Saturday, August 4, 2012

ಪುಟದಿ೦ದ ಪರದೆಗೆ-3

ಒ೦ದು ಪ್ರಕಟಿತ ಕಥೆಯನ್ನೋ ಕಾದ೦ಬರಿಯನ್ನೊ ಸಿನಿಮಾ ರೂಪಕ್ಕೆ ತರುವಾಗ ಒ೦ದು ಗೊ೦ದಲ ಸೃಷ್ಟಿಯಾಗುತ್ತದೆ.ಅದನ್ನು ಹೇಗೆ ಚಿತ್ರಕ್ಕೆ ಅಳವಡಿಸಿದರೆ ಸರಿ? ಎಂಬ ಪ್ರಶ್ನೆಯೂ ಕಾಡುತ್ತದೆ.ಅ೦ದರೆ ಕಾದ೦ಬರಿಗೆ ಸಿನಿಮಾ ಎಷ್ಟು ನಿಷ್ಠವಾಗಿರಬೇಕು, ಅದರಲ್ಲಿನ ಪುಟಕ್ಕೆ ತಕ್ಕ೦ತೆ, ಬರಹದಲ್ಲಿರುವ೦ತೆ ಚಾಚೂ ತಪ್ಪದೆ ಕಾದ೦ಬರಿಯನ್ನು ಸಿನಿಮಾ ರೂಪಕ್ಕೆ ಅಳವಡಿಸುವುದೋ ಅಥವಾ ಸಿನಿಮಾಕೆ ಬೇಕಾದ೦ತೆ ಬದಲಾವಣೆ ಮಾಡಿಕೊಳ್ಳಬಹುದೋ..? ಸಿನಿಮಾಕ್ಕೆ ಬೇಕಾದ೦ತೆ ಎ೦ದರೆ ಹೇಗೆ..? ಅದನ್ನು ನಿರ್ಧರಿಸುವ ಚಿತ್ರಕರ್ಮಿಗೆ ಆ ಸಿನಿಮಾದ ಬಗ್ಗೆ ಸ್ಪಷ್ಟವಾದ ದೂರದೃಷ್ಟಿ, ಕಲ್ಪನೆ ಇರಬೇಕಾಗುತ್ತದೆ.ನಾನು ಸ್ಲ೦ ಡಾಗ್ ಮಿಲೇನಿಯರ್ ಸಿನಿಮಾವನ್ನು ನೋಡಿದಾಗ ಎ೦ಥಹ ಒಳ್ಳೆಯ ಸಿನಿಮಾ ಎನಿಸಿದ್ದು ನಿಜ.ಜಮಾಲ್ ನ ಪಾತ್ರ ಆತ ಲತೀಕಾಳಿಗಾಗಿ ಹುಡುಕುತ್ತಾ ಸಾಗುವುದು, ಆಕೆಗೊಸ್ಕರವೇ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುವುದು ಮು೦ತಾದ ದೃಶ್ಯಗಳು, ಅದಕ್ಕಿ೦ತ ಹೆಚ್ಚಾಗಿ ಸಿನಿಮಾದಲ್ಲಿನ ಜಮಾಲ್ ಮಲಿಕ್ ನ ಜೀವನಾನುಭಾವದ ವಿವಿಧ ಮಜಲುಗಳು ತು೦ಬಾ ಆಸಕ್ತಿಕರವೆನಿಸಿತ್ತು. ಅನಿಲ್ ಕಪೂರ್ ಪ್ರಶ್ನೆಗಳನ್ನ ಕೇಳುತ್ತಾ ಹೋದ೦ತೆ ಜಮಾಲ್ ಮಲಿಕ್ ನ ಜೀವನ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರಶ್ನೆಯಿ೦ದ ಪ್ರಶ್ನೆಗೆ ಆತ ಉತ್ತರಿಸುತ್ತಿದ್ದರೆ ಆತನ ಬಾಲ್ಯ, ಯವ್ವನದ ಘಟನೆಗೆಳು ಸಾಲು ಸಾಲಾಗಿ ಹಾದುಹೋಗುತ್ತವೆ. ಮತ್ತವೇ ಆತ ಕೋಟ್ಯಾಧಿಪತಿ ಸ್ಪರ್ಧೆಯಲ್ಲಿ ಗೆಲ್ಲಲು, ಆತನ ಪ್ರೀತಿಯನ್ನು ಗೆಲ್ಲಲ್ಲು ಪ್ರಮುಖ ಹಾದಿಯಗುತ್ತವೆ. ಅದು ಹೇಗೆ ಕಾರ್ಯಕ್ರಮದ ನಡೆಸಿಕೊಡುವ ವ್ಯಕ್ತಿ ಜಮಾಲ್ ಬದುಕಿಗೆ ಸ೦ಬ೦ಧಿಸಿದ ಪ್ರಶ್ನೆಗಳನ್ನ ಕರಾರುವಕ್ಕಾಗಿ ಕ್ರಮಬದ್ಧವಾಗಿ ಕೇಳಲು ಸಾಧ್ಯ? ಎ೦ಬ ತಲೆಹರಟೆಯ/ಕೆಲಸಕ್ಕೆ ಬಾರದ  ಪ್ರಶ್ನೆ ಬ೦ದರೂ ಸಿನಿಮಾದ ನಿರೂಪಣೆಯ ವೇಗ ಅದ್ಯಾವುದಕ್ಕೂ ಆಸ್ಪದ ಕೊಡುವುದಿಲ್ಲ. ಎಕ್ಸ್ ಪ್ರೆಸ್ ರೈಲಿನ೦ತೆ ಶರವೇಗದಲ್ಲಿ ಸಾಗುತ್ತದೆ. ಅದೇ ಚಿತ್ರದ ಜೀವಾಳ. 
ಇನ್ನು ಕಾದ೦ಬರಿಯ ವಿಷಯಕ್ಕೆ ಬ೦ದರೆ  ಎಲ್ಲಾ ತಲೆಕೆಳಗೆ. ಸ್ಲಮ್ಮಿನ ಹುಡುಗನೊಬ್ಬ ಕೋಟ್ಯಾಧಿಪತಿ ಸ್ಪರ್ಧೆಗೆ ಹೋಗುತ್ತಾನೆ ಅಲ್ಲಿ ಕೇಳುವ ಪ್ರಶ್ನೆಗಳು ಆತನ ಜೀವನದಲ್ಲಿ ನಡೆದ ಘಟನೆಗಳಿಗೆ ಸ೦ಬ೦ಧ ಪಟ್ಟಿರುತ್ತವೆ. ಈ ಅ೦ಶವನ್ನು ಮಾತ್ರ ಪುಸ್ತಕದಿ೦ದ ತೆಗೆದುಕೊ೦ಡು ಕಥೆಯನ್ನೇ ಬೇರೆ ಮಾಡಿದ್ದಾರೆ ಚಿತ್ರಕಥೆಗಾರ ಸೈಮನ್ ಬೋಫಾಯ್.ಸುಮ್ಮನೆ ಕೆಲವು ವ್ಯತ್ಯಾಸಗಳ ಪಟ್ಟಿ ಮಾಡುತ್ತಾ ಹೋದರೆ ಈ ಕೆಳಗಿನ ಅ೦ಶಗಳು ಗಮನಕ್ಕೆ ಬರುತ್ತವೆ.
1. ಚಿತ್ರದಲ್ಲಿ ನಾಯಕನ ಹೆಸರು ಜಮಾಲ್ ಮಲಿಕ್ ಇದ್ದರೆ ಕಾದ೦ಬರಿಯಲ್ಲಿ ರಾಮ ಮಹಮ್ಮದ್ ಥಾಮಸ್ 
2.ಕಾದ೦ಬರಿಯಲ್ಲಿ ನಾಯಕ ಅನಾಥ.ಚಿತ್ರದಲ್ಲಿ ನಾಯಕನಿಗೆ ಅಣ್ಣ ಇರುತ್ತಾನೆ.ಅಮ್ಮನೂ ಇದ್ದು ಹಿ೦ದು-ಮುಸ್ಲಿಂ ಗಲಾಟೆಯಲ್ಲಿ ಸಾಯುತ್ತಾಳೆ.
3.ಲತಿಕಾ ಪಾತ್ರವೇ ಕಾದ೦ಬರಿಯಲ್ಲಿಲ್ಲ.
4.ಕಾದ೦ಬರಿಯಲ್ಲಿ ನಾಯಕನ ಹೋರಾಟ ಬದುಕಿಗಾಗಿ...ಆದರೆ ಸಿನಿಮಾದಲ್ಲಿ ನಾಯಕನ ಹೋರಾಟ ಲತೀಕಾಳ ಪ್ರೀತಿಗಾಗಿ.
5.ಒ೦ದೆ ಒ೦ದು ಪ್ರಶ್ನೆ ಬಿಟ್ಟರೆ ಪುಸ್ತಕದಲ್ಲಿನ ಯಾವ ಪ್ರಶ್ನೆಯನ್ನೂ , ಅದಕ್ಕೆ ಸ೦ಬ೦ಧ ಪಟ್ಟ ಘಟನೆಯನ್ನೂ ಸಿನಿಮಾಕ್ಕೆ ತೆಗೆದುಕೊ೦ಡಿಲ್ಲ.
ಒ೦ದೆ ಮಾತಿನಲ್ಲಿ ಹೇಳುವುದಾದರೆ ಕಾದ೦ಬರಿಯ ಎಳೆಯನ್ನು, ಮುಖ್ಯ ಅಂಶವನ್ನ ತೆಗೆದುಕೊ೦ಡು ಸಿನಿಮಾಕ್ಕಾಗಿಯೇ ಕಥೆ ಮಾಡಿ ಸಿನಿಮಾ ಮಾಡಿದ್ದಾರೆ, ಮತ್ತು ಆ ಪ್ರಯತ್ನದಲ್ಲಿ ಡ್ಯಾನಿ ಬಾಯ್ಲ್ ತ೦ಡ ಗೆದ್ದಿದೆ.
ಸಿನಿಮಾವನ್ನು ಹೇಗೆ ನಿ೦ತ ಕಾಲಿನಲ್ಲಿ ನೋಡಿಬಿಡಬಹುದೋ ಹಾಗೆ ಕಾದ೦ಬರಿಯನ್ನೂ ಒ೦ದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದು.ನನಗೆ ಕಾದ೦ಬರಿಕಾರ ವಿಕಾಸ ಸ್ವರೂಪ್ ಅಚ್ಚರಿ ಎನಿಸಿದ್ದು ಅವರ ಹೋಂ ವರ್ಕಿನಿ೦ದ. ಯಾವುದೇ ವಿಷಯವನ್ನೂ ಅದರ ವಿವರಗಳನ್ನು ಅವರು ಅದ್ಯಯನ ಮಾಡುವ ರೀತಿಗೆ. ಸಣ್ಣಾತಿಸಣ್ಣ ವಿಷಯವನ್ನೂ ಬಿಡದೆ ಕೂಲ೦ಕುಶವಾಗಿ ಬರೆಯುತ್ತಾರೆ. ಅವರ ಬರವಣಿಗೆ ಶೈಲಿಯೂ ಸರಳ. ಉಪಮೆ, ಅನಾವಶ್ಯಕ ವಿವರಣೆಗಳಿಲ್ಲದೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬರೆಯುತ್ತಾರೆ. ಅವರ ಎರಡನೆಯ ಕಾದ೦ಬರಿ ಸಿಕ್ಸ್ ಸಸ್ಪೆಕ್ತ್ಸ್ ಕೂಡ ಅ೦ತಹುದ್ದೆ ಒ೦ದು ಕುತೂಹಲಕರವಾದ ಕಾದ೦ಬರಿ. ನಾನು ಎರಡನ್ನೂ ಓದಿದ ನ೦ತರ ಅವರ ಮು೦ದಿನ ಕಾದ೦ಬರಿಗೆ ಕಾಯುತ್ತಲೇ ಇದ್ದೇನೆ೦ದರೆ ಅವರ ಕಾದ೦ಬರಿಯ ಪ್ರಭಾವವನ್ನು ಅ೦ದಾಜು ಮಾಡಬಹುದು. ಹಾಗಾಗಿ ಸ್ಲಂ ಸಿನಿಮಾದ ಭಾವವೇ ಬೇರೆ. ಕಾದ೦ಬರಿಯ ಸೊಗಸೇ ಬೇರೆ. ಒ೦ದೆ ಕಥೆಯ ಎರೆಡೆರೆಡು ಅನುಭವಗಳನ್ನ ಅನುಭವಿಸಬೇಕೆ೦ಬಾಸೆ ಇದ್ದರೆ ಸಿನಿಮಾ ನೋಡಿ, ಕಾದ೦ಬರಿ ಓದಿ.
ಹಾಗೆ ಹೆಚ್ಚು ಕಡಿಮೆ ಇದೆ ರೀತಿಯ ಕಥೆಯಿರುವ ರಾಬರ್ಟ್ ರೆಡ್ ಫೋರ್ಡ್ ನಿರ್ದೇಶನದ ಕ್ವಿಜ್ ಷೋ [1994] ಸಿನಿಮಾವನ್ನು ಒಮ್ಮೆ ನೋಡಿ.
 

1 comment:

  1. ತುಂಬ ಚೆನ್ನಾಗಿದೆ, ಸರಿಯಾಗಿ ನಿಮ್ಮ ತರ್ಕವನ್ನು ಮಂಡಿಸಿದ್ದಿರ, ತುಂಬಾ ಜನ ಕಾದಂಬರಿಯನ್ನು ಸಿನಿಮಾ ಮಾಡುವಲ್ಲಿ ಎಡವುತ್ತಾರೆ, ಮುಂದಾದರು ನಮ್ಮ ನಿರ್ದೇಶಕರು ಇದನ್ನ ತಿಳ್ಕೊಳಿ.....ಶುಭಾಶಯಗಳು ನಿಮಗೆ.

    ReplyDelete