Monday, February 18, 2013

ನೋಡಲೇಬೇಕಾದ ಕನ್ನಡಚಿತ್ರ -ಪ್ರಪಾತ.

ಭಾರದ್ವಾಜ ಮುನಿಯ ವೈಮಾನಿಕ ಶಾಸ್ತ್ರ ಸುಮಾರು ಜನರಿಗೆ ಗೊತ್ತಿಲ್ಲ. ವೈಮಾನಿಕ ಶಾಸ್ತ್ರದಲ್ಲಿ ವಿಮಾನ ತಯಾರಿಕೆ ಹಾರಾಟ ಮುಂತಾದವುಗಳನ್ನು ವಿವರವಾಗಿ ಬರೆದಿಡಲಾಗಿದೆ. ವಿಮಾನ ಹಾರಾಟಕ್ಕೆ ಬೇಕಾದ ತಂತ್ರಜ್ಞಾನ, ಬಳಸಬೇಕಾದ ಲೋಹ, ಅದರ ಬಿಡಿಭಾಗಗಳು ಮತ್ತವುಗಳ ಜೋಡಣೆ ಮುಂತಾದವುಗಳ ಬಗ್ಗೆ ತುಂಬಾ ವಿವರವಾಗಿ ಬರೆದಿರುವ ಶಾಸ್ತ್ರ ಇದು. ೧೮೯೫ ರಲ್ಲಿ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳು ಮುಂಬೈ ನಲ್ಲಿ ಪ್ರಥಮ ವಿಮಾನ ಹಾರಾಟ ನಡೆಸಿದರು ಎಂಬುದಕ್ಕೆ ಅದು ಆವತ್ತಿನ ಕೇಸರಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಸಾಕ್ಷಿ. ಅದಾದ ನಂತರ ೧೯೦೩ರಲ್ಲಿ ರೈಟ್ ಸಹೋದರರು ವಿಮಾನಯಾನದ ಪಿತಾಮಹರಾದರು ಎಂಬುದು ಸಧ್ಯದ ಇತಿಹಾಸ.
ನಾವು ಯಾರಿಗೂ ಕಮ್ಮಿ ಇರಲಿಲ್ಲ, ನಮ್ಮಲ್ಲಿ ಎಲ್ಲವೂ ಇತ್ತು ಎನ್ನುವ ಮನಸ್ಥಿತಿ ಭಾರತೀಯರಿಗೆ ಮೊದಲಿನಿಂದಲೂ ಬಂದಿದೆ. ಹಾಗಾದರೆ ಈವತ್ಯಾಕಿಲ್ಲ ಎನ್ನುವ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಎಲ್ಲವೂ ನಮ್ಮ ಪುರಾಣದಲ್ಲಿ ಉಲ್ಲೇಖವಾಗಿದ್ದರೂ ಪ್ರಾಯೋಗಿಕವಾಗಿ ಹೇಗೆ, ಯಾವುದನ್ನು ಬಳಸಬೇಕೆನ್ನುವುದಕ್ಕೆ ವಿವರಗಳಿಲ್ಲ. ಅಥವಾ  ಬಳಸಿದ್ದರೆನ್ನುವುದಕ್ಕೆ ಸಾಕ್ಷಿಗಳಿಲ್ಲ. ಈ ಬಗ್ಗೆ ಮಾತಾಡಲು ನಿಂತರೆ ದೊಡ್ಡ ವಾಗ್ವಾದವೇ ನಡೆದುಹೋಗಬಹುದು.
ಇರಲಿ.ಆದರೆ ವಿಮಾನಯಾನ ನಮ್ಮದೇ ಎನ್ನುವುದಕ್ಕೆ ನಮಗೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಹಾಗೆ ಅದರ ಕಾಲಘಟ್ಟವೂ ಕೂಡ ತೀರ ಹಳೆಯದಲ್ಲ. ಬ್ರಿಟಿಶ್ ಆಳ್ವಿಕೆಯ ಕಾಲದ್ದು. ಹಾಗೆ ವಿಮಾನಯಾನವನ್ನೂ ಸಾಕ್ಷಾತ್ಕರಿಸಲು ಶ್ರಮಿಸಿದ ಆನೇಕಲ್ ಸುಬ್ಬರಾಯ ಶಾಸ್ತ್ರಿಯನ್ನ ಜಗಧೀಷ ಚಂದ್ರ ಬೋಸ್ ಭೇಟಿಯಾಗಿದ್ದರು. ಪಟೇಲರು  ಭೇಟಿಯಾಗಿದ್ದರು ಎಂಬುದಕ್ಕೆ ಸ್ಪಷ್ಟ ದಾಖಲೆಗಳಿವೆ.
ಮೊನ್ನೆ ನಾನು ನಟ/ನಿರ್ದೇಶಕ ಸುಚೇಂದ್ರ ಪ್ರಸಾದರನ್ನು ಭೇಟಿಯಾಗಿದ್ದೆ. ಅವರದೇ ಸ್ಟುಡಿಯೋದಲ್ಲಿ ಅವರ ಚಿತ್ರ 'ಪ್ರಪಾತ' ನೋಡಿದೆ.ಹತ್ತು ವರ್ಷಗಳು ಈ ವಿಷಯದಲ್ಲಿ ಸಂಶೋಧನೆ ನಡೆಸಿರುವ ಸುಚೇಂದ್ರ ಪ್ರಸಾದರು ಆನೇಕಲ್ ಸುಬ್ಬರಾಯ ಶಾಸ್ತ್ರಿಗಳ ವಿಮಾನಯಾನದ ಬಗ್ಗೆ ಚಿತ್ರಿಸಿರುವ ಏಕೈಕ ಅಪರೂಪದ ಚಿತ್ರವಿದು. ಸುಚೇಂದ್ರಪ್ರಸಾದರ ಕನ್ನಡ ಪಂಡಿತನ ಪಾತ್ರವನ್ನ ನಾವು ಡ್ರಾಮ ಚಿತ್ರದಲ್ಲಿ ನೋಡಿದ್ದೇವೆ. ಖುಷಿಯ ಪ್ರಶಂಸಾರ್ಹ ವಿಷಯವೆಂದರೆ ಅವರು ನಿಜವಾಗಲೂ ಹಾಗೆಯೇ ಇದ್ದಾರೆ. ತುಂಬಾ ಸ್ಪಷ್ಟವಾದ ಸುಲಲಿತವಾದ ಕನ್ನಡ ಮಾತಾಡುತ್ತಾರಾದರೂ ಅದೆಲ್ಲೂ ಕೃತಕವೆನಿಸುವುದಿಲ್ಲ. ಅವರೊಂದಿಗಿನ ಮಾತುಕತೆಯ ಪ್ರಾರಂಭದಲ್ಲಿ ನಾನು ತಬ್ಬಿಬ್ಬಾಗಿದ್ದೆ. ತೀರಾ ಕುಶಲೋಪರಿಗಳನ್ನೂ ಪಕ್ಕಾ ಕನ್ನಡದಲ್ಲಿ ವಿಚಾರಿಸಿದಾಗ ನಾವೆಷ್ಟು ಹದಗೆಟ್ಟಿದ್ದೇವೆ ಎನಿಸಿತು.ಮಾತಾಡುತ್ತಾ ಮಾತಾಡುತ್ತಾ ನನಗೂ ಕನ್ನಡ ಬಳಕೆ ಸುಲಭ ಎನಿಸಿತು. ಅದನ್ನು ಅವರಿಗೆ ಹೇಳಿದಾಗ "ಪ್ರಯತ್ನಸಿ ಅಷ್ಟೇ...ಮತ್ತೆಲ್ಲಾ ಸರಾಗ.." ಎಂದರು.
ಚಿತ್ರದ  ಬಗ್ಗೆ ವಿವರವಾಗಿ ಬರೆಯುವುದಾಗಲಿ ಅಥವಾ ವಿಮರ್ಶೆ ಮಾಡುವುದಾಗಲಿ ಈ ಲೇಖನದ ಉದ್ದೇಶವಲ್ಲ. ಹಾಗೆ ಅದೆಷ್ಟೇ ಚಿತ್ರದ ಬಗ್ಗೆ ಬರೆಯಲು ಪ್ರಯತ್ನಿಸಿದರೂ ಅದು ಪೂರ್ಣ ಎನಿಸುವುದಿಲ್ಲ. ಹಾಗಾಗಿ ಒಮ್ಮೆ ಚಿತ್ರವನ್ನ ನೋಡಿ ಎನ್ನುವುದೇ ಸೂಕ್ತ ಎನಿಸುತ್ತದೆ.ಚಿತ್ರದಲ್ಲಿ ಬರುವ ಬಹಳಷ್ಟು ಪಾತ್ರಗಳು ಅವುಗಳ ವರ್ತನೆಗಳು ನೈಜವಾಗಿವೆ ಅಷ್ಟೇ ಅಲ್ಲ ಮಜಾ ಕೊಡುತ್ತವೆ.
ಆನೇಕಲ್ ಸುಬ್ಬಾರಾಯ ಶಾಸ್ತ್ರಿಗಳ ಬಗ್ಗೆ ಅದ್ಯಯನ ನಡೆಸಿ, ಅವರ ಸಾಧನೆಯನ್ನು ಬೆಳಕಿಗೆ ತರಬೇಕೆನ್ನುವ ಉತ್ಸಾಹ, ಉದ್ದೇಶ ಪ್ರಪಾತ ಚಿತ್ರದ ನಾಯಕನದ್ದು. ಅದನ್ನು ಸಾಧಿಸುವ ಹಾದಿಯಲ್ಲಿ ಆತನಿಗೆ ಎದುರಾಗುವ ತೊಡಕುಗಳು ಅಡೆತಡೆಗಳು ಮುಂತಾದವುಗಳೇ ಚಿತ್ರದ ತಿರುಳು. ಸೂಕ್ಷ್ಮ ವಿಷಯವನ್ನೂ ಚೆನ್ನಾಗಿ, ವಿವರವಾಗಿ ತೆರೆದಿಡುವ, ಹಾಗೆ ಇತಿಮಿತಿಯ ಬಜೆಟ್ಟಿನ ನಡುವೆಯೂ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಸಾದರ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ.ವಸ್ತುವಿನ ವಿಚಾರದಲ್ಲೂ ನಿರೂಪಣೆಯ ವಿಚಾರದಲ್ಲೂ ಗೆದ್ದಿರುವ ಸುಚೇಂದ್ರ ಪ್ರಸಾದರ ಈ ಚಿತ್ರ ಅಷ್ಟೇನೂ ಗಮನ ಸೆಳೆಯದಿದ್ದದ್ದು, ಜೊತೆಗೆ ಚಿತ್ರವನ್ನ ನಮ್ಮ ಪ್ರಶಸ್ತಿ ಮಂಡಳಿಯವರೂ ಗುರುತಿಸದಿದ್ದದ್ದು ಇನ್ನೂ ಬೇಸರದ ಸಂಗತಿ. ಯಾವ ಯಾವದೂ ಚಿತ್ರಗಳಿಗೆ ಒಂದೊಂದು ಪ್ರಶಸ್ತಿಯನ್ನು ಹಂಚಿಬಿಡುವ ನಮ್ಮವರು 'ಪ್ರಪಾತ' ಚಿತ್ರದಲ್ಲಿ ಕೊಡತಕ್ಕ, ಪರಿಗಣಿಸತಕ್ಕ ಹಲವಾರು ವಿಷಯಗಳಿದ್ದರೂ 'ಕಣ್ಣು' ಮುಚ್ಚಿಕೊಂಡದ್ದರ ಹಿಂದಿನ ರಹಸ್ಯವನ್ನು ದೇವರೇ ಕಂಡುಹಿಡಿಯಬೇಕೇನೋ.
ಇರಲಿ. ಕನ್ನಡಿಗರೆಲ್ಲರೂ ಅವಶ್ಯವಾಗಿ ನೋಡಲೇಬೇಕಾದ ಚಿತ್ರ ಪ್ರಪಾತ ಒಮ್ಮೆ ನೋಡಿ..

5 comments:

  1. Chithra bidugade aagideya? illavaadalli yaavaaga?

    ReplyDelete
  2. is it available in DVD ? please advise where to how to watch also thanks balu

    ReplyDelete
  3. ಚಿತ್ರ ಬಿಡುಗಡಿಯಾಯಿತಾದರೂ ಗಮನಸೆಲೆಯಲಿಲ್ಲ. ಡಿವಿಡಿ ಇನ್ನೂ ಬಿಡುಗಡೆಯಾಗಿಲ್ಲ. ನೀವು ನೋಡಬೇಕೆನಿಸಿದರೆ ಒಮ್ಮೆ ಸುಚೇಂದ್ರ ಪ್ರಸಾದ್ ರನ್ನು ಭೇಟಿ ಮಾಡಿ.ಅವರ ಮೊಬೈಲ್ ಸಂಖ್ಯೆ: 9448067308

    ReplyDelete