Tuesday, July 16, 2013

ಓಡುವ ಮಿಲ್ಕಾ ನನ್ನು ತಡೆಯುವವರುಂಟೆ?

ಭಾಗ್ ಮಿಲ್ಕಾ ಭಾಗ್ ಚಿತ್ರದ ಅವಧಿ ಅನಾಮತ್ತು ಮೂರು ಗಂಟೆ ಎಂಟು ನಿಮಿಷಗಳು. ಆದರೂ  ಇಡೀ ಚಿತ್ರ ನಿಮಗೆಲ್ಲೂ ಸಮಯದ ಅರಿವಾಗದಂತೆ ನೋಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರೆ ಅದರ ಸಂಪೂರ್ಣ ಮೆಚ್ಚುಗೆ ಇಡೀ ಚಿತ್ರಕ್ಕೆ ಸಲ್ಲುತ್ತದೆ. ಒಂದು ಐತಿಹಾಸಿಕ ಸಾಧಕನ ಕಥಾಲೋಕವನ್ನು ಜೀವನಚರಿತ್ರೆಯನ್ನು ಕಾಲಮಿತಿಯಲ್ಲಿ ಸಮರ್ಥವಾಗಿ ನಮ್ಮ ಮುಂದಿಡುವುದು ಕಷ್ಟವೇ. ಆದರೆ ರಂಗ್ ದೇ ಬಸಂತಿಯಲ್ಲಿ ಭಗತ್ ಸಿಂಗ್ ರ ಮಹತ್ವಾಕಕಾಂಕ್ಷೆಯನು ಮೂರು ಜನ ಯುವಕರ ಮೂಲಕ ಸಮರ್ಥವಾಗಿ ನಮ್ಮ ಮುಂದಿಟ್ಟ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮತ್ತೆ ಅಂತಹದ್ದೇ ಭಿನ್ನ ರಂಜನೀಯ ಮತ್ತು ಅವಶ್ಯಕವಾದ ಪ್ರಯತ್ನ ಮಾಡಿದ್ದಾರೆ.
 ಈಗ ಚಿತ್ರದ ಕಥೆಯ ವಿವರ ಹೇಳುವುದಕ್ಕಿಂತ ಇದು ಭಾರತ ಕಂಡ ಅತ್ಯುತ್ತಮ ಕ್ರೀಡಾಪಟು ಮಿಲ್ಕಾ ಸಿಂಗ್ ರವರ ಜೀವನ ಚರಿತ್ರೆಯ ದೃಶ್ಯ ರೂಪ ಎನ್ನಬಹುದು. ಹಾಗಂತ ಬೋರ್ ಹೊಡೆಸುವ ಸಾಕ್ಷ್ಯಚಿತ್ರವಲ್ಲ. ಇದು ಒಬ್ಬ ವ್ಯಕ್ತಿಯ ಸಾಧನೆಯ ಹಾದಿಯ ಕಥನ. ಹಾಗಾಗಿಯೇ ಇಡೀ ಚಿತ್ರ ಒಂದು ಪಕ್ಕಾ ಮನರಂಜನೀಯ ಚಿತ್ರವಾಗಿ ನಮ್ಮ ಕಣ್ಣ ಮುಂದಿದೆ.ಚಿತ್ರದಲ್ಲಿ ಹಾಡುಗಳಿವೆ. ಅವುಗಳು ನಮಗೆ ಎದ್ದು ಹೊರಹೋಗಲು ಇರುವ ಏಕೈಕ ಮಾರ್ಗವೆನಿಸುವುದಿಲ್ಲ. ಬದಲಿಗೆ ಕಥೆಯ ಓಘಕ್ಕೆ ಮತ್ತು ಕಥೆಯಲ್ಲಿನ ಸತ್ವಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಅವಿಭಾಜ್ಯ ಅಂಗಗಳಾಗಿವೆ.
ಚಿತ್ರದ ಬೆನ್ನೆಲುಬು ಬರವಣಿಗೆ ಮತ್ತು ನಿರ್ದೇಶನ. ಒಬ್ಬ ವ್ಯಕ್ತಿಯ ಕಥೆಯನ್ನು ಚಿತ್ರರೂಪಕ್ಕೆ ಯಾರು ಬೇಕಾದರೂ ತರಬಹುದು. ಆದರೆ ದೃಶ್ಯ ಮಾಧ್ಯಮವೆಂದಾಗ ಅದಕ್ಕೆ ಅದರದೇ ಆದ ಇತಿಮಿತಿಗಳಿರುತ್ತವೆ. ವ್ಯಕ್ತಿಯ ಅಷ್ಟೂ ಇತಿಹಾಸವನ್ನು ಏಳುಬೀಳುಗಳನ್ನು ಒಂದು ಸಮಯದ ಮಿತಿಯಲ್ಲಿ ಪ್ರೇಕ್ಷಕನನ್ನು ತಣಿಸುವಂತೆ ಕಟ್ಟಿಕೊಡುವುದು ಕಷ್ಟದ ಕೆಲಸ. ಹಾಗಂತ ಪ್ರೇಕ್ಷಕರನ್ನು ಮೆಚ್ಚಿಸಲು ಹೋದಾಗ ಮನರಂಜನೆಯ ಅಂಶಗಳನ್ನು ಅಗತ್ಯಕ್ಕಿಂತ ಸೇರಿಸಿದರೆ ಇಡೀ ಚಿತ್ರದ ಆಶಯವೇ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿಯೇ ಇತಿಹಾಸದ ಅಷ್ಟೂ ಪುಟಗಳನ್ನ ಮನಸ್ಸಿಗೆ ತಂದುಕೊಂಡು ಅದರಲ್ಲಿನ ವಿಶೇಷವಾದ ಮತ್ತು ಅಗತ್ಯವಾದ ಅಂಶಗಳನ್ನು ಚಿತ್ರಕಥೆಯನ್ನಾಗಿಸಿದಾಗ ಭಾಗ್ ಮಿಲ್ಕಾ ಚಿತ್ರ ತಯಾರಾಗುತ್ತದೆ. ಚಿತ್ರಕಥೆಗಾರ, ಬರಹಗಾರ ಪ್ರಸೂನ್ ಜೋಶಿಗೆ ಶಹಬ್ಬಾಸ್ ಹೇಳಿ ಹಾಗೆಯೇ  ಅವರ ಕೆಲಸಕ್ಕೆ ನಿಷ್ಥೆಗೆ ತಲೆ ಬಾಗಲೇ ಬೇಕಾಗುತ್ತದೆ. ಇನ್ನು ರಾಕೇಶ್ ಓಂ ಪ್ರಕಾಶ್ ಮೆಹ್ರಾ, ಮಿಲ್ಕಾ ಸಿಂಗ್ ನ ಮಾನಸಿಕ ತಲ್ಲಣಗಳು ಮತ್ತು ಆವತ್ತಿನ ಕಾಲದ ಪರಿಸರ ಮುಂತಾದವುಗಳನ್ನು ಚಿತ್ರರೂಪಕ್ಕೆ ಕಟ್ಟಿಕೊಡುವಲ್ಲಿ ಯಶಸ್ಸು ಕಂಡಿದ್ದಾರೆ. ಪ್ರತಿಯೊಂದು ಅಂಶವನ್ನೂ ತುಂಬಾ ವಿವರವಾಗಿ ಅದ್ಯಯನ ಮಾಡಿದ್ದರೂ ಚಿತ್ರರೂಪಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಣಬಡಿಸಿರುವ ರಾಕೇಶ್ ರವರಿಗೆ ದೊಡ್ಡ ಸಲಾಮ್.
ಚಿತ್ರಕ್ಕೆ ದೊಡ್ಡ ಮೆರುಗು ಕೊಟ್ಟಿರುವುದು ತಾರಾಗಣ. ಮುಖ್ಯ ಪಾತ್ರವಾಗಲಿ ಅಥವಾ ಪೋಷಕ ಪಾತ್ರವಾಗಲಿ ಇಲ್ಲಿ ಎಲ್ಲರೂ ಮುಖ್ಯವಾಗುತ್ತಾರೆ. ಅಷ್ಟೇ ಅಲ್ಲ ಮಿಲ್ಕಾ ಎಂಬ ಶಿಲ್ಪದ ಕೆತ್ತನೆಯಲ್ಲಿ ಒಂದೊಂದು ಗಾತ್ರದ ಹರಿತದ ಉಳಿಯಾಗುತ್ತಾರೆ. ಪ್ರಕಾಶ್ ರಾಜ್, ನಾಯಕಿ ಸೋನಂ ಕಪೂರ್, ಮೇಷಾ ಶಾಪಿ, ದಿವ್ಯಾ ದತ್ತ್, ಯೋಗರಾಜ್ ಸಿಂಗ್ ಮುಂತಾದವರ ದೃಶ್ಯಗಳು ಲೆಕ್ಕಕ್ಕೆ ಸಿಗುವಂತಿವೆ. ಆದರೆ ಪಾತ್ರದ ತೂಕ ಮಾತ್ರ ತುಂಬಾ ಭಾರವಾದದ್ದು.  ನಾಯಕಿ ಸೋನಂ ಕಪೂರ್ ಎರಡು ಹಾಡು ಮತ್ತು ಒಂದು ನಾಲ್ಕು ದೃಶ್ಯಗಳಲ್ಲಿ ಬಂದರೂ ಕೊನೆಯವರೆಗೂ ನಮ್ಮ ನೆನಪಲ್ಲಿರುತ್ತಾರೆ. ಇನ್ನು ಇಡೀ ಮೈದಾನವೇ ಪರ್ಹಾನ್ ಅಖ್ತರ್ ರವರದು. ಪ್ರಾರಂಭದಿಂದ ಅಂತ್ಯದವೆರೆಗೂ ಒಂದೇ ಓಟ. ಅವರ ಮಿಲ್ಕಾ ಸಿಂಗ್ ಜೀವನದ ಪ್ರತಿ ಮಜಲುಗಳನ್ನು ನಿರ್ದೇಶಕರ ಕಣ್ಣಲ್ಲಿದ್ದ ಚಿತ್ರಕ್ಕೆ ಒಂದು ಚೂರು ಚ್ಯುತಿ ಬರದಹಾಗೆ ನಿರ್ವಹಿಸಿರುವ ಅಖ್ತರ್ ಮಿಲ್ಕಾ ಆಗಿ ಅದ್ಭುತವಾಗಿ ನಟಿಸಿ ನಮ್ಮ ಮನಗೆಲ್ಲುತ್ತಾರೆ.
ತಾಂತ್ರಿಕ ಅಂಶಗಳು ಕಥೆಗೆ ಪ್ರೇರಕವಾಗಿವೆ.ಶಂಕರ್ ಎಹಸಾನ್ ಲಾಯ್ ಸಂಗೀತವನ್ನು ಮೆಚ್ಚಲಾರ್ಹ ಅಂಶಗಳ ಪಟ್ಟಿಗೆ ಸೇರಿಸಬಹುದು.

ಇದು ಸಮಾಜಮುಖಿ ಚಿತ್ರ. ಇಲ್ಲಿ ಜಾತಿ ಮತ ಮುಂತಾದವುಗಳಿಗಿಂತ ಸಾಧನೆ ದೇಶ ಪ್ರೇಮವಿದೆ. ಇಂತಹ ಚಿತ್ರಗಳೂ ಯಾವತ್ತಿಗೂ ಸಲ್ಲುವಂತಹದ್ದು. ಪ್ರತಿ ದೇಶಪ್ರೇಮಿಯೂ, ಭಾರತೀಯನೂ, ಕ್ರೀಡಾಪ್ರೇಮಿಯೂ ಚಿತ್ರರಸಿಕನೂ ನೋಡಲೇಬೇಕಾದ ಚಿತ್ರವಿದು.

1 comment:

  1. ಸುಂದರ ವಿಶ್ಲೇಷಣೆ. ನೋಡಲೇ ಬೇಕಾದ ಚಿತ್ರಗಳ ಪಟ್ಟಿಗೆ ಇದನ್ನು ಸೇರಿಸಬೇಕು ಎನ್ನುವಷ್ಟು ಖುಷಿ ಕೊಡುವ ಬರೆದಿದ್ದೀರ. ಸಿನಿಮಾ ಕೂಡ ಹೊಗಳಿಕೆಯನ್ನು ತೆಗೆದುಕೊಳ್ಳುವ ಮಟ್ಟಿಗೆ ಇದೆ ಎಂದು ನೋಡಿದವರ ಅಭಿಪ್ರಾಯ. ನಿಮ್ಮ ಲೇಖನ ಈ ಸಿನೆಮಾವನ್ನು ನೋಡಲು ಪ್ರೇರೇಪಿಸುತ್ತಿದೆ. ಅಭಿನಂದನೆಗಳು ಸುಂದರ ವಿಮರ್ಶೆಗಾಗಿ

    ReplyDelete