Saturday, February 23, 2013

ಒಂದು ಬೆಳ್ಳಿ ಕಿರಣ-ಸಿಲ್ವರ್ ಲೈನಿಂಗ್ ಪ್ಲೇ ಬುಕ್

ಈ ವರ್ಷದಲ್ಲಿ ಎಂಟು ಆಸ್ಕರ್ ಪ್ರಶಸ್ತಿಗಳಿಗೆ ನಾಮಾಂಕಿತವಾಗಿರುವ ಚಿತ್ರ ಸಿಲ್ವರ್ ಲೈನಿಂಗ್ ಪ್ಲೇ ಬುಕ್ .ಚಿತ್ರದ ನಿರ್ದೇಶಕರು ಡೇವಿಡ್.ಓ.ರಸಲ್. ರಸಲ್ ನಿರ್ದೇಶನದ ತ್ರೀ ಕಿಂಗ್ಸ್ ಮತ್ತು ಫೈಟರ್ ಚಿತ್ರಗಳನ್ನ ನೀವು ಈಗಾಗಲೇ ನೋಡಿರಬಹುದು.ಒಂದು ಗಟ್ಟಿಯಾದ ಕಥೆ ಮತ್ತು ಆಸಕ್ತಿಕರವಾದ ನಿರೂಪಣೆ ರಸಲ್ ಚಿತ್ರಗಳ ಆಸ್ತಿ ಎನ್ನಬಹುದು. ಆದರೆ ಆ ವಿಷಯದಲ್ಲಿ ಈ ಚಿತ್ರ ಅಷ್ಟೇನೂ ಗಟ್ಟಿಯಾದ ಕಥೆ ಹೊಂದಿಲ್ಲ ಎನ್ನಬಹುದು. ಮ್ಯಾಥ್ಯೂ ಕ್ವಿಕ್ ಬರೆದ ಇದೆ ಹೆಸರಿನ ಕಾದಂಬರಿ ಆಧರಿಸಿದ ಸಿಲ್ವರ್ ಲೈನಿಂಗ್ ಪ್ಲೇ ಬುಕ್ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಂಕಲನ ಹೀಗೆ ಎಂಟು ಪ್ರಮುಖ ವಿಭಾಗಗಳಲ್ಲಿ ನಾಮಾಂಕಿತಗೊಂಡಿರುವ ಈ ಚಿತ್ರದಲ್ಲಿ ಬಾಲಿವುದಿನ ನಟ ಅನುಪಮ್ ಖೇರ್ ವೈದ್ಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕೆಲಸ ಮುಗಿಸಿ ಮನೆಗೆ ಬಂದರೆ ಹೆಂಡತಿ ಬೇರೆಯೊಬ್ಬನ ಜೊತೆಗಿದ್ದರೆ ಯಾರಿಗೆ ತಾನೇ ಕೋಪ ಬರದಿರುತ್ತದೆ ಹೇಳಿ. ಇಲ್ಲಿ ಪ್ಯಾಟ್ ಗೆ ಆಗುವುದೂ ಅದೇ. ರೊಚ್ಚಿಗೆದ್ದ ಪ್ಯಾಟ್ ಹಿಂದೆ ಮುಂದೆ ನೋಡದೆ ತನ್ನ ಹೆಂಡತಿ ನಿಕ್ಕಿಯ ಜೊತೆಗಿದ್ದ ಅಯೋಗ್ಯನನ್ನು ಹಿಡಿದು ಹಿಗ್ಗಾ ಮುಗ್ಗಾ ಭಾರಿಸುತ್ತಾನೆ. ಆನಂತರ ಆತನ ಮಾನಸಿಕ ಸ್ಥಿತಿ ಕೆಡುತ್ತದೆ. ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಬಂದುಬಿಡುತ್ತದೆ. ಸುಮಾರು ಎಂಟು ತಿಂಗಳುಗಳ  ಚಿಕಿತ್ಸೆ ಪಡೆದು ಹೊರಬರುವ ಪ್ಯಾಟ್ ಮತ್ತೆ ತನ್ನ ಹೆಂಡತಿಯನ್ನ ಸೇರಲು ಆಸೆಪಡುತ್ತಾನೆ. ಆದರೆ ಆಕೆಯೊಂದಿಗೆ ಮಾತನಾಡುವುದಾದರೂ ಹೇಗೆ? ಆಗ ಪರಿಚಯವಾಗುವವಳು ಟಿಪಾನಿ. ಮುಂಬರುವ ನೃತ್ಯ ಸ್ಪರ್ಧೆಯಲ್ಲಿ ಟಿಫಾನಿಯ ಜೋಡಿಯಾಗಿ ಪ್ಯಾಟ್ ನರ್ತಿಸಲು ಒಪ್ಪಿಕೊಂಡರೆ ಪ್ಯಾಟ್ ಪರವಾಗಿ ನಿಕ್ಕಿ ಯ ಜೊತೆ  ಮಾತನಾಡಲು ಟಿಫಾನಿ ಒಪ್ಪಿಕೊಳ್ಳುತ್ತಾಳೆ .
 ಮುಂದೆ ಒಂದಷ್ಟು ಘಟನೆಗಳು ನಡೆಯುತ್ತವೆ. ಅನಿವಾರ್ಯವಾಗಿ ಟಿಫಾನಿ ಮತ್ತು ಪ್ಯಾಟ್ ಜೊತೆಯಾಗಿರಬೇಕಾಗುತ್ತದೆ. ಆ ಸಾಂಗತ್ಯ ಅವರಿಬ್ಬರ ನಡುವಣ ಪ್ರೀತಿಗೆ ಕಾರಣವಾಗುತ್ತದೆ.ಕೊನೆಯಲ್ಲಿ ಅವರಿಬ್ಬರೂ ಒಂದಾಗುತ್ತಾರೆ.ಚಿತ್ರ ಸುಖಾಂತ್ಯವಾಗುತ್ತದೆ.
ಚಿತ್ರದ ಕಥೆ ಅಷ್ಟೇನೂ ವಿಶೇಷವಾದದ್ದಲ್ಲ. ಹಾಗೆಯೇ ಅದರ ನಿರೂಪಣೆಯೂ. ಅಬ್ಬಬ್ಬಾ ಎನಿಸುವ ತಿರುವುಗಳಿಲ್ಲ ಚಿತ್ರದಲ್ಲಿ. ಹೆಚ್ಚು ಕಡಿಮೆ ಎಲ್ಲಾ ನಿರೀಕ್ಷಿತವೇ.ಆದರೆ ಚಿತ್ರ ಇಷ್ಟವಾಗುತ್ತದೆ. ಅಲ್ಲಲ್ಲಿ ಕಚಗುಳಿಯಿಡುತ್ತಾ ಸಾಗುವ ಚಿತ್ರಕಥೆ ಎಲ್ಲೂ ಬೇಸರವನ್ನುಂಟು ಮಾಡುವುದಿಲ್ಲ. 
ನಾಯಕನ ಪಾತ್ರದಲ್ಲಿ ಬ್ರಾಡ್ಲಿ ಕೂಪರ್ ಉತ್ತಮ ನಟನೆ ಮಾಡಿದ್ದಾರೆ. ಮತ್ತು ನೋಡಲು ಚಂದಗೆ ಕಾಣಿಸುತ್ತಾರೆ. ನಾಯಕಿಯ ಪಾತ್ರದಲ್ಲಿ ಜೆನಿಫರ್ ಲಾರೆನ್ಸ್ , ಪೋಷಕ ಪಾತ್ರದಲ್ಲಿ ರಾಬರ್ಟ್ ಡಿ ನೇರೋ, ಕ್ರಿಸ್ ಟಕ್ಕರ್ ಅಭಿನಯಿಸಿದ್ದಾರೆ.

No comments:

Post a Comment