Saturday, December 7, 2013

ಕೆರಂಡಿರು-ಒಂದು ಬಂಧಿಖಾನೆಯ ಕಥೆ.

ನಿನ್ನೆ ದ್ಯಾವ್ರು ಚಿತ್ರ ನೋಡುತ್ತಿದ್ದಾಗ ತಟ್ಟನೆ ನೆನೆಪಾದದ್ದು ಈ ಕೆರಂಡಿರು ಚಿತ್ರ. 2003 ರಲ್ಲಿ ಬಿಡುಗಡೆಯಾದ ಈ ಚಿತ್ರ ನೈಜ ಕಥೆಯಾಧಾರಿತ ಚಿತ್ರ. ಅದೊಂದು ದೊಡ್ಡ ಬಂಧಿಖಾನೆ.ಲ್ಯಾಟಿನ್ ಅಮೆರಿಕಾದಲ್ಲಿರುವ ಆ ಬಂಧಿಖಾನೆಯಲ್ಲಿ ನಡೆಯುವ ಕಥೆಯಾಧಾರಿಸಿದ ಕೆರಂಡಿರು ಬ್ರೆಜಿಲ್ ದೇಶದ ಚಲನಚಿತ್ರ.
1992 ರಲ್ಲಿ ನಡೆದ ಕೆರಂಡಿರು ಮಾರಣ ಹೋಮವನ್ನು ಚಿತ್ರದ ಅಂತ್ಯಕ್ಕೆ ಬುದ್ದಿವಂತಿಕೆಯಿಂದ ಬಳಸಿಕೊಂಡಿರುವ ಈ ಚಿತ್ರದ
ಕಥೆಯ ನಿರೂಪಣೆ ಒಬ್ಬ ವೈದ್ಯನದು. ವೈದ್ಯನೊಬ್ಬ ಬಂಧಿಗಳ ವೈದ್ಯಕೀಯ ತಪಾಸಣೆಗೆ ಬರುತ್ತಾನೆ. ಅಲ್ಲಿನ ಖೈದಿಗಳಲ್ಲಿ ಏಡ್ಸ್ ರೋಗವಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ಇದ್ದವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಬರುವ ವೈದ್ಯ ಅಲ್ಲಿನ ವಿದ್ಯಮಾನಗಳನ್ನು ಗಮನಿಸಿತ್ತಾ ಹೋಗುತ್ತಾನೆ. ಪ್ರಾಣಿಗಳಿಗಿಂತಲೂ ಹೀನಾಯವಾಗಿ ಬಂಧಿಗಳನ್ನು ನಡೆಸಿಕೊಳ್ಳಲಾಗುತ್ತಿರುತ್ತದೆ ಅಲ್ಲಿ.  ಹಾಗಾಗಿ ಖೈದಿಗಳೆಲ್ಲಾ ಮಾನವತ್ವವನ್ನೇ ಮರೆತ ಮೃಗಗಳಂತೆ ಆಗಿರುತ್ತಾರೆ.ಅವರುಗಳನ್ನು ಮೋಡ ಮೊದಲಿಗೆ ಪರೀಕ್ಷಿಸಲು ವೈದ್ಯ ಬಹಳಷ್ಟು ತರಾಸು ಪಡಬೇಕಾಗುತ್ತದೆ. ಅದರಲ್ಲೂ ಕೆಲವರಂತೂ ನರರೂಪಿ ರಾಕ್ಷಸರಂತೆ ವರ್ತಿಸುತ್ತಾರೆ. ಮನೆ ಬಿಟ್ಟು , ಕುಟುಂಬದವರನ್ನು ಬಿಟ್ಟು ವರ್ಷಗಟ್ಟಲೆ ಕಳೆದದ್ದರಿಂದ ಅವರಲ್ಲಿ ನೋವು ಮತ್ತು ಹತಾಶೆ ಹೆಪ್ಪು ಗಟ್ಟಿರುವುದನ್ನು ವೈದ್ಯ ಮನಗಾಣುತ್ತಾನೆ.ಅವರಲ್ಲಿನ ಮನುಷ್ಯತ್ವವನ್ನು ಹೊರತಂದು ಅವರನ್ನೂ ಮನುಷ್ಯರನ್ನಾಗಿ ಮಾಡುವ ಕೆಲಸಕ್ಕೆ ಕೈ ಹಾಕುತ್ತಾನೆ. ಆತನ ಪ್ರಯತ್ನ ಯಶಸ್ವಿಯಾಗುತ್ತದಾ..?
1992 ರಲ್ಲಿ ಜೈಲಿನೊಳಗೆ ದಂಗೆಯೆದ್ದಾಗ ಪೋಲಿಸರು ಸಿಕ್ಕ ಸಿಕ್ಕವರನ್ನು ಗುಂಡಿಟ್ಟು ಕೊಂದು ಹಾಕಿದ್ದರು.ಸುಮಾರು ನೂರಾ ಹನ್ನೊಂದು ಜನರ ಮಾರಣ ಹೋಮ ನಡೆದ ಘಟನೆ ಅದು. ಇಡೀ ಬ್ರೆಜಿಲ್ ಇತಿಹಾಸದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಮಾನವೀಯ ಸರ್ಕಾರಿ ಕಾರ್ಯ ಎಂದೇ ಕುಖ್ಯಾತಿ ಪಡೆದ ಘಟನೆಯನ್ನು ಯಥಾವತ್ತಾಗಿ ಚಿತ್ರೀಸಿರುವ ಪರಿ ಅನನ್ಯ.
ಮನೆಯವರನ್ನೇ ಕಾಣದ ಖೈದಿಗಳಿಗೆ ಅವರ ಕುಟುಂಬದವರನ್ನು ಬೇಟಿ ಮಾಡುವ ಅವಕಾಶ ಕೊಟ್ಟಾಗ ಅವರ ಭಾವನೆಗಳನ್ನೂ ನಿರ್ದೇಶಕ ಹಿಡಿದಿಟ್ಟಿರುವ ಪರಿ ಮಾತ್ರ ಅದ್ಭುತ. ಕಣ್ಣಂಚಲ್ಲಿ ಒಂದು ಹನಿ ನೀರು ತರಿಸುವ ದೃಶ್ಯವದು. ಇಡೀ ಚಿತ್ರದ ತುಂಬಾ ಬರೀ ಗಂಡಸರೇ. ಅವರ ಚಿತ್ರ ವಿಚಿತ್ರ ದುರಂತ ಕಥೆಗಳನ್ನು ಎಲ್ಲಿಯೂ ವೈಭವೀಕರಿಸದೆ ಎಳೆಯದೆ ಚುಟುಕಾಗಿ ಹೇಳಿ ಬಿಡುವ ನಿರ್ದೇಶಕ ಆನಂತರ ಜೈಲಿನಲ್ಲಿನ ಅವರ ಬದುಕನ್ನು ಕಟ್ಟಿ ಕೊಟ್ಟ ಪರಿ ಪ್ರಶಂಸೆಗೆ ಅರ್ಹವಾದದ್ದು. ಒಮ್ಮೆ ನೋಡಲೇ ಬೇಕಾದ ಚಿತ್ರಗಳ ಪಟ್ಟಿಗೆ ಸೇರಿದ ಕೆರಂಡಿರು  ಚಿತ್ರದ ನಿರ್ದೇಶಕ ಹೆಕ್ಟರ್ ಬೆಬೇನ್ಕೋ.
ದ್ಯಾವ್ರೆ ಚಿತ್ರದ ವಿಮರ್ಶೆ: click here

No comments:

Post a Comment