Sunday, September 13, 2015

ಕಳೆದುಹೋಗಿದ್ದ ಸೂರಿ ಸಿಕ್ಕಿದ ಖುಷಿಯಲ್ಲಿ..

ರಂಗ ಎಸ್ ಎಸ್ ಎಲ್ ಸಿ ಸಮಯದಲ್ಲಿ ನಾನು ಕಾಲೇಜಿನಲ್ಲಿದ್ದೆ. ಬಿಡುಗಡೆಯಾದಾಗ ಸಿನಿಮಾಕ್ಕೆ ಎದ್ದು ಬಿದ್ದು ಓಡಿದ್ದೆ. ಸಿನಿಮಾ ಬಿಡಿ, ಆ ವಟವಟ ಎಂದು ಮಾತನಾಡುವ ರಂಗ, ಆತನ ಸೈಡ್ ಕಿಕ್ ಜಪಾನ್ ನನಗೆ ತುಂಬಾ ಇಷ್ಟವಾಗಿದ್ದರೂ ಇದೇ ಮಾತನ್ನು ಇಡೀ ಚಿತ್ರಕ್ಕೆ ಹೇಳುವ ಹಾಗಿರಲಿಲ್ಲ. ಆದರೆ ದುನಿಯಾ ಚಿತ್ರ ನೋಡಿ, ಅದರಲ್ಲಿನ ಕಸುಬುದಾರಿಕೆಗೆ ಮರುಳಾಗಿದ್ದೆ. ಹಾಡು, ಹೊಡೆದಾಟ, ಬದುಕಿನ ವಿಪರ್ಯಾಸಗಳನ್ನು ಸೂರಿ ತುಂಬಾ ಚೆನ್ನಾಗಿ ಚಿತ್ರಿಸಿದ್ದರು. ಆದರೆ ಆನಂತರದ ಅವರದೇ ಚಿತ್ರಗಳು ಇಷ್ಟವಾಗಲಿಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿನ ಕತೆ, ನಿರೂಪಣೆ ಒಳಗೆ ಸೇರಲೇ ಇಲ್ಲ, ಜಾಕಿ ಓಕೇ ಎನಿಸಿದರೆ ಅಣ್ಣಾಬಾಂಡ್ ಇಷ್ಟವಾಗಲಿಲ್ಲ. ಅದೇಕೆ ಇಷ್ಟವಾಗಬೇಕು, ಇಷ್ಟಕ್ಕೂ ಒಬ್ಬ ನಿರ್ದೇಶಕ ತನ್ನೆದುರಿನ ಪ್ರಪಂಚವನ್ನು, ತನ್ನೊಳಗಿನ ಕಲ್ಪನೆಯನ್ನು ಪರದೆಯ ಎ ಬಿಡಿಸುತ್ತಾನೆ, ನೋಡುವ ಧರ್ಮ, ನೋಡುವ ಕರ್ಮ ನಮ್ಮದು. ಇಷ್ಟವಾಗುವುದು, ಬಿಡುವುದು ಸಿನಿಮಾಕ್ಕೆ ಸೇರಿದ್ದು. ನಾವು ತಿರಸ್ಕರಿಸಿದ ಚಿತ್ರ ಸೂಪರ್ ಹಿಟ್ ಆಗಿರಬಹುದು, ನಾವು ತುಂಬಾ ಇಷ್ಟಪಟ್ಟ ಚಿತ್ರಗಳು ಡಬ್ಬಾ ಸೇರಿರಬಹುದು. ಆದರೆ ಒಬ್ಬ ನಿರ್ದೇಶಕ ಹೀಗೆಯೇ ಚಿತ್ರ ನಿರ್ದೇಶನ ಮಾಡಬೇಕು ಎಂಬುದಾಗಿ ನಾವು ಅಂದಾಜು ಊಹೆ ಕಲ್ಪನೆ ನಿರ್ಧಾರ ಮಾಡಿಕೊಂಡು ಬಿಡುವುದು ನಮ್ಮದೇ ತಪ್ಪು. ಆತ ನಿರ್ದೇಶನ ಮಾಡುತ್ತಾನೆ, ಹೋಗಿ ನೋಡು, ಇಷ್ಟವಾಯಿತಾ ಆಯಿತು, ಆಗಲಿಲ್ಲವಾ ಬೈದೆದ್ದು ಬಾ ಅಷ್ಟೇ ಕತೆ. ಹೋಟೆಲ್ಲಿನಲ್ಲಿ ಆರ್ಡರ್ ಮಾಡಿದ ಮೇಲೆ ಚೆನ್ನಾಗಿಲ್ಲವೆಂದರೂ ಗೊಣಗಿಕೊಂಡೆ ತಿನ್ನುವುದಿಲ್ಲವೇ? ಹಾಗೆಯೇ ಇದು ನನ್ನ ಪಾಲಿಗೆ.
ಹಾಗೆ ನೋಡಿದರೆ ಕೆಂಡಸಂಪಿಗೆ ಚಿಕ್ಕ ಚೊಕ್ಕ ಚಿತ್ರ. ವಿಮರ್ಶೆ ಪಕ್ಕಕ್ಕಿಡಿ. ನೋಡಿ, ನೋಡುವಾಗ ಏನನ್ನಿಸಿತು, ಅಷ್ಟೇ ಮುಖ್ಯ ಅಲ್ಲವೇ? ಅವರು ಆಕಾಶದ ಮೇಲಾದರೂ ಕ್ಯಾಮೆರಾ ಇಟ್ಟಿರಲಿ, ಪಾತಾಳದಲ್ಲಾದರೂ ಕ್ಯಾಮೆರಾ ಹುದುಗಿಸಿರಲಿ, ನಮಗೆ ಮಾಡುವುದು ಏನಿದೆ.? ನೋಡುವಾಗ ಪರದೆಯ ಮೇಲಿನದ್ದು ಒಳ ಹೋದರೆ ಸಾಕು. ಹಾಗಂತ ತೀರಾ ಕಾವ್ಯಾತ್ಮಕವಾಗಿ ಅಥವಾ ಭಾವನಾತ್ಮಕವಾಗಿ ಹೇಳಲು ಹೋಗಿದ್ದಾರಾ ನಿರ್ದೇಶಕರು ಎಂದರೆ ಇಲ್ಲ ಎನ್ನುವುದು ಚಿತ್ರದಲ್ಲಿ ಕಾಣಸಿಗುತ್ತದೆ. ಭಗ್ನಹೃದಯಿ ನಾಯಕ ವಾಸ್ತವ ಒಪ್ಪಿಕೊಂಡು ಮುಂಬೈನಲ್ಲಿ ಕೆಲಸ ಮಾಡುವ ಒಂದು ಚಿತ್ರಣವೇ ಸಾಕು ಬಿಡಿ ಚಿತ್ರದಲ್ಲಿನ ವಾಸ್ತವತೆಯ ಅರುಹಲು.
ಸೂರಿ ಕೆಂಡ ಸಂಪಿಗೆ ಎಲ್ಲೂ ಸಿನಿಮೀಯವಾಗಿಲ್ಲ, ಅಥವಾ ನ್ಯಾಯಸಮ್ಮತ ಕತೆಯೂ ಆಗಿಲ್ಲ. ಅದು ನಿರ್ದೇಶಕರಿಗೂ ಬೇಕಿಲ್ಲ. ಚಿತ್ರದಲ್ಲಿನ ವಾಸ್ತವ, ಅವ್ಯವಸ್ತೆ ಹಾಗೆಯೇ ಇರುತ್ತದೆ, ಅದಕ್ಕೆ ಅಂತ್ಯವಿಲ್ಲ ಎನ್ನುವುದು ಕೆಂಡಸಂಪಿಗೆ ಹೂರಣ. ಅದು ನಿಜವೂ ಹೌದು. ಹೀಗೂ ಮಾಡಬಹುದು ಎಂಬುದು ಇಲ್ಲಿಲ್ಲ, ಹೀಗೆಯೇ ಇರುತ್ತದೆ ಎಂಬುದು ಇಲ್ಲಿದೆ ಅಷ್ಟೇ. ಹಾಗಂತ ತೀರಾ ಅನ್ಯಾಯವವನ್ನು ವೈಭವೀಕರಿಸಿಲ್ಲ ನಿರ್ದೇಶಕರು, ಬದಲಿಗೆ ಅಷ್ಟೆಲ್ಲಾ ಕಷ್ಟ ಪಡುವ ನಾಯಕ ನಾಯಕಿ ಬೇರಾಗಿ ಬೇಸರ ಹುಟ್ಟಿಸಿದರೆ, ತೀರಾ ಹೆಣಗಳನ್ನೇ ಉದುರಿಸಿ ಗಳಿಸಿದ ಹಣ ದಕ್ಕದೇ ಒದ್ದಾಡುವ ಪೋಲಿಸ್ ಅಧಿಕಾರಿ ಸ್ಥಿತಿ ನಗು ತೃಪ್ತಿ ತರುತ್ತದೆ. ಆ ಮೂಲಕ ಸೂರಿ ಸೂಚ್ಯವಾಗಿ ವಾಸ್ತವದ ನೆಲಗಟ್ಟಿನಲ್ಲಿಯೇ ಒಳ್ಳೆಯದಕ್ಕೆ ಜಯ ಇದೆ ಎನ್ನುವುದನ್ನು ತೋರಿಸಿದ್ದಾರೆ ಅಥವಾ ಆಟವಾಡಿಸುವವ ಮೇಲೊಬ್ಬನಿದ್ದಾನೆ ಎನ್ನುವ ಸೂಚನೆ ನೀಡಿದ್ದಾರೆ. ನಾಯಕನಾಗಿ ವಿಕ್ಕಿ, ನಾಯಕಿಯಾಗಿ ಮಾನ್ವಿತಾ ಸೂಪರ್.
ಯಾಕೋ ಸೂರಿ ಕಳೆದುಹೋದರಾ... ಎಂದು ಯೋಚಿಸುವನ್ತಾಗಿದ್ದಾಗ ಮತ್ತೆ ಸೂರಿ ಅವರ ದುನಿಯಾ ತೆರೆದುಕೊಂಡಿದೆ.  



1 comment:

  1. ಸರಳವಾದ ಚಿತ್ರದ ಬಗೆಗಿನ ಉತ್ತಮ ವಿವರ ಇಷ್ಟವಾಯಿತು ನಿಮ್ಮ ಲೇಖನ

    ReplyDelete