Tuesday, November 13, 2012

ಕುಬಿ ಮತ್ತು ಹಿಟ್ ವಿಕೆಟ್ ...

 ಮೈಸೂರಿಗೆ ಹೋಗಿ ಬರುವುದಿತ್ತು. ಹಾಗಾಗಿ ಒಂದಷ್ಟು ಪುಸ್ತಕಗಳನ್ನು ಜತೆಯಲ್ಲಿಟ್ಟುಕೊಂಡಿದ್ದೆ . ಸಮಯ ಸಿಕ್ಕಾಗಲೆಲ್ಲಾ ಓದುವುದರಿಂದ ಸಮಯದ ಸದುಪಯೋಗ  ಆಗುತ್ತದೆನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಈಗಾಗಲೇ ಸುಮಾರು ಸಮಯವನ್ನು ಹೇಗೇಗೋ ಕಳೆದುಹಾಗಿದೆ. ನನ್ನ  ನೆಚ್ಚಿನ ನಿರ್ದೇಶಕ/ನಟ ಶಂಕರ್ ನಾಗ್ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಪ್ರತಿಕ್ಷಣವನ್ನು ದುಪ್ಪಟ್ಟು ದುಡಿಸಿಕೊಂಡವರು ಶಂಕರ್. 
ಹಾಗಾಗಿ ಈ ಸಾರಿ ಜೋಗಿಯವರ ಕಾದಂಬರಿ 'ಹಿಟ್ ವಿಕೆಟ್',  ಕಥಾ ಸಂಕಲನ ಸಂಕಲನ ಕಾಡು ಹಾದಿಯ ಕಥೆಗಳು ನನ್ನ ಪುಸ್ತಕದ ಸಂಗ್ರಹದಲ್ಲಿದ್ದವು. . ಹಿಟ್ ವಿಕೆಟ್ ಓದಿದೆ . ಕಾದಂಬರಿ ಸತ್ವವೇನೋ ಇಷ್ಟವಾಯಿತು. ಆದರೆ ನಿರೂಪಣೆ ಯಾಕೋ ಹಿಡಿಸಲಿಲ್ಲ . ಪ್ರತಿ ಅಧ್ಯಾಯದ ಕೊನೆಗೆ ಮುಂದಾಗುವುದರ ಸುಳಿವು ಪ್ರತಿ ಸಾರಿ ಕೊಡುವುದು ಯಾಕೋ ಕಿರಿಕಿರಿ ಎನಿಸಿತು. ಮೊದಲೆಲ್ಲಾ ಯಂಡಮೂರಿ ವೀರೇಂದ್ರನಾಥರ  ಧಾರಾವಾಹಿಗಳು ನಿಯತಕಾಲಿಕದಲ್ಲಿ ಬರುವಾಗ ಆ ತರಹದ ಸುಳಿವುಗಳನ್ನು ಮುಂದಿನವಾರಕ್ಕೆ ಕಾಯುವಂತೆ ಮಾಡುತ್ತಿದ್ದವು. ಯಾವುದೋ ಒಂದು ಘಟನೆಯ ಕೊನೆಯಲ್ಲಿ 'ಅದೇ ಮುಂದೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆನ್ನುವುದು ಆ ಕ್ಷಣದಲ್ಲಿ ಅವನಿಗೆ ಗೊತ್ತಿರಲಿಲ್ಲ', 'ಆಕೆಯ ನಿರ್ಧಾರ ಅಚಲವಾಗಿತ್ತು. ಅದೇ ಮುಂದೆ ಅವಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ ಎಂಬುದು ಆ ಕ್ಷಣಕ್ಕೆ ಆಕೆಯಾ ಅರಿವಿಗೆ ಬರಲಿಲ್ಲ' ಎಂಬೆಲ್ಲಾ ಸೂಚನೆ/ಸುಳಿವುಗಳು ಕುತೂಹಲವನ್ನು ಇಮ್ಮಡಿಗೊಳಿಸುತ್ತಿತ್ತು. ಆದರೆ ಅದೇ ಒಟ್ಟಾರೆಯಾಗಿ ಕಾದಂಬರಿ ರೂಪದಲ್ಲಿ ನಮ್ಮ ಕೈಗೆ ಸಿಕ್ಕಾಗ ಅಂತಹ ಮಜವನ್ನೇನೋ ಕೊಡುತ್ತಿರಲಿಲ್ಲ . ಆಗ ಕೊಡುತ್ತಿತ್ತೇನೋ ..ಆದರೆ ಇತ್ತೀಚಿಗೆ ಯಾಕೋ ಆ ತರಹದ ಸುಳಿವು ಕಿರಿಕಿರಿ ಉಂಟುಮಾಡುತ್ತವೆ . ಕಾರಣ ನನಗೂ ಗೊತ್ತಿಲ್ಲ . ಮೊನೆ ಹಿಟ್ ವಿಕೆಟ್ ಕಾದಂಬರಿ ಓದುವಾಗಲೋ ನನಗೆ ಹಾಗೆ ಆಯಿತು . ಕ್ರಿಕೆಟ್ , ಬೆಟ್ಟಿಂಗ್ ಅದರ ವಿರಾಟ ರೂಪ ಮುಂತಾದವುಗಳನ್ನು ಒಂದು ಕಾದಂಬರಿಯಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯ . ಮತ್ತದಕ್ಕೆ ಸಾಕಷ್ಟು ದಾಖಲೆ , ನಿಜ ಘಟನೆಗಳನ್ನೂ ಸೇರಿಸಿದಾಗ ಇನ್ನೂ ಕಾದಂಬರಿ ಸತ್ವಯುತವಾಗುತ್ತದೆ . ಆದರೆ ಹಿಟ್ ವಿಕೆಟ್ ತೀರಾ ಸಾದಾರಣ ಎನಿಸಿತು. ಬಹುಶ ನನಗೆ ಜೋಗಿ ಮೆಚ್ಚಿನ ಲೇಖಕರಾದ್ದರಿಂದ ನಾನೇ ಅತಿಯಾಗಿ ನಿರೀಕ್ಷೆ ಮಾಡಿದುದರಿಂದ ಹೀಗಾಯಿತೇನೋ?
ಅವರ ಕಥಾಸಂಕಲನ ಕಾಡು ಹಾದಿಯ ಕಥೆಗಳು ಹಿಡಿಸಿತು. ಆ ಕಥೆಗಳನ್ನು ಅಲ್ಲಲ್ಲಿ ಓದಿದ್ದರೂ ಒಂದೇ ಪುಸ್ತಕದಲ್ಲಿ ಒಂದೇ ಗುಕ್ಕಿಗೆ ಸಿಕ್ಕಿದ್ದು ಖುಷಿಯಾಯಿತು. ಕಥೆಗಳೂ ಅಷ್ಟೇ ಬೇರೆ ಯಾವುದೋ ಲೋಕಕ್ಕೆ ಕರೆದುಕೊಂಡು ಹೋದವು. 
ಮನೆಯಲ್ಲಿ ನಮ್ಮ ಪುಸ್ತಕದ ನಿಮಿತ್ತ ಕುಬಿ ಮತ್ತು ಇಯಾಲ ಸಿನೇಮ ನೋಡಿದೆ . ತೇಜಸ್ವಿಯವರ  ಕಥೆಯನ್ನು ಮೊದಲೇ ಓದಿದ್ದೆ.  ಹಾಗೆ ಸಿನೆಮಾವನ್ನೂ ಮೊದಲೇ  ನೋಡಿದ್ದೆನಾದರೂ ಹೆಚ್ಚು ಕಡಿಮೆ ಸಿನೆಮಾ ವಿವರಗಳು ಮರೆತೇ  ಹೋಗಿತ್ತು. ಹಾಗಾಗಿ ಮತ್ತೆ ನೋಡಿದೆ. ನಿರ್ದೇಶಕರು ಸದಾನಂದ ಸುವರ್ಣ. ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಚಿತ್ರದ ನಿರ್ಮಾಪಕರು. ಕುಬಿ ಮತ್ತು ಇಯಾಲ ಚಿತ್ರಕ್ಕೆ ರಾಷ್ಟ್ರ , ರಾಜ್ಯ ಪ್ರಶಸ್ತಿಗಳು ದೊರೆತಿವೆ . ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಬರೆದಿದ್ದಾರೆ . ಇನ್ನು ಸಿನೆಮಾದ ಬಗ್ಗೆ ಎಲ್ಲರಿಗೂ ಗೊತ್ತಿರುವಂತಹದ್ದೆ .   ಹಳ್ಳಿಗೆ ಹೊಸದಾಗಿ ಬರುವ ವೈದ್ಯ ಕುಬಿಗೆ ಆ ಊರಿನ ಕ್ರೈಸ್ತ ಧರ್ಮದ ಹುಡುಗಿ ಇಯಾಲಳ  ಪರಿಚಯವಾಗುತ್ತದೆ . ಆಕೆಯ ಮುಗ್ಧತೆ, ತುಂತುತನಗಳು ಕುಬಿಯವರಿಗೆ ಆಕೆಯನ್ನು ಆಪ್ತಳನ್ನಾಗಿಸುತ್ತದೆ .ಆನಂತರ ಆಕೆಯ ಕೊಲೆಯಾಗುತ್ತದೆ . ಅದನ್ನು  ಜನರು ಹೇಗೆ ತಮ್ಮ ತಮ್ಮ ಸ್ವಾರ್ಥಕೆ ಬಳಸಿಕೊಳ್ಳುತ್ತಾರೆಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ನಿರೂಪಿಸುತ್ತ ಹೋಗುತ್ತಾರೆ. ಕುಬಿಯಾಗಿ ಚಾರು ಹಾಸನ್ ಉತ್ತಮ ಅಭಿನಯ ನೀಡಿದ್ದಾರೆ.

1 comment:

  1. ನಮಸ್ಕಾರ,
    ನಿಮ್ಮ ಅಭಿಪ್ರಾಯ ಓದಿ ಖುಷಿಯಾಯಿತು. ನನಗೂ ಹಿಟ್ ವಿಕೆಟ್ ಅಷ್ಟೇನೂ ಖುಷಿ ಕೊಟ್ಟಿರಲಿಲ್ಲ. ನನ್ನ ಬರಹಗಳ ರಾಶಿಯಲ್ಲಿ ಹೇಗೋ ಸೇರಿಕೊಂಡದ್ದು ಅದು. ಅದರ ಒಂದಷ್ಟು ಪಾತ್ರಗಳನ್ನು ಕ್ರಮೇಣ ಪ್ರೀತಿಸಿದ್ದೂ ನಿಜ.
    ನೀವು ಹೇಳಿದಂತೆ ಅದರ ಓಘದಲ್ಲಿ ತೊಂದರೆಯಿದೆ. ಅದಕ್ಕೆ ಕಾರಣ ಅದನ್ನು ನಾನು ಕನ್ನಡಪ್ರಭದಲ್ಲಿದ್ದಾಗ ಧಾರಾವಾಹಿಯಾಗಿ ಬರೆದದ್ದು. ಕುತೂಹಲ ಹುಟ್ಟಿಸಲಿಕ್ಕೆಂದು ಕೊನೆಯಲ್ಲಿ ಬೇಕಂತಲೇ ಹಾಗೆ ಮಾಡಿದ್ದೆ. ಕಾದಂಬರಿ ರೂಪದಲ್ಲಿ ತರುವಾಗ ಅದನ್ನು ತೆಗೆಯಬೇಕಾಗಿತ್ತು. ಅಷ್ಟರಲ್ಲಿ ನಾನೇ ಅದರ ಬಗ್ಗೆ ಆಸಕ್ತಿ ಕಳಕೊಂಡಿದ್ದೆ.
    ಅಂದ ಹಾಗೆ ಅದನ್ನು ಬರೆದು ಸುಮಾರು 12 ವರುಷಗಳೇ ಆಗಿರಬಹುದೇನೋ. ಅದನ್ನು ಬರೆಯುವ ಹೊತ್ತಿಗೆ ಇನ್ನೂ ಮ್ಯಾಚ್ ಫಿಕ್ಸಿಂಗು ಬಯಲಾಗಿರಲಿಲ್ಲ ಅನ್ನಿಸುತ್ತದೆ.
    ಪ್ರೀತಿಯಿಂದ ಓದಿದ್ದಕ್ಕೆ ಥ್ಯಾಂಕ್ಸ್

    ReplyDelete