Wednesday, July 5, 2017

ಸಫಾರಿಯ ಸವಾರಿ ಹಿಂದಿನ ಕಷ್ಟಗಳು...

ಪುಟಾಣಿ ಸಫಾರಿ ಬಿಡುಗಡೆಗೆ ಸಿದ್ಧವಾಗಿದೆ, ಅದರ ಬಿಡುಗಡೆಯ ದಿನಾಂಕ ನಿಕ್ಕಿಯಾಗಿದೆ. ಮಕ್ಕಳ ಚಿತ್ರವಾದ್ದರಿಂದ ಅದನ್ನು ಪ್ರೇಕ್ಷಕರಿಗೆ ಅಂದರೆ ಇಚ್ಚಿತ ಪ್ರೇಕ್ಷಕರು ಎಂದರೆ ಮಕ್ಕಳಿಗೆ ತಲುಪಿಸುವುದು ಹೇಗೆ ಎಂಬೊಂದು ಪ್ರಶ್ನೆ ನನ್ನನ್ನು ಬಹುವಾಗಿ ಕಾಡಿತ್ತು. ಚಿತ್ರರಂಗದಲ್ಲಿ ಎಲ್ಲಾ ವಿಭಾಗಗಳ, ಶೈಲಿಯ ಚಿತ್ರಗಳಿಗೆ, ಸ್ಟಾರ್ ನಟರ ಚಿತ್ರಗಳಿಗೆ, ಹೆಸರುಗಳಿಸಿದ ನಿರ್ದೇಶಕರ ಚಿತ್ರಗಳಿಗೆ ಒಂದಿಷ್ಟು ಪ್ರೇಕ್ಷಕವೃಂದ ಇರುತ್ತದೆ. ಆದರೆ ಮಕ್ಕಳ ಚಿತ್ರಗಳಿಗೆ ಮಕ್ಕಳಿವೆಯಾದರೂ ಸಿನಿಮಾ ಎಂದಾಗ ಅವರು ಚಿತ್ರಮಂದಿರಕ್ಕೆ ಬರುತ್ತಾರೆಯೇ..? ಇದು ಮೊದಲ ಪ್ರಶ್ನೆ.
ಮಕ್ಕಳ ಚಿತ್ರ ಎಂದಾಗ ಅದರ ಮಿತಿಗಳು ಹತ್ತು ಹಲವಾರು ಇವೆ. ಸುಮ್ಮನೆ ನೀವೇ ಯೋಚಿಸಿ, ಕಳೆದ ವರ್ಷ ಕನ್ನಡದಲ್ಲಿಯೇ ಮಕ್ಕಳ ಚಿತ್ರಗಳು ಎನ್ನುವ ಹಣೆಪಟ್ಟಿ ಹೊತ್ತುಕೊಂಡು ಬಿಡುಗಡೆಯಾದ ಕನ್ನಡ ಚಿತ್ರಗಳು ಎರಡ್ಮೂರು ಚಿತ್ರಗಳು, ಈ ವರ್ಷದಲ್ಲಿ ಇಲ್ಲಿಯವರೆಗೆ ಐದು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಯಾವುದಕ್ಕೆ ನಮ್ಮ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿದ್ದೇವೆ..? ಯಾವುದನ್ನು ನೋಡಿದ್ದೀರಾ..?
ಉತ್ತರವಿಲ್ಲ. ಮಕ್ಕಳ ಚಿತ್ರಗಳ ಬಹುದೊಡ್ಡ ಮಿತಿ ಅಂದರೆ ಇದೆ. ಮಕ್ಕಳ ಚಿತ್ರಗಳು ಕಡಿಮೆ ವೆಚ್ಚದಲ್ಲಿ ಆಗಿಹೋಗುತ್ತವೆ, ಅದಕ್ಕೆ ಭರಪೂರ ಒಳ್ಳೆ ಮೊತ್ತದ ಸಬ್ಸಿಡಿ ಇದೆ.. ಎಂಬೆಲ್ಲಾ ಅಂದುಕೊಳ್ಳುವುದು ತಪ್ಪು. ಖರ್ಚು ವೆಚ್ಚ ಅಷ್ಟೇ ಇರುತ್ತದೆ.
ಮಾಮೂಲಿ ಚಿತ್ರಗಳಿಗೆ ಮಾಮೂಲಿಯಂತೆ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತೇವೆ, ಟಿವಿಗಳಲ್ಲಿ ಸುದ್ದಿವಾಹಿನಿಗಳಲ್ಲಿ ಕಾರ್ಯಕ್ರಮ ಮಾಡಿಸುತ್ತೇವೆ, ಜೊತೆಗೆ ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿಸುತ್ತೇವೆ, ಆಮೇಲೆ ಗೋಡೆಗಳ ಮೇಲೆ ಪೋಸ್ಟರ್.. ಆನಂತರ ..ಚಿತ್ರಮಂದಿರದಲ್ಲಿ..
ಇದನ್ನೇ ಮಕ್ಕಳ ಚಿತ್ರಗಳಿಗೆ ಅನ್ವಯಿಸಲು ಸಾಧ್ಯವೇ..? ಮಕ್ಕಳು ದಿನಪತ್ರಿಕೆಯನ್ನು ಅದರಲ್ಲೂ ಸಿನಿಮಾ ಪುರವಣಿಯನ್ನು ನೋಡುತ್ತವೆಯೇ..? ಅಥವಾ ಪೋಷಕರು ನೋಡಲು ಬಿಡುತ್ತಾರೆಯೇ..? ಇನ್ನೂ ಟಿವಿಯಲ್ಲಿ ಸುದ್ದಿವಾಹಿನಿಗಳ ಸಿನಿಮಾ ಪ್ರಚಾರ ಮಕ್ಕಳನ್ನು ಹೇಗೆ ತಲುಪಲು ಸಾಧ್ಯ..? ಪೋಷಕರು ಮಕ್ಕಳನ್ನು ಟಿವಿ ನೋಡಲು ಬಿಡುವ ಸಂದರ್ಭ ತೀರಾ ಕಡಿಮೆ..
ಇನ್ನು ಗೋಡೆಪ್ರಚಾರವನ್ನು ಶಾಲೆಗೇ ಹೋಗುವಾಗ, ಬಸ್ಸಿನಲ್ಲೋ, ಪೋಷಕರ ಬೈಕಿನಲ್ಲೋ ಕುಳಿತು ನೋಡಿದರೂ ಅದರ ಬಗ್ಗೆ ತಿಳಿಯಲು ಸಾಧ್ಯವೇ..? ಅಲ್ಲಿಗೆ ಮಕ್ಕಳಿಗೆ ನಮ್ಮ ಎಲ್ಲಾ ರೀತಿಯ ಪ್ರಚಾರಗಳೂ ತಲುಪುವ ಸಂಭವ ತೀರಾ ಕಡಿಮೆ ಎನ್ನುವಂತಾಯಿತು.
ಓಕೆ ಇಷ್ಟೆಲ್ಲಾ ಆದಮೇಲೆ ಚಿತ್ರ ಬಿಡುಗಡೆ ಮಾಡಿದೆವು ಎಂದುಕೊಳ್ಳಿ..ಕಾಲೇಜು ಹುಡುಗ, ಹದಿಹರೆಯದ ಹುಡುಗರು ಶಾಲೆಗೇ ತಪ್ಪಿಸಿಕೊಂಡು ಸಿನಿಮಾ ನೋಡಬಲ್ಲವು, ಆದರೆ ಶಾಲಾ ಬಾಲಕ/ಕಿಯರಿಗೆ ಅದು ಸಾಧ್ಯವೇ ಇಲ್ಲ. ಶಾಲೆ ಮುಗಿದಾದ ಮೇಲೆ ಶಾಲೆಯ ಬಸ್, ಆಟೋ, ಅಥವಾ ಪೋಷಕರ ಜೊತೆಗೆ ಮನೆ ಸೇರಿಕೊಂಡರೆ ಇನ್ನು ಹೊರಗಣ ಪ್ರಪಂಚ ನಾಳೆಯೇ..! ಹಾಗಾಗಿ ಮಕ್ಕಳೇ ಚಿತ್ರಮಂದಿರಕ್ಕೆ ಬರುವುದಿಲ್ಲ ಎಂದಾಯಿತು. ಇನ್ನು ಮಕ್ಕಳಿಗೆ ಚಿತ್ರದ ಪ್ರಚಾರ ತಲುಪಿತು ಎಂದುಕೊಳ್ಳೋಣ, ಮಕ್ಕಳು ಮನೆಯಲ್ಲಿ ಹಠ ಹಿಡಿದರೆ ಪೋಷಕರು ಇರೋ.. ಸಂಡೇ ಕರ್ಕೊಂಡು ಹೋಗ್ತೀನಿ ಎನ್ನದಿರುತ್ತಾರೆಯೇ..?ಆ ಭಾನುವಾರ ಯಾವುದಾದರೂ ಮದುವೆಯೋ ಕಾರ್ಯಕ್ರಮವೋ ಬಂದರೆ ಮುಗೀತಲ್ಲ, ಇನ್ನೊಮ್ಮೆ ಕರ್ಕೊಂಡು ಹೋಗ್ತೀನಿ ಅನ್ನುವಲ್ಲಿಗೆ ಕತೆ ಸಮಾಪ್ತಿಯಾಗುತ್ತದೆ. ಚಿತ್ರಮಂದಿರ ವಾರದ ಏಳುದಿನ ತೆರೆದಿರುತ್ತದೆ, ಆಟೋ ಚಾಲಕರು, ಕಾಲೇಜು ಹುಡುಗರು, ಮನೆಯಲ್ಲಿರುವವರು, ಕೂಲಿ ಮಾಡುವವರು.. ಹೀಗೆ ಎಲ್ಲರೂ ತಮಗೆ ಅನುಕೂಲ ಎನಿಸಿದ ದಿನ ಸಿನಿಮಾ ನೋಡುತ್ತಾರೆ, ಆದರೆ ಮಕ್ಕಳಸಿನೆಮಾಕ್ಕೆ ಅದೆಲ್ಲಾ ನಡೆಯದು. ಶಾಲೆಯ ರಜ, ಪೋಷಕರ ಪುರುಸೊತ್ತು, ಮನಸ್ಥಿತಿ, ಪರಿಸ್ಥಿತಿ ಎಲ್ಲವೂ ಪ್ರಧಾನ ಪಾತ್ರ ವಹಿಸುತ್ತದೆ.
ಇವೆಲ್ಲವನ್ನೂ ಗಮನಿಸಿದಾಗ ಮಕ್ಕಳ ಚಿತ್ರವನ್ನು ಯಾಕಾದರೂ ಮಾಡಬೇಕು ಎನ್ನುವ ಪ್ರಶ್ನೆ ಬಂದೇಬರುತ್ತದೆ. ಹಾಗಾಗಿಯೇ ಈವತ್ತಿನ, ಆವತ್ತಿನ ಸ್ಟಾರ್ ನಿರ್ದೇಶಕರುಗಳು ಮಕ್ಕಳ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲ. ಗೀತಪ್ರಿಯ, ಎಸ.ವಿ.ರಾಜೇಂದ್ರಸಿಂಗ್ ಬಾಬು, ಟಿ.ಎಸ್.ನಾಗಾಭರಣ ಮುಂತಾದ ದಿಗ್ಗಜರು ಇಂತಹ ಪ್ರಯತ್ನಕ್ಕೆ ಕೈಹಾಕಿ ಸೈ ಎನಿಸಿಕೊಂಡದ್ದು ಇದೆ..ಮಣಿರತ್ನಂ ಒಂದೆರೆಡು ಆ ತರಹದ ಪ್ರಯತ್ನ ಮಾಡಿದ್ದು ಸತ್ಯ, ಅದು ಬಿಟ್ಟರೆ ಕನ್ನಡದಲ್ಲಿ ಈವತ್ತಿನ ತಲೆಮಾರಿನ ನಿರ್ದೇಶಕರುಗಳು ಮಕ್ಕಳ ಚಿತ್ರ ಮಾಡಿದ್ದು ಇದೆಯೇ..? ಉಹೂ.
ಇನ್ನು ವಿಷಯಕ್ಕೆ ಬರುವುದಾದರೆ ಮಕ್ಕಳಚಿತ್ರಗಳ ಕತೆಗಳು ಮತ್ತು ನಿರೂಪಣೆ..ಅದು ಮಕ್ಕಳಿಗೆ ಇಷ್ಟವಾಗಬೇಕಾಗುತ್ತದೆ..ಆದರೆ ನಮ್ಮಂತಹ ಪ್ರೇಕ್ಷಕರಿಗೆ ಅದು ಬೋರ್ ಎನಿಸುತ್ತದೆ. ನಾವೇನಾದರೂ ಪೋಗೋ, ಛೋಟಾಭೀಮ್ ಮುಂತಾದವುಗಳನ್ನು ಅರ್ಧಘಂಟೆ ಕುಳಿತುನೋಡಲು ಸಾಧ್ಯವೇ..? ಹಾಗಾಗಿ ಮಕ್ಕಳ ಚಿತ್ರಗಳು ಸಾಮಾನ್ಯವಾಗಿ ಸಾವಧಾನ ಬೇಡುತ್ತವೆ. ಹಾಗಂತ ಮಕ್ಕಳ ಚಿತ್ರವನ್ನು ದೊಡ್ಡವರು ನೋಡೇ ಇಲ್ಲ ಎಂದಲ್ಲ. ಆದರೆ ಅವು ಮಕ್ಕಳ ಚಿತ್ರವಲ್ಲ, ತಾರೆ ಜಮೀನ್ ಪರ್ ಚಿತ್ರವನ್ನು ನೋಡಿ, ದೊಡ್ಡವರು ಕಣ್ಣೀರಾದರೆ ಚಿಕ್ಕವರು ಚಿತ್ರಮಂದಿರದಲ್ಲಿಯೇ ನಿದ್ರೆ ಮಾಡಿದ್ದಿದೆ. ಬಹುತೇಕ ಭಾವನಾತ್ಮಕ ಅಂಶಗಳು, ನ್ಯಾಚುರಲ್ ಎನಿಸುವ ಅಂಶಗಳು ದೊಡ್ಡ ದೊಡ್ಡ ಸಂದೇಶಗಳು ದೊಡ್ಡವರಿಗೆ ಸೇರುತ್ತವೆ, ಆದರೆ ಮಕ್ಕಳಿಗ್ಯಾಕೆ ಅದರ ಉಸಾಬರಿ..?
ಹಾಗಾಗಿ ನಾವಂತೂ ಚಿತ್ರವನ್ನು ಬಿಡುಗಡೆ ಮಾಡಲೇಬೇಕಿದೆ. ಆದರೆ ಇಷ್ಟೆಲ್ಲಾ ಅಂಶಗಳನ್ನು ತಲೆಯಲ್ಲಿಟ್ಟುಕೊಂಡು ಕಣ್ಮುಚ್ಚಿಕೊಂಡು ಬಿಡುಗಡೆ ಮಾಡುವುದಾದರೂ ಹೇಗೆ..? ಹಾಗಾಗಿಯೇ ನಾವುಗಳು ಕುಳಿತುದಿನಗಟ್ಟಲೆ ಯೋಚಿಸಿದ್ದಿದೆ. ಸುಮ್ಮನೆ ಮಾಮೂಲಿ ಪ್ರಚಾರ ತಂತ್ರವನ್ನು ನಂಬಿಕೊಂಡರೆ ಅದು ಮಕ್ಕಳಿಗೆ ತಲುಪುವುದಿಲ್ಲ ಎನ್ನುವುದು ಮನಗಂಡದ್ದೇ ಮೊದಲಿಗೆ ಬಿಡುಗಡೆ ಮಾಡುವ ಚಿತ್ರಮಂದಿರವನ್ನು ಮಾತಾಡಿಕೊಂಡು ಅದರ ಸುತ್ತಮುತ್ತಲಿನ ಶಾಲೆಗಳನ್ನು ಪಟ್ಟಿ ಮಾಡಿದೆವು. ಆನಂತರ ನಿರ್ಮಾಪಕರ ಸ್ನೇಹಿತರ ಸಹಾಯದಿಂದ ಶಾಲೆಗಳಿಗೆ ಭೇಟಿ ಕೊಟ್ಟು, ಚಿತ್ರದ ಬಗೆಗೆ ಚಿಕ್ಕ ಮಾಹಿತಿ ಮಕ್ಕಳಿಗೆ ಕೊಟ್ಟು, ಒಂದಷ್ಟು ಕರಪತ್ರಗಳನ್ನು ಮಕ್ಕಳಿಗೆ ಹಂಚುವ ಕಾರ್ಯಕ್ರಮ ಹಮ್ಮಿಕೊಂಡೆವು. ಹಾಗೆಯೇ ಶಾಲೆಯ ಮುಖ್ಯಸ್ಥರಿಗೆ ಸಿನಿಮಾದ ಬಗೆಗೆ ವಿವರಿಸಿದೆವು. ನಮ್ಮ ವೀರೇಶ್ ಚಿತ್ರಮಂದಿರದ ಅಕ್ಕಪಕ್ಕ ಏರಿಯಗಳಲ್ಲಿ ನಮಗೆ ಪರಿಚಯವಿರುವ ಎಂಭತ್ತಕ್ಕೂ ಹೆಚ್ಚು ಶಾಲೆಗಳು ಸಿಕ್ಕವು. ಭೇಟಿ ನೀಡಿದಾಗ ಶಾಲೆಯ ಮುಖ್ಯಸ್ಥರಿಂದ ಅದ್ಭುತವಾದ ಪ್ರತಿಕ್ರಿಯೆ ಬಂದಿತು. ಸಾವಧಾನದಿಂದ ಕುಳಿತು ಮಾತನಾಡಿದ ಮುಖ್ಯಸ್ಥರು ನಮಗೆ ಪಾಠದ ಜೊತೆಗೆ ಇತರ ಚಟುವಟಿಕೆಯೂ ಬೇಕು, ನೀವು ಹತ್ತಿರದ ಚಿತ್ರಮಂದಿರದಲ್ಲಿ ಪ್ರದರ್ಶಿಸಿದರೆ ನಾವು ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಕಳುಹಿಸುತ್ತೇವೆ ಎಂದರು. ಅಷ್ಟು ಸಾಕು, ಎಂದು ಗೆದ್ದ ಮನಸ್ಸಿನಿಂದ ಹೊರಬಂದೆವು.
ಈಗ ದಿನ ಶಾಲೆಗಳ ಮಕ್ಕಳ ಭೇಟಿ ನಡೆಯುತ್ತಿದೆ, ಆ ಮೂಲಕ ಮಕ್ಕಳೇ ನೋಡಬೇಕಾದ ಚಿತ್ರವೊಂದಿದೆ ಎಂಬುದನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ.
ಇನ್ನು ಗೊತ್ತಿರುವ ಗೆಳೆಯ/ಗೆಳತಿಯರಿಗೆ ನೀವು ಬರದಿದ್ದರೂ ಪರವಾಗಿಲ್ಲ, ನಿಮ್ಮ ಮಕ್ಕಳನ್ನು ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ..ಉದ್ದೇಶ.. ಮಕ್ಕಳ ಮನಸ್ಥಿತಿಯನ್ನು ತಲೆಯಲ್ಲಿಟ್ಟುಕೊಂಡು ನಿರ್ಮಿಸಿದ ಚಿತ್ರ.. ಆದಷ್ಟೂ ಮಕ್ಕಳನ್ನು ತಲುಪಲಿ ಎಂಬುದಷ್ಟೇ.
ಆದರೆ ಇದನ್ನು ಇಡೀ ಬೆಂಗಳೂರಿಗೆ ಮಾಡಲಾಗುತ್ತದೆಯೇ..?ಇಡೀ ಕರ್ನಾಟಕದ ಮಕ್ಕಳಿಗೆ/ಶಾಲೆಗಳಿಗೆ ಮಾಡಲಾಗುತ್ತದೆಯೇ..?ಉಹೂ. ಆದರೆ ನಾವಿರುವ ಕಡೆಯಲ್ಲಿ ಇಷ್ಟಾದರೂ ಮಾಡದಿದ್ದರೆ ಹೇಗೆ..? ಬರೀ ಸಿನಿಮಾ ಮಾಡುವುದು, ಅದನ್ನು ಬಿಡುಗಡೆ ಮಾಡುವುದು ಅದಷ್ಟೇ ಸಿನಿಮಾ ಅಲ್ಲ. ಅದನ್ನು ಪ್ರೇಕ್ಷಕರಿಗೆ, ಅದೂ ಆಯಾ ಪ್ರೇಕ್ಷಕರಿಗೆ ತಲುಪಿಸುವುದು ಮುಖ್ಯ. ಸ್ಟಾರ್ ನಟನ ಪೋಸ್ಟರ್ ಗೆ ಜನ ಅಭಿಮಾನಿಗಳು ಮುಗಿಬಿದ್ದು ಬರುತ್ತಾರೆ, ಚಿತ್ರದಲ್ಲಿ ದ್ವಂದ್ವಾರ್ಥವಿದ್ದರೆ ಪಡ್ಡೆಗಳು ಹರಿಹಾಯುತ್ತಾರೆ, ಒಳ್ಳೆಯ ಗೀತೆಗಳು, ಹದಿಹರೆಯದ ವಸ್ತುಗಳು ಟೀನೇಜ್ ಹುಡುಗರನ್ನು ಚಿತ್ರಮಂದಿರಕ್ಕೆ ಕರೆತರುತ್ತದೆ.

ಆದರೆ ಮಕ್ಕಳ ಚಿತ್ರಗಳು ಮಕ್ಕಳನ್ನು ಕತೆತರುವುದಿಲ್ಲ, ಆದರೆ ಅವರ ಪೋಷಕರಿಗೆ ಮಕ್ಕಳಿಂದ ಒತ್ತಡ ತರಬಹುದು, ಅದಾಗ ಬೇಕಾದರೆ ಮೊದಲು ಸಿನಿಮಾದ ಬಗೆಗೆ ಮಕ್ಕಳಿಗೆ ತಲುಪಬೇಕು, ಆ ಕೆಲಸ ಈಗ ಮಾಡುತ್ತಿದ್ದೇವೆ..ಅಷ್ಟೇ..!

No comments:

Post a Comment