Saturday, December 1, 2012

ಎರಡು ಕವನಗಳು....

 ನನ್ನ ಪೇಂಟಿಂಗ್....
ಕೆಟ್ಟ ಸಮಯವಿದು...
1.
ಕಳೆಯೋಣ
ಈ ಸಮಯವನು

ತಲೆಯೆತ್ತಿದರೆ ಗ್ರಹಣ
ಹಿಡಿ ಅನ್ನ  ಮಣ್ಣು
ಕಣ್ಣ  ತುಂಬದ ನಿದಿರೆ
ಸೋಲು ಸೋಲೇ ಉಸಿರು.

ಹಾದು ಹೋಗಲಿ ಹೀಗೆ
ತಪ್ಪಿಸುವ ಮಾತೇಕೆ?

2.
 ಕಾಯೋಣ
ಆ ಕಾಲವನು

ಬದುಕು ಬೆಳದಿಂಗಳು
ಭರ್ತಿ ತೃಪ್ತಿಯ ಉದರ
ಸಂತೆಯಲು ನಿದ್ರೆ
ಕೈತಾಕಿದ್ದು ಚಿನ್ನ.

ಕಾಲ ಬರಲೇ ಬೇಕು ..
ಕಳೆದರೆ ರಾತ್ರಿ
ಉಳಿದದ್ದು ಹಗಲೇ ತಾನೇ..?

2. ಸೋತಿದ್ದೇನೆ..ಗೆಲ್ಲಲು ಬೇಕಿದೆ ಕನಸು...

ಒದ್ದಾಡುತ್ತಿದ್ದೇನೆ
ಮಗ್ಗುಲು ಬದಲಿಸುತ್ತಾ
ಕಣ್ಣರೆಪ್ಪೆ ಅದುಮುತ್ತಾ
ನೂರು ಸೋಲುಗಳನ್ನು ಪಕ್ಕಕ್ಕಿರಿಸಿ,
ಸುಡುಚಿಂತೆಗಳಿಗೆ ತಣ್ಣೀರೆರೆಚಿ,
ಇತಿಹಾಸವನ್ನು ಮೆದುಳಿ೦ದ ಅಳಿಸಿ
ನನ್ನ ನಾ ಮರೆಯುವ ಯತ್ನಗಳಿಂದ
ಸೋತು ಸೋತು ಮತ್ತೆ ಸೋತು
ಮಲಗಿದ್ದೇನೆ ನಿದ್ರೆ ಬಾರದೆ..!
****
ಬಾರದ ಪ್ರಿಯತಮೆಗಾಗಿ ಕಾದಿದ್ದೆ.
ಒಡನಾಡಿದ ನೆನಪುಗಳು ನನ್ನನ್ನುಳಿಸಿದ್ದವು
ಬೇಸರಿಸದಂತೆ ಬಸವಳಿಯದಂತೆ
ಸೋತು ಸಾಯದಂತೆ
ಮುಖ ತಿರುಗಿಸಿದವಳಿಗೆರೆಡು ಅಕ್ಷತೆ ಹಾಕಿ ಬಂದೆ
ಮತ್ತೆ ಕಾಯಲು ಹೋಗಲಿಲ್ಲ.

. ಬಾರದ ಮಳೆಗಾಗಿ ಕಾದಿದ್ದೆ. 
ಮಳೆ ಬಂದಂತೆ ಬೆಳೆ ಬೆಳೆದಂತೆ
ಬದುಕು  ಹಸನಾದಂತೆ...
ಹಗಲುಗನಸುಗಳೆನ್ನ  ಕಾದಿದ್ದವು
ಜಿಗುಪ್ಸೆಯಿಂದ ,ಹಸಿವಿಂದ
ಆತ್ಮಹತ್ಯಯಂತಹ ಪಾಪದಿಂದ

ಮಳೆಬರಲಿಲ್ಲ.
ರೂಢಿ ಬದುಕಾಗಿ ,
ಬದುಕು ರೂಢಿಯಾಗಿ ನಾನೀಗ ಮಳೆಗೆ ಕಾಯುತ್ತಿಲ್ಲ.
***
ಈಗ
ಬಾರದ ನಿದ್ರೆಗಾಗಿ ಕಾಯುತ್ತಿದ್ದೇನೆ
ನಿದ್ರೆ ಬಾರದೆ,ಕಣ್ಣು ಮುಚ್ಚದೆ
ಬೀಳದ ಕನಸುಗಳನ್ನ ಶಪಿಸುತ್ತಾ
ಕತ್ತಲಿದೆ, ಮಂಚವಿದೆ,
ಬದುಕು ನಿರ್ವರ್ಣ..

ನಿದ್ರೆಯಿಲ್ಲದೆ, ಕನಸಿಲ್ಲದೆ,
ನಾಳೆಗಳೆಲ್ಲವೂ ಶೂನ್ಯ...!!!

*****

ನನ್ನ ಹಳೆಯ ಡೈರಿಯಲ್ಲಿದ್ದ ಕವನಗಳಿವು. ಬೆಂಗಳೂರಿಗೂ  ಬರುವ ಮುಂಚಿನ ದಿನಗಳ ನನ್ನ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತವೆ  . ಆಶ್ಚರ್ಯದ ಸಂಗತಿಯೆಂದರೆ ಈವತ್ತಿಗೂ ನನಗದು ಸೂಕ್ತ ಅನಿಸುತ್ತದೆ... ಇರಲಿ ನನಗೆ ಕವನವನ್ನು ಓದುವುದು ಇಷ್ಟ. ಬರೆಯುವುದೆಂದರೆ ಕಷ್ಟ . ಎಷ್ಟೋ ತಲೆಗೆ ಬಂದದ್ದನ್ನು ಗೀಚಿ ಆಮೇಲೆ ಹರಿದುಹಾಕಿದ್ದೇನೆ . ಈ ಎರಡು ಕವನಗಳೂ  ಅಷ್ಟೇ ಹತಾಶ ಮನೋಭಾವದಿಂದ ನಾನು ಹೊರಬರಲು ನನಗಾಗೆ ಬರೆದುಕೊಂಡದ್ದು .

4 comments:

 1. KavanagaLu Chennagive Ravindra. Nimm painting noDidaaga 'Amistad' cinema nenapaytu yako..Sakhath movie nOdiddeera?
  :-)
  malathi S

  ReplyDelete
  Replies
  1. ನೋಡಿದ್ದೀನಿ. ತುಂಬಾ ಒಳ್ಳೆಯ ಸಿನೆಮಾ ಸ್ಪಿಲ್ ಬರ್ಗ್ ಸಿನೆಮಾ....
   ಬಹುಷಾ, ಆ ಹಡಗು, ಆ ಹಿನ್ನೆಲೆ, ಮಳೆ ಅದೆಲ್ಲದರ ನೆನಪಿಂದಾಗಿ ನಿಮಗೆ ಅಮಿಸ್ತಾದ್ ನೆನಪು ಬಂದಿರಬೇಕು...

   Delete
 2. ರವಿಂದ್ರ ಅವರೇ ಕವನಗಳು ತುಂಬಾ ಚೆನ್ನಾಗಿವೆ
  "ನನ್ನ ನಾ ಮರೆಯುವ ಯತ್ನಗಳಿಂದ
  ಸೋತು ಸೋತು ಮತ್ತೆ ಸೋತು
  ಮಲಗಿದ್ದೇನೆ ನಿದ್ರೆ ಬಾರದೆ..!" ಈ ಸಾಲುಗಳು ತುಂಬಾ ಇಷ್ಟವಾಯ್ತು .
  ನಿಮ್ಮ ಚಿತ್ರ ನನಗೆ ಬದುಕನ್ನ ಪೂರ್ತಿಯಾಗಿ ಬದುಕುವ ಹಳ್ಳಿಗರನ್ನ ನೆನಪಿಸಿತು.
  ಇವರೂ ಚಿತ್ರ ಬಿಡಿಸಿ ಕವನ ಬರಿತಾರೆ ನೋಡಿ , http://vaishalisheshappa.blogspot.com/
  ಸ್ವರ್ಣಾ

  ReplyDelete
 3. ಕವನಗಳು ತುಂಬಾ ಚೆನ್ನಾಗಿವೆ ಸರ್. ಕವನ ಓದಿ, "ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು" ಎಂಬ ಯಯಾತಿ ನಾಟಕದಲ್ಲಿಯ ವಾಕ್ಯ ನೆನಪಾಯಿತು. ‌ಈ ಚಿತ್ರದಲ್ಲಿರುವುದು ಕಣದ ದೃಶ್ಯವೇ? ನನಗೆ ಷ್ಪಷ್ಟ ಗ್ರಹಿಕೆಯಾಗಲಿಲ್ಲ.

  ReplyDelete