Sunday, February 22, 2015

ಬರೆದದ್ದು ನೋಡಿದ್ದು...


ಏಕಾಏಕಿ ಬ್ಯುಸಿಯಾಗಿಬಿಟ್ಟೆ ನೀನು ಎನ್ನುವವರೆಗೆ ನನಗೆ ಮನವರಿಕೆಯಾಗಿರಲೇ ಇಲ್ಲ ನೋಡಿ. ಹೌದು. ಸಿನಿಮಾ ನೋಡುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಕನ್ನಡ ಸೇರಿದಂತೆ ವಾರಕ್ಕೆ ಸರಾಸರಿ ಎಂಟು ಚಿತ್ರಗಳನ್ನು ನೋಡುತ್ತೇನೆ. ನೋಡಿದ ಚಿತ್ರಗಳ ಬಗ್ಗೆ ಸ್ವಲ್ಪ ಟಿಪ್ಪಣಿ, ಒಂದು ಬರಹ, ಗೆಳೆಯರ ಜೊತೆ ಒಂದು ಚರ್ಚೆ ಮಾಡುತ್ತೇನೆ. ಹಾಗೆಯೇ ಓದಿದ ಪುಸ್ತಕಗಳ ಸಂಖ್ಯೆಯೂ ಸಮಾಧಾನಕರವಾಗಿದೆ. ಆದರೇಕೋ ಬರೆಯುವುದು. ನಿಲ್ ...
 ಅದೇ ಬೇಸರದ ಸಂಗತಿ ಎನಿಸಿದ್ದು. ಈ ವರ್ಷದ ಆರಂಭದಲ್ಲಿ ಮತ್ತೆ ನಿಗದಿತವಾಗಿ ಬರೆಯಲೇ ಬೇಕು ಎಂದುಕೊಂಡೆನಾದರೂ ಅದೇಕೋ ಏನೋ ಬರೆಯಲು ಸಾಧ್ಯವಾಗಲೇ ಇಲ್ಲ. ನನ್ನ ಸಿನಿಮಾದ ಸ್ಕ್ರಿಪ್ಟ್, ಬೇರೆ ಸಿನೆಮಾಗಳ ತಂಡದ ಜೊತೆ ಚರ್ಚೆ, ಓಡಾಟ ಹೀಗೆ ಇದರಲ್ಲಿಯೇ ಸಮಯ ಹೋಗಿ ಬಿಡುತ್ತಿದೆ ಎನಿಸುತ್ತಿತ್ತು. ಆದರೆ ಮೊನ್ನೆ ಸಿಕ್ಕ ಗೆಳೆಯ ಹಾಗಂದದ್ದೇ ಸುಮ್ಮನೆ ಕುಳಿತು ಯೋಚಿಸಿದೆ. ನನಗೆ ಆಗ ಮನವರಿಕೆಯಾದದ್ದು ಏನೆಂದರೆ ನಾನೆಂತಹ ಭ್ರಾಮಕ ಲೋಕದಲ್ಲಿ ಬದುಕುತ್ತಿದ್ದೆ ಎಂದು.
ಹೌದು. ಸುಮ್ಮನೆ ಗಮನಿಸಿದರೆ ಅಥವಾ ನನ್ನದೇ ಬದುಕಿನ ಮಜಲುಗಳನ್ನು ಲೆಕ್ಕ ಹಾಕಿ ನೋಡಿದರೆ ಫಲಿತಾಂಶ ಏನೂ ಇಲ್ಲ. ಇಷ್ಟಕ್ಕೂ ಬ್ಯುಸಿಯಾಗಿರುವ ನಾನು ಮಾಡಿರುವ ಕೆಲಸವಾಗಲಿ, ಅದರ ಸಂಪಾದನೆಯಾಗಲಿ ಶೂನ್ಯ. ಹಾಗಾದರೆ ನಾನು ಯಾವುದಕ್ಕೆ ಬ್ಯುಸಿಯಾಗಿದ್ದೆ ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ. ನನ್ನ ಎದುರಿನ ನನ್ನನ್ನು ಆವರಿಸಿದ್ದ ಸೋಮಾರಿತನದ ಪರದೆ ಹರಿದುಬಿತ್ತು. ಇರಲಿ ಬಿಡಿ.
ನೋಡಿದ ಸಿನೆಮಕ್ಕಿಂತ ಓದಿದ್ದು ತುಂಬಾ ನೆನಪಿಗೆ ಬಂದು ಬಿಟ್ಟಿತು. ತುಂಬಾ ಜನ ಮೆಸೇಜ್ ಮಾಡಿದಾಗಲೂ ಅದಕ್ಕೆ ಪ್ರತಿಕ್ರಿಯಿಸಬೇಕು ಎಂದುಕೊಂಡರೂ ಅದೆಲ್ಲೋ ಕಾಡುಹರಟೆಯಲ್ಲಿ ಸಮಯ ಹೋಗಿಬಿಡುತ್ತಿತ್ತು. ಈಗ ತಹಬದಿಗೆ ತಂದುಕೊಂಡೆ.
ವರ್ಷಾರಂಭದಿಂದ ಇಲ್ಲಿಯವರೆಗೆ ನಾನು ನೋಡಿದ ಚಿತ್ರಗಳು ಪಟ್ಟಿ ನನಗೆ ಗೊತ್ತಿದೆ. ಅದರಲ್ಲೂ ಕನ್ನಡ ಚಿತ್ರಗಳ ಬಗ್ಗೆ ಒಂದು ಬರವಣಿಗೆ ಬರೆದುಬಿಟ್ಟಿದ್ದೇನೆ. ಆದರೆ ಇತರ ಚಿತ್ರಗಳ ಬಗ್ಗೆ ನಾನು ಏನೂ ಬರೆಯಲೇ ಇಲ್ಲ. 
ವರ್ಷದ ಆರಂಭದಲ್ಲಿ ನಾನು ಮೊದಲು ನೋಡಿದ ಹಾಲಿವುಡ್ ಚಿತ್ರ ಟೇಕನ್-3. ಅದೇಕೋ ಏನೋ ಅದರಲ್ಲಿ ಹೊಸದೇನೂ ಇರುವುದಿಲ್ಲ ಎನಿಸಿದರೂ ಸಿನಿಮಾವನ್ನು ಒಮ್ಮೆ ನೋಡಲೇ ಬೇಕು ಎನಿಸಿಬಿಡುತ್ತದೆ. ನನಗೆ ಫೈಟಿಂಗ್ ಇಷ್ಟ. ದುಷ್ಟ ಸಂಹಾರ ಯಾವತ್ತಿಗೂ ಇಷ್ಟ. ಹಾಗಾಗಿಯೇ ಟೇಕನ್ ನಂತಹ ಚಿತ್ರಗಳನ್ನು ಮುಗಿಬಿದ್ದು ನೋಡುತ್ತೇನೆ. ಸುಮ್ಮನೆ ಕುಳಿತು ಪರದೆಗೆ ಕಣ್ಣನ್ನೇ ಪೇಸ್ಟ್ ಮಾಡುವಂತಹ ಚಿತ್ರವನ್ನು ನೋಡಿ ತುಂಬಾ ಸಮಯವೇ ಅಗಿಹೋಗಿದೆಯೇನೋ? ಟೇಕನ್ -3 ಮತ್ತೊಂದು ಹೊಡಿಬಡಿ ಚಿತ್ರ. ಮೊದಲ ಭಾಗದಲ್ಲಿ ಮಗಳನ್ನು ಹೊತ್ತೊಯ್ದರು, ಬಿಡಿಸಿಕೊಂಡು ಬಂದ ನೀಸನ್,. ಎರಡನೆಯ ಭಾಗದಲ್ಲೂ ಹೊತ್ತೊಯ್ದರು ಮತ್ತೆ ಬಿಡಿಸಿಕೊಂಡು ಬಂದದ್ದಾಯ್ತು.. ಹಾಗಂತ ಮೂರನೆಯ ಭಾಗದಲ್ಲೂ ಮಗಳನ್ನು ಹೊತ್ತೊಯ್ಯುವರಾ? ಇಲ್ಲ. ಈ ಸಾರಿ ಹೆಂಡತಿಯನ್ನು ಕೊಂದು ಅದನ್ನು ಇವನ ತಲೆಯ ಮೇಲೆಯೇ ಹಾಕಿ ಮಜಾ ತೆಗೆದುಕೊಳ್ಳುತ್ತಾರೆ. ಈಗ ನೀಸನ್ ಗೆ ಎರೆಡೆರಡು ಕೆಲಸ. ಕೊಲೆಪಾತಕಿಯನ್ನು ಹಿಡಿಯುವುದು, ಪೋಲಿಸರಿಂದ ತಪ್ಪಿಸಿಕೊಳ್ಳುವುದು.... ಮಾಡದೆ ಬಿಡುತ್ತಾನಾ?
ಸಿನಿಮಾ ನಮ್ಮನ್ನು  ನೋಡಿಸಿಕೊಂಡು ನೀಸನ್ ನನ್ನು ಓಡಿಸಿಕೊಂಡು ಹೋಗುತ್ತದೆ. ಪ್ರಾರಂಭವಾದರೆ ಬೋರ್ ಎನಿಸುವ ಮೊಮೆಂಟ್ ಇಲ್ಲ. ಅಲ್ಲಿ ಹೋದ , ಇಲ್ಲಿ ಸಿಕ್ಕಿದ ಹೊಡಿ ಬಡಿ.. ಕಡೆಯವರೆಗೂ .. ಬೋರ್ ಆದರೆ ಒಮ್ಮೆ ನೋಡಿ..
ಜಾಸನ್ ಸ್ಟಾತಂ ಅಭಿನಯದ ವೈಲ್ಡ್ ಕಾರ್ಡ್ ಚಿತ್ರದಲ್ಲಿ ಎರಡೇ ಎರಡು ಹೊಡೆದಾಟ ಬಿಟ್ಟರೆ ಏನೂ ಮೆಚ್ಚತಕ್ಕಂತಹ ಅಂಶವಿಲ್ಲ. ಅದೇನೋ. ಇತ್ತೀಚಿಗೆ ಎಲ್ಲಾ ಹೊಡೆದಾಟ ಚಾಕ್ಯಚಕ್ಯತೆ ಇದ್ದರೂ ವ್ಯರ್ಥವಾಗುತ್ತಿರುವ ನಟ ಎಂದರೆ ಈ ಜಾಸನ್. ಜೆಟ್ ಲಿ, ಸ್ಟಾಲನ್, ಅರ್ನಾಲ್ಡ್  ಮುಂತಾದ ಸಾಹಸಿ ನಟರುಗಳಷ್ಟೇ ಸಮರ್ಥನಾದ ಈ ನಟನನ್ನು ಸರಿಯಾಗಿ ಬಳಸಿಕೊಳ್ಳದೆ ಇರುವುದು ಅದೂ ಹಾಲಿವುಡ್ ನಲ್ಲಿ ವಿಪರ್ಯಾಸ. ಚಿರತೆಯಂತೆ ಜಿಗಿಯುವ ತೀಕ್ಷಣ ಕಣ್ಣುಗಳು ಈ ನಟಬ್ನ ಚಿತ್ರ ಬರುತ್ತವೆ, ಆದರೆ ಹಿಡಿತವಿಲ್ಲದ ಕತೆ ಚಿತ್ರಕತೆಯಿಂದಾಗಿ ನೀರಸ ಎನಿಸುತ್ತವೆ.
ಈ ಸಾರಿಯ ಆಸ್ಕರ್ ಕಣದಲ್ಲಿನ ಚಿತ್ರಗಳಲ್ಲಿ ಗ್ರಾಂಡ್ ಬುಡಾಫೆಸ್ಟ್ ಹೋಟೆಲ್, ಬರ್ಡ್ ಮ್ಯಾನ್, ಬಾಯ್ ಹುಡ್ ಮುಂತಾದ ಸುಮಾರಷ್ಟು ಚಿತ್ರಗಳನ್ನು ನೋಡಿದೆ. ಅವುಗಳಲ್ಲಿ ಯಾವ್ಯಾವುದು ಆಸ್ಕರ್ ಪಡೆಯಬಹುದು ಎನ್ನುವ ಕುತೂಹಲವಿದೆ.

No comments:

Post a Comment