Thursday, December 5, 2013

ಟ್ರೆಂಡ್ ಸೆಟ್ಟರ್ ಗಳು ಮತ್ತು ಆನಂತರದ ಪರಿಣಾಮಗಳು..

ಯಾವುದೇ ಭಾಷೆಯಲ್ಲಿಯೇ ಆಗಲಿ ಟ್ರೆಂಡ್ ಸೆಟ್ಟರ್ ಚಿತ್ರಗಳು ಚಿತ್ರರಂಗದ ದಿಕ್ಕನ್ನು ಬದಲಾಯಿಸುತ್ತವೆ. ಅಲ್ಲದೆ ಮಾರುಕಟ್ಟೆಯನ್ನು ಪ್ರೇಕ್ಷಕರನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತವೆ. ಅಲ್ಲದೆ ಒಂದು ರೀತಿಯಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಚಿತ್ರರಂಗವನ್ನು ಇದ್ದಕ್ಕಿದ್ದಂತೆ ಶರವೇಗದಲ್ಲಿ ಸಾಗುವಂತೆ ಮಾಡುವ ಚೈತನ್ಯ ತುಂಬುತ್ತವೆ. ಹಾಗಾಗಿಯೇ ಟ್ರೆಂಡ್ ಸೆಟ್ಟರ್ ಗಳು ಚಿತ್ರರಂಗಕ್ಕೆ ಬೇಕೇ ಬೇಕು.
ಓಂ ಚಿತ್ರ ಬರುವವರೆಗೆ ಭೂಗತ ಲೋಕದ ಚಿತ್ರಣದ ರೀತಿಯೇ ಬೇರೆಯಾಗಿತ್ತು. ಹಾಗೆ ಹೊಡೆದಾಡಲು ಬಳಸುವ ಆಯುಧಗಳೂ ಕೂಡ. ಆದರೆ ಓಂ ಬಂದಿತು ನೋಡಿ, ಆನಂತರ ಚಿತ್ರರಂಗದಲ್ಲಿ ಸ್ವಲ್ಪ ದಿನಗಳ ಉದ್ದನೆಯ ಲಾಂಗಿನದ್ದೆ ಕಾರುಬಾರು.ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಬರಬೇಕು ಎಂದುಕೊಳ್ಳುವ ಕಲಾಸಕ್ತರಂತೂ ಥೇಟು ಶಿವಣ್ಣನಂತೆ ಕೈಯಲ್ಲಿ ಲಾಂಗು ಹಿಡಿಡು ತಲೆಯನ್ನು ಒಂದು ಕಡೆಗೆ ವಾಲಿಸಿ ಅಮಲಿನಲ್ಲಿ ನಿಂತುಕೊಳ್ಳುವಂತೆ ನಿಂತು ಕೊಳ್ಳುವ ಪೋಸು ಕೊಡತೊಡಗಿದರು. ಚಿತ್ರದಲ್ಲೂ ಅಷ್ಟೇ ಎಲ್ಲಿಂದಲೂ ಬೆಂಗಳೂರಿಗೆ ಬಂದರೆ, ಅವನು ರೌಡಿಯಾಗುತ್ತಿದ್ದ, ಮಾತೆತ್ತಿದರೆ ಲಾಂಗು ಎತ್ತುತ್ತಿದ್ದ. ಕನ್ನಡದ ಮಟ್ಟಿಗಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸತನವನ್ನ ಕೊಟ್ಟ ಓಂ, ಹಿಂದಿಯ ವರ್ಮಾರ ಸತ್ಯ ಚಿತ್ರಕ್ಕೆ ಸ್ಫೂರ್ತಿಯಾದ ಓಂ, ಆನಂತರ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಕಳಪೆ ಚಿತ್ರಗಳಿಗೂ ಪ್ರೇರಕವಾದದ್ದು  ವಿಷಾದನೀಯ ಸಂಗತಿ ಎನ್ನಬಹುದು.
ಹಾಗೆ ನೋಡಿದರೆ ಮುಂಗಾರು ಮಳೆ ಚಿತ್ರದ್ದು ಅದೇ ಕಥೆ. ಮೊದಲೆಲ್ಲಾ ಸಂಭಾಷಣೆ ಎಂದರೆ ಅದರ ಲಯವೇ ಬೇರೆ ಇರುತ್ತಿತ್ತು. ಹಾಸ್ಯಮಯವಾಗಿದ್ದರೆ ಚಿತ್ರದಲ್ಲಿನ ಹಾಸ್ಯನಟ ಮಾತ್ರವೇ ಹೇಳುತಿದ್ದ, ನಗಿಸುತ್ತಿದ್ದ. ಆದರೆ ಮುಂಗಾರುಮಳೆಯಲ್ಲಿನ ಪ್ರೇಮಿ ಪ್ರೀತಂ ಪಾತ್ರ ದ ಹಾಗೆ ಚಿನಕುರುಳಿ ಮಾತುಗಳು, ಉಡಾಫೆಯ ಮಾತುಗಳು ಬಂದಿರಲಿಲ್ಲ. ಮುಂಗಾರು ಮಳೆ ಬಂದದ್ದೆ ಜನರಲ್ಲಿ ಹೊಸತನ ಕಂಡಂತಾಯಿತು. ನಿಲ್ಲಿಸದೆ ಪುಂಖಾನುಪುಂಖವಾಗಿ ಮಾತನಾಡುವ ಪ್ರೀತಂ ಮಾತುಗಳೂ ಇಷ್ಟವಾದವಷ್ಟೇ ಅಲ್ಲ, ಅದನೆಲ್ಲಾ ಬಾಯಿಪಾಠ ಮಾಡುವಷ್ಟು ಪ್ರಭಾವ ಬೀರಿತು.ಚಿತ್ರರಂಗದ ದೆಸೆ ಬದಲಿಸಿದ ಮಳೆ, ಬೇರೆ ಭಾಷೆಯವರು ನಮ್ಮ ಕಡೆಗೆ ನೋಡುವಂತೆ ಮಾಡಿತು. ವಿದೇಶದಲ್ಲಿನ ನಮ್ಮವರೂ ಎದ್ದು ಬಿದ್ದು ಸಿನಿಮಾ ನೋಡುವಂತೆ ಮಾಡಿತು. ಒಟ್ಟಿನಲ್ಲಿ ಒಂದು ಸಂಚಲನವನ್ನು ಮುಂಗಾರುಮಳೆ ಹುಟ್ಟಿ ಹಾಕಿತ್ತು ಕೂಡ. ಆದರೆ ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರೇಮಕಥೆಯ ಚಿತ್ರಗಳು ನಿರ್ಮಾಣವಾದವು. ಹಾಗೆ ಹೊಸಬರು ನಾ ಮುಂದು ತಾ ಮುಂದು ಎನ್ನುವಂತೆ ಪಾದಾರ್ಪಣೆ ಮಾಡಿದರು. ಅವುಗಳಲ್ಲಿ ಇದ್ದ ಸಾಮಾನ್ಯ ಅಂಶವೆಂದರೆ ನಾಯಕ ಉಡಾಫೆಯಾಗಿ ತಮಾಷೆಯಾಗಿ ಮಾತನಾಡುತ್ತಿದ್ದ, ಹಾಗೆ ಪ್ರೀತಿಸುತ್ತಿದ್ದ.ಒಂದು ಸರಳವಾದ ಪ್ರೇಮಕಥೆ ಹಿಡಿದು ಅದಕ್ಕೆ ಮಾತುಗಳನ್ನು ಪೋಣಿಸಿ ಚಿತ್ರ ಮಾಡಲು ಎಲ್ಲಾ ಹೊಸಬರೂ ಮುಂದಾದರು.
ದಂಡುಪಾಳ್ಯದ್ದು ಅದೇ ಕಥೆ. ಒಂದು ಸರಣಿ ಕೊಲೆಗಾರರ ಗುಂಪು ಅಸಹ್ಯವಾಗಿ ಅತ್ಯಾಚಾರ ಮಾಡುತ್ತಾ ಕೊಲೆ ಮಾಡುತ್ತಾ ಸಾಗಿದ್ದು ಅದನ್ನು ಚಿತ್ರೀಕರಣ ಮಾಡಿದ್ದು ಅದು ಗೆದ್ದದ್ದು ಬೇರೆ ಮಾತು. ಆನಂತರ ಅದೇ ತೆರೆನಾದ ಒಂದಷ್ಟು ಚಿತ್ರಗಳು ಬಂದವು.
ಅದಾದ ನಂತರ ಬಂದದ್ದು ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ. ಚಿತ್ರರಂಗದ ಮಟ್ಟಿಗೆ ಅತೀ ದೀರ್ಘವಾದ ಪ್ರೊಮೊ ವನ್ನು ಹೊರತಂದಿದ್ದು ಸಿಂಪಲ್ ಚಿತ್ರತಂಡ ಎನ್ನಬಹುದು. ಆದರೆ ಪ್ರೋಮೋದ ಎಂಟುನಿಮಿಷಗಳಲ್ಲಿ ಪೋಲಿತನವಿತ್ತು, ಪ್ರೀತಿಯಿತ್ತು, ಕಚಗುಳಿಯಿಕ್ಕುವ ಮಾತುಗಳಿದ್ದವು, ಸ್ವಲ್ಪ ವೆ ಸ್ವಲ್ಪ ದ್ವಂದ್ವಾರ್ಥದ ಸಂಭಾಷನೆಯಿತ್ತು. ನಿಜಕ್ಕೂ ಈವತ್ತಿಗೂ ಆ ಪ್ರೋಮೊದಲ್ಲಿ ದ್ವಂದ್ವಾರ್ಥದ ಸಂಭಾಷಣೆಯೇ ಹೈ ಲೈಟ್ ಆದರೂ ಅದರಲ್ಲಿನ ಲಯ ಸೂಪರ್. ಹಾಗಾಗಿಯೇ ಅದು ಎಲ್ಲರನ್ನೂ ಸೆಳೆದಿತ್ತು.
ಆಮೇಲೆ ಶುರುವಾಯಿತು ನೋಡಿ ಪ್ರೋಮೊಗಳ ಅಬ್ಬರ. ಮೊನ್ನೆ ಹೀಗೆ ಯುಟ್ಯೂಬ್ನಲ್ಲಿ ಕನ್ನಡದ ಹಲವಾರು ಹೊಸಬರ ಪ್ರೊಮೊ ನೋಡಿ ಬೇಸರವಾಯಿತು. ಸುಮಾರು ಹತ್ತು ನಿಮಿಷಗಳ ಪ್ರೊಮೊ , ಒಂಭತ್ತು ನಿಮಿಷಗಳ , ಮೂರು ನಿಮಿಷಗಳ ಪ್ರೊಮೊ ಐದು ನಿಮಿಶದ್ದು ಪ್ರೋಮೋಗಳನ್ನು ನೋಡಿದೆ. ಆನಂತರ ನೋಡಲು ಹೋಗಲಿಲ್ಲ. ಕೆಲವು ಪ್ರೋಮೋಗಳಂತೂ ಅಸಹ್ಯದ ಪರಮಾವಧಿ ಎನ್ನಬಹುದು. ಪ್ರತಿ ಸಂಭಾಷಣೆಯೂ ಸೊಂಟದ ಕೆಳಗೆ ಸುತ್ತುತ್ತದೆ. ಸೆಕ್ಸ್ ಅದರ ಮುಖ್ಯ ಅಂಶವಾಗಿದೆ. ಹೆಣ್ಣು ಮಕ್ಕಳಿಗೆ ಕೇಳಲಾಗದ ಮಾತುಗಳನ್ನು ಅವರ ಕೈಯಲ್ಲೇ ಹೇಳಿಸಿದ್ದಾರೆ ನಿರ್ದೇಶಕ ಮಹಾಶಯರು. ಪೋಲಿ, ನಿಷಿದ್ಧ ಪುಸ್ತಕಗಳಲ್ಲಿ ಇರುವ, ಎಸ ಎಂ ಎಸ್ ನಲ್ಲಿ ಹರಿದಾಡುವ  ಪೋಲಿ ಜೋಕುಗಳೆಲ್ಲಾ ದೃಶ್ಯ ರೂಪ ತಾಳಿವೆ. 
ಆಗ ಅನಿಸಿದ್ದು ನನಗೆ ಸಿಂಪಲ್ ಪರಿಣಾಮ ದುಷ್ಪರಿಣಾಮವಾಯಿತಾ? ಎಂದು. ಹೌದಲ್ಲ.ಎಲ್ಲರೂ ಅದನ್ನೇ ಅನುಕರಿಸುತ್ತಿದ್ದಾರೆ. ಅದರ ಹಿಂದಿರುವ ಸೊಗಸನ್ನು ತಲೆ ಕೆಡಿಸಿಕೊಳ್ಳದೆ ಬರೀ ದ್ವಂದ್ವಾರ್ಥವೆ ಮುಖ್ಯ ಎನಿಸಿದ್ದು ಯಾಕೆ..? ಯಾರಾದ್ರೂ ಕನ್ನಡದ ಯುವ ನಿರ್ದೇಶಕರ ಪ್ರೋಮೋಗಳನ್ನು ನೋಡಲು ಸುಮ್ಮನೆ ಯು ಟ್ಯೂಬ್ ತೆರೆದರೆ ಕಿವಿ ಮುಚ್ಚಿಕೊಳ್ಳ ಬೇಕಾಗುತ್ತದೆ. ಒಬ್ಬರೇ ಕುಳಿತು ಕೇಳಲಿಕ್ಕೂ  ಅಸಹ್ಯವಾಗುವ ಅಂತಹದ್ದನ್ನು ಕಲ್ಪಿಸಿಕೊಳ್ಳುವ ಯುವ ನಿರ್ದೇಶಕರ ಆಶಯ ಅಭಿರುಚಿಗಳ ಬಗ್ಗೆ ಅನುಮಾನ ಮೂಡಿಸುತ್ತದೆ ಅಷ್ಟೇ ಅಲ್ಲ, ಚಿತ್ರರಂಗದ ಮುಂದಿನ ದೆಸೆಯ ಬಗ್ಗೆ ಬೇಸರ ಉಂಟು ಮಾಡುತ್ತದೆ. ಒಂದು ಚಿತ್ರ, ಅದರ ಶೈಲಿಯನ್ನು ಸ್ಫೂರ್ತಿಯಾಗಿಟ್ಟು ಕೊಳ್ಳುವುದು ಒಳ್ಳೆಯದೇ. ಆದರೆ ಅದರ ಹಿಂದಿನ ಆತ್ಮವನ್ನು ಅದ್ಯಯನ ಮಾಡಬೇಕಾಗುತ್ತದೆ. ಸಿಂಪಲ್, ಓಂ, ಎ,ಮುಂಗಾರು ಮಳೆ ಚಿತ್ರಗಳಲ್ಲಿ ಅದುವರೆಗೂ ಇರದಿದ್ದ ಹೊಸತನವಿದ್ದದ್ದರಿಂದ ಅವುಗಳು ವಿಶೇಷವಾದದ್ದು ಎನಿಸಿದ್ದು ಮತ್ತು ಹೆಸರು ಗಳಿಸಿದ್ದು. ಮತ್ತೆ ಅದನ್ನೇ ಪುನರಾವರ್ತನೆ ಮಾಡಿದರೆ ಅದು ಕಾಪಿಯಾಗುತ್ತದೆಯೇ ಹೊರತು ಹೊಸತಾಗುವುದಿಲ್ಲ ಎಂಬುದನ್ನು ಅನುಕರಿಸುವವರು ಅರ್ಥ ಮಾಡಿಕೊಳ್ಳಬೇಕು. 
ಒಂದು ಸಿನೆಮಾಕ್ಕೆ ಕಥೆ-ಚಿತ್ರಕಥೆ ಮುಖ್ಯ ಅಂಶಗಳು. ಸಂಭಾಷಣೆ ಮುಂತಾದವುಗಳು ಪೂರಕ ಅಂಶಗಳು. ಇನ್ನೂ ನಿರೂಪಣ ಶೈಲಿ ಮುಂತಾದವುಗಳು ಹೊಸತನ ತರುವ ಆಲೋಚನೆಗಳು. ಎಲ್ಲದಕ್ಕೂ ಅನುಸರಿಸುವಿಕೆಯೇ ಮಾರ್ಗವಲ್ಲ ಎಂಬುದನ್ನು ನಮ್ಮ ಚಿತ್ರಕರ್ಮಿಗಳು ಅರ್ಥ ಮಾಡಿಕೊಳ್ಳಬೇಕು.
ಇಲ್ಲವಾದಲ್ಲಿ ಇನ್ನೂ ಅದೆಷ್ಟು ಅಸಹ್ಯಗಳ ಪದಗಳನ್ನು ಗಂಡು ಹೆಣ್ಣು ದೊಡ್ಡವರು ಚಿಕ್ಕವರು ಎನ್ನದೆ ಅವರ ಬಾಯಿಗಳಿಂದ ಕೇಳಬೇಕಾಗುತ್ತದೋ..ಯಾಕೆಂದರೆ ಯೂ ಟ್ಯೂಬ್ ಎನ್ನುವ ತೊಟ್ಟಿಗೆ ಯಾರು ಏನು ಬೇಕಾದರೂ ಹಾಕಬಹುದಲ್ಲ ಅದಕ್ಕೆ. ಮೊನ್ನೆ ಲೇಖಕ ಜೋಗಿಯವರು ಒಂದು ಮಾತು ಹೇಳಿದ್ದರು. ಯೂ ಟ್ಯೂಬ್ ಎನ್ನುವುದು ಒಂದು ಕಸದ ತೊಟ್ಟಿಯ ಹಾಗೆ...ಅದರಲ್ಲಿ ಒಳ್ಳೆಯದಕ್ಕಿಂತ ಅಸಹ್ಯಗಳೇ ಜಾಸ್ತಿ. ಮುಂದೊಂದು ದಿನ ಅದರಲ್ಲಿ ಏನಾದರೂ ಒಳ್ಳೆಯ ವಿಷಯ ಟೈಪ್ ಮಾಡಿದರೆ ಕಸವೇ ಮೊದಲು ಬರುತ್ತದೆ ಎಂದು.ಆ ಮಾತು ಅಕ್ಷರಃ ಸತ್ಯ.

2 comments:

  1. ನಿಮ್ಮ ಮಾತು ನಿಜ ಸಾರ್.. ಯಾವ ಒಂದು ಟ್ರೆಂಡ್ ಆಗಲಿ ಅದು ಟೆಂಪರರಿ ಅಷ್ಟೇ ಪರ್ಮನೆಂಟ್ ಆಗಿರಲು ಸಾಧ್ಯವಿಲ್ಲ.

    ReplyDelete
  2. ಹೌದು. ದ್ವ೦ದ್ವಾರ್ಥಗಳ ಡೈಲಾಗ್ ಎ೦ದರೆ ಸ್ಮಾರ್ಟ್, ಬುದ್ಧಿವ೦ತರೆ೦ದು ತಿಳಕೊ೦ಡಿದ್ದಾರೆ. ಟ್ರೆ೦ಡ್ ಫೊಲೋ ಮಾಡುವುದರಲ್ಲೆ ಜೀವನ ಹಾಳು ಮಾಡುತ್ತಿದ್ದಾರೆ.

    ReplyDelete