Monday, September 9, 2013

ಜಗತ್ತು ಬದಲಾಯಿತು.......ಭಾಗ -16ಸೋಮವಾರದ ದಿನ ಬೇಗನೆ ಆಫೀಸಿಗೆ ಹೊರಟುಬಂದೆ. ನನಗೆ ನಿನ್ನೆ ಉಮಾಶಂಕರ ಬಿಟ್ಟು ಹೋದ ಮೇಲೆ ಅವರ ಮನೆಯಲ್ಲಿ ಏನು ನಡೆದಿರಬಹುದು ಎಂಬ ಕುತೂಹಲವಿತ್ತು. ಆತ ಅಷ್ಟೆಲ್ಲಾ ಮಾತನಾಡಿ ಹೋದ ಮೇಲೆ ಮನೆಯಲ್ಲಿ ಸುಮ್ಮನಿರುತ್ತಾನೆ ಎಂದು ನನಗನಿಸಲಿಲ್ಲ. ಇನ್ನಷ್ಟು ಮಾತಾಡಿರಬಹುದು ಅಥವಾ ಗೆಲುವಿನ ನಗೆ ಬೀರಿ ಕಿರಿಕಿರಿ ಹುಟ್ಟಿಸಿರಬಹುದು ವೇದಾ ಮೇಡಂ ಗೆ ಎನಿಸಿತ್ತು. ಹಾಗಾಗಿ ಬೆಳಿಗ್ಗೆ ಬೇಗನೆ ಓಡಿ ಬಂದಿದ್ದೆ.  ಭಾನುವಾರ ಒಂದು ಫೋನ್ ಮಾಡಿ ವಿಚಾರಿಸೋಣ ಎನಿಸಿತ್ತು. ಆದರೆ ಸುಮ್ಮನಿದ್ದೆ.
ಆದರೆ ಹನ್ನೊಂದಾದರೂ ವೇದಾ ಮೇಡಂ ಬರಲೇ ಇಲ್ಲ. ಒಂದು ಫೋನ್ ಮಾಡೋಣ ಎಂದು ಮನಸ್ಸು ಸಾರಿ ಸಾರಿ ಹೇಳಿದರೂ ಯಾಕೋ ಧೈರ್ಯ ಬರಲಿಲ್ಲ. ಏನು ನಡೆದಿರಬಹುದು ಎಂಬ ಕುತೂಹಲ ಈಗ ಆತಂಕಕಕ್ಕೆ ತಿರುಗಿತ್ತು. ಅಷ್ಟಾದ ಮೇಲೂ ಆತ ಜಗಳವಾಡಿರಬಹುದಾ..? ಮನಸ್ಸು ಯಾಕೋ ಕೆಡುಕನ್ನೇ ಶಂಕಿಸುತ್ತಿತ್ತು. ಈಗ ಮನೆಯಲ್ಲಿದ್ದಾರಾ..? ಅಥವಾ ಆಫೀಸಿಗೆ ಮೇಲ್ ಲಗಾಯಿಸಿದ್ದಾರಾ..? ತಿಳಿದುಕೊಳ್ಳುವುದಾದರೂ ಹೇಗೆ? ನಾವು ರಜಾಪತ್ರ ಒಗಾಯಿಸಿದ್ದೀವಾ ಎಂಬುದನ್ನು ವೇದಾ ಮೇಡಂ ತಿಳಿದುಕೊಳ್ಳಬಹುದಿತ್ತು. ಆದರೆ ನಮ್ಮ ಮೇಲಧಿಕಾರಿಯ ವಿಷಯವನ್ನು ಯಾರ ಹತ್ತಿರ ಕೇಳುವುದು.? ಯಾವ ಕೆಲಸವನ್ನೂ ಮಾಡಲು ಮನಸ್ಸು ಬರಲಿಲ್ಲ. ಸುಮ್ಮನೆ ನನ್ನ ಸಿಸ್ಟಮ್ ಆನ್ ಮಾಡಿ ಸುಮ್ಮನೆ ಮುಂದೆ ಕುಳಿತಿದ್ದೆ.
ಹನ್ನೆರಡಾಗಿರಬಹುದು. ನಾನು ತಲೆ ಬಿಸಿ ಎಂದು ಕ್ಯಾಂಟೀನ್ ಗೆ ಬಂದೆ. ಅಷ್ಟರಲ್ಲಿ ನನ್ನ ಮೊಬೈಲ್ ರಿಂಗ್ ಆಯಿತು. ತೆರೆದು ನೋಡಿದರೆ ವೇದಾ ಮೇಡಂ ನಂಬರ್. ಅವರ ಹೆಸರು ಮೂಡದಿದ್ದರೂ ನಂಬರ್ ಮಾತ್ರ ಚಿರಪರಿಚಿತವಾಗಿತ್ತು. ಯಾಕೋ ಹೋದ ಜೀವ ಬಂದಂತಾಯಿತು. ಏನೋ ನಡೆದಿದೆ. ಅದನ್ನು ಹೇಳಲೆಂದೇ ಮೇಡಂ ಫೋನ್ ಮಾಡಿದ್ದಾರೆ ಎನಿಸಿ, ಪಟಾರನೆ ಕರೆ ಸ್ವೀಕರಿಸಿ ‘ಹಲೋ ‘ಎಂದೆ. ನಾನು ಉಮಾಶಂಕರ್ ಎಂದಿತು ಧ್ವನಿ. ಸಧ್ಯ ಆತ ಬೇಗನೆ ಮಾತನಾಡಿದ್ದ. ಇಲ್ಲವಾದಲ್ಲಿ ನಾನು ಮೇಡಂ ಎಂದೆ ಮಾತನಾಡಿಸಿಬಿಡುತ್ತಿದ್ದೆ. ನಂಬರ್ ಅಳಿಸಿಹಾಕಿದ್ದರೂ ಹೆಸರು ಗುರುತಿಟ್ಟುಕೊಂಡಿದ್ದೀಯ  ಎಂದು ಇನ್ನೊಂದು ಕಿರಿಕಿರಿಗೆ ಅದು ಕಾರಣವಾಗುತ್ತಿತ್ತು. ‘ಹಾ..ಹೇಳಿ ಸಾರ್..’ ಎಂದೆ. ಎಲ್ಲಿದ್ದೀಯಾ..?
ಆಫೀಸಿನಲ್ಲಿ..’
ನಾನೂ ಆಫೀಸಿನಲ್ಲಿದ್ದೀನಿ..ನೀನಿಲ್ಲಿ ಕಾಣಿಸ್ತಾ ಇಲ್ಲ..ಎಂದ.
ಕೋಪ ಉಕ್ಕಿಬಂದರೂ ತಡೆದುಕೊಂಡೆ.
ಸಾರ್..ಆಫೀಸಿನಲ್ಲೇ ಇದ್ದೀನಿ..ಈಗ ಕ್ಯಾಂಟೀನ್ ಗೆ ಬಂದೆ ಕಾಫಿ ಕುಡಿಯೋಕೆ..ಯಾಕೆ ?
ಸರಿ ಅಲ್ಲೇ ಇರು ಬಂದೆ,.. ಎಂದ ಉಮಾಶಂಕರ್ ಫೋನ್ ಕಟ್ ಮಾಡಿದ. ಅವನ ಕಿರಿಕಿರಿ ಅತಿಯಾಯಿತು ಎನಿಸಿತು. ನಿನ್ನೆ ಎಲ್ಲಾ ಮಾತಾಡಿ ಆಗಿದೆ. ಮತ್ತೆ ಇದೇನು ಈ ರೀತಿ ಕಾಡುವುದು..ಈವತ್ತೆನಾದರೂ ಜಾಸ್ತಿ ಮಾತನಾಡಿದರೆ ಅವನ ಮುಖದ ನೀರಿಳಿಸಬೇಕು ಎಂದು ನಿರ್ಧರಿಸಿದೆ.
ಉಮಾಶಂಕರ್ ಕ್ಯಾಂಟೀನ್ ಗೆ ಬಂದ. ತಿಳಿನೀಲಿ ಬಣ್ಣದ ಶರ್ಟ್ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಹಾಕಿದ್ದ.ಇನ್ ಶರ್ಟ್ ಮಾಡಿದ್ದ, ನೋಡಲು ಅದೆಷ್ಟು ಚೆನ್ನಾಗಿ ಕಾಣಿಸುತ್ತಿದ್ದ.
ಹತ್ತಿರ ಬಂದವನೇ ಒಂದು ನಗೆ ಬೀರಿದ. ನಾನೂ ಬಲವಂತದ ನಗು ಮೂಲಕ ಅವನನ್ನು ಸ್ವಾಗತಿಸಿದೆ.
ಕಾಫೀ ಕುಡಿಯೋಣ..?
ನೋ ಥ್ಯಾಂಕ್ಸ್..ನಾನು ಈಗಷ್ಟೇ ಕುಡಿದೇ.. ಎಂದೆ,
ಅಯ್ಯೋ ಪರವಾಗಿಲ್ಲ ಕುಡಿಯಮ್ಮ..ಎಂದವನು ನನ್ನ ಅನುಮತಿಗೂ ಕಾಯದೇ ಎರಡು ಕಾಫೀ ಆರ್ಡರ್ ಮಾಡಿದ. ನಂತರ ಇಬ್ಬರೂ ಎದುರುಬದುರಾಗಿ ಕುಳಿತೆವು.ನನಗೋ ಅವನು ಅದೆಷ್ಟು ಬೇಗ ಜಾಗ ಖಾಲಿ ಮಾಡುತ್ತಾನೋ ಎನಿಸಿತ್ತು.
ಅವನಿಗೆ ಯಾವ ಧಾವಂತವೂ ಇರಲಿಲ್ಲ.ಸಾವಧಾನವಾಗಿ ಕುಳಿತಿದ್ದ. ಅವನ ತುಟಿಯಂಚಿನಲ್ಲಿ ಗೆಲುವಿನ  ನಗುವಿತ್ತು. ಅಷ್ಟರಲ್ಲಿ ಕಾಫಿ ಬಂತು. ಇಬ್ಬರೂ ಗುಟುಕರಿಸಿದೆವು. ಮತ್ತೆ ನಿಮ್ಮ ಊರು ಯಾವುದು..? ಎಂದ. ನನಗೆ ಅವ್ನ ಜೊತೆ ಮಾತನಾಡುವುದೇ ಇಷ್ಟವಿರಲಿಲ್ಲ. ಆದರೂ ಬಲವಂತವಾಗಿ ಹೇಳಲೇ ಬೇಕಿತ್ತು. ಸ್ವಲ್ಪ ಅದೂ ಇದೂ ಮಾತಾಡಿದ ಮೇಲೆ ತನ್ನ ಬ್ಯಾಗ್ ನಲ್ಲಿದ್ದ ಪುಸ್ತಕಗಳನ್ನು ಹೊರತೆಗೆದ. ಇದು ನೀನು ನನ್ನ ಮಿಸ್ಸೆಸ್ ಗೆ ಕೊಟ್ಟಿದ್ದು..ಇದನ್ನು ಓದಿ ಅವಳಿಗೆ ಏನೂ ಆಗಬೇಕಾದ್ದಿಲ್ಲ.. ಇದೇ ನೆಪ ಮಾಡ್ಕೊಂಡು ಮತ್ತೆ ಮಾತುಕತೆ ಶುರು ಮಾಡೋದು ನನಗಿಷ್ಟ ಇಲ್ಲ..ಎಂದವನೇ ಪುಸ್ತಕಗಳನ್ನು ನನ್ನೆಡೆಗೆ ತಳ್ಳಿದ. ಎತ್ತಿ ಅವನ ಕಪಾಲಕ್ಕೆ ಭಾರಿಸಬೇಕು ಎನಿಸಿಬಿಟ್ಟಿತು. ಇವನೆಂತಹ ದರಿದ್ರದ ಮನುಷ್ಯ!
‘ಅದಕ್ಕೆ ಈವತ್ತು ಆಫೀಸಿಗೆ ಬರೋದು ಬೇಡಾ ಅಂತ ಹೇಳಿ ನಾನು ಬಂದೆ..ಈವತ್ತಿಗೆ ಎಲ್ಲಾ ಚುಕ್ತಾ ಆಗಿಬಿಡಬೇಕು..ಇನ್ಮುಂದೆ ಈ ಲವಿಡವಿ ನಡಿಯಬಾರದು ..ಅದಕ್ಕೆ ನಾನೇ ಬಂದೆ..’ ಎಂದ. ನಮ್ಮಿಬ್ಬರ ನಡುವೆ ಏನೂ ಇಲ್ಲ ಎನ್ನುವುದನ್ನು ಅವನಿಗೆ ಒಪ್ಪಿಕೊಳ್ಳಲು ಇಷ್ಟವಿರಲಿಲ್ಲ ಎನಿಸಿತು. ಇಷ್ಟು ದಿನ ಇತ್ತು, ಈಗ ನಾನು ನಿಲ್ಲಿಸಿದ್ದೇನೆ ಎಂಬುದನ್ನು ಆತ ಎಂಜಾಯ್ ಮಾಡುತ್ತಿದ್ದಾನೆ ಎನಿಸಿತು. ಇನ್ನೊಂದು ಮಾತನಾಡುವುದೂ ಇವನ ಜತೆ ವ್ಯರ್ಥ ಎನಿಸಿತು. ಹಾಗಾಗಿ ನಾನು ಮಾತನಾಡದೆ ಸುಮ್ಮನೆ ತಲೆಯಲ್ಲಾಡಿಸಿದೆ.ನಾನು ಕೊಟ್ಟಿದ್ದ ಜೇಮ್ಸ್ ಹಾಡ್ಲೀ ಚೇಸ್ ಪುಸ್ತಕಗಳನ್ನು ತೆಗೆದು ನನ್ನ ಬಳಿ ಇರಿಸಿಕೊಂಡೆ. ‘ನಿನ್ನೆ ನೋಡೋಣ ಅಂತ ಒಂದೆರೆಡು ಪುಟ ತಿರುವಿಹಾಕಿದೆ ಮಾರಾಯ..ತಥ್..ಏನೋಪ್ಪಾ..ದರಿದ್ರ ಅನ್ನಿಸಿತು.. ‘ ಎಂದ ನಾನು ಪ್ರತಿಕ್ರಿಯಿಸಲಿಲ್ಲ. ಅದಾದ ನಂತರ ಕಾಫೀ ಕುಡಿದು ಅಲ್ಲಿಂದ ಹೊರಟುಹೋದ.
ನಾನು ಸುಮಾರು ಹೊತ್ತು ಕ್ಯಾಂಟೀನ್ ನಲ್ಲಿಯೇ ಕುಳಿತಿದ್ದೆ. ಅವನ ವರ್ತನೆಯ ಆಜುಬಾಜುಗಳನ್ನು ಅಂದಾಜು ಮಾಡತೊಡಗಿದ್ದೆ. ಯಾರೇ ಆಗಲಿ ಹೆಂಡತಿ ಬೇರೊಬ್ಬನ ಜೊತೆ ಮಾತನಾಡಿ, ಸ್ವಲ್ಪ ಅತಿಯಾಗಿ ವರ್ತಿಸಿದರೆ ಸ್ವಲ್ಪ ಕೆಂಗಣ್ಣು ಬಿಡುವುದು ಸಹಜವೇ. ಆದರೆ ಇವನದು ಅತಿ ಎನಿಸಿತು. ಮುಂದೇನು ಮಾಡುವುದು..? ಸುಮ್ಮನಿದ್ದು ಬಿಡುವುದೇ ಸರಿ. ಯಾಕೆಂದರೆ ನನಗಿಂತ ನನಗೆ ವೇದಾ ಮೇಡಂ ಕ್ಷೇಮದ ಬಗ್ಗೆ ಹೆಚ್ಚು ಖಾಳಜಿ ಇತ್ತು. ಇವನ ಜೊತೆ, ಇವನ ಅನುಮಾನದ ಜೊತೆ, ಇವನ ಸಣ್ಣತನದ ಜೊತೆ ಮೇಡಂ ಅದೆಷ್ಟು ಕಿರಿಕಿರಿ ಅನುಭವಿಸುತ್ತಿರಬಹುದಲ್ಲಾ..?
ಮದ್ಯಾಹ್ನದ ಊಟವೂ ಹೊಟ್ಟೆಗೆ ಸೇರಲಿಲ್ಲ. ಏನಾದರೂ ತಿನ್ನೋಣ ಎನಿಸಿದರೂ ಹೊಟ್ಟೆ ತೆಗೆದುಕೊಳ್ಳಲು ತಯಾರಿರಲಿಲ್ಲ.
ಮೂರು ಘಂಟೆಯ ಹತ್ತಿರ ಹತ್ತಿರ ಆಫೀಸಿನ ಒಳಬಂದೆ. ಎಲ್ಲರೂ ನನ್ನ ಕಡೆಗೆ ನೋಡುತ್ತಿದ್ದಾರೆ ಎಂಬ ಭಾಸವಾಯಿತು.ಸುಮ್ಮನೆ ತಲೆಯೆತ್ತಿ ನೋಡಿದರೆ ಅದು ನಿಜವೂ ಆಗಿತ್ತು. ಏನಂದ್ರೆ ಏನೂ ಆಗಿಲ್ಲ..ಬಹುಶ ವೇದಾ ಮೇಡಂ ಬರದೆ ಅವಳ ಗಂಡ ಬಂದು ನನ್ನ ಜೊತೆ ಮಾತನಾಡಿದ್ದು ಇದಕ್ಕೆಲ್ಲಾ ಕಾರಣವಾಗಿರಬಹುದಾ..?
ಅಷ್ಟರಲ್ಲಿ ರೋಹಿತ್ ಬಂದ.ನಾನವನ ಮುಖವನ್ನೇ ನೋಡುತ್ತಾ ನನ್ನ ಕುರ್ಚಿಯಲ್ಲಿ ಕುಳಿತುಕೊಂಡೆ.
ಏನು ಗುರು..ಹಂಗೆ ಗುರಾಯಿಸ್ತಿದ್ದೀಯ..?
ಏನಿಲ್ಲಪ್ಪ..ಏನೋ ಕೇಳೋಕೆ ಬಂದಿದ್ದೀಯಲ್ಲ..ಏನು ಅಂತ ಕೇಳು.. ಎಂದೆ ನನ್ನ ಧ್ವನಿಯಲ್ಲಿದ್ದ ಅಸಹನೆ  ನನಗೆ ಗೋಚರವಾಗುತ್ತಿತ್ತು.
ಏನಿಲ್ಲಮ್ಮ..ಏನಂದ ಉಮಾ?
ಎಲ್ಲಾ ಗೊತ್ತಿರೋ ಹಂಗಿದೆ..
ನೋಡೋ..ಏನೋ ನಾನು ನಿನ್ನ ಫ್ರೆಂಡ್ ಅಂತ ಹೇಳ್ತಿದ್ದೀನಿ..ಅವತ್ತು ಹೇಳಿದೆ.ನೀನು ಕೇಳಲಿಲ್ಲ..ಅವನು ನಿನ್ನೆಯೇನೋ ನಿಮ್ಮಿಬ್ಬರನ್ನು ಕರೆಸಿ ಭೂತ ಬಿಡಿಸಿದನಂತೆ..ಎಲ್ಲಾವನ್ನೂ ಅವನೇ ಇನ್ಫಾರ್ಮಶನ್ ಕೊಟ್ಟಿರೋದಪ್ಪ.. ಇದೆಲ್ಲಾ ನಿಂಗೆ ಬೇಕಿತ್ತಾ..?
ನಾನು ಮಾತನಾಡದೆ ಅವನ ಮುಖ ನೋಡಿದೆ.
ಸರಿ ಬಿಡು..ಸಿಕ್ಕಷ್ಟು ಪಂಚಾಮೃತ. ಏನೋ ಪಟಾಯ್ಸಿ ವ್ಯವಹಾರ ಮುಗಿಸ್ಬಿಟ್ಟೆ ತಾನೆ..ಈಗ ಮುಗೀತು ತಾನೇ ಆರಾಮವಾಗಿ ಬಿಟ್ಟು ನೆಮ್ಮದಿಯಾಗಿರು ಎಂದು ನನ್ನ ಮುಖ ನೋಡಿದ. ನಾನು ಆ ಮೂರ್ಖನೊಂದಿಗೆ ಏನು ಮಾತನಾಡುವುದಿತ್ತು. ಆಣೆ ಮಾಡಿ ಪ್ರಮಾಣ ಮಾಡಿ ಸತ್ಯ ಹೇಳಿದರೂ ಇವರಿಗೆ, ಇವರಿಗಿರಲಿ ಖುದ್ದು ಉಮಾಶಂಕರನೇ ನಂಬಲು ತಯಾರಿರಲಿಲ್ಲ.
ಅದ್ಕೆ ಸುಮ್ಮನಾದೆ ಕಣೋ.. ಇನ್ನೇನು..ಆಲ್ವಾ..? ಎಂದೆ.
ಈಗ ರೋಹಿತ್ ಮುಖದಲ್ಲಿ ಸ್ವಲ್ಪ ಹೊಟ್ಟೆಕಿಚ್ಚಿನ ಭಾವ ಮೂಡಿ ಮರೆಯಾಯಿತು.
ಮತ್ತೆ ನಮ್ಮಿಬ್ಬರ ನಡುವೆ ಏನೂ ಇಲ್ಲ ಅಂದಿದ್ದೆ..ನಮಗೊತ್ತಿತ್ತಮ್ಮಾ..ಅಂತ ಸುಂದರಿ ಸಿಕ್ಕಮೇಲೆ ನೀನು ಬಿಡ್ತೀಯಾ..ಸದ್ದಿಲ್ಲದೇ ಪಟಾಯ್ಸೋ ಮಗಾ ನೀನು..ಎಂದ.
ನಾನು ನಕ್ಕೆ. ಯಾಕೋ ನನಗರಿವಿಲ್ಲದೆ ಜೋರಾಗಿ ನಗು ಬಂದುಬಿಟ್ಟಿತ್ತು. ಜೋರಾಗಿ ನಕ್ಕುಬಿಟ್ಟೆ. ರೋಹಿತ್ ಸ್ವಲ್ಪ ಗಲಿಬಿಲಿಗೊಂಡ.
ಸರಿಯಪ್ಪ..ಇನ್ಮುಂದಾದರೂ ಹುಷಾರಾಗಿರು..ಎಲ್ಲದಕ್ಕೂ ಬರೆಸಿಕೊಂಡು ಬಂದಿರಬೇಕು..ಎಂದು ತನ್ನ ಖುರ್ಚಿಯ ಹತ್ತಿರಕ್ಕೆ ಹೋದ. ನಾನು ಸುಮ್ಮನೆ ಯಾಂತ್ರಿಕವಾಗಿ ನನ್ನ ಕಂಪ್ಯೂಟರ್ ತೆರೆದುಕೊಂಡು ಕುಳಿತೆನಾದರೂ ಮನಸ್ಸು ಮಾತ್ರ ಎಲ್ಲೆಲ್ಲೋ ಓಡುತ್ತಿತ್ತು.
*****     ******   ******
ರೂಮಿಗೆ ಬಂದರೂ ಮನಸ್ಸಿನಲ್ಲಿ ಕಸಿವಿಸಿ ಇದ್ದೆ ಇತ್ತು. ಇದೆಂತಹ ಜನರಪ್ಪಾ..?ಏನಿಲ್ಲಾ ಏನಿಲ್ಲಾ ಎಂದು ಬಡಿದುಕೊಳ್ಳುತ್ತಿದ್ದರೂ ಯಾರೂ ಅದರೆಡೆಗೆ ತಲೆ ಕೆಡಿಸಿಕೊಳ್ಳದೆ  ಸಂಬಂಧವನ್ನು ತಾವೇ ಗಟ್ಟಿ ಮಾಡಿ ಏನೇನೋ ಕಲ್ಪಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿರುವರಲ್ಲ ..ಅದರಲ್ಲೂ ಉಮಾಶಂಕರ ಅದೇನೋ ಸಾಧಿಸುವವನಂತೆ ವೇದಾ ಮೇಡಂ ಅವರನ್ನು ಮನೆಯಲ್ಲಿ ಕಟ್ಟಿಹಾಕಿ ತಾನು ಕಿಲಾಡಿ ತರಹ ಬಂದು ಪುಸ್ತಕ ಕೊಟ್ಟು ಹೋದ ಬಗೆ ತಮಾಷೆ ಎನಿಸಿತು. ತೀರಾ ಬಲವಂತದಿಂದ ಹೆದರುಸುವಿಕೆಯಿಂದ ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಸಂಬಂಧವನ್ನು ತಡೆಯಲು ಸಾಧ್ಯವಾ..? ಇವರೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ..
ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ಇದನ್ನೇ ಹತ್ತಾರು ಕೋನಗಳಿಂದ ಯೋಚಿಸಿದ್ದೆ. ಅದ್ಯಾವ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಅಥವಾ ಅದ್ಯಾವ ಕಾರಣ ಹುಡುಕಬೇಕಿತ್ತು ಎಂಬುದಕ್ಕೆ ಉತ್ತರವಿರಲಿಲ್ಲ. ಬರೀ ನನ್ನ ಸಮಾಧಾನಕ್ಕಾಗಿ  ಇಷ್ಟೆಲ್ಲಾ ಯೋಚಿಸಿದ್ದೆ. ಏನೇ ಆದರೂ ಸಮಾಧಾನವಂತೂ ಆಗಿರಲಿಲ್ಲ. ಮನಸ್ಸಿನಲ್ಲಿ ಗೊಂದಲವಂತೂ ಇದ್ದೇ ಇತ್ತು. ಆದರೆ ಒಂದಂತೂ ಮನಸ್ಸಿನಲ್ಲಿ ನಿರ್ಧಾರ ಮಾಡಿಬಿಟ್ಟಿದ್ದೆ. ಇನ್ನು ಮುಂದೆ ವೇದಾ ಮೇಡಂ ಏನೇ ಮಾತನಾಡಿದರೂ ಮಾತಾಡಿಸಬಾರದು..ಅವರ ಜೊತೆ ಯಾವ ರೀತಿಯ ಸಂಪರ್ಕವನ್ನೂ ಇಟ್ಟುಕೊಳ್ಳಬಾರದು..ಅವರ ಹೆಸರನ್ನು ನನ್ನ ಮೊಬೈಲಿನಿಂದ ಅಳಿಸಿಹಾಕಿದರೂ ಮನಸ್ಸಿನಲ್ಲಿ ಉಳಿಸಿಕೊಂಡಿದ್ದಕ್ಕೆ ಮೊದಲ ಬಾರಿಗೆ ಬೇಸರವಂತೂ ಆಗಿತ್ತು.
******  ******  ******
ಇದಾದ ಮೂರು ದಿನಗಳವರೆಗೆ ಆಫೀಸೊಂತರ ನೀರಸ ಎನಿಸಿತ್ತು. ವೇದಾ ಮೇಡಂ ಅವರ ಪಾಡಿಗೆ ಅವರು ಬರುತ್ತಿದ್ದರು, ನನ್ನನ್ನು ತಲೆ ಎತ್ತಿಯೂ ನೋಡುತ್ತಿರಲಿಲ್ಲ.. ನಾನು ಹಾಗೆಯೇ ಇದ್ದೆನಾದರೂ ಆವಾಗವಾಗ ಕದ್ದು ಮುಚ್ಚಿ ನೋಡುತ್ತಿದ್ದೆ. ಆದರೆ ವೇದಾ ಮೇಡಂ ಅಪ್ಪಿತಪ್ಪಿಯೂ ನನ್ನೆಡೆಗೆ ನೋಡಿರಲಿಲ್ಲ. ಆದರೆ ಇಡೀ ಆಫೀಸು ನಮ್ಮಿಬ್ಬರನ್ನು ಗಮನಿಸುತ್ತಿತ್ತು. ಮೂರನೆಯ ದಿನ ನಮ್ಮ ದೊಡ್ಡ ಬಾಸ್ ನನ್ನನ್ನು ತಮ್ಮ ಚೇಂಬರ್ ಗೆ ಬರಲಿಕ್ಕೆ ಹೇಳಿದಾಗ ನನಗೆ ಆಶ್ಚರ್ಯವಾಗಿತ್ತು. ಯಾಕೆಂದರೆ ಒಂದೊಂದು ಕೆಲಸವನ್ನು ನಮಗೆ ವಹಿಸಿ, ನಮಗೊಬ್ಬ ಟೀಂ ಲೀಡರ್ ಕೊಟ್ಟ ಮೇಲೆ ಮುಗೀತು, ಆಮೇಲೆ ಆ ಪ್ರಾಜೆಕ್ಟ್ ಮುಗಿಯುವವರೆಗೂ ನಮಗೂ ದೊಡ್ಡ ಬಾಸ್ ಗೂ ಸಂಪರ್ಕ ತೀರಾ ಕಡಿಮೆ ಇರುತ್ತಿತ್ತು ಅಥವಾ ಇರುತ್ತಲೇ ಇರಲಿಲ್ಲ. ನಾವೆಲ್ಲಾ ನಮ್ಮ ನಮ್ಮ ಟೀಂ ಲೀಡರ್ ಜೊತೆ ಸಂವಾದ ಮಾಡಿಕೊಂಡರೆ, ಅವರು ಅಂತಿಮವಾಗಿ ಬಾಸ್ ಜೊತೆ ಚರ್ಚಿಸುತ್ತಿದ್ದರು. ಟಾರ್ಗೆಟ್ ವಿಷಯದಲ್ಲೂ ಅಷ್ಟೇ ಬಾಸ್ ಟೀಂ ಲೀಡರ್ ತಲೆ ತಿಂದರೆ ಟೀಂ ಲೀಡರ್ ನಮ್ಮನ್ನು ಕುಯ್ದು ಸಾಯಿಸಿಬಿಡುತ್ತಿದ್ದರು.
ನಾನು ಎದ್ದು ನಮ್ಮ ಬಾಸ್ ಚಂಬೇರ್ ಗೆ ಹೋದೆ.
ಹೈ...ಕಂ ಇನ್..ಹೇಗೆ ನಡಿತಾ ಇದೆ,,
ಫೈನ್ ಸರ್..
ಓಕೆ. ಒಂದಷ್ಟು ಬದಲಾವಣೆಗಳು ಆಗಿವೆ ಮಿಸ್ಟರ್..ನೀವು ನಿಮ್ಮ ಪ್ರಾಜೆಕ್ಟ್ ಡೇಟಾಸ್ ಮತ್ತು ಫೀಡ್ ಬ್ಯಾಕ್ ಅನ್ನು ಕೊಟ್ಟು ಇಮ್ಮಿಡಿಯೇಟಾಗಿ ಮಾಧವನ್ ಟೀಂ ಗೆ ಜಾಯಿನ್ ಆಗಿ..ಅಗೈನ್ ಪ್ರೋಗ್ರೆಸ್ ಪ್ರೋಮೊಸಿಂಗ್ ಇರಬೇಕು..ಯು ಕ್ಯಾನ್ ಗೊ ನೌ..
ಬಾಸ್ ಇಷ್ಟೇ ಮಾತಾಡಿದ್ದು. ಆದರೆ ನಂಗೆ ಬೇರೆಯದೆಲ್ಲಾ ಅರ್ಥವಾಗಿತ್ತು. ಹೌದು ಮೇಡಂ ಬೇಕೆಂತಲೇ ನನ್ನನ್ನು ತಮ್ಮ ಟೀಂ ನಿಂದ ಹೊರಹಾಕಿಸಿದ್ದರು. ಅಥವಾ ಇದೆಲ್ಲಾ ಉಮಾಶಂಕರ್ ಕಿತಾಪತಿಯಾ..? ಇರಬಹುದು. ಏನಾದರೆ ನನಗೇನು..? ಸಧ್ಯ ಮಾತಾಡದೆ ಮುಖ ಮುಖ ನೋಡದೆ ಈ ರೀತಿ ಹಿಂಸಾತ್ಮಕವಾಗಿ ಇರುವುದಕ್ಕಿಂತ ಟೀಮ್ನಿಂದ ಹೊರಹೊಗುವುದೇ ಉತ್ತಮ ಎನಿಸಿತು. ಎಲ್ಲದಕ್ಕೂ  ತಲೆಯಲ್ಲಾಡಿಸಿ ಹೊರಬಂದೆ.
ಮದ್ಯಾಹ್ನ ಕ್ಯಾಂಟೀನ್ ನಲ್ಲಿ ಸಿಕ್ಕ ರೋಹಿತ್, ‘ಮಗಾ ವಿಷಯ ಗೊತ್ತಾಯ್ತು..ಏನಿಲ್ಲ..ಈಗ ಜಗ್ಗ ವೇದಾ ಮೇಡಂ ಟೀಮ್ಗೆ ಜಾಯಿನ್ ಆಗಿದ್ದಾನೆ...ಇಷ್ಟಕ್ಕೂ ನೀನು ಟೀಮಲ್ಲಿ ಇರಲೇಬಾರದು ಅಂತ ತೆಗಿಸಿಹಾಕಿದವರು ಯಾರು ಗೊತ್ತಾ,..? ನಿನ್ನ ವೇದಾ ಮೇಡಂ,.. ಇರಲಿ. ಇನ್ನೊಂದು ವಿಷ್ಯಾ ಹೇಳ್ತೀನಿ..ಆ ಜಗ್ಗ ಉಮಾಶಂಕರನಿಗೆ ಸ್ಪೈ ತಾರಾ ಇಷ್ಟು ದಿನ ಇಲ್ಲಿನ ಎಲ್ಲಾ ಸುದ್ದೀನೂ ಅವನೇ ವರದಿ ಮಾಡಿದ್ದು ..’ಎಂದ. ವಿಷಯ ತಿಳಿಯಿತಾದರೂ ನನಗೆ ಅದ್ಯಾವುದೂ ಆಸಕ್ತಿಕರವಾದದ್ದು ಎನಿಸಲಿಲ್ಲ. ನನ್ನ ನಿರ್ಲಿಪ್ತತೆ ನೋಡಿ ಅವನಿಗೆ ಆಶ್ಚರ್ಯವಾದರೂ ಅದನ್ನು ಆತ ಬೇರೆಯದೇ ರೀತಿಯಲ್ಲಿ ಗ್ರಹಿಸಿಕೊಂಡ. ‘ಇವೆಲ್ಲಾ ಆಗುತ್ತೆ ಕಣೋ..’ ಎಂದು ಮುಂದೆ ಏನನ್ನೋ ಹೇಳಲ್ಲಿ ಹೊರಟವನನ್ನು ನಾನೇ ತಡೆದೆ. ‘ಅಯ್ಯೋ ಮಾರಾಯ..ಅದರಿಂದ ನನಗೇನೂ ನಷ್ಟ ಇಲ್ಲ ಬಿಡಪ್ಪಾ..” ಎಂದೆ.ಅವನೊಮ್ಮೆ ಮುಖ ನೋಡಿ ಅಲ್ಲಿಂದ ಹೊರಟುಹೋದ.
ಒಂದು ವಾರ ಹೀಗೆಯೇ ಕಳೆದುಹೋಯಿತು. ನಾನೀಗ ಹೊಸ ಟೀಂ ಜಾಯಿನ್ ಆಗಿದ್ದೆ. ಮಾಧವನ್ ತಲೆ ಬಿಸಿ ಗಿರಾಕಿ. ಪ್ರತಿಯೊಂದಕ್ಕೂ ಕಿರಿಕಿರಿ ಮಾಡುತ್ತಿದ್ದ. ನಂಗೆ ಬೇರಾವುದಕ್ಕೂ ತಲೆ ಕೆಡಿಸಿಕೊಳ್ಳಲು ಸಮಯವಿಲ್ಲದಂತೆ ಮಾಡಿಹಾಕಿದ್ದ.
ಭಾನುವಾರ. ತಿಂಡಿ ತಿಂದು ಸುಮ್ಮನೆ ಪೇಪರ್ ಮೇಲೆ ಕಣ್ಣು ಹಾಯಿಸುತ್ತಿದ್ದೆ. ಏನೋ ಒಂದು ತರಹದ ಆಯಾಸ ನನ್ನನ್ನಾವರಿಸಿತ್ತು. ಅಷ್ಟರಲ್ಲಿ ನನ್ನ ಮನೆ ಕಾಲಿಂಗ್ ಬೆಲ್ ರಿಂಗ್ ಆಯಿತು. ಯಾರಿರಬಹುದು ಎಂದುಕೊಳ್ಳುತ್ತಲೇ  ಬಾಗಿಲು ತೆರೆದೆ.
ಎದುರಿಗೆ ವೇದಾ ಮೇಡಂ ನಿಂತಿದ್ದರು.
ನಾನು ಅವಾಕ್ಕಾದೆ.[ಸಶೇಷ]

No comments:

Post a Comment