Sunday, June 18, 2017

ಲುಸಿಡ್ ಡ್ರೀಮ್ಸ್

ಕಣ್ಣಮುಂದೆ ಆಟವಾಡುತ್ತಿದ್ದ ಮಗು ಕ್ಷಣಾರ್ಧದಲ್ಲಿ ನಾಪತ್ತೆಯಾದರೆ ಹೇಗಾಗಬೇಡ. ಮಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತನ್ನೆಲ್ಲಾ ಸರ್ವಸ್ವವೇ ಮಗ ಎಂದುಕೊಂಡಿರುವ ಅಪ್ಪನಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆವತ್ತು ಏನಾಯಿತು ಎಂಬುದನ್ನು ಎಷ್ಟು ಸಾರಿ ನೆನಪಿಸಿಕೊಂಡರೂ ಸಾಧ್ಯವಾಗುತ್ತಿಲ್ಲ. ಇನ್ನೇನು ಮಾಡುವುದು..?ಅಪಹರಿಸಿದಾತನಿಂದ ಯಾವುದೇ ಸುಳಿವಿಲ್ಲ, ಏನೊಂದು ವಿಷಯವಿಲ್ಲ, ಬೇಡಿಕೆಯಿಲ್ಲ. ಇದೆಲ್ಲಾ ಕಳೆದು ಮೂರುವರ್ಷವಾಗಿದೆ. ಪೊಲೀಸರು ಹುಡುಕುತ್ತಿದ್ದಾರೆ. ಆದರೆ ಹುಡುಗನ ಪತ್ತೆಯಿಲ್ಲ. ಆವತ್ತು ಏನೆಲ್ಲಾ ನಡೆಯಿತು..? ನನಗೇನಾಯಿತು..? ನಾಯಕ ತಲೆ ಕೆಡಿಸಿಕೊಂಡು ಒದ್ದಾಡುತ್ತಾನೆ. ಕೊನೆಗೆ ಲುಸಿಡ್ ಡ್ರೀಮ್ಸ್ ಬಗ್ಗೆ ತಿಳಿದು ಸೀದಾ ಅಲ್ಲಿಗೆ ಹೋಗಿಬಿಡುತ್ತಾನೆ.
ಕನ್ನಡ ಚಿತ್ರರಸಿಕರಿಗೆ ಲುಸಿಡ್ ಡ್ರೀಮ್ಸ್ ಹೊಸತೇನಲ್ಲ. ಈಗಾಗಲೇ ಲುಸಿಯಾ ಚಿತ್ರದ ಮೂಲಕ ಅದರ ಪರಿಚಯವಾಗೆ ಇದೆ. ಕನಸನ್ನು ಸೃಜಿಸುವ, ಮುಂದುವರೆಸುವ ಅಥವಾ ಇಂಪ್ಲಾಂಟ್ ಮಾಡುವ ವಿಧಾನವದು. ಆ ಮೂಲಕ ಆವತ್ತಿನ ಘಟನೆಗಳನ್ನ ಮತ್ತೊಮ್ಮೆ ಕನಸಿನ ರೂಪದಲ್ಲಿ ಪುನರ್ಕಾಣಿಸುವಂತೆ ಮಾಡಲಾಗುತ್ತದೆ, ಕನಸ್ಸಿನಲ್ಲಿ. ಮೆದುಳಿನಲ್ಲಿ ಪ್ರತಿಯೊಂದು ಶೇಖರವಾಗಿರುತ್ತದೆ, ಆದರೆ ಎಲ್ಲವನ್ನು ಸ್ಪಷ್ಟವಾಗಿ ರೂಪಿಸಿ ಅದಕ್ಕೆ ಸ್ಪಷ್ಟ ರೂಪ ಕೊಡುವುದು ಒಮ್ಮೊಮ್ಮೆ ಅಂಗಾಂಗಗಳಿಗೆ ಸಾಧ್ಯವಾಗುವುದಿಲ್ಲ. ಅದನ್ನು ಸುಪ್ತಪ್ರಜ್ಞೆಯ ಮೂಲಕ ಮಾಡಿಸಬಹುದು ಎಂಬುದು ಗೊತ್ತಾಗುತ್ತಿದ್ದಂತೆ ನಾಯಕ ಲುಸಿಡ್ ಡ್ರೀಮ್ಸ್ ಮೊರೆಹೋಗುತ್ತಾನೆ. ಆವತ್ತಿನ ಘಟನೆ ಕನಸಿನ ರೂಪದಲ್ಲಿ ಕಾಣಸಿಗುತ್ತದೆ. ಇವನು ನಿಂತಿದ್ದಾನೆ, ಹುಡುಗ ಆಟವಾಡುತ್ತಿದ್ದಾನೆ.. ಕಾಲಿಗೆ ಏನೋ ಚುಚ್ಚಿದಂತಾಗುತ್ತದೆ, ಬಗ್ಗಿ ನೋಡಿ ತಲೆ ಎತ್ತಿನೋಡಿದರೆ ಹುಡುಗನನ್ನು ಯಾರೋ ಎಳೆದುಕೊಂಡು ಹೋಗುತ್ತಿದ್ದಾನೆ..ತಡಮಾಡದೆ ಎದ್ದವನೇ ಅವನನ್ನು ಅಟ್ಟಿಸಿಕೊಂಡು ಓಡುತ್ತಾನೆ.. ಅಲ್ಲಿಗೆ ಕನಸು ಪಡ್ಚ್. ಕನಸನ್ನು ಹಾಗೆಯೇ ಬಿಡಬೇಕು. ಅದರಲ್ಲಿ ನಿಮ್ಮತನವನ್ನು ತೋರಿಸಿದರೆ ದೃಶ್ಯ ಏರುಪೇರಾಗುತ್ತದೆ ಎನ್ನುವ ಸಲಹೆಗೆ ತಲೆತೂಗಿ ಲುಸಿಡ್ ಡ್ರೀಮ್ಸ್ ಮೂಲಕವೇ ತನ್ನ ಮಗನ ಅಪಹರಣ ಪ್ರಕರಣವನ್ನು ಕಂಡುಹಿಡಿಯಲು ಯೋಜಿಸುತ್ತಾನೆ.
ಅದರಲ್ಲಿ ಯಶಸ್ವಿಯಾಗುತ್ತಾನೆಯೇ..?

ಸಿನಿಮಾ ಪ್ರಾರಂಭದಿಂದಲೇ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ನಿರೂಪಣೆ ವೇಗವಾಗಿ ಓಡುತ್ತಾ ನಮ್ಮನ್ನು ಭ್ರಾಮಕ ಲೋಕದತ್ತ ಸೆಳೆಯುತ್ತಾ ಸಾಗುತ್ತದೆ. ಇದೆಲ್ಲಾ ಸಾಧ್ಯವಾ..? ಎನ್ನುವ ಪ್ರಶ್ನೆ ನಮ್ಮನ್ನು ಆಗಾಗ ಕಾಡುತ್ತದೆಯಾದರೂ ಸಿನಿಮಾ ನೋಡಲು ಮಜಾ ಅಂತೂ ಇದ್ದೇ ಇದೆ. ಅಂದಹಾಗೆ ಲುಸಿಡ್ ಡ್ರೀಮ್ಸ್ ಕೋರಿಯನ್ ಭಾಷೆಯ ಚಲನಚಿತ್ರ. ಈ ವರ್ಷ ಬಿಡುಗಡೆಯಾಗಿರುವ ಈ ಚಿತ್ರದ ನಿರ್ದೇಶನ ಕಿಂ ಜೂನ್ ಸಾಂಗ್ ಅವರದ್ದು.

No comments:

Post a Comment