Monday, December 31, 2012

ಹೊಸವರ್ಷದ ಶುಭಾಶಯಗಳು-2013

ಹೊಸ ವರ್ಷದ ಶುಭಾಶಯಗಳು.
ಮೊಟ್ಟ ಮೊದಲ ಬಾರಿಗೆ ಹೊಸವರ್ಷದ ಕಲ್ಪನೆ ನನಗೆ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೋದೆ. ನಮ್ಮ ಮನೆಗೆ ಒಂದು ದೊಡ್ಡ ಅಂಚೆ ಪತ್ರ ಬಂದಿತ್ತು. ನಮ್ಮ ಮನೆಯವರಿಗೆಲ್ಲಾ ಆಶ್ಚರ್ಯ. ಇದೇನು.. ಮಾಮೂಲಿ ಪತ್ರದ ಗಾತ್ರ ಬೇರೆ. ಇದರ ಉದ್ದಗಲವೇ ಬೇರೆ. ಅದನ್ನು ಬಿಡಿಸಿ ನೋಡಿದಾಗಲೇ ಗೊತ್ತಾದದ್ದು ಅದು ಹೊಸವರ್ಷದ ಶುಭಾಷಯ ಪತ್ರ ಎಂದು. ಅದನ್ನು ನಮ್ಮ ಚಿಕ್ಕಪ್ಪ ಕಳುಹಿಸಿದ್ದರು. ಅದು ನಮಗೆ ಬಂದ ಮೊದಲ ಹೊಸವರ್ಷದ ಶುಭಾಷಯ ಪತ್ರ. ನಾನಾಗ ಬಹುಶ ಪ್ರಾಥಮಿಕ ಶಾಲೆಯಲ್ಲಿದ್ದೆ. ಹೊಸವರ್ಷ, ಶುಭಾಷಯ ಪತ್ರ ಮುಂತಾದವುಗಳ ಪರಿಕಲ್ಪನೆ ಮೊಟ್ಟಮೊದಲ ಬಾರಿಗೆ ಮೂಡಿಸಿದ್ದು ನಮ್ಮ ಚಿಕ್ಕಪ್ಪನ ಆ ಪತ್ರ ಎಂದು ಹೇಳಬಹುದು. ತದನಂತರ ನಾವು ಒಂದಷ್ಟು ವರುಷಗಳು ಜನವರಿಗಾಗಿ ಕಾಯುತ್ತಿದ್ದೆವು. ಶುಭಾಷಯ ಪತ್ರ ಕಳುಹಿಸಲು ಮತ್ತು ಸ್ವೀಕರಿಸಲು. ನಾನು ಪ್ರೌಢ ಶಾಲೆಗೇ ಬಂದಾಗ ಶಾಲೆಯಲ್ಲಿ ಹೊಸವರ್ಷದ ಆಚರಣೆ ತುಸು ಜೋರಾಗೆ ಇರುತ್ತಿತ್ತು. ತೀರಾ ಆತ್ಮೀಯರಾಗಿ ಓಡಾಡುತ್ತಿದ್ದವರು ಯಾವುದೋ ಮಾತಿಗೆ ಜಗಳವಾಡಿಕೊಂಡು ಮಾತು ಬಿಟ್ಟಿದ್ದರೆ, ಇಬ್ಬರಿಗೂ ಮಾತಾಡಿಸಿಕೊಳ್ಳಬೇಕೆಂಬ ತುಡಿತ ಇರುತ್ತಿತ್ತಾದರೂ ಬಿಂಕ ಅದಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಆದರೆ ಹೊಸವರ್ಷದ ಒಂದು ಶುಭಾಷಯ ಪತ್ರ ಇಬ್ಬರನ್ನು ಒಂದು ಮಾಡಿಬಿಡುತ್ತಿತ್ತು.ನಾವು ಹೈಸ್ಕೂಲಲ್ಲಿದ್ದಾಗ ನಮ್ಮನ್ನು ನೋಡಿ ನನ್ನ ತಂಗಿಯೂ  ಶುಭಾಷಯ ಪತ್ರಗಳನ್ನೂ ತನ್ನ ಗೆಳತಿಯರಿಗೆ ಕೊಡುವುದಕ್ಕೆ ಶುರುಮಾಡಿದ್ದಳು. ಶ್ರುತಿ, ಬೇಬಿ ಶ್ಯಾಮಿಲಿಯ ಫೋಟೋಗಳು, ಗುಲಾಬಿ ಹೂವುಗಳ ಹೂಕುಂಡದ ಫೋಟೋಗಳು, ಸೂರ್ಯೋದಯ, ನದಿ,ದೋಣಿ, ಮಾಲಾಶ್ರೀ , ಸುಧಾರಾಣಿ ಮುಂತಾದವುಗಳೆ ಶುಭಾಷಯ ಪತ್ರಗಳಾಗಿದ್ದವು.ಅದರ ಹಿಂದೆ ಬರೆಯುತ್ತಿದ್ದ ನುಡಿಗಟ್ಟುಗಳು, ಚಿಕ್ಕ ಚಿಕ್ಕ ಕವನಗಳು ಮಜಾ ಕೊಡುತ್ತಿದ್ದವು.
ನನ್ನದೊಂದು ಉಡುಗೊರೆ
ನಿನ್ನದೊಂದು ಉಡುಗೊರೆ
ನಮ್ಮಿಬ್ಬರ ಉಡುಗೊರೆ ತವರುಮನೆ ಉಡುಗೊರೆ.,
ಆಕಾಶಕ್ಕೆ ಎಣಿಯಿಲ್ಲ
ಸಮುದ್ರಕ್ಕೆ ಸೇತುವೆಯಿಲ್ಲ
ನನ್ನ ನಿನ್ನ ಸ್ನೇಹಕ್ಕೆ ಮಿತಿಯಿಲ್ಲ.
ಎಂಬ ಕಿರುಕವನದ ತರಹದ ಬರಹಗಳಿಂದ ಹಿಡಿದು, 
ಕೈಕೆಸರಾದರೆ ಕೈ ತೊಳ್ಕೋ
ಬಾಯಿ ಮೊಸರಾದರೆ ಬಾಯಿ ಒರೆಸ್ಕೋ
ಆದರೆ ನನ್ನ ಸ್ನೇಹ ಯಾವತ್ತಿಗೂ ನೆನಪಿಟಕೋ
 ತರಹದ ತರಲೆ ನುಡಿಬರಹಗಳನ್ನೂ ಬರೆಯುತ್ತಿದ್ದದ್ದುಂಟು. ನನ್ನ ತಂಗಿಯರಂತೂ ತಮ್ಮ ಗೆಳೆತಿಯರಿಗೆಲ್ಲ ಬರೆಯಲು ಉತ್ಸುಕರಾಗುತ್ತಿದ್ದರಷ್ಟೇ ಅಲ್ಲ ಮೊದಲೇ' ನಿನಗೆ ಈ ಕಾರ್ಡ್ ಇಷ್ಟಾನಾ ಹಾಗಾದ್ರೆ ಇದನ್ನೇ ಕಳುಹಿಸ್ತೀನಿ, ಅವಳಿಗೆ ಇದು ಸಾಕು ಅಂತಲೋ, ಲೇ...ಅದು ನನಗೆ ಇಷ್ಟ ಆಯ್ತು...ನನಗೇನೆ ಅದ  ಕಳಿಸೆ...' ಎಂದು ಮೊದಲೇ ಪಿಕ್ಸಿಂಗ್ ಮಾಡಿಕೊಳ್ಳುತ್ತಿದ್ದದ್ದು ನನಗೆ ನಗೆ ತರಿಸುತ್ತಿತ್ತು.
 ನಮ್ಮ ಹೈಸ್ಕೂಲಿನಲ್ಲಿ ಬೇರೆಯದೆ ಆದ ವಾತಾವರಣವಿತ್ತು. ಯಾವ ಹುಡುಗಿ ಯಾವ ಹುಡುಗನಿಗೆ ಯಾವ ಗ್ರೀಟಿಂಗ್ ಕಾರ್ಡ್ಸ್ ಕೊಟ್ಟಿದ್ದಾನೆ/ಳೆ ಎಂಬುದು ಕುತೂಹಲ ತರುವ ರೋಮಾಂಚನಗೊಳಿಸುವ ವಿಷಯವಾಗಿತ್ತು.ಕೆಂಪು ಒಂಟಿ ಗುಲಾಬಿಯ , ಫೋಲ್ಡಿಂಗ್ ತರಹದ ಕಾರ್ಡ್ ಕೊಟ್ಟಿದ್ದಾನೆಂದರೆ  ಅಥವಾ ಕೊಟ್ಟಿದ್ದಾಳೆಂದರೆ ಅವರಿಬ್ಬರ ನಡುವೆ ಏನೋ ಇದೆ ಎಂಬುದನ್ನು ಅವರಿಗಿಂತ ಮೊದಲೇ ಬೇರೆಯವರು ನಿರ್ಧರಿಸಿಬಿಡುತ್ತಿದ್ದರು.ಕೆಲವೊಮ್ಮೆ ಕೆಲ ಖದೀಮರು ತಮಗಿಷ್ಟವಿದ್ದವರಿಗೆ [ ಆದರೆ ಆಕೆಗಿಷ್ಟವಿಲ್ಲದಿದ್ದರಿಂದ ] ಸಮಯಸಾಧಿಸಿ ಕೆಂಪು ಗುಲಾಬಿಯ ಹೂವಿನ ಶುಭಾಷಯ ಪತ್ರ ಕೊಟ್ಟು ಸಿನೆಮಾದ ಚಂದನೆಯ ಪ್ರೇಮಗೀತೆಯ ಸಾಲು ಬರೆಯುತ್ತಿದ್ದರು. ಮುಂದೆ ಅದು ವಿವಾದಗಳ ಗೂಡಾಗಿ ಶಿಕ್ಷಕರ ಹತ್ತಿರಕ್ಕೆ ಇತ್ಯರ್ಥಕ್ಕೆ ಬಂದಾಗ 'ನಾನು ಫ್ರೆಂಡ್ ಶಿಪ್ಪಲ್ಲಿ ಕೊಟ್ಟೆ..ಅದಕ್ಕೆ ತಪ್ಪು ತಿಳ್ಕೋಬೇಕಾ...ಅದು ಫಿಲಂ ಸಾಂಗು...ನಾ ಬರೆದಿದ್ದಾ..' ಎಂಬೆಲ್ಲಾ ಮಾತುಗಳಿಂದ ತಮ್ಮನ್ನು ತಾವು ಆರೋಪಮುಕ್ತನನ್ನಾಗಿ ಮಾಡಿಕೊಳ್ಳುತ್ತಿದ್ದರಲ್ಲದೆ 'ಮನಸ್ಸಲ್ಲಿ ಏನೇನೋ ಇಟ್ಕೊಂಡು ನಮ್ಮದೇ ತಪ್ಪು ಅಂತಾರೆ..' ಎಂಬರ್ಥದ ಮಾತುಗಳಿಂದ ಆರೋಪಿಸಿದವರನ್ನೇ ಸಣ್ಣಮನಸ್ಸಿನವರು ಎಂದು ಸಾಧಿಸುತ್ತಿದ್ದರು.
ಮುಂದೆ ಕಾಲೇಜಿನಲ್ಲೂ ಶುಭಾಷಯ ಪತ್ರವಿತ್ತಾದರೂ ಹೊಸವರ್ಷಕ್ಕೆ ಅದರಲ್ಲಿ ಅಂತಹ ಪುಳಕವಿರುತ್ತಿರಲಿಲ್ಲ. ಮೊದಲೇ ಜೋಡಿಗಳು ನಿಕ್ಕಿಯಾಗುತ್ತಿದ್ದರಿಂದ ಮತ್ತೆಲ್ಲಾ ಗೊತ್ತಿದ್ದರಿಂದ ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಎಂಬಂತೆ ಇದ್ದುಬಿಡುತ್ತಿದ್ದೆವು. ಆದರೂ ಶುಭಾಷಯ ಪತ್ರಗಳ ಭರಾಟೆಯಂತೂ ಇದ್ದೆ ಇರುತ್ತಿತ್ತು. ಸಂಗೀತ ಹಾಡುವ ಬಣ್ಣಬಣ್ಣದ ದುಬಾರಿ ಬೆಲೆಯ ಕಾರ್ಡುಗಳ ವಿತರಣೆಯಂತೂ ನಡೆದು ಜೋಡಿಯಾಗಿ, ಜಗಳವಾಗಿ ಏನೇನೋ ಆಗುತ್ತಿದ್ದದುಂಟು.
ಈವಾಗ ಮೊಬೈಲ್ ಬಂದಿದೆ. ಇಮೇಲ್ ಇದೆ. ಕಡಿಮೆ ಖರ್ಚಿನಲ್ಲಿ ಶುಭಾಶಯಗಳ ರವಾನೆಯಾಗುತ್ತದೆ.ಒಂದೇ ಇಮೇಲ್, ಅಥವಾ ಒಂದೆ ಮೆಸೇಜ್ ಎಲ್ಲರಿಗೂ ಒಂದೆ ಸಾರಿ ರವಾನೆಯಾಗುತ್ತದೆ. ಅದು ಬೇರೆಯವರಿಗೆ ಗೊತ್ತಾಗುವ ಸಂಭವವೂ ಕಡಿಮೆ ಇದೆ. ಮೊದಲೆಲ್ಲಾ 'ನಿನಗೂ ಇದೆ ಕೊಟ್ಟಿದ್ದಾನಾ...ನೋಡು ನನಗೂ ಇದೆ ಗ್ರೀಟಿಂಗ್ಸ್ ಕಳಿಸಿದ್ದಾನೆ...? 'ಎನ್ನುವ  ಮಾತುಗಳು ಅರ್ಥ ಕಳೆದುಕೊಂಡಿವೆ.
ಇರಲಿ ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು...

3 comments:

  1. ಹೌದು, ಗ್ರೀಟಿಂಗ್ ಕಾರ್ಡ್ನ ಸುಂದರ ಲೋಕವನ್ನ
    ಮತ್ತೆ ನೆನಪಿಸಿದಿರಿ.
    ಶುಭಾಶಯಗಳು

    ReplyDelete
  2. Very funny sir. i was painting in post cards for new year wishes. I like your narration. You took me to my primary school days. :-)

    ReplyDelete
    Replies
    1. ಧನ್ಯವಾದಗಳು ಸಾವಿತ್ರಿ ಮೇಡಂ...ಒಂದೆ ದಿನದಲ್ಲಿ ಎಷ್ಟೆಲ್ಲಾ ಓದಿದ್ದೀರಾ..? ನೀವು ಪೇಯಿಂಟ್ ಮಾಡ್ತೀರಾ ಅಂದ ಹಾಗಾಯ್ತು.. ಹಾಗೆ ನೀವು ಬ್ಲಾಗ್ ಶುರು ಮಾಡಿ ಬರೆಯದೆ ಹಾಗೆ ಬಿಟ್ಟಿದ್ದೀರಾ..? ಮುಂದುವರೆಸಿ...

      ವಂದನೆಗಳು...

      Delete