Monday, November 12, 2012

ಆತ ಹಂತಕ ಜೋ...

ಅದೊಂದು ಅಸ್ತವ್ಯಸ್ತ ಕುಟುಂಬ ಎಂದೇ ಹೇಳಬಹುದು. ಅಪ್ಪ, ಮಲತಾಯಿ, ಅಣ್ಣ ತಂಗಿ ಅದರ ಸದಸ್ಯರು. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳಿವೆ. ಎಲ್ಲರಿಗೂ ಹಣದ ಅವಶ್ಯಕತೆ ಇದೆ . ಮಗ ಹುಟ್ಟಾ ಕುಡುಕ . ಜೂಜು ಕೋರ. ಊರಲ್ಲಿರುವ ದುಶ್ಚಟಗಳೆಲ್ಲಾ ಅವನಿಗೊಬ್ಬನಿಗೆ ಇದೆ .ಮೈತುಂಬಾ ಸಾಲ  ಮಾಡಿಕೊಂಡಿದ್ದಾನೆ. ಅವನನ್ನು ಸಾಲಗಾರರು ಬೆನ್ನೆತ್ತಿದ್ದಾರೆ . ನಿಗದಿತ ಸಮಯದಲ್ಲಿ ಅವರ ಹಣ ಕೊಡದಿದ್ದರೆ ಅವರು ಸಾಯಿಸಿಬಿಡುತ್ತಾರೆ. ಅಂತಹ ಕಟುಕರು ಅವರು . ಆಗ ಅವನಿಗೆ ಗೆಳೆಯ ಒಂದು ಐಡಿಯಾ ಕೊಡುತ್ತಾನೆ. ಈಗ ಇಡೀ ಕುಟುಂಬದಿಂದ ದೂರ ಉಳಿದಿರುವ ತಾಯಿಯ ಹೆಸರಲ್ಲಿ ಇನ್ಸ್ಯೂರನ್ಸ್ ಇದೆ. ಆಕೆ ಸತ್ತರೆ ಅದು ತಂಗಿಯ ಪಾಲಾಗುತ್ತದೆ . ಎಲ್ಲರೂ ಹಂಚಿಕೊಂಡರೆ ಕಷ್ಟಗಳು ಮಾಯವಾಗುತ್ತವೆ. ಆ ಐಡಿಯಾ ಮಗನಿಗೆ ಸರಿ ಎನಿಸುತ್ತದೆ . ಮೊದಲು ತಂದೆಯೊಂದಿಗೆ, ಆಮೇಲೆ ಇಡೀ ಕುಟುಂಬದ ಜೊತೆ ಚರ್ಚಿಸಿದಾಗ ಅಲ್ಲೂ ಗ್ರೀನ್ ಸಿಗ್ನಲ್ ದೊರೆಯುತ್ತದೆ.  ಆಕೆ ನಿಜಕ್ಕೂ ಯಾರಿಗೂ ಬೇಕಾಗಿರುವುದಿಲ್ಲ . ಆಕೆಗೀಗ ವಾರಸುದರರೂ ಇರುವುದಿಲ್ಲವಾದ್ದರಿಂದ ಅದರ ಲಾಭ ಪಡೆಯಲು ಇಡೀ ಕುಟುಂಬ ನಿರ್ಧರಿಸುತ್ತದೆ. ಈಗ ಆಕೆಯನ್ನು ಕೊಲೆ ಮಾಡಬೇಕು. ಯಾರು  ಮಾಡುವುದು? ಒಂದು ಕೊಲೆಯನ್ನು ಕರಾರುವಕ್ಕಾಗಿ ಮಾಡುವವರು ಯಾರು? ಪೋಲಿಸ್ ಕಣ್ಣುಗಳಿಂದ ತಪ್ಪಿಸಿ ಇನ್ಶ್ಯೂರನ್ಸ್ ಹಣ ತಲುಪುವಂತೆ ಮಾಡುವವರು ಯಾರು? ಅದಕ್ಕಾಗಿ  ಸರಿಯಾದ ವ್ಯಕ್ತಿಯೆಂದರೆ ಜೋ ಕೂಪರ್ . ವೃತ್ತಿಯಲ್ಲಿ ಆತ  ದಿಟೆಕ್ಟಿವ್. ಆದರೂ ಕೆಲವೊಮ್ಮೆ ಹಣಕ್ಕೋಸ್ಕರ ಈ ತರಹದ ಕೆಲಸ ಮಾಡುತ್ತಾನೆ . ಆದರೆ ಆತನ ಕೆಲಸ ಪಕ್ಕಾ. ಹಾಗೆ ದುಡ್ಡಿನ ವಿಷಯದಲ್ಲೂ ಆತ  ಅಷ್ಟೇ ಕಟ್ಟುನಿಟ್ಟು.ಅಪ್ಪ ಮಗ ಇಬ್ಬರೂ ಆತನನ್ನು ಭೇಟಿ  ಮಾಡುತ್ತಾರೆ. ಆತ ಒಂದು ದೊಡ್ಡ ಮೊತ್ತದ ಹಣಕ್ಕಾಗಿ ಕೆಲಸ ಒಪ್ಪಿಕೊಳ್ಳುತ್ತಾನೆ. ಹಾಗೆ ಕೆಲಸ ಕೂಡ ಮುಗಿಸುತ್ತಾನೆ.      ಆನಂತರ ಗೊತ್ತಾಗುವ ವಿಷಯವೆಂದರೆ ಆಕೆ ಸತ್ತರೆ ಆ ಹಣ ಇವರಿಗೂ ದೊರೆಯುವುದಿಲ್ಲಾ ಎಂಬುದು.? ಅಂದರೆ ಆಕೆ ತನ್ನ ಹಣವನ್ನು ಮಗಳ ಹೆಸರಿಗೆ ಬರೆದಿಲ್ಲ  ಹಾಗಾದರೆ ಮತ್ಯಾರಿಗೆ ದೊರೆಯುತ್ತದೆ..? ಈಗ ಕೊಲೆಯಂತೂ ಆಗಿ ಹೋಗಿದೆ. ಜೋ ಸುಮ್ಮನೆ ಬಿಡುವವನಲ್ಲ ... ಮುಂದೇನಾಗುತ್ತದೆ..?
 ಇದು  ಆಸ್ಕರ್ ಪ್ರಶಸ್ತಿ ವಿಜೇತ, ದಿ ಎಕ್ಸಾರ್ಸಿಸ್ಟ್, ಫ್ರೆಂಚ್ ಕನೆಕ್ಷನ್ ಮುಂತಾದ ಚಿತ್ರಗಳ  ನಿರ್ದೇಶಕ ವಿಲಿಯಂ ಫ್ರೈಡ್ ಕಿನ್ ನಿರ್ದೇಶನದ ಮ್ಯಾಥ್ಯೂ ಮೆಖಾನಿ ಅಭಿನಯದ ಕಿಲ್ಲರ್ ಜೋ ಚಿತ್ರದ ಕಥೆ. ಚಿತ್ರದ ಪ್ರಾರಂಭದಿಂದಲೇ ಹಿಡಿದು ಕೂರಿಸಿಬಿಡುವ ಗುಣವಿರುವ ಕಿಲ್ಲರ್ ಜೋ ಒಂದು ಪಕ್ಕಾತಿಪಕ್ಕ ಥ್ರಿಲರ್ ಎಂದೇ ಹೇಳಬಹುದು. ಇನ್ ಟು ದಿ ವೈಲ್ಡ್ ,ಮಿಲ್ಕ್ ಚಿತ್ರದಲ್ಲಿ ಗಮನಸೆಳೆದಿದ್ದ ಎಮಿಲಿ ಹಿರ್ಶ್ ನ ಅತ್ಯುತಮ ಅಭಿನಯವಿರುವ ಈ ಚಿತ್ರ ಇದೆ ಹೆಸರಿನ ನಾಟಕ ಆಧರಿಸಿದ ಚಿತ್ರ.
2011 ರಲ್ಲಿ  ತೆರೆಗೆ ಬಂದ ಈ ಚಿತ್ರ ಒಂದು ಗಂಟೆ ನಲವತ್ತೈದು ನಿಮಿಷಗಳಷ್ಟು ಉದ್ದವಿದೆ. 

No comments:

Post a Comment