Monday, January 28, 2013

ವಿಶ್ವರೂಪಂ.ವಿ-ರೂಪಂ.....?

ಶಾರುಕ್ ಖಾನ್ ನಿರ್ಮಿಸಿ ನಟಿಸಿದ ರಾ.ಒನ್ ಚಿತ್ರ ಎಲ್ಲರಿಗೂ ಗೊತ್ತಿರಬಹುದು.ಭಾರತದ ಅತ್ಯಂತ ಹೆಚ್ಚು ವೆಚ್ಚದ ಚಿತ್ರ ಎಂದು ಖ್ಯಾತಿಗಳಿಸಿದ ಚಿತ್ರ ತಾಂತ್ರಿಕವಾಗಿ ತುಂಬಾ ಮುಂದೆ ಇತ್ತು. ಚಿತ್ರದ ಗ್ರಾಫಿಕ್ಸ್ ಹಾಲಿವುಡ್ ಚಿತ್ರಗಳಲ್ಲಿನ ದೃಶ್ಯ ವೈಭವಕ್ಕೆ ಸಮವಾಗಿತ್ತು. ಅದರಲ್ಲೂ ಕೆಲವು ದೃಶ್ಯಗಳನ್ನು ಹಾಲಿವುಡ್ಡಿನ ಸೂಪರ್ ಹಿಟ್ ಚಿತ್ರಗಳಿಂದ ನೇರವಾಗಿ ಎತ್ತಿದ್ದರೂ ಗುಣಮಟ್ಟದಲ್ಲಿ ಯಾವುದೇ ಕುಂದು ಕೊರತೆಗಳಿರಲಿಲ್ಲ. ಆದರೆ ಕೊರತೆಯಿದ್ದದ್ದು ಮಾತ್ರ ಕಥೆಯಲ್ಲಿ. ತೀರಾ ಅಸಂಗತವಾದ ಅತ್ತ ಮಜವನ್ನೂ  ಕೊಡದ ವಾಹ್ ಎನಿಸದ ಜೀ ಒನ್ ಪಾತ್ರ ಚಿತ್ರದ ಸೋಲಿಗೆ ಪ್ರಮುಖ ಕಾರಣವಾಗಿತ್ತು ಎನ್ನಬಹುದು.
ಕಮಲಹಾಸನ್ ನಿರ್ದೇಶನದ, ಅಭಿನಯದ ವಿಶ್ವರೂಪಂ ಚಿತ್ರ ನೋಡುವಾಗ ರಾ.ಒನ್ ಚಿತ್ರ ನೆನಪಾಗುವುದು ಸ್ವಾಭಾವಿಕ. ಯಾಕೆಂದರೆ ಇಲ್ಲೂ ಆ ಚಿತ್ರದಂತೆಯೇ ಅದ್ಭುತ ತಂತ್ರಜ್ಞಾನವಿದೆ. ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ.ಆದರೆ ಇಲ್ಲದೆ ಇರುವುದು ಅಥವಾ ಇದ್ದೂ ಇಷ್ಟವಾಗದಂತಿರುವುದು  ಕಥೆ ಮಾತ್ರ. ಹೌದು! ವಿಶ್ವರೂಪಮ್ ತಾಂತ್ರಿಕವಾಗಿ ಶ್ರೇಷ್ಠತೆ ಮೆರೆದಿರುವ ಚಿತ್ರ. ಹಾಗೆ ಚಿತ್ರದ ಹಿನ್ನೆಲೆಯಲ್ಲಿ  ಕೂಡ ಭಯೋತ್ಪಾದನೆಯ ಎಳೆ ಇರುವುದರಿಂದ  ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಚಿತ್ರ ಎನ್ನಬಹುದಾದರೂ ಕಥೆ/ಚಿತ್ರಕಥೆಯ ಹೆಣಿಗೆ ಮಾತ್ರ ತೀರಾ ನೀರಸವಾದದ್ದು. ತುಂಬಾ ವೆಚ್ಚದ, ನಿರೀಕ್ಷೆಗಳ ಚಿತ್ರಗಳನ್ನೂ ಕಾತುರನಾಗಿ ನೋಡಿದಾಗ ಈ ಒಂದು ಭಾವ ಹುಟ್ಟಿಬಿಟ್ಟಾಗ ನಮ್ಮ ಮೇಲೆಯೇ ಅನುಮಾನ ಮೂಡುವುದು ಸಹಜ. ನಾವೇ ಅತಿಯಾದ ನಿರೀಕ್ಷೆ ಮಾಡಿಬಿಟ್ಟೆವಾ  ಅಥವಾ ತುಂಬಾ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಏನೂ ಇಲ್ಲ ಎನ್ನುವುದು ನಮ್ಮ ಸ್ವಾಭಾವಿಕ ಹಿಂಸಾ ವಿನೋದದ ಗುಣವಾ ಎಂಬ ಗೊಂದಲ ನನಗಂತೂ ಮೂಡುತ್ತದೆ. ಆದರೆ ಚಿತ್ರ ನೋಡಿಬಂದ ಪ್ರೇಕ್ಷಕರ ಮುಖಗಳಲ್ಲಿ ಅಸಂತೃಪ್ತಿ ಕಂಡು ಬಂದಾಗ ಏನೋ ಊನವಿರುವುದು ನಿಜ ಎನಿಸುತ್ತದೆ.
ಖಳನಾಯಕ/ಉಗ್ರವಾದಿ ನ್ಯೂ ಯಾರ್ಕ್ ನಗರದಲ್ಲಿ ಬಾಂಬ್ ಸ್ಫೋಟಿಸಿ ಹಾನಿ ಮಾಡಬೇಕೆಂಬ ದುಷ್ಕೃತ್ಯಕ್ಕೆ ಕೈಹಾಕಿದಾಗ ನಾಯಕ ಬಿಡಲಾಗುತ್ತದೆಯೇ...ಸುಮ್ಮನಿರುವುದು ಸಾಧ್ಯವೇ...ಅಮೆರಿಕಾದ ಪೋಲಿಸ್ ಬೆಂಬಲ ತೆಗೆದುಕೊಂಡು ಅವರನ್ನು ಸಂಹರಿಸುವ ಕಾರ್ಯಕ್ಕೆ ಕೈಹಾಕುವುದರಿಂದ ಇದೊಂದು ಸಾಹಸಮಯ ಚಿತ್ರ ಎನ್ನಬಹುದು. ಹೆಲಿಕಾಪ್ಟರ್ ಗಳ ಹಾರಾಟ, ಗುಂಡಿನ ಮೊರೆತ ಬಾಂಬ್ ಸ್ಫೋಟದ ಸದ್ದು ಚಿತ್ರನೋಡಿ ಚಿತ್ರಮಂದಿರದಿಂದ ಹೊರಬಂದ ಮೇಲೂ ಕಿವಿಯಲ್ಲಿ ಮೊರೆಯುತ್ತಿರುತ್ತದೆ.
ಕಥಕ್ ನಾಟ್ಯ ಕಲಿಸುವ ಗುರುವಾಗಿರುವ ನಾಯಕನ ಹೆಂಡತಿಗೆ ನಾಯಕನ ಮೇಲೆ ಎಂಥದೋ ಅನುಮಾನ. ಹೆಣ್ಣಿಗನಂತಿರುವ ಗಂಡ ಬೇರೊಂದು ಸಂಬಂಧವಿರಿಸಿಕೊಂಡಿರಬಹುದಾ..? ಈ ಎಳೆಯ ಮೂಲಕ ಸಿನೆಮಾವನ್ನು ಒಂದು ಕೌಟುಂಬಿಕ ಕಥಾಹಂದರದ ಚಿತ್ರ ಎನ್ನಬಹುದು. ಅಥವಾ ಒಂದು ಸಾಂಸಾರಿಕ ವಸ್ತು ಕೂಡ ಚಿತ್ರದಲ್ಲಿದೆ ಎನ್ನಬಹುದೇನೋ...ಹಾಗೆ ನಾಯಕ ಮುಸ್ಲಿಂ, ಹಿಂದೆ ಉಗ್ರಗಾಮಿಗಳ ಗುಂಪಿಗೆ ಸೇರಿರುತ್ತಾನೆ  ಎಂಬುದು   ಚಿತ್ರದಲ್ಲಿ ಬಯಲಾಗುವ ನಿಗೂಢ ರಹಸ್ಯ..
ಈ ಎಲ್ಲ ಅಂಶಗಳನ್ನು ಜೋಡಿಸಿರುವ ಆ ಮೂಲಕ ಒಂದು ಒಟ್ಟಾರೆ ಕಥೆಯನ್ನಾಗಿ ಹೆಣೆದಿರುವ ಪ್ರಯತ್ನ ಮಾತ್ರ ಪರಿಣಾಮಕಾರಿಯಾಗಿಲ್ಲ ಎನ್ನಬಹುದು. ಕಮಲಹಾಸನ್ ಎಲ್ಲಾ ರೀತಿಯಲ್ಲೂ, ಎಲ್ಲಾ ದೃಶ್ಯಗಳಲ್ಲೂ ಅಷ್ಟೇನೂ ಭಿನ್ನವಾಗಿ ಕಾಣುವುದಿಲ್ಲ. ಹಾಗಂತ ಅವರು ಅಭಿನಯಿಸಿಲ್ಲ ಎಂಬರ್ಥವಲ್ಲ. ಪ್ರತಿಯೊಂದು ದೃಶ್ಯವೂ ಭಿನ್ನವಾಗಿರಬೇಕು, ಶ್ರೀಮಂತವಾಗಿರಬೇಕು ಎಂಬುದನ್ನು ಹಠತೊಟ್ಟು ಸಾಕಾರಗೊಳಿಸಿರುವ ಕಮಲ್ ಎಲ್ಲಿ ಎಡವಿದ್ದಾರೆ ಎಂಬುದನ್ನು ಮತ್ತೊಮ್ಮೆ ಮಗದೊಮ್ಮೆ ಪರೀಕ್ಷಿಸಿದರೆ ಬಾಣ ಕಥೆ  ಎಂಬಲ್ಲೇ ಹೋಗಿ ಚುಚ್ಚಿಕೊಳ್ಳುತ್ತದೆ.
ಕೆಲವುಕಡೆ  ಹಿನ್ನೆಲೆ ಸಂಗೀತದ ಆಬ್ಬರ ಮಾತುಗಳನ್ನೇ ನುಂಗಿಹಾಕಿದೆಯಾದರೂ ಒಟ್ಟಾರೆಯಾಗಿ ಪರಿಣಾಮಕಾರಿಯಾಗಿದೆ.ಸಾಹಸ, ಅತ್ಯುತ್ತಮ ಛಾಯಾಗ್ರಹಣ ಅದ್ಭುತ ಲೊಕೇಶನ್ ಗಳನ್ನು ನೋಡಿ ಮಾರುಹೋಗುವುದಾದರೆ ಒಮ್ಮೆ ನೋಡಲೇಬೇಕಾದ ಚಿತ್ರ ವಿಶ್ವರೂಪಂ.

1 comment: