Wednesday, September 16, 2015

ಕಾದಂಬರಿ ಮತ್ತು ಪುಟ್ಟಕ್ಕ...

ಗಡಸು ನೀರು ಅಂದ್ರೆ ನಿಮಗೆ ಗೊತ್ತಿರಬಹುದು.. ಅದನ್ನು ಒಟ್ಟು ಕ್ಯಾಲ್ಸಿಯಂ ಅಯಾನ್ಸ್ ಮತ್ತು ಮೆಗ್ನೀಷಿಯಂ ಅಯಾನ್ಸ್ ಜೊತೆಗೆ ನೀರಿನಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಅಂಶದ ಜೊತೆಗೆ ಲೆಕ್ಕ ಹಾಕಿ ತಾಳೆ ಮಾಡಿ ನೀರಿನ ಗಡಸುತನವನ್ನು ನಿರ್ಣಯ ಮಾಡಬಹುದು. ಅವರೆಡರ ಅನುಪಾತ ಕಡಿಮೆ ಇದ್ದರೆ ನೀರಿನ ಗಡಸುತನ ಕಡಿಮೆ ಇರುತ್ತೆ.. ಇಲ್ಲಾಂದ್ರೆ ಗಡಸುತನ ಜಾಸ್ತಿ ಇರುತ್ತೆ.. ಕಡಿಮೆ ಆದರೇನು, ಜಾಸ್ತಿ ಆದರೇನು ಸ್ವಾಮೀ.. ಕುಡಿಯೋದ್ ತಾನೇ ಅನ್ನಬಹುದು ನೀವು.. ಆದರೆ ಅಡುಗೆ ಮಾಡುವಲ್ಲಿಗೆ ಇದು ಮುಖ್ಯ ಆಗುತ್ತೆ ನೋಡಿ.. ನಿಮಗೆ ಅನ್ನ ಉದುರುದರಾಗಿ ಬೇಕು ಅಂದ್ರೆ ಕ್ಯಾಲ್ಸಿಯಂ ಜಾಸ್ತಿ ಇರೋ ನೀರಲ್ಲಿ ಅಡುಗೆ ಮಾಡಬೇಕು..ಅದು ಅಕ್ಕಿಯ ನಾರಿನ ಜೊತೆಗೆ ಮಿಳಿತವಾಗಿ ಅನ್ನ ಉದುರುದರಾಗಿ ಆಗುತ್ತೆ,  ಚಿತ್ರಾನ್ನ, ಪುಳಿಯೋಗರೆ ಮುಂತಾದವಕ್ಕೆ ಈ ಗಡಸುತನ ಕಡಿಮೆ ಇರಬೇಕಾಗುತ್ತೆ. ಆದರೆ ಮಾಂಸದ ಸಾರಿಗೆ ಗಡಸು ನೀರು ಬೆಸ್ಟ್..ಏಕೆಂದರೆ ಈ ಕ್ಯಾಲ್ಸಿಯಂ ಮಾಂಸದ ನಾರಿನಲ್ಲಿನ ಹೆಚ್ಚಿನ ದ್ರವಾಂಶದ ಜೊತೆಗೆ ಸೇರಿ,  ಮಾಂಸ ಬೇಯುವಲ್ಲಿಗೆ ಸಹಾಯ ಮಾಡುತ್ತೆ.. ಹಾಗಾಗಿ ಬೆಂದ ಮೇಲೆ ತಿನ್ನೋಕೆ ಸುಲಭ..
ಅದ್ಸರಿ ಇದೇನು ನೀರಿನ ಬಗೆಗಿನ ವಿವರ ಎನ್ನುವ ಮೊದಲು ಒಂದು ಘಟನೆ ನಡೆದಿದೆ. ಅದನ್ನು ಅವಲೋಕಿಸೋಣ. ಒಂದು ಕೊಲೆ. ಹೆಂಡತಿ ಹಿಂದಿನ ದಿನ ಊರಿಗೆ ಹೋಗಿದ್ದಾಳೆ. ಅವಳು ಮನೆಯಲ್ಲಿ ಇಲ್ಲ ಎಂದು ಗೊತ್ತಾದ ತಕ್ಷಣ ನಮ್ಮ ಹೀರೋ ತನ್ನ ಗೆಳತಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ರಾತ್ರಿ ಕಳೆದು ಇಬ್ಬರೂ ಬೆಳಿಗ್ಗೆ ಕಾಫಿ ಕುಡಿದಿದ್ದಾರೆ. ಗೆಳತಿಯೇ ಸ್ವತಃ ಕಾಫಿ ಮಾಡಿದ್ದಾಳೆ. ಆನಂತರ ಸಂಜೆ ಸಿಗೋಣ ಎಂದು ಮಾತನಾಡಿಕೊಂಡಿದ್ದಾರೆ. ಸಂಜೆ ಹೋಟೆಲ್ಲಿಗೆ ಊಟಕ್ಕೆ ಹೋಗೋಣ ಎಂದವನು ತುಂಬಾ ಹೊತ್ತಾದರೂ ಕರೆ ಮಾಡದೆ ಇದ್ದಾಗ, ಕರೆ ಸ್ವೀಕರಿಸದೆ ಇದ್ದಾಗ ಗಾಬರಿಯಾದ ಆಕೆ ಮನೆಗೆ ಬಂದಿದ್ದಾಳೆ. ಅಲ್ಲವನ್ನು ಸತ್ತು ಬಿದ್ದಿದ್ದಾನೆ. ಕಾಫಿ ಕುಡಿದ ಲೋಟ, ಒಂದು ವಾಟರ್ ಬಾಟಲು ಪಕ್ಕದಲ್ಲಿದೆ. 
ಆಕೆಗೆ ಗಾಬರಿಯಾಗಿ ತಕ್ಷಣ ಪೋಲಿಸ್ ಗೆ ಫೋನ್ ಮಾಡಿದ್ದಾಳೆ.
ಅದು ಕೊಲೆಯಾ?
ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ ವಿಷ ಪ್ರಾಶನದಿಂದ ಆತ ಸತ್ತಿದ್ದಾನೆ. ಆತ ಸತ್ತ ಸಮಯದಲ್ಲಿ ಹೆಂಡತಿ ದೂರದ ಊರಿನಲ್ಲಿದ್ದಾಳೆ, ಗೆಳತಿ ಬಂದ ತಕ್ಷಣ ಫೋನ್ ಮಾಡಿದ್ದಾಳೆ. ಬೇರೆ ಯಾವ ನರಪಿಳ್ಳೆಯೂ ಬಂದಿರುವ ಸುಳಿವಿಲ್ಲ. ಹೆಂಡತಿ ಮೇಲೆ ಸಂಶಯ ಪಡಲು ಸಾಧ್ಯವೇ ಇಲ್ಲ, ಏಕೆಂದರೆ ಆಕೆ ದೂರದಲ್ಲಿದ್ದಾಳೆ. ವಿಷ ಬಂದಿರುವುದು ಕಾಫಿ ಲೋಟದಲ್ಲಿ ಆದ್ದರಿಂದ ಮೊದಲೇ ಕಾಫಿ ಲೋಟಕ್ಕೋ ನೀರಿಗೋ ಬೆರೆಸಿ ಆಕೆ ಹೋಗಿದ್ದರೆ, ಗೆಳತಿಯೂ ಸಾಯಬೇಕಾಗಿತ್ತು.  ಬೆಳಿಗ್ಗೆ ಕುಡಿದ ಕಾಫಿ ಲೋಟಗಳು ಸಿಂಕ್ ನಲ್ಲಿ ಹಾಗೆಯೇ ಇವೆ..ಅದರಲ್ಲಿ ವಿಷದ ಅಂಶವಿಲ್ಲ..
ಹೋಗಲಿ ಗೆಳತಿಯ ಮೇಲೆ ಸಂಶಯ ಪಡೋಣ ಎಂದರೆ ಅವಳೇ ಫೋನ್ ಮಾಡಿದ್ದಾಳೆ.. ಮತ್ತು ಯಾವ ರೀತಿಯಲ್ಲಿಯೂ ಯಾವುದೇ ಸಾಕ್ಷ್ಯವನ್ನು ಅಳಿಸುವ ಪ್ರಯತ್ನವನ್ನು ಆಕೆ ಮಾಡಿಲ್ಲ..
ಅಥವಾ ಆತ್ಮಹತ್ಯೆ ಇರಬಹುದಾ..? ಏಕೆಂದರೆ ಲೋಟದ ಮೇಲಿನ, ಬಾಟಲು ಮೇಲಿನ ಬೆರಳ ಗುರುತು ಸತ್ತವನದೆ ಆದ್ದರಿಂದ ಅವನೇ ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಉಹೂ.. ಗೆಳತಿ ಸಂಜೆ ಹೊರಗೆ ಹೋಟೆಲ್ಲಿಗೆ ಊಟಕ್ಕೆ ಹೋಗೋಣ ಎಂದವನು, ಅಷ್ಟೇ ಅಲ್ಲ ಹೋಟೆಲ್ಲಿಗೆ ಸಂಜೆ 6.30ಕ್ಕೆ ಕರೆ ಮಾಡಿ ಎರಡು ಸೀಟ್ ರೆಸೆರ್ವ್ ಮಾಡಿದವನು ಅದೇಕೆ 7 ಕ್ಕೆ ಆತ್ಮಹತ್ಯೆ ಮಾಡಿಕೊಂಡಾನು?
ಸರಿ.. ವಿಷ ಬಂದಿದ್ದಾದರೂ ಎಲ್ಲಿಂದ?
ನೀರಿನ ಬಾಟಲು ಪರೀಕ್ಷೆ ಮಾಡಲಾಯಿತು.. ಫಲಿತಾಂಶ ಶೂನ್ಯ..
ಕಾಫಿ ಪುಡಿ, ಕಾಫೀ ಲೋಟದಲ್ಲಿನ ಉಳಿದ ದ್ರವದಲ್ಲಿ ವಿಷವಿದೆ ನಿಜ.. ಅದು ಬಂದದ್ದಾದರೂ ಎಲ್ಲಿಂದ..
ಫಿಲ್ಟರ್ ವಾಟರ್ ನಿಂದ ಎನ್ನುವುದಾದರೆ ವಾಟರ್ ಫಿಲ್ಟರ್ ಪೈಪಿನಲ್ಲಿ ವಿಷದ ಅಂಶವಿರಬೇಕಲ್ಲವೇ?
ವಿಷಯವಂತೂ ಸ್ಪಷ್ಟ.. ವಿಷ ಪ್ರಾಶನ.. ಅದೂ ವಿಷವನ್ನು ನೀರಿಗೆ ಹಾಕಲಾಗಿದೆ, ಆ ನೀರನ್ನು ಕಾಫೀ ಮಾಡಲು ಬಳಸಲಾಗಿದೆ..
ಸರಿ.. ಇಡೀ ನೀರಿನ ಸಂಪು, ಪೈಪ್, ಹಿಡಿ, ನಟ್ ಬೋಲ್ಟ್, ನಳ, ಫಿಲ್ಟರ್ ಎಲ್ಲವನ್ನು ಪರೀಕ್ಷೆ ಮಾಡಿದರೆ..?
ಅದೂ ಆಯಿತು.. ಉಹೂ..
ಹೋಗಲಿ..ಸರಿ.. ನೀರಿನ ಪೈಪ್ ಬದಲಿಸಿ ಎಷ್ಟು ದಿನವಾಯಿತು ಪರೀಕ್ಷೆ ಮಾಡೋಣ. ಕೊಲೆಗಾರ ನೀರಿನ ಪೈಪ್ ಲೈನ್ ನಲ್ಲಿಯೇ ವಿಷ ಸೇರಿಸಿದ್ದರೆ ಅವನು ಇತ್ತೀಚಿಗೆ ಅದನ್ನು ಬದಲಿಸಿ ವಿಷ ಹಾಕಿ ಮತ್ತೆ ಫಿಕ್ಸ್ ಮಾಡಬೇಕಲ್ಲವೇ?
ಆದರೆ ಆ ಪೈಪ್ ಹಾಕಿಸಿ ವರ್ಷಗಟ್ಟಲೆ ಆಗಿದೆ ಮತ್ತು ಅದನ್ನು ಬದಲಿಸಿಯೇ ಇಲ್ಲ...
ಹೇಗೆ..?
ಯಾರು?
ಪ್ರಾರಂಭದಲ್ಲಿಯೇ ಕಾದಂಬರಿಗಾರ ನಾಯಕನ ಪತ್ನಿಯೇ ಕೊಲೆಗಾರ್ತಿ ಎನ್ನುವ ಸುಳಿವನ್ನು ನೀಡುತ್ತಾನೆ. ಆದರೆ ಕಾದಂಬರಿ ಮುಂದುವರೆಯುತ್ತಿದ್ದಂತೆಯೇ ಅಲ್ಲಿನ ಪತ್ತೆದಾರರ ಜೊತೆಗೆ ಓದುಗನೂ ಹುಡುಕುವಂತೆ ಮಾಡುತ್ತಾನೆ. ಗೊತ್ತಿದ್ದೂ ಯಾವುದನ್ನು ನಿಖರವಾಗಿ ಸಾಕ್ಷಿ ಸಮೇತ ನಿರೂಪಿಸಲಾಗದ ಪತ್ತೆದಾರನ ಸ್ಥಿತಿ ಓದುಗನದೂ ಆಗುತ್ತದೆ. ಕಾದಂಬರಿಯಕೊನೆಯ ಪುಟದವರೆಗೂ ಕುತೂಹಲ ಕಾಯ್ದುಕೊಳ್ಳುವ ಕಾದಂಬರಿಕಾರ ಕೊನೆಗೆ ನೀಡುವ ವಿವರಣೆ ಅಚ್ಚರಿ ಎನಿಸುತ್ತದೆ.
ಇದು ದೃಷ್ಯಂ ಚಿತ್ರದ ಮೂಲ ಲೇಖಕ ಬರೆದ ಕಾದಂಬರಿ ಸಾಲ್ವೇಶನ್ ಆಫ್ ಎ ಸೈಂಟ್ ನ ಕತೆ. ಪ್ರಾರಂಭದಿಂದಲೂ ಕೊನೆಯವರೆಗೆ ಕುತೂಹಲ ಕೆರಳಿಸುತ್ತಾ ಸಾಗುವ ಕತೆ ಇದು. ಮೊದಲಿಗೆ ಜಪಾನಿ ಹೆಸರುಗಳು ಸ್ವಲ್ಪ ನೆನಪಲ್ಲಿಟ್ಟುಕೊಳ್ಳುವ ಕಷ್ಟ ಎನಿಸಿದರೂ ಆನಂತರ ಕಾದಂಬರಿ ನಿಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಒಮ್ಮೆ ಓದಿ.
ಅಂದ ಹಾಗೆ ಬಿಡುವಾದಾಗ ಈ ಕಿರುಚಿತ್ರ ನೋಡಿ.. ನಿಮ್ಮ ಅಭಿಪ್ರಾಯ ತಿಳಿಸಿ...3 comments:

  1. ಕಾದಂಬರಿ ಓದುಗನ ಮನದಲ್ಲಿ ಮನೆಮಾಡುವುದೇ ಹಾಗೇ.. ಉತ್ತಮ ಥ್ರಿಲಿಂಗ್ ಕಾದಂಬರಿ.

    ReplyDelete
  2. Interesting...
    Video is superb.... Putti is Lovely and Cute :)

    ReplyDelete