Wednesday, August 28, 2013

ಕಲಾವಿದರೂ, ಹೊಟ್ಟೆಯ ಆರು ಮಡಿಕೆಗಳೂ..


ನಮಗೆಲ್ಲಾ ಗೊತ್ತಿರುವಂತೆ ಕ್ರಿಶ್ಚಿಯನ್ ಬೇಲ್ ದಿ ಮಷನಿಸ್ಟ್ ಚಿತ್ರದಲ್ಲಿ, ಮ್ಯಾಟ್ ದಮಾನ್, ಇನ್ಫಾರ್ಮ೦ಟ ಚಿತ್ರದಲ್ಲಿ ಕಾಸ್ಟ್ ಅವೆಯ್ ಚಿತ್ರದಲ್ಲಿ ಟಾಮ್ ಹಾನ್ಕ್ಸ್ ದೇಹಸ್ವರೂಪವನ್ನು ಏರುಪೇರು ಮಾಡಿಕೊಂಡಿದ್ದು ಗೊತ್ತೇ ಇದೆ. ಕಮಲ್ ಹಾಸನ್ ಆಗಾಗ ಈ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. 
ಒಬ್ಬ ನಟನ ಅಂಗಸೌಸ್ಟವ ಚೆನ್ನಾಗಿರಬೇಕು. ನೋಡಲಿಕ್ಕೆ ಫಿಟ್ ಆಗಿ ಕಂಡರೆ ನಾಯಕ ಎನ್ನುವುದಕ್ಕೂ ಸರಿಹೋಗುತ್ತದೆ ಎಂದೆಲ್ಲಾ ಯೋಚಿಸಬಹುದು. 
ಮೊನ್ನೆ ಕನ್ನಡದ ನಟ ಹೇಮಂತ್ ಹೃದಾಯಘಾತದಿಂದ ಮೃತ ಪಟ್ಟಿದ್ದು ಗೊತ್ತಿರುವ ಸಂಗತಿಯೇ. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಹೊಸದೇನಾದರೂ ಮಾಡಬೇಕೆಂದುಕೊಂಡು ಅದಕ್ಕಾಗಿ ಶ್ರಮ ಪಡುವುದು ತಪ್ಪಲ್ಲ. ಆದರೆ ವಿಪರೀತ ದೇಹದಂಡನೆ ಸರಿಯೇ ಎಂಬುವುದೇ ಪ್ರಶ್ನೆ.ನಟ ಹೇಮಂತ್ ಸಾವಿಗೆ ಅವರು ದೇಹ ಧಾರ್ಡ್ಯತೆಗಾಗಿ ಮತ್ತು ಅತೀ ವೇಗದಲ್ಲಿ ಮೈಕಟ್ಟಿನ ರಚನೆಗಾಗಿ ತೆಗೆದುಕೊಂಡ ಅಧಿಕ ಪ್ರೋಟೀನ್ ಅಂಶವೆ ಕಾರಣ ಎಂಬುದು ವೈದ್ಯಕೀಯ ಮೂಲಗಳಿಂದ ದೃಢಪಟ್ಟಿದೆ. ವಿಷಯ ಅದಲ್ಲ. ಇಂದಿನ ಯುವ ನಟರೇಕೆ ಮೈಕಟ್ಟಿನ ಹಿಂದೆ ಬಿದ್ದಿದ್ದಾರೆ ಎಂಬುದು.
ಈವತ್ತು ಸಿಕ್ಸ್ ಪ್ಯಾಕ್ ಅಬ್ಸ್ ಎಂಬುದು ಜನರಲ್ಲಿ ಜನಜನಿತ. ಆದರೆ ನಾನು ಕಂಡ ಮಟ್ಟಿಗೆ ನಮ್ಮ ದಕ್ಷಿಣಭಾರತದ ಚಿತ್ರರಂಗದಲ್ಲಿ ಮೊದಲಿಂದಲೂ ಮೈಕಟ್ಟಿಗೆ ಅಂತಹ ಬೆಲೆಯಿರಲಿಲ್ಲ. ಕನ್ನಡದಲ್ಲಿ ವರನಟ ರಾಜ್ ಬಿಟ್ಟರೆ ಬೇರೆ ನಟರು ಬೊಜ್ಜಿಲ್ಲದೆ ವೃತ್ತಿ ಜೀವನದ ಪೂರ್ತಿ ಸಂಭಾಳಿಸಿದ್ದು ಕಡಿಮೆ ಎನ್ನಬಹುದು. ಹಾಗಂತ ರಾಜ್ ಏನೂ ಬಾಡಿ ಬಿಲ್ಡರ್ ಅಲ್ಲ. ಅವರ ನಿಯಮಿತವಾದ ಯೋಗ ಅವರನ್ನು ಅವರ ದೇಹಸಿರಿಯನ್ನು ಕಾಪಾಡಿಕೊಂಡಿತ್ತು ಎನ್ನಬಹುದು.ಆವಾಗಲೆಲ್ಲಾ ದೊಡ್ಡ ದೇಹವೆಂದರೆ ಖಳರದ್ದು.ಟೈಗರ್ ಪ್ರಭಾಕರ್, ಫೈಟರ್ ಬೋರಯ್ಯ ಮುಂತಾದವರೆಲ್ಲಾ ದೊಡ್ಡ ದೇಹವನ್ನು ಹೊಂದಿ ನಾಯಕರಿಂದ ಏಟು ತಿಂದು ಸೋತು ಮಲಗುತ್ತಿದ್ದರು. ಆದರೆ ಬಾಲಿವುಡ್ ನಲ್ಲಿ ಹಾಗಲ್ಲ. ಅಲ್ಲಿ ಆವಾಗಿನಿಂದಲೂ ಕಟ್ಟು ಮಸ್ತಾದ ದೇಹಕ್ಕೆ ಒಂದು ಮಟ್ಟಗಿನ ಪ್ರಾಧಾನ್ಯತೆ ಇತ್ತೇ ಇತ್ತು.
ಸಲ್ಮಾನ್ ಖಾನ್, ಸಂಜಯ್ ದತ್, ಸುನೀಲ್ ಶೆಟ್ಟಿ, ಆಮೀರ್ ಖಾನ್ ಕಟ್ಟು ಮಸ್ತಾದ ಕೆತ್ತಿದ ಶಿಲ್ಪದಂತಹ ದೇಹಸಿರಿಯೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದವರು. ಆದರೆ ಅದರ ನಡುವೆ ಬಿರುಗಾಳಿಯಂತೆ ನುಗ್ಗಿದ್ದು ಶಾರುಕ್ ಖಾನ್. ಸಾಮಾನ್ಯವರ್ಗದ ಸಾಮಾನ್ಯ ರೂಪಿನ ಸಾಮಾನ್ಯ ದೇಹಸಿರಿಯ ಶಾರುಕ್ ಅವರೆಲ್ಲರನ್ನೂ ಮೀರಿ ಬೆಳೆದುಬಿಟ್ಟರು.ಅವರ ಮುಗುಳ್ನಗೆ, ಅವರ ಹಾವ ಭಾವ ಗಳು ಚಿತ್ರರಸಿಕರನ್ನು ಹುಚ್ಚೆಬ್ಬಿಸಿದ್ದವು.
ಆದರೆ ಅವರೇ ಓಂ ಶಾಂತಿ ಓಂ ಚಿತ್ರಕ್ಕೆ ಮೊಟ್ಟ ಮೊದಲಿಗೆ ಸಿಕ್ಸ್ ಪ್ಯಾಕ್ ಮಾಡಿದರು ನೋಡಿ, ಅಲ್ಲಿಯವೆರೆಗೆ ನೇಪಥ್ಯದಲ್ಲಿದ್ದ ಸಿಕ್ಸ್ ಪ್ಯಾಕ್ ಅಬ್ಸ್ ಎನ್ನುವುದು ಎಲ್ಲರ ಕಣ್ಮನಿಯಾಯಿತು. ಯಾಕೆ ನಾವು ಒಮ್ಮೆ ಪ್ರಯತ್ನಿಸಬಾರದು ಎಂದುಕೊಳ್ಳುವುದಕ್ಕೆ ಕಾರಣ ಇದೆ ಶಾರುಕ್. ಅದೇ ಆಮೀರ್, ಸಲ್ಮಾನ್ ಸಿಕ್ಸ್ ಪ್ಯಾಕ್ ಮಾಡಿದ್ದರೆ ಜನರು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ಆದರೆ ಶಾರುಕ್ ನಮ್ಮ ನಿಮ್ಮಂತೆ ಸಾದಾರಣ ದೇಹಸಿರಿಯ ವ್ಯಕ್ತಿಯಾದ್ದರಿಂದ ಆ ಭಾವನೆ ಜೀವಂತವಾಯಿತು. ತದನಂತರ ಶುರುವಾಯಿತು ಕಲಾವಿದರಲ್ಲಿ ಸಿಕ್ಸ್ ಪ್ಯಾಕ್ ಹುಚ್ಚು. ಒಂದಲ್ಲಾ ಒಂದು ರೀತಿಯಲ್ಲಿ ಸೋತವರು ಗಮನಸೆಳೆಯಲು ಸಿಕ್ಸ್ ಪ್ಯಾಕ್ ದಾರಿ ಕಂಡುಕೊಂಡರು. ಮೂರು ತಿಂಗಳಲ್ಲಿ ಆರು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆಯಲ್ಲಾ ವರದಿಗಳು, ಲೇಖನಗಳು, ಚಿತ್ರಣಗಳು. ಕಾರ್ಯಕ್ರಮಗಳು ಎಲ್ಲೆಲ್ಲೂ ಹರಿದಾಡಿದವು. ಈವತ್ತು ನಟರಿಗೆ ಇದೊಂದು ಮುಖ್ಯವಾದ ಅಂಗವೆನಿಸಿದೆ.
ಶಾರುಕ್ ನಟನಾಗಿ ಯಶಸ್ಸಾದ ಮೇಲೆ ಸಿಕ್ಸ್ ಪ್ಯಾಕ್ ಮಾಡಿದ್ದರು ಮತ್ತು ಆ ಚಿತ್ರ ಎಲ್ಲ ರೀತಿಯಿಂದಲೂ ಚೆನ್ನಾಗಿತ್ತು. ಆಮೀರ್ ಘಜಿನಿ ಯಲ್ಲಿ ಎಂಟು ಅಬ್ಸ್ ಮಾಡಿದಾಗಲೂ ಚಿತ್ರ ಅದರಿಂದ ಯಶಸ್ವಿಯಾಗಿರಲಿಲ್ಲ.
ಆದರೆ ನಮ್ಮಲ್ಲಿ ಎಲ್ಲರೂ ಹಿಂದೆ ಮುಂದೆ ನೋಡದೆ ಸಿಕ್ಸ್ ಪ್ಯಾಕ್ ಎಂದು ಒದ್ದಾಡುತ್ತಿದ್ದಾರೆ. ಹಾಸ್ಯನಟನಾಗಿ ಅದ್ಭುತ ಯಶಸ್ಸು ಗಳಿಸಿದ ತೆಲುಗು ನಟ ಸುನೀಲ್ ಸಿಕ್ಸ್ ಪ್ಯಾಕ್ ಮಾಡಿಕೊಂಡರಷ್ಟೇ.ಕನ್ನಡದಲ್ಲಿ ಸಂಚಾರಿ ಮಾಡಿ ಸೋತ ರಾಜ್ ಮುಂದಿನ ಚಿತ್ರ ಜಟಾಯು ವಿಗೆ ತಾವೂ ಹೊಟ್ಟೆಯಲ್ಲಿ ಆರು ಭಾಗಗಳ ಚಿತ್ತಾರ ಮಾಡಿಕೊಂಡರು.ಈಗೀಗ ಅಜೇಯ ರಾವ್, ಪ್ರೇಂ ,ಚೇತನ್ ಚಂದ್ರ , ನಟಿ ಮಮತಾ ರಾವತ್...ಹೀಗೆ ಎಲ್ಲರೂ ಸಿಕ್ಸ್ ಪ್ಯಾಕ್ ಹಿಂದೆ ಬಿದ್ದಿದ್ದಾರೆ... ಪ್ರೇಕ್ಷಕನಿಗೆ ಬೇಕಿರುವುದು ಅತ್ಯುತ್ತಮ ಕಥೆಯಿರುವ ಒಳ್ಳೆಯ ಚಿತ್ರವೇ ಹೊರತು ನಟನ ದೇಹ ಸಿರಿಯಲ್ಲ.  ಹಾಗೆಯೇ ನಟ ಜಾಗ್ರತೆ ವಹಿಸಬೇಕಾದದ್ದು ಕಥೆಯ ಆಯ್ಕೆಯಲ್ಲಿ..ಕಲಿಯಬೇಕಾದದ್ದು ಅಭಿನಯವನ್ನು. ಅದೆಲ್ಲವನ್ನೂ ಪಕ್ಕಕ್ಕಿರಿಸಿ ಬರೀ ಹೊಟ್ಟೆಯ ಕಡೆಗೆ ಮಾತ್ರ ಗಮನ ಹರಿಸಿದರೆ ಹೇಗೆ..? ಎಂಬುದೇ  ಪ್ರಶ್ನೆ.
ಸಿಕ್ಸ್ ಪ್ಯಾಕ್ , ದಪ್ಪಗಾಗುವುದು, ಸಣ್ಣಗಾಗುವುದು ಇವೆಲ್ಲವೂ ಆ ಪಾತ್ರಕ್ಕೆ ಬೇಕೇ ಬೇಕಾಗಿದ್ದು ಒಬ್ಬ ಕಲಾವಿದ ಅದಕ್ಕಾಗಿ ಶ್ರಮ ತೆಗೆದುಕೊಂಡರೆ ಅದು ಮೆಚ್ಚಲಾರ್ಹ ಸಂಗತಿಯೇ. ಆದರೆ ಬರೀ ಸಿಕ್ಸ್ ಪ್ಯಾಕ್ ಮಾಡಿದರೆ ಅದೇ ಚಿತ್ರದಲ್ಲಿ ವಿಭಿನ್ನತೆ ಕೊಡುತ್ತದೆ ಎಂದರೆ ಅದು ಒಪ್ಪಿಕೊಳ್ಳಲಾಗದ ಸಂಗತಿ ಎನ್ನಬಹುದು

1 comment:

  1. ಕ್ರಿಶ್ಛಿಯನ್ ಬೇಲ್ ತರಹ ಏರಿಳಿತದ ದೇಹ ಅಸಾಧ್ಯವೆ೦ದೇ ತೋರುತ್ತದೆ. ಮೇಶಿನಿಸ್ಟ್ ಗೆ ತೂಕ ಕಮ್ಮಿ ಮಾಡಿ, ಎಲುಬು ಕ೦ಡರೆ, ಮು೦ದಿನ ಚಿತ್ರ ಬ್ಯಾಟ್ ಮ್ಯಾನ್ ಬಿಗಿನ್ಸ್ ಗೆ ದೇಹ ಬೆಳೆಸಿದ. ನ೦ತರ ರೆಸ್ಕ್ಯೂ ಡೌನ್ ಗೆ ಸಣ್ಣಗಾದ. ಡಾರ್ಕ್ ನೈಟ್ ಗೆ ಮತ್ತೆ ದೇಹ ದಾರ್ಡ್ಯತೆ ಬೇಕಿತ್ತು.
    ಫೈಟರ್ ಗೆ ಮತ್ತೆ ದೇಹ ದ೦ಡನೆ. ಡಾರ್ಕ್ ನೈಟ್ ರೈಸಸ್ ಗೆ ದೇಹ ಬೆಳೆಸಿದ. ಈಗ ಔಟ್ ಆಫ್ ಫರ್ನೇಸ್ ಗೆ ಸಣಕಲು ಆಗಿದ್ದಾನೆ. 5Kg ಗೆ ಕಷ್ಟ! 20Kg ಆಚೀಚೆ ಆಗೋದು ಅಸಾಧ್ಯ!!!!

    ReplyDelete