Wednesday, August 28, 2013

ಭೂ......!!!

ಅಮ್ಮ ಎಲ್ಲಿ ಪಕ್ಕದ ಮನೆಯ ಆಂಟಿ ಕಾಣಿಸ್ತಿಲ್ಲ.." ಹಾಸ್ಟೆಲ್ಲಿನಿಂದ ಬಂದ ಟೀ ಕುಡಿಯುತ್ತಾ ಅಮ್ಮನನ್ನು ಕೇಳಿದೆ. ಅಮ್ಮ 'ಈವತ್ತು ಅಮಾವಾಸ್ಯೆ ಆಲ್ವಾ..? ಹಾಗಾಗಿ ಅವರು ಮೊನ್ನೇನೆ ಮೈಸೂರಿಗೆ ಹೋಗಿದ್ದಾರೆ..ಬಹುಶ ನಾಳಿದ್ದು ಬರಬಹುದು .." ಎಂದಳು. ನನಗೆ ಒಂದೂ ಅರ್ಥವಾಗಲಿಲ್ಲ. ಅಮಾವಾಸ್ಯೆಗೂ ಪಕ್ಕದ ಮನೆಯ ಆಂಟಿ ಮನೆಬಿಟ್ಟು ಹೋಗುವುದಕ್ಕೂ ಕಾರಣವೇನೂ ಎಂಬುದು ಅರ್ಥವಾಗಲಿಲ್ಲ.ಆದರೂ ಇರಲಿ ಎಂಬಂತೆ ಅವರ ಮನೆಯ ಸುತ್ತಾ ಮುತ್ತಾ ನೋಡಿ ಬಂದೆ. ಇಡೀ ಊರಾಚೆಗೆ ಇದ್ದ ಎರಡೇ ಎರಡು ಮನೆಗಳು ನಮ್ಮವು. ಒಂದರಲ್ಲಿ ನಾವಿದ್ದೆವು. ಮತ್ತೊಂದರಲ್ಲಿ ಅವರಿದ್ದರು.ಅವರ ಯಜಮಾನರು ಸತ್ತ ನಂತರ ಆ ಮನೆಯಲ್ಲಿ ಆಕೆ ಒಂಟಿಯಾಗಿ ವಾಸಿಸುತ್ತಿದ್ದರು. ಅವರ ಮಗ ದೂರದಲ್ಲೆಲ್ಲೋ ಕೆಲಸ ಮಾಡಿಕೊಂಡು ಅಲ್ಲೇ ಇದ್ದು ಬಿಟ್ಟಿದ್ದ. ಇಡೀ ಮನೆಯ ಸುತ್ತಾ ಬೇಲಿ ಬೆಳೆದು ನಿಂತಿತ್ತು. ದೂರದಿಂದ ನೋಡಿದರೆ ಒಂದು ದೊಡ್ಡ ಪೊದೆಯೊಳಗೆ ಮನೆ ಒಂದೇ ಇದೆಯೇನೋ ಎನ್ನುವ ಭಾವನೆ ಬರುವಂತಿತ್ತು. ಒಟ್ಟಿನಲ್ಲಿ ಸ್ವಲ್ಪ ಅಳ್ಳೆದೆಯವನಾಗಿದ್ದರೆ ಎದೆ ನಡುಗುವಂತಿತ್ತು.
ನಾನು ಮನೆಯನ್ನೊಮ್ಮೆ ಸುತ್ತಿ ಹಾಕಿ ಬಂದವನೇ ಅಮ್ಮನನ್ನು ಕೇಳಿದೆ. ಏನಾಯಿತು..? ಅಲ್ಲೇನು ನಡೆಯುತ್ತಿದೆ..? ಅಮ್ಮ ವಿವರವಾಗಿ ನಡೆದ ವಿಷಯವನ್ನು ಹೇಳಿದರು.
ಗಂಡ ಸತ್ತ ಮೇಲೆ ಆಕೆ ಒಬ್ಬಳೇ ಇರುವುದಕ್ಕೆ ಶುರು ಮಾಡಿದ್ದಾರೆ. ಸುಮಾರು ತಿಂಗಳುಗಳ ವರೆಗೆ ಏನೂ ಅಹಿತಕರವಾದ ಘಟನೆ ನಡೆದಿಲ್ಲ. ಆದರೆ ಅದೊಂದು ದಿನ ಮಧ್ಯರಾತ್ರಿಯಲ್ಲಿ ಮಲಗಿದ್ದ ಆಕೆಗೆ ಎಚ್ಚರವಾಗಿದೆ. ಕಣ್ಣು ಬಿಟ್ಟು ಸುಮ್ಮನೆ ಮಲಗಿದ್ದಾಗ, ಹಿಂದುಗಡೆಯ ಬಾಗಿಲನ್ನು ಯಾರೋ ತಟ್ಟಿದಂತೆ ಭಾಸವಾಗಿದೆ. ಮೊದಲಿಗೆ ಅವರಿಗೆ ಅದು ನಾಯಿಯೋ, ಪಕ್ಷಿಯೋ ಬಾಗಿಲನ್ನು ಕೆರೆದಿರಬೇಕು ಎನಿಸಿದೆ. ಆದರೆ ಸ್ವಲ್ಪ ಹೊತ್ತೋಣ ನಂತರ ಬಾಗಿಲು ಬಡಿತದ ಸದ್ದು ಸ್ಪಷ್ಟವಾಗಿ ಕೇಳಿಸಿದೆ. ಅದನ್ನು ಗಮನಿಸಿದ್ದಾರೆ. ಯಾರೋ ಮನುಷ್ಯ ಬಾಗಿಲು ಬಡಿದ ರೀತಿಯಲ್ಲೀ ಸದ್ದು ಆಗಿದೆ. ಆಕೆಗೆ ಎದೆ ಒಮ್ಮೆ ಝಾಲ್ ಎಂದಿದೆ. ಮೈಯೆಲ್ಲಾ ಬೆವರು. ಹೊದಿಕೆಯನ್ನು ಮುಖದ ತುಂಬ ಹೊದ್ದುಕೊಂಡು ಕವುಚಿಕೊಂಡು ಮಲಗಿದ್ದಾರೆ. ಕಿವಿ ಮಾತ್ರ ಬಾಗಿಲ ಹತ್ತಿರವೇ ಇದೆ. 
ಶಾಮಲಾ...ನಾನು..
ಎಂಬ ಮಾತಿನ ಶಬ್ದ ಅಸ್ಪಷ್ಟವಾಗಿ ಕೇಳಿಸಿದಾಗ ಆಕೆಗೆ ಜೀವವೇ ಹೋದ ಅನುಭವವಾಗಿದೆ.
ಅಷ್ಟೇ ಆವತ್ತಿನ ರಾತ್ರಿಯನ್ನು ಜಾಗರಣೆಯಲ್ಲೇ ಕಳೆದಿದ್ದಾರೆ ಆಕೆ.ಬೆಳಿಗ್ಗೆ ಎದ್ದವರೇ ಮೊದಲು ಹಿಂದುಗಡೆ ಬಾಗಿಲ ಹತ್ತಿರ ಪರೀಕ್ಷಿಸಿದ್ದಾರೆ.ಅಲ್ಯಾವುದಾದರೂ ಗುರುತಿದೆಯಾ ಎಂದು ಗಮನಿಸಿದ್ದಾರೆ. ಊಹೂ..ಯಾವುದೂ ಸಿಕ್ಕಿಲ್ಲ. ಸುಮ್ಮನಾಗಿದ್ದಾರೆ. 
ಆದರೆ ಬೆಳಿಗ್ಗೆ ಕ್ಯಾಲೆಂಡರ್ ನೋಡಿದಾಗಲೇ ಅವರಿಗೆ ಗೊತ್ತಾದದ್ದು ಆವತ್ತು ಅಮಾವಾಸ್ಯೆ ಎಂದು.
ಇದಾಗಿ ಹದಿನೈದು ದಿನದವರೆಗೆ ಯಾವ ಸಮಸ್ಯೆಯೂ ಬಂದಿಲ್ಲ. ಆದರೆ ಹದಿನೈದನೆ ದಿನ ಪೌರ್ಣಮಿಯಂದೂ ಅದೇ ಪುನರಾವರ್ತನೆ ಆಗಿದೆ. ಈಗ ನಿಜಕ್ಕೂ ಗಾಬರಿ ಬಿದ್ದ ಆಕೆಗೆ ಅದು ತನ್ನ ಭ್ರಮೆ ಇರಬಹುದಾ? ಎನ್ನುವ ಸಂಶಯವೂ ಕಾಡಿದೆ.
ತನ್ನ ಪರಿಚಿತ ಒಬ್ಬಳನ್ನು ಮುಂದಿನ ಅಮಾವಸ್ಯೆಯಂದೂ ಏನೊಂದು ವಿಷಯ ಹೇಳದೆ ಸುಮ್ಮನೆ ವಿಷಯಾಂತರ ಮಾಡುತ್ತಾ ಮಲಗಲು ಕರೆದುಕೊಂಡು ಬಂದಿದ್ದಾರೆ. ರಾತ್ರಿ ಹನ್ನೊಂದುವರೆವರೆಗೂ ಅದೂ ಇದೂ ಹರಟೆ ಹೊಡೆದು ಮಲಗಿದ್ದಾರೆ.ಆಕೆಗೆ ಸ್ವಲ್ಪ ನಿರುಮ್ಮಳವಾದದ್ದರಿಂದಲೋ ಏನೋ ಗಾಢವಾದ ನಿದ್ರೆ ಮಲಗಿದ ತಕ್ಷಣವೇ ಹತ್ತಿಬಿಟ್ಟಿದೆ. ಆದರೆ ಒಂದು ಘಂಟೆಯ ಹತ್ತಿರಹತ್ತಿರಕ್ಕೆ ಯಾರೋ ಕಿರುಚಿದಂತಾಗಿ ಎಚ್ಚರವಾಗಿ ನೋಡಿದರೆ ಕರೆತಂದಿದ್ದವಳು ನಡುಗುತ್ತಾ ಮೂಲೆಯಲ್ಲಿ ಕುಳಿತಿದ್ದಾಳೆ. ಕಾರಣ ಕೇಳಿದರೆ ತಡವರಿಸಿಕೊಂಡು ಯಾರೋ ಹಿಂದುಗಡೆ ಬಾಗಿಲನ್ನು ಬಡಿಯುತ್ತಿದ್ದಾರೆ ಎಂದಿದ್ದಾಳೆ.
ಅಲ್ಲಿಗೆ ಶ್ಯಾಮಳಗೆ ಪಕ್ಕಾ ಆಗಿದೆ.
ಅಮ್ಮ ಇಷ್ಟು ಕಥೆಯನ್ನು ಹೇಳಿ ಏನೋಪ್ಪಾ ನಿಜಕ್ಕೂ ಅವಳ ಗಂಡ ದೆವ್ವ ಆಗಿದ್ದರೂ ಆಗಿರಬಹುದು ಎಂದು ಸುಮ್ಮನಾದರು. ನನಗೋ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಾಗಲಿಲ್ಲ. ಸುಮ್ಮನಾದೆನಾದರೂ ಕುತೂಹಲ ಮಾತ್ರ ಮನಸಿನಲ್ಲಿ ಹೆಡೆಯೆತ್ತಿತ್ತು.
ಆವತ್ತು ನಾನು ಸರಿ ರಾತ್ರಿಯವರೆಗೆ ಓದುತ್ತಾ ಕಾಲ ಕಳೆದೆ. ಹನ್ನೆರಡಾಯಿತು. ಸುಮ್ಮನೆ ಎದ್ದು ದೀಪ ಹಾಕದೆ ನಿಧಾನಕ್ಕೆ ನಮ್ಮ ಮನೆಯ ಹಿಂಬಾಗಿಲನ್ನು ತೆರೆದೇ. ಸೀದಾ ಅವರ ಮನೆಯ ಹಿಂಬಾಗಿಲ ಹತ್ತಿರಕ್ಕೆ ಹೋದೆ. ಒಮ್ಮೆ ಸುತ್ತಾ ನೋಡಿದವನಿಗೆ ಎದೆ ಝಾಲ್ ಎಂದಿತ್ತು. ಹಾಗಿತ್ತು ಬೇಲಿಯಾ ಆಕೃತಿಗಳು. ಒಮ್ಮೆ ಮೈ ನಡಿಗಿದರೂ ನನ್ನನ್ನು ನಾನು ಸಮಾಧಾನ ಪಡಿಸಿಕೊಂಡು ಸುತ್ತಾ ಮುತ್ತಾ ಪರೀಕ್ಷಿಸಿ ಮತ್ತೆ ಸ್ವಲ್ಪ ಹೊತ್ತು ಅಲ್ಲೇ ಕುಳಿತು ಮನೆಗೆ ಬಂದೆ. ಯಾವ ಸದ್ದೂ ಬರಲಿಲ್ಲ. 
ಮನೆಗೆ ಬಂದು ಮಲಗಲು ಅನುವಾದೆ. ರಗ್ಗನ್ನು ಮುಖದ ತುಂಬಾ ಹೊದ್ದುಕೊಂಡು ಏನೋ ಯೋಚಿಸುತ್ತಿದ್ದೆ. ದದ್ ದಡ ದದ್ ಸದ್ದು ಪಕ್ಕದ ಮನೆಯ ಹಿಂಬಾಗಿಲ ಹತ್ತಿರ ಕೇಳಿ ಬಂದುಬಿಟ್ಟಿತು. ನಾನು ಮೈಯೆಲ್ಲಾ ಕಿವಿಯಾದೆ. ನಿಜಕ್ಕೂ ಅದು ಭ್ರಮೆಯಲ್ಲ ಎಂಬುದನ್ನು ಖಾತರಿ ಮಾಡಿಕೊಂಡೆ. ಇಲ್ಲಾ ಅದು ಸ್ಪಷ್ಟವಾಗಿತ್ತು.ಯಾರೋ ಮನುಷ್ಯನೊಬ್ಬ ಲಯಬದ್ದವಾಗಿ ಬಾಗಿಲು ಬಡಿಯುವ ಸದ್ದಿನ೦ತಿತ್ತು ಅದು. ನನ್ನ ಮೈಯಿಂದ ಬೆವರು ಬರಲಾರಂಭಿಸಿತು.ಮನಸ್ಸು ಬೇಡ ಬೇಡ ವೆಂದರೂ ಕೇಳದೆ ಆದದ್ದೂ ಆಗೇ ಹೋಗಲಿ ಎಂದವನೇ ಸದ್ದು ಮಾಡದೆ ಹಿಂದಿನ ಬಾಗಿಲು ತೆರೆದುಹೊರಬಂದೆ..ಯಾರೂ ಇಲ್ಲ.ಒಂದು ಎಲೆಯೂ ಅಲುಗಾಡುತ್ತಿಲ್ಲ.
ನನಗೆ ಅಚ್ಚರಿ ಭಯ ಎರಡೂ ಆಯಿತು. ಆದರೂ ಸ್ವಲ್ಪ ಹೊತ್ತು ಅಲ್ಲೇ ಕುಳಿತವನು ಆಮೇಲೆ ಮತ್ತೆ ಮನೆಗೆ ಬಂದು ಮಲಗಿದೆ. ಇನ್ನೇನು ರಗ್ಗು ಹೊದೆದುಕೊಳ್ಳಬೇಕು ಆಗ ಶುರುವಾಯಿತು ಬಾಗಿಲ ಬಡಿತ ..ಈ ಸಾರಿ ಗೊರಗೊರ ಸದ್ದು ಬೇರೆ..ಮತ್ತೆ ಎದ್ದೆ..ಹೊರಹೋದೆ..ಒಂದು ಎಲೆಯೂ ಅಲುಗಾಡುತ್ತಿಲ್ಲ..ಹಾಗಾದರೆ ಸದ್ದು ಬಂದದ್ದಾದರೂ ಎಲ್ಲಿಂದ..?
ಆವತ್ತು ರಾತ್ರಿ ಇನ್ನೂ ಮೂರುಸಾರಿ ಅದೇ ಪುನರಾವರ್ತನೆಯಾಯಿತು.
ಆನಂತರ ಅದನ್ನು ಕಂಡು ಹಿಡಿಯಲು ಎಷ್ಟೋ ಪ್ರಯತ್ನ ಪಟ್ಟೆ. ಸುಳಿವು ಸಿಗಲಿಲ್ಲ. ಆಯಮ್ಮ ಆ ಮನೆಯನ್ನೇ ಬಿಟ್ಟು ಹೊರಟುಹೋದರು.ಆನಂತರ ನಾನು ದೆವ್ವಗಳ ಬಗ್ಗೆ ಆಸಕ್ತಿ ವಹಿಸಿ ದೆವ್ವ ಬಿಡಿಸುವವರ ಹತ್ತಿರವೆಲ್ಲಾ ಹೋಗಿಬಂದೆ..ಅಲ್ಲಿನ ದೃಶ್ಯಗಳಾವುವು ನನಗೆ ಹೆದರಿಸಲಿಲ್ಲ.
ಆದರೆ ಅದೊಂದು ದಿನ ನನ್ನ ಬದುಕಿನಲ್ಲಿ ನಡೆದ ಘಟನೆ ನನ್ನನ್ನು ವರ್ಷಗಳ ಕಾಲ ನಿದ್ರೆ ಮಾಡದಂತೆ ಮಾಡಿಬಿಟ್ಟಿತು.
ಅದಿರಲಿ. ಈವತ್ತಿಗೂ ದೆವ್ವ ಪೀಡೆ, ಪಿಶಾಚಿ ಭೂತಗಳ ಜಗತ್ತು ಆಕರ್ಷನೀಯವೇ. ಅದರಲ್ಲೂ ನಮಗೆ ನಮ್ಮ ಸಿನಿಮಾದವರಿಗೆ ಅದೊಂತರ ಅದ್ಭುತ ಜಗತ್ತು.ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಲ್ಲೂ ಭಯಾನಕ ಸಿನಿಮಾಗಳು ಬಂದಿವೆ. ಮತ್ತು ಅವುಗಳು ಸಂಖ್ಯೆಯಲ್ಲೂ ಹೆಚ್ಚೇ ಇವೆ ಎನ್ನಬಹುದು. ಅದನ್ನು ಭಿನ್ನಭಿನ್ನವಾಗಿ ತೋರಿಸಿದ್ದಾರೆ. ಹಾಗಾದರೆ ಅದೆಲ್ಲಾ ಸತ್ಯವಾ..? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಕುತೂಹಲವಂತೂ ಇದ್ದೆ ಇದೆ.
ಇದೆಲ್ಲವನ್ನೂ ಈಗ ಪ್ರಸ್ತಾಪಿಸಿದ ಕಾರಣವೆಂದರೆ ನಾನು ನನ್ನ ಮುಂದಿನ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಯಾಕೋ ಭಯಾನಕ ಚಿತ್ರವೊಂದನ್ನು ಈ ಸಾರಿ ಮಾಡಬೇಕೆಂಬ ತುಡಿತ ಕಾಡುತ್ತದೆ. ಕಾರಣ ಗೊತ್ತಿಲ್ಲ. ಹಾಗಾಗಿ ಹೇಗೆ ಜನರನ್ನು ಚಿತ್ರಮಂದಿರದೊಳಗೆ ಹೆದರಿಸಬಹುದು..? ಕಥೆ ಹೇಗಿರಬೇಕು ಎಂಬ ಮೂಲಭೂತ ಪ್ರಶ್ನೆಗಳು ನನ್ನನ್ನು ಕಾಡುತ್ತವೆ. ಸಹಾಯ ಮಾಡುವವರಿದ್ದರೆ ಸುಸ್ವಾಗತ.
ಬನ್ನಿ ಎಲ್ಲಾ ಸೇರಿ ಒಂದಷ್ಟು ಹೆದರಿಸೋಣ.
ಎಲ್ಲೋ ಒಂದು ಭೂತಬಂಗಲೆಗೆ ಸಿಲುಕುವ ಒಂದಷ್ಟು ಜನರು, ಪ್ರೀತಿಸಿ ಸೋತು ಸತ್ತು ದೆವ್ವವಾಗಿ ಕಾಡುವ ಹೆಣ್ಣು ದೆವ್ವ, ದ್ವೇಷಕ್ಕಾಗಿ ಭೂತವಾಗುವ ದೆವ್ವಾ...ಹೀಗೆ ಹಲವಾರು ಕಥೆಗಳು ಈಗಾಗಲೇ ಬಂದಿವೆ. ನಾನು ಇದರಲ್ಲೂ ಸ್ವಲ್ಪ ಮಟ್ಟಗಿನ  ಪ್ರಯೋಗ ಮಾಡಬೇಕೆಂದುಕೊಂಡಿದ್ದೇನೆ/ ಆದರೆ ಅದಕ್ಕೆ ಮೊದಲಿಗೆ ಒಳ್ಳೆಯ ಬರವಣಿಗೆ/ಕಥೆ ಎಳೆ ಬೇಕು. ನಿಮ್ಮ-ನಮ್ಮ ಬಿಡುವಿನ ಸಮಯದಲ್ಲಿ ಚರ್ಚಿಸೋಣ ಎಂದರೆ ನಾನು ರೆಡಿ..



3 comments:

  1. idannu OdiyE hedaribiTTe..LOL
    'The Orphanage' nOdiddeve. nanagoo horror cinema isTa.. rayaru tour hOdaaga nODuvudide..:-)
    ms

    ReplyDelete
  2. ಜೋಗಿ ಅವರ " ರಾಯಭಾಗದ ರಹಸ್ಯ ರಾತ್ರಿಗಳು" ಓದಿ.ಏನಾದ್ರೂ ಐಡಿಯಾ ಬರಬಹುದು...

    ReplyDelete
  3. Iam Intersed this type of story please tell me where will we meet. kbdevaraj891@gmail.com

    ReplyDelete