ್ರ ಎನ್ನಬಹುದು. ಏಕೆಂದರೆ ಚಿತ್ರದಲ್ಲಿನ ಪಾತ್ರಗಳು ಮಾತನಾಡುತ್ತವೆ, ಅವನ ಸಿನಿಮಾ ಎನ್ನುವುದನ್ನು ಮರೆತವರಂತೆ ಹೆಚ್ಚು ಹೆಚ್ಚು ಮಾತನಾಡುತ್ತವೆ. ಹಾಗಾಗಿ ಹೇಗೇಗೋ ಆಗಿ ಕಿಂ ಕಿ ಡುಕ್ ನಾರ್ಮಲ್ ಆಗಿಹೋದನಲ್ಲ ಎನ್ನುವ ಸಮಾಧಾನ ಕೊಡುವ ಚಿತ್ರವದು.
ಏಕೆಂದರೆ ಒಬ್ಬ ನಿರ್ದೇಶಕ ದಿಕ್ಕು ಬದಲಿಸಿ ಯಶಸ್ಸಾಗುವುದು ಕಷ್ಟ. ಅವರ ಶೈಲಿಯನ್ನು ಬದಲಿಸಿದರೆ ಆದವರಿಗೆ ಸೇರುವುದು ಕಷ್ಟವಾಗುತ್ತದೆ. ಕೌಟುಂಬಿಕ ಹೆಂಗೆಳೆಯರ ಚಿತ್ರದಲ್ಲಿ ಯಶಸ್ಸಾದವರು ಏಕಾಏಕಿ ಥ್ರಿಲ್ಲರ್ ನಿರ್ದೇಶಿಸಿದರೆ ಅದು ನೋಡಲು ಸಹ್ಯವಾಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ನಮ್ಮಲ್ಲೇ ಇದೆ. ಹಾಗಾಗಿ ಮಾತಾಡುತ್ತಿರುವ ಕಿಂ ಕಿ ಡುಕ್ ಇಷ್ಟವಾಗುತ್ತಾನಾ..? ಎನ್ನುವ ಕಿಂ ಅಭಿಮಾನಿಗಳಿಗೆ ಆಗುತ್ತಾನೆ ಎನ್ನುವುದು ಖುಷಿಯ ಸಂಗತಿ.
ಹಾಗಾಗಿ ಅವನ ಚಿತ್ರ ದಿ ನೆಟ್ ಸಾಹಸಮಯ ಥ್ರಿಲ್ಲರ್ ಚಿತ್ರ. ಮೈರೋಮಾಂಚನಗೊಳಿಸುವ ಚಿತ್ರವನ್ನು ಒಮ್ಮೆ ನೋಡಿ..

1 comment:

  1. ಎಷ್ಟು ಚೆನ್ನಾಗು ಬರೆಯ್ತ್ತಿರಿ ನೀವು

    ReplyDelete