Tuesday, June 20, 2017

ಅದೃಶ್ಯ ಅತಿಥಿ...

ವಿಷಯ ಸ್ಪಷ್ಟವಾಗಿದೆ. ಅವನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಆದರೆ ಅವನ ಮೇಲೆಯೇ ಕೊಲೆ ಆರೋಪ ಬಂದರೆ ಏನು ಮಾಡುವುದು.. ಅವನೇನು ಸಾಮಾನ್ಯ ವ್ಯಕ್ತಿಯಲ್ಲ. ಶ್ರೀಮಂತ. ಪತ್ನಿ ಡೈವೋರ್ಸ್  ಗೆ ಅರ್ಜಿ ಗುಜರಾಯಿಸಿದ್ದಾಳೆ. ಇದೆಲ್ಲದರ ನಡುವೆ ಕೊಲೆ ಆರೋಪ. ವಿಷಯ ಏನೆಂದರೆ ಎಲ್ಲರೂ ತಿಳಿದುಕೊಂಡಿರುವುದು ಅವನೇ ಸಂಬಂಧ ಇಟ್ಟುಕೊಂಡಿದ್ದ ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ ಎಂಬುದು...ಆದರೆ ಅವನ್ಯಾಕೆ ಕೊಲೆ ಮಾಡಬೇಕು...ಅವನ ಪ್ರಕಾರ ಅವನ ಮತ್ತವಳ ನಡುವಣ ಸಂಬಂಧ ತಿಲಿದವನೊಬ್ಬ ಬ್ಲಾಕ್ ಮೇಲ್ ಮಾಡಿದ್ದಾನೆ, ಅವನಿಗೆ ಹಣ ಕೊಡಲು ಹೋದಾಗ ಅವಳ ಕೊಲೆ ನಡೆದಿದೆ. ಕೊಲೆಗೂ ಮುನ್ನ ಇವನ ತಲೆಗೆ ಭಾರಿಸಿ ಪ್ರಜ್ಞೆ ತಪ್ಪಿಸಿದ್ದಾನೆ.. ಆದರೆ ಇದಕ್ಕೆಲ್ಲಾ ಸಾಕ್ಷಿ ಬೇಕಲ್ಲ.. ನ್ಯಾಯಾಲಯ ಕತೆ ಕೇಳುತ್ತಾ ಕುಳಿತುಕೊಳ್ಳುವುದಿಲ್ಲ. ಅದು ರುಜುವಾತು ಬೇಡುತ್ತದೆ. ರುಜುವಾತಿಗೆ ನೀವು ಸಾಕ್ಷಿ ಒದಗಿಸಬೇಕು. ಹಾಗಾದರೆ ಏನು ಮಾಡುವುದು..?
ಆತನ ಮುಂದೆ ಕುಳಿತ ವಕೀಲೆ ಕೇಳಿಕೊಳ್ಳುತ್ತಾಳೆ. ನೀನು ಹೊರಗಡೆ ಯಾವುದೇ ಕತೆಯನ್ನಾದರೂ ಹೇಳು, ಅದು ಹಾಗೆಯೇ ಇರಲಿ. ಆದರೆ ನನ್ನ ಮುಂದೆ ನಡೆದದ್ದನ್ನು ನಡೆದ ಹಾಗೆ ಹೇಳುತ್ತಾ ಹೋಗು, ವಿಷಯ ನನಗೆ ತಿಳಿದರೆ ನಾನು ಬೇಕಾದರೆ ಕತೆ ಕಟ್ಟುತ್ತೇನೆ, ಆದರೆ ನೀನೆ ನನಗೆ ಕತೆ ಕಟ್ಟಿ ಹೇಳಿದರೆ ನ್ಯಾಯಾಲಯದಲ್ಲಿ ಕೆಲಸ ಕೆಡುತ್ತದೆ...
ಆತ ಹೇಳಲು ಶುರು ಮಾಡುತ್ತಾನೆ. ಆವತ್ತಿನ ಘಟನೆ ನಡೆದದ್ದು ತೆರೆದುಕೊಳ್ಳುತ್ತದೆ. ಪ್ರೇಯಸಿಯ ಜೊತೆಗೆ ಕಾರಿನಲ್ಲಿ ಬರುವಾಗ ಆಕಸ್ಮಿಕವಾಗಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆಯುತ್ತಾರೆ. ಕಾರಿನಲ್ಲಿದ್ದ ಯುವಕ ಅಲ್ಲೇ ಸ್ಥಳದಲ್ಲೇ ಸಾಯುತ್ತಾನೆ. ಈಗ ಏನು ಮಾಡುವುದು..? ಪೊಲೀಸರಿಗೆ ಕೊಡೋಣ ಎಂದರೆ ಪ್ರೇಯಸಿ ಕೇಳಬೇಕಲ್ಲ.. ಬೇಡ ಇಬ್ಬರಿಗೂ ಸಮಸ್ಯೆಯಾಗುತ್ತದೆ..ಎಂದದ್ದೆ ಅದನ್ನು ಕವರ್ ಅಪ್ ಮಾಡಲು ಪ್ಲಾನ್ ಮಾಡುತ್ತಾಳೆ..ಹೇಗೋ ಸತ್ತಿದ್ದನಲ್ಲ.. ಹಾಗಾಗಿ ಕಾರಿನ ಸಮೇತ ಅವನನ್ನು ಕೆರೆಗೆ ತಳ್ಳಿಬಿಡೋದು ಸರಿ ಎನ್ನುವುದು ಅವಳ ವಾದ.. ಹಾಗೆ ಮಾಡುತ್ತಾರೆ ..ಅಷ್ಟೇ.. ಆದರೆ ಅದೆಲ್ಲಾ ಆ ಬ್ಲಾಕ್ ಮೈಲರ್ ಹೇಗೆ ಗೊತ್ತಾಯಿತು..? ಎನ್ನುವುದು ಸಧ್ಯದ ವಿಷಯ...
ವಕೀಲೆ ಇದನ್ನು ನಂಬುವುದಿಲ್ಲ. ಮತ್ತೆ ಕತೆ ಕಟ್ಟುತ್ತಿದ್ದೀಯ.. ಹೀಗಾದರೆ ನನಗೆ ಇನ್ನೂ ಕಷ್ಟವಾಗುತ್ತದೆ, ಅದಾಗ್ಯೂ ನೀನು ಹೀಗೆಯೇ ಮುಂದುವರೆದರೆ ಕಷ್ಟದಲ್ಲಿ ಸಿಲುಕಿಕೊಳ್ಳುವವನು ನೀನು, ನಾನಲ್ಲ..ಸರಿಯಾಗಿ ಏನು ನಡೆಯಿತೆಂದು ಹೇಳು ಎನ್ನುತ್ತಾಳೆ..ನಾಯಕ ಹೇಳತೊಡಗುತ್ತೇನೆ..
ಆವತ್ತು ಏನಾಯಿತೆಂದರೆ..

ಕತೆ ಹೀಗೆ ಸಾಗುತ್ತದೆ. ಇದೊಂದು ಮರ್ಡರ್ ಮಿಸ್ಟರಿ. ಇತ್ತೀಚಿನ ದಿನಗಳಲ್ಲಿ ಬಂದಂತಹ ಟೈಮ್ ಪಾಸ್ ಸಿನಿಮಾ ಇದು. ದಿ ಅನ್ ವಿಸಿಬಲ್ ಗೆಸ್ಟ್. ಪದರ ಪದರವಾಗಿ ತೆರೆದುಕೊಳ್ಳುವ ಕತೆ ಕುತೂಹಲ ಮೂಡಿಸುತ್ತದೆ. ಎಲ್ಲೂ ಬೋರ್ ಆಗದೆ ನೋಡಿಸಿಕೊಂಡು ಹೋಗುತ್ತದೆ. ಅನುಮಾನದ ಎಳೆಗಳು ಎಲ್ಲರ ಮೇಲೂ ಹಾದುಹೋಗುವಂತೆ ಕತೆ ಹೆಣೆದಿದ್ದಾರೆ ಕತೆಗಾರರು. ಹಾಗಾಗಿ ಕತೆ ನಿರೂಪಿಸುತ್ತಾ ಸಾಗುವ ನಾಯಕ ಆಗಾಗ ಬದಲಿಸುತ್ತಾನೆ. ಅದೇ ಕತೆ ಬೇರೆಯದೇ ಆಯಾಮದಲ್ಲಿ ಮತ್ತೊಮ್ಮೆ ತೆರೆದುಕೊಳ್ಳುತ್ತದೆ. ಥ್ರಿಲ್ಲರ್ ರೂಪದಲ್ಲಿ ತೆರೆದುಕೊಳ್ಳುವ ಕತೆ ಭಾವನಾತ್ಮಕವಾಗಿಯೂ ಕಾಡುತ್ತದೆ.

1 comment:

  1. ಹೌದು ತುಂಭಾ ಚೆನ್ನಾಗಿದೆ
    ಸ್ನೇಹಿತ..ಹರೀಶ್ ಮಲ್ಯ ಹೇಳಿದ್ದರು..

    ನೀವು ತುಂಬಾ ಚೆನ್ನಾಗಿ ಗುಟ್ಟು ಬಿಟ್ಟು ಕೊಡದೆ ಬರದಿದ್ದರಿ

    ReplyDelete