Saturday, February 23, 2013

ತ್ರಿವಳಿ ಪ್ರತಿಕಾರಗಳು.

ಚಾನ್ ವೂಕ್ ಪಾರ್ಕ್ ಸೌತ್ ಕೊರಿಯಾದ ಹೆಸರಾಂತ ನಿರ್ದೇಶಕ . ತನ್ನ ವಿಭಿನ್ನ ಶೈಲಿಯಿಂದ ಮತ್ತು ಮಂದಗತಿಯಾದರೂ ಕುತೂಹಲಕಾರಿ ನಿರೂಪಣೆಯಿಂದ ಗಮನ ಸೆಳೆಯುವ ಈತನ ಚಿತ್ರಗಳು ನೋಡುಗರಿಗೆ ರಸದೌತಣ ಎಂದೆ ಹೇಳಬಹುದು. ಪಾರ್ಕ್ ನ ಚಿತ್ರಗಳು ಸಾಹಸಮಯ ಅಥವಾ ದ್ವೇಷಸಾಧನೆಯ ಕಥಾವಸ್ತುವನ್ನು ಹೊಂದಿವೆ.ಆತನ ಪ್ರತೀಕಾರದ ಸರಣಿ ಚಿತ್ರಗಳಾದ ಸಿಂಪಥಿ ಫಾರ್ ಮಿಸ್ಟರ್  ವೆಂಜೆಯಾನ್ಸ್, ಓಲ್ಡ್ ಬಾಯ್ ಮತ್ತು ಸಿಂಪಥಿ ಫಾರ್ ಲೇಡಿ ವೆಂಜೆಯಾನ್ಸ್ ಚಿತ್ರಗಳು ವೆಂಜೆಯಾನ್ಸ್ ಟ್ರೈಲಜಿ ಎಂದೆ ಹೆಸರುವಾಸಿಯಾಗಿವೆ. 
ಮೂರೂ ಚಿತ್ರಗಳ ಮೂಲ ವಸ್ತು ದ್ವೇಷ, ಪ್ರತೀಕಾರ. ಆದರೂ ಕಥೆಯಲ್ಲಿನ ವೈವಿಧ್ಯತೆಯಿಂದಾಗಿ ಅವು ಗಮನಸೆಳೆಯುತ್ತವೆ. ಮುಂದೇನಾಗುತ್ತದೆ ಹೇಗಾಗುತ್ತದೆ ಎಂಬ ಚಿಕ್ಕ ಸುಳಿವನ್ನೂ ಬಿಟ್ಟುಕೊಡದೆ ಕೊನೆಯವರೆಗೂ ಪ್ರೇಕ್ಷಕನನ್ನು ಸತಾಯಿಸುವ ಪಾರ್ಕ್ ನ ಈ ಚಿತ್ರಗಳು ಆಷ್ಟೇ  ಚೆನ್ನಾಗಿ ಕ್ರೌರ್ಯವನ್ನೂ ಬಿಂಬಿಸುತ್ತವೆ. ಈ ಚಿತ್ರಗಳು ಕಥೆಯಲ್ಲಿನ ಮೂಲಭಾವದಿಂದಾಗಿ ಸರಣಿ ಎನಿಸಿಕೊಳ್ಳುತ್ತವೆ. ಆದರೆ ಚಿತ್ರದ ಕಥೆಗಳು ಬೇರೆ ಬೇರೆ. ಒಂದಕ್ಕೊಂದು ಸಂಬಂಧವೇ ಇಲ್ಲ. ಪ್ರತೀಕಾರದ ಬೆಂಕಿ ಎಲ್ಲರನ್ನೂ ಸುಡುತ್ತದೆ ಮತ್ತು ಆ ಕಿಚ್ಚನ್ನು ಒಮ್ಮೆ ಹಚ್ಚಿದರೆ ನಾವು ಬೇಕೆಂದರೂ ಆರಿಸಲಾಗುವುದಿಲ್ಲ ಎನ್ನುವ ಸತ್ಯವನ್ನು ಮೂರು ಚಿತ್ರಗಳೂ ತೆರೆದಿಡುತ್ತವೆ. ಈ ಸರಣಿಯ ಮೊದಲನೆಯ ಚಿತ್ರವಾಗಿ ಬಂದದ್ದು ಸಿಂಪಥಿ ಫಾರ್ ಮಿಸ್ಟರ್  ವೆಂಜೆಯಾನ್ಸ್. 2002 ರಲ್ಲಿ ತೆರೆಗೆ ಬಂದ ಈ ಚಿತ್ರ ಗಲ್ಲಾಪೆಟ್ಟಿಗೆ ಲೂಟಿ ಮಾಡಿತಲ್ಲದೆ, ವಿಮರ್ಶಕರಿಂದಲೂ ಭಾರಿ ಮೆಚ್ಚುಗೆ ಗಳಿಸಿತು. ಕಿವುಡ ಮೂಗನೊಬ್ಬ ತನ್ನ ತಂಗಿಯ ಆಸ್ಪತ್ರೆಯ ಖರ್ಚುವೆಚ್ಚ ಭರಿಸಲು ತನ್ನ ಗೆಳತಿಯ ಜೊತೆ ಸೇರಿ ಒಬ್ಬ ಶ್ರೀಮಂತನ ಒಬ್ಬಳೇ ಮಗಳನ್ನ ಅಪಹರಿಸುತ್ತಾನೆ. ಆಕೆಯನ್ನು ಬಿಡಿಸಿಕೊಳ್ಳಲು ಹಣದ ಬೇಡಿಕೆ ಇಡುತ್ತಾನೆ. ಹೆಂಡತಿಯಿಂದ ದೂರಾಗಿದ್ದ ಆ ಮಗುವಿನ ತಂದೆ ಬೇರೇನೂ ಯೋಚಿಸದೆ ಹಣ ಕೊಡಲು ನಿರ್ಧರಿಸಿ ಹಣವನ್ನೂ ನಾಯಕ ಹೇಳಿದ ಜಾಗಕ್ಕೆ ತಲುಪಿಸುತ್ತಾನೆ. ಆದರೆ ಅದು ಆ ಮೂಗನ ತಂಗಿಗೆ ತಿಳಿದು ಆಕೆ ಸಾಯುತ್ತಾಳೆ. ಆಕೆಯನ್ನು ಮಣ್ಣು ಮಾಡುವ ಕಾರ್ಯದಲ್ಲಿ ನಿರತನಾಗುವ ಮೂಗನ ಅತಾಚುರ್ಯದಿಂದ ಅಪಹೃತ ಬಾಲಕಿ ಕೂಡ ಸಾಯುತ್ತಾಳೆ. ಇದರಿಂದ ರೊಚ್ಚಿಗೇಳುವ ಬಾಲಕಿಯ ತಂದೆ ಅಪಹರಣಕಾರರ ಹಿಂದೆ ಬೀಳುತ್ತಾನೆ. ಮೊದಲಿಗೆ ಮೂಗನ ಗೆಳತಿಯನ್ನು ಚಿತ್ರಹಿಂಸೆ ಕೊಟ್ಟು ಸಾಯಿಸುತ್ತಾನೆ, ಆನಂತರ ಮೂಗನನ್ನೂ ಸಾಯಿಸುತ್ತಾನೆ,..ಆಗ ಮೂಗನ ಗೆಳತಿಯ ಸಹಚರರು ಬಾಲಕಿಯ ತಂದೆಯನ್ನು ಸಾಯಿಸುತ್ತಾರೆ. ಹೀಗೆ ಯಾವುದೋ ಒಂದು ಅತಾಚುರ್ಯದಿಂದಾಗಿ ವಿನಾಕಾರಣದ ಪ್ರತಿಕಾರದ ಬೆಂಕಿ ಎಲ್ಲರನ್ನೂ ಸುಟ್ಟುಬಿಡುತ್ತದೆ.
 ಇದಾದ  ನಂತರ ಬಂದ ಓಲ್ಡ್ ಬಾಯ್ ಕಥೆ ಕೂಡ ಭಿನ್ನವಾದದ್ದಾದರೂ ವಿಷಯ ಮಾತ್ರ ಪ್ರತಿಕಾರಕ್ಕೆ ಸಂಬಂಧಿಸಿದ್ದು. 2003ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥೆ ತುಂಬಾ ಸರಳವಾದದ್ದು. ವ್ಯಕ್ತಿಯೊಬ್ಬನನ್ನು ಒಂದು ಕೋಣೆಯೊಳಗೆ 15 ವರ್ಷಗಳ ವರೆಗೆ ಕೂಡಿ ಹಾಕಲಾಗುತ್ತದೆ. ಅವನಿಗೆ ತಾನೇಕೆ ಇಲ್ಲಿದ್ದೇನೆ, ತನ್ನನ್ಯಾರು ಇಲ್ಲಿ ಕಟ್ಟಿಹಾಕಿರುವವರು, ಅವರ ಉದ್ದೇಶವೇನು ಎಂಬುದೂ ಗೊತ್ತಾಗುವುದಿಲ್ಲ. ಅವನು ಮಾಡಿದ ತಪ್ಪೇನು ಎಂಬುದು ಗೊತ್ತಾಗುವುದಿಲ್ಲ. ಹದಿನೈದು ವರ್ಷದ ನಂತರ ಒಂದು ಬಟಾಬಯಲಿನಲ್ಲಿ ಅವನನ್ನು ಬಿಟ್ಟುಬಿಡುತ್ತಾರೆ. ಈಗ ನಾಯಕನಿಗಿರುವ ಏಕೈಕ ಗುರಿಯೆಂದರೆ ತನಗೆ ಏನೊಂದು ಹೇಳದೆ ಹದಿನೈದು ವರ್ಷ ಕೊನೆಯಲ್ಲಿಟ್ಟು ಶಿಕ್ಷಿಸಿದವನನ್ನು ಹುಡುಕುವುದು, ತನ್ನ ಹಗೆ ತೀರ್ಸಿಕೊಳ್ಳುವುದು. ಆದರೆ ಅವನಿಗೆ ಗೊತ್ತಿರದ ವಿಷಯವೆಂದರೆ ಆ ವ್ಯಕ್ತಿಯ ಶಿಕ್ಷೆ ಬರೀ ಬಂಧನಕ್ಕೆ ಮುಗಿದಿರುವುದಿಲ್ಲ. ಬದಲಿಗೆ ಆತನ ಸ್ವತಂತ್ರ ಕೂಡ ಶಿಕ್ಷೆಯ ಇನ್ನೊಂದು ಮಜಲಾಗಿದೆ ಎಂಬುದು.
2005ರಲ್ಲಿ ತೆರೆಗೆ ಬಂದ ಸಿಂಪಥಿ ಫಾರ್ ಲೇಡಿ ವೆಂಜೆಯಾನ್ಸ್ ಚಿತ್ರ ಕೂಡ ಇದೆ ವಿಷಯವನ್ನ ಒಳಗೊಂಡಿದ್ದರೂ ಕ್ರೌರ್ಯದ ಚಿತ್ರೀಕರಣ ಈ ಚಿತ್ರದಲ್ಲಿ ಸ್ವಲ್ಪ ಕಡಿಮೆ ಎಂದೆ ಹೇಳಬಹುದು.ತಾನು ಮಾಡಿರದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುವ ನಾಯಕಿ ಜೈಲಿನಿಂದ ಹೊರಬಂದ ಮೇಲೆ ತನ್ನ ಪರಿಸ್ಥಿತಿಗೆ ಕಾರಣನಾದವನನ್ನು ಹುಡುಕಿ ಕೊಳ್ಳುವ ಕಥೆ ಈ ಚಿತ್ರದ್ದು. ಇದು ಕೂಡ ಗಲ್ಲಾಪೆಟ್ಟಿಗೆ ಸೂರೆಗೊಂಡಿತಲ್ಲದೆ ಹಲವಾರು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆಗಳಿಸಿತು.
ಮೂರು ಚಿತ್ರಗಳ ನಿರ್ದೇಶನ ಮಾತ್ರ ಎಲ್ಲರೂ ಮೆಚ್ಚುವ ಹಾಗಿದೆ. ಪ್ರತಿಯೊಂದು ದೃಷ್ಯವನ್ನು ತುಂಬಾ ವಿವರವಾಗಿ ಬಿಚ್ಚಿಡುವ ನಿರ್ದೇಶಕನಲ್ಲಿ ಯಾವುದೇ ಅವಸರವಿಲ್ಲ. ನಿಧಾನಕ್ಕೆ ಚಲಿಸುವ ಕೆಮೆರಾ ಚಲನೆ ನಮ್ಮ ಕಣ್ಣಮುಂದೆಯೇ ಕಥೆ ನಡೆಯುತ್ತಿದೆಯೇನೋ ಎನ್ನುವ ಭಾವ ತರಿಸುತ್ತದೆ. ಅದರಲ್ಲೂ ಕೊಲೆಯ ದೃಶ್ಯಗಳ ಮೇಕಿಂಗ್ ಸೂಪರ್. ಅಂದರೆ ಎಲ್ಲವೂ ಕಣ್ಣಿಗೆ ಕಟ್ಟುವಂತಿದೆ ಅಥವಾ ನೋಡಲಾಗದೆ ಕಣ್ಣು ಮುಚ್ಚಿಕೊಳ್ಳುವ ಹಾಗಿದೆ.ಮನುಷ್ಯನಲ್ಲಿರುವ ತಣ್ಣನೆಯ ರಾಕ್ಷಸ ಜಾಗೃತನಾದಾಗ ಕೊಲೆಯಂತಹ ಅಸಹ್ಯಕರವಾದ ಕೆಲಸ ಕೂಡ ಹೇಗೆ ಆರಾಮವಾಗಿ ದೈನಂದಿನ ನಿತ್ಯಕ್ರಮದಂತೆ ನಡೆದುಹೋಗುತ್ತದೆ ಎಂಬುದನ್ನು ನಿರ್ದೇಶಕ ತನ್ನ ಕೌಶಲದಿಂದ ಅದ್ಭುತವಾಗಿ ತೋರಿಸಿದ್ದಾನೆ. 
ಮೂರೂ ಚಿತ್ರಗಳಲ್ಲಿನ ಪಾತ್ರಧಾರಿಗಳ ಅಭಿನಯ, ಹಿನ್ನೆಲೆ ಸಂಗೀತ ಚಿತ್ರೋಚಿತವಾಗಿವೆ.
ಥ್ರಿಲ್ಲರ್ ಪ್ರಿಯರು, ಕ್ರೈಂ ಚಿತ್ರಗಳ ಪ್ರಿಯರು ನೋಡಬಹುದಾದಂತಹ ಚಿತ್ರಗಳು ಇವು.

 

3 comments:

  1. ನಾನು ತ್ರಿವಳಿಗಳ ಬಗ್ಗೆ ಬರೆಯಬೇಕೆ೦ದು ಬಯಸಿ ಲೇಖನ ಅರ್ಧ ಬರೆದು ಡ್ರಾಫ್ಟ್ ನಲ್ಲಿ ಕೊಳೆಯುತ್ತಿದೆ. :)
    ಈ ಮೂರು ಚಿತ್ರಗಳನ್ನು ನೋಡಬೇಕಷ್ಟೆ. ತು೦ಬಾ ಕೇಳ್ಪಟ್ಟಿದ್ದೇನೆ.
    ಓಲ್ಡ್ ಬಾಯ್ ಇನ್ನೂ ನೋಡಿಲ್ಲವೆನ್ನುವುದು ನನಗೇ ಆಶ್ಚರ್ಯ ತರುತ್ತಿದೆ :)

    ReplyDelete
  2. good blog,well good critc

    ReplyDelete