Saturday, February 28, 2015

ಅದು ಬೆಸ್ಟ್ ಆಫರ್....

ಅವನೊಬ್ಬ ಕಲಾಕೃತಿಗಳ ಮೌಲ್ಯ ಮಾಪಕ. ವಯಸ್ಸು ಇಳಿವಯಸ್ಸು. ಈ ರಿಸರ್ವಡ್ ಅಂತಾರಲ್ಲ ಅಂತಹ ವ್ಯಕ್ತಿತ್ವದವನು. ಯಾರನ್ನೂ ನಂಬುವುದಿಲ್ಲ.. ತನ್ನ ಮನೆಗೆ ಇದುವರೆವಿಗೂ ಯಾರನ್ನೂ ಕರೆದುಕೊಂಡು ಬಂದಿಲ್ಲ ಎಂದರೆ ಸುಮ್ಮನೆ ಊಹಿಸಿ...ಅವನ ಗುಣ ಎಂತಹದ್ದು ಎಂಬುದನ್ನು. ಜಗತ್ತಿನ ಮೂಳೆ ಮೂಲೆಯಿಂದ ಅವನಿಗೆ ಹರಾಜು ಪ್ರಕ್ರಿಯೆಗೆ ಕರೆ ಬರುತ್ತದೆ. ತುಂಬಾ ಸಲೀಸಾಗಿ ಹರಾಜು ಪ್ರಕ್ರಿಯೆ ನಡೆಸಿ ಕೊಡುವ ಆತ ಒಬ್ಬ ಪುರಾತನ ಅಮೂಲ್ಯ ಕಲಾಕೃತಿಗಳ ಸಂಗ್ರಾಹಕ ಕೂಡ ಹೌದು. ಅವನದೊಂದು ಉಪಾಯವಿದೆ. ಅವನ ಗೆಳೆಯ ಬಿಲ್ಲಿಯನ್ನು ಹರಾಜಿನ ಜಾಗದಲ್ಲಿ ಗಿರಾಕಿಯಾಗಿ ಕೂರಿಸುತ್ತಾನೆ. ಹಾಗೆಯೇ ತಾನೇ ಮೌಲ್ಯ ಮಾಪನ ಮಾಡುವ ಕಲಾಕೃತಿಯನ್ನು ಅದು ಒರಿಜಿನಲ್ ಆಗಿದ್ದರೂ ಅದು ಫೋರ್ಜರಿ ಎಂದು ಪ್ರಮಾಣೀಕರಿಸುತ್ತಾನೆ. ಅದರ ಮೂಲ ಬೆಲೆಗಿಂತ ತೀರಾ ಕಡಿಮೆ ಬೆಲೆಗೆ ಹರಾಜಾಗುವಂತೆ ಮಾಡಿ ತನ್ನ ಗೆಳೆಯ ಬಿಲ್ಲಿಯ ಕೈಯಲ್ಲಿ ಕೊಳ್ಳುವಂತೆ ಮಾಡುತ್ತಾನೆ. ಆನಂತರ ಬಿಲ್ಲಿಗೆ ಒಂದಷ್ಟು ಹಣ ಬೀಸಾಕುತ್ತಾನೆ. ವರ್ಷಗಳ ಈ ಕೆಲಸದಿಂದ ಅವನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಅತ್ಯಮೂಲ್ಯ ಕಲಾಕೃತಿಗಳ ಸಂಗ್ರಹವಿದೆ. ಆದರೆ ಅದೆಲ್ಲವೂ ಅವನ ಮನೆಯ ರಹಸ್ಯಕೋಣೆಯಲ್ಲಿ ಬಂಧಿಯಾಗಿವೆ. ಅಲ್ಲಿಗೆ ಅವನನ್ನು ಬಿಟ್ಟರೆ ಬೇರೆಯವರ ಪ್ರವೇಶವೇ ಇಲ್ಲ. ಇಂತಿಪ್ಪವನಿಗೆ ಅದೊಂದು ದಿನ ಫೋನ್ ಬರುತ್ತದೆ. ಆ ಕಡೆಯಿಂದ  ನೋವಿನಿಂದ ಕೂಡಿದಂತೆ ಭಾಸವಾಗುವ ಹೆಣ್ಣು ಧ್ವನಿ ಮಾತನಾಡುತ್ತದೆ. ನಮ್ಮ ಬಂಗಲೆಯನ್ನು ನಾನು ಮಾರಾಟಮಾಡಬೇಕಾಗಿರುವುದರಿಂದಾಗಿ ಇಲ್ಲಿನ ಅತ್ಯಮೂಲ್ಯ ಕಲಾಕೃತಿಗಳನ್ನು ಮಾರಲು ನಂಗೆ ನಿಮ್ಮ ಸಹಾಯಬೇಕು, ಅದರ ಮೌಲ್ಯ ಮಾಪನ ಮಾಡಿಕೊಡಬೇಕು ಎಂಬುದು ಅದರ ಸಾರಾಂಶ. ನಮ್ಮ ನಾಯಕ ಮೊದಲಿಗೆ ಒಪ್ಪುವುದಿಲ್ಲ. ಆದರೆ ಹಿಂದೆ ಬೀಳುವ ಆಕೆ ಮತ್ತು ಆಕೆಯ ಸುಮಧುರವಾದ ಕಂಠ ಆತನನ್ನು ಆ ಕೆಲಸಕ್ಕೆ ಪ್ರೇರೇಪಿಸಿ ಅವನು ಮೌಲ್ಯ ಮಾಪನ ಮಾಡಲು ಒಪ್ಪಿಕೊಳ್ಳುತ್ತಾನೆ. ಆದರೆ ಆತ ಮೌಲ್ಯ ಮಾಪನ ಶುರು ಮಾಡಿದರೂ ಆಕೆ ಅವನಿಗೆ ಕಾಣಿಸಿಕೊಳ್ಳುವುದೇ ಇಲ್ಲ. ಬದಲಿಗೆ ಬರೀ ಆಕೆಯ ಕರೆ ಮಾತ್ರದ ಮೂಲಕ ಸಂವಹನ ನಡೆಯುತ್ತದೆ. ಇದರಿಂದ ಬೇಸತ್ತ ನಾಯಕ ಆಕೆಯನ್ನು ನೋಡಲೇಬೇಕೆಂದು ಒತ್ತಾಯಿಸಿದಾಗ ತಿಳಿಯುವ ನಿಜ ವಿಷಯ ಎಂದರೆ ಆಕೆಗೆ ಗುಂಪಿನಲ್ಲಿ ಸೇರಲು ಭಯ ಇದೆ ಎಂಬುದು. ಆಕೆ ತನ್ನ ಬಾಲ್ಯದಲ್ಲಿ ಪೋಷಕರನ್ನು ಕಳೆದುಕೊಂಡ ನಂತರ ಇಲ್ಲಿಯವರೆಗೆ ಮನೆಯಿಂದ ಹೊಸ ಬಂದೆ ಇಲ್ಲ ಎಂದಾಗ ಆಕೆಯನ್ನು ಹೇಗಾದರೂ ಮಾಡಿ ಆ ಪಂಜರದಿಂದ ಹೊರತರಲು ನಾಯಕ ನಿರ್ಧರಿಸುತ್ತಾನೆ ಅಷ್ಟೇ ಅಲ್ಲ, ಜೊತೆಗೆ ಅವನಿಗರಿವಿಲ್ಲದೆ ಪ್ರೀತಿಯಲ್ಲಿ ಬೀಳುತ್ತಾನೆ. ಆಕೆಯನ್ನು ಹೊರ ತರುತ್ತಾನೆ, ಬೆರೆಯುವಂತೆ ಮಾಡುತ್ತಾನೆ. ತನ್ನ ನೀರಸ ಏಕಮುಖವಾಗಿದ್ದ ಬದುಕಿಗೆ ಅರ್ಥ ಸಿಕ್ಕಿತು ಎಂದು ಕೊಳ್ಳುತ್ತಾನೆ. ಮುಂದೆ..
ಕೆಲವು ಚಿತ್ರಗಳ ಕತೆ ಹೇಳಲು ಖುಷಿ ಕೊಡುತ್ತದೆ. ಹಾಗೆಯೇ ಕೆಲವು ಚಿತ್ರಗಳು ನೋಡಿದರೆ ಮಜಾ ಕೊಡುತ್ತವೆ. ಆದ್ರೆ ಗಿಸಿಪಿ ತಾರ್ನೆತೊರ್ ನಿರ್ದೇಶನದ ಈ ಚಿತ್ರ ಮಾತ್ರ ನೋಡಲೂ ನೋಡಿದ ನಂತರ ಬೇರೆಯವರಿಗೆ ಆ ಚಿತ್ರದ ಕತೆ ಹೇಳಲು ಕುತೂಹಲ ಎನಿಸುತ್ತದೆ. ನಿಧಾನಕ್ಕೆ ಮಂದಗತಿಯಲ್ಲಿ ಚಿತ್ರ ಪ್ರಾರಂಭವಾಗುತ್ತದೆ. ನನಗೆ ಗಿಸಿಪಿಯ ಸಿನಿಮಾಗಳೆಂದರೆ ಹುಚ್ಚು. ಚಿತ್ರಕತೆ, ಕ್ಲೈಮಾಕ್ಸ್ ಮತ್ತು ನಿರ್ದೇಶನದಲ್ಲಿ ಆತ ನನ್ನ ಪಾಲಿಗೆ ಮಾಸ್ಟರ್. ಅವನ ಸ್ಟಾರ್ ಮೇಕರ್, ಸಿನಿಮಾ ಪ್ಯಾರಾಡಿಸೋ, ದಿ ಪ್ರೊಫೆಸರ್, ಬಾರಿಯಾ, ಮಲೀನಾ , ದಿ ಲೆಜೆಂಡ್ ಆಫ್ 1900 ಚಿತ್ರಗಳನ್ನು ಪದೇ ಪದೇ ನೋಡಿದ್ದೇನೆ. ಅದರಲ್ಲೂ ಬೆಸ್ಟ್ ಆಫರ್ ಚಿತ್ರದ ಕ್ಲೈಮಾಕ್ಸ್ ಅಂತೂ ಅದೆಷ್ಟು ಸಾರಿ ನೋಡಿದ್ದೇನೋ ನನಗೆ ಗೊತ್ತಿಲ್ಲ. ಚಿತ್ರ ನೋಡುತ್ತಾ ಸಾಗಿದಂತೆ ಅದು ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುವ ಪರಿ ಇದೆಯಲ್ಲ ಅದು ಅನನ್ಯ. ಅದರಲ್ಲೂ ಹಿನ್ನೆಲೆ ಸಂಗೀತ ಕ್ಲೈಮಾಕ್ಸ್ ನಲ್ಲಿನ ದೃಶ್ಯದ ಹಿನ್ನೆಲೆಯಲ್ಲಿ ಬರುವ ಸಂಗೀತವಂತೂ ನನಗೆ ಹುಚ್ಚೆ ಹಿಡಿಸಿಬಿಟ್ಟಿದೆ. ಇನ್ನು ಅಭಿನಯದಲ್ಲಿರುವ ಪ್ರಮುಖ ನಾಲ್ಕು ಪಾತ್ರಗಳು ಮನಸ್ಸಿನಲ್ಲಿ ನಿಲ್ಲುತ್ತದೆ.
ಚಿತ್ರ ನೋಡಿದ ನಂತರ ನನಗನ್ನಿಸಿದ್ದು ಇದು ಗಿಸಿಪಿಯ ಬೆಸ್ಟ್ ಆಫರ್ ಗಳಲ್ಲೊಂದು ಎಂದು. ಒಮ್ಮೆ ನೋಡಲೇ ಬೇಕಾದ ಚಿತ್ರ.

No comments:

Post a Comment