Saturday, June 2, 2012

ನೋಡಲೇಬೇಕಾದ ಚಿತ್ರಗಳು-8


ನಿಮಗೆ ಒ೦ದು ಅತ್ಯುತ್ತಮ ಚಿತ್ರ ನೋಡುವ ಬಯಕೆ ಇದೆಯೇ?
ಹಾಗಾದರೆ ಐದು ಗ೦ಟೆ ಹದಿನೈದು ನಿಮಿಶಗಳನ್ನು ಪಕ್ಕಕ್ಕೆತ್ತಿಟ್ಟುಬಿಡಿ.
ಚಿತ್ರ ನನಗೆ ಸಿಕ್ಕಿದ್ದು ಆಕಸ್ಮಿಕವಾಗಿ. ಇಟಲಿಯ ಖ್ಯಾತ ಮತ್ತು ನನಗೆ ಭಾರಿ ಇಷ್ಟವಾದ ನಿರ್ದೇಶಕ ಗಿಸೆಪ್ ಟಾನೇಟರ್ ನ ದಿ ಲೆಜೆಂಡ್ ಆಫ್ 1900 ಚಿತ್ರಕ್ಕಾಗಿ ಹುಡುಕಾಡುತ್ತಿದ್ದೆ. ಎಲ್ಲಾ ಡಿವಿಡಿ ಅಂಗಡಿಗಳಲ್ಲೂ ವಿಚಾರಿಸುತ್ತಿದ್ದೆ. ಅಂತಹ ಸಂದರ್ಭದಲ್ಲಿ ಹೆಸರಿನ ಗೊಂದಲದಿಂದಾಗಿ ಎರಡು ಡಿವಿಡಿ ಡಿಸ್ಕ್ ಗಳಿದ್ದ ಈ ಚಿತ್ರದ ಡಿವಿಡಿ ನನಗೆ ದೊರಕಿತು. ಮೊದಲಿಗೆ ಇದು ಗಿಸೆಪಿಯ  ದಿ ಲೆಜೆಂಡ್ ಆಫ್ 1900 ಎಂದುಕೊಂಡೇ ಮನೆಗೆ ತಂದು ಟಿವಿ ಮುಂದೆ ಪ್ರತಿಷ್ಠಾಪಿತನಾದವನಿಗೆ ತೆರೆದುಕೊಂಡಿದ್ದು ಬೇರೆಯದೇ ಲೋಕ.ಚಿತ್ರದ ಟೈಟಲ್ ಕಾರ್ಡ್ ನಿಂದಲೇ ನನಗೆ ಗೊತ್ತಾಗಿ ಹೋಗಿತ್ತು ಇದು ನಾನಂದುಕೊಂಡ  1900 ಅಲ್ಲ. ಯಾಕೆಂದರೆ ಆ ಚಿತ್ರದ ಹೀರೋ ಟಿಮ್‌ರೋತ್. ಕ್ವಿಂಟನ್ ಟರೆಂಟಿನೋನ ಚಿತ್ರಗಳಲ್ಲಿ ಕಂಡುಬರುವ ನಟ ಉತ್ತಮ ಕಲಾವಿದ. ಪಲ್ಪ್ ಫಿಕ್ಷನ್ ಆಗಿರಬಹುದು, ಅಥವ ರಿಸಾರ್ವಯರ್ ಡಾಗ್ಸ್ ಆಗಿರಬಹುದು ಟಿಮ್ ರೋತ್ ಪಾತ್ರ ಚಿಕ್ಕದಾದರೂ ಅಭಿನಯದ ಛಾಪನ್ನು ಮಾತ್ರ ಮರೆಯುವ ಹಾಗಿಲ್ಲ ! ಸ್ವಲ್ಪ ಬೇಸರವಾದರೂ ಇರಲಿ ಹತ್ತು ನಿಮಿಷ ನೋಡೋಣ ಎಂದು ಕುಳಿತುಕೊಂಡಿದ್ದು. ಅನಾಮತ್ತು 5 ಘಂಟೆ 12 ನಿಮಿಷ ಅಲುಗಾಡದಂತೆ ಹಿಡಿದುಕೂರಿಸಿಕೊಂಡಿತ್ತು ಆ ಸಿನಿಮಾ. ಸಿನಿಮಾ ಮುಗಿದ ಸುಮಾರು ಹೊತ್ತು ಮನೆಯಲ್ಲಿ ಹಾಗೆಯೇ ಕುಳಿತುಬಿಟ್ಟಿದ್ದೆ. 5 ಘಂಟೆ 12 ನಿಮಿಷ ಕುತೂಹಲಕಾರಿಯಾಗಿ ನೋಡಿಸಿಕೊಂಡು ಹೋಗುವ ಸಿನಿಮಾವನ್ನು ನಾನು ನೋಡಿದ್ದು ಮೊದಲನೇ ಸಲ ! ನನ್ನ ದೀರ್ಘಾವಧಿ ಸಿನಿಮಾಗಳನ್ನು ನೋಡಿದ ಲಿಸ್ಟಿನಲ್ಲಿರುವ ಮೊದಲ ಚಿತ್ರವಿದು. ಈಗಲೂ ಬೇಸರವಾದಾಗ ಈ ಸಿನಿಮಾ ಹಾಕಿಕೊಂಡು ನೋಡುತ್ತೇನೆ. ಅಥವ ಧಾರವಾಹಿಯ ಹಾಗೆ ದಿನಕ್ಕೊಂದು ಘಂಟೆಯವರೆಗೆ, ವಾರದ  ಐದು ದಿನವೂ ನೋಡುತ್ತೇನೆ. ಬರ್ನಾಡೋ ಬಾರ್ಟೊಲುಸಿ ಎಂಬ ನಿರ್ದೇಶಕನಿಗೆ ನಿಜಕ್ಕೂ ಹ್ಯಾಟ್ಸ್ ಆಫ್!
1900 ಇಟಾಲಿಯನ್ ಭಾಷಾ ಚಲನಚಿತ್ರ.
1900 ಇಟಲಿಯಲ್ಲಿ 20 ನೇ ಶತಮಾನದ ಮಧ್ಯಭಾಗದಲ್ಲಿ ನಡೆಯುವ ಕಥಾಹಂದರವನ್ನು ಹೊಂದಿದೆ. ಇಬ್ಬರು ಸಮಾಜದ ವಿಭಿನ್ನ ಸ್ಥರಗಳಿಂದ ಬಂದಂತಹ ಗೆಳೆಯರ ನಡುವಿನ, ಗೆಳೆತನದ  ನಡುವಿನ ಸಂಘರ್ಷದ ಕಥೆಯೇ 1900.
1900 ಇಸವಿಯ ಮೊದಲ ದಿನವೇ ಜನಿಸಿದ ಇಬ್ಬರೂ ಗೆಳೆಯರು ಆಲ್ಫ್ರೆಡ್ ಮತ್ತು ಡಾಲ್ಕೊ. ಇಬ್ಬರೂ ಸಮಾಜದಲ್ಲಿನ ಎರಡು ವಿರುದ್ಧ ಧಿಕ್ಕುಗಳಿಂದ ಬಂದವರು. ಆಲ್ಫ್ರೆಡೋ ಊರಿನ  ದೊಡ್ಡ ಜಮೀನುದಾರನ ಮಗನಾದರೆ ಡಾಲ್ಕೊ ಅದೇ ಜಮೀನಿನಲ್ಲಿ ಕೆಲಸ ಮಾಡುವ ಕೂಲಿಕಾರನ ಮಗ. ಆದರೆ ತಮ್ಮ ಜಾತಿ ಅಂತಸ್ತುಗಳನ್ನು ಮೀರಿದ ಗೆಳೆತನ ಇಬ್ಬರದು. ಬಾಲ್ಯದಿಂದಲೇ ಜಮೀನುದಾರ ಮತ್ತು ಊಳಿಗೆದಾರರ ನಡುವಿನ ಹೋರಾಟವನ್ನು ನೋಡುತ್ತಾ ಬೆಳೆಯುವ ಗೆಳೆಯರು ಬೆಳೆಯುತ್ತಿದ್ದಂತೆ ಕೆಲವು ವರ್ಷ ಅನಿವಾರ್ಯ ಕಾರಣಗಳಿಂದ ಬೇರೆ ಬೇರೆಯಾಗಬೇಕಾಗುತ್ತದೆ. ಡಾಲ್ಕೊ ಸೇನೆಗೆ ಹೋಗಿಬಿಡುತ್ತಾನೆ. ಆಲ್ಫ್ರೆಡೊ ಊರಿನಲ್ಲೇ ಉಳಿದು ತಂದೆಯ ನಂತರ ಜಮೀನಿನ ಆಗುಹೋಗುಗಳನ್ನು ನೋಡಿಕೊಳ್ಳತೊಡಗುತ್ತಾನೆ. ಸೇನೆಯಿಂದ ಹಿಂದಿರುಗಿ ಬರುವ ಡಾಲ್ಕೊ, ಆಲ್ಫ್ರೆಡೊ ನನ್ನು ಬೇಟಿಯಾಗುತ್ತಾನೆ. ಇಬ್ಬರೂ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾರೆ.... ಆದರೆ ಸಮಾಜದ ವ್ಯವಸ್ಥೆ ಅವರಿಬ್ಬರ ಗೆಳೆತನದ ನಡುವೆ ದೊಡ್ಡಗೋಡೆಯಾಗಲು ಪ್ರಾರಂಭಿಸುತ್ತದೆ. ಕ್ರಾಂತಿಕಾರಿ ಧೋರಣೆಯ ಡಾಲ್ಕೋ ಜಮೀನುದಾರ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾನೆ. ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾನೆ. ಈಗ ಆಪ್ತಗೆಳೆಯರಿಬ್ಬರೂ ರಣರಂಗದಲ್ಲಿ ಎದುರೆದುರು ನಿಂತುಕೊಳ್ಳಬೇಕಾದ ಸಂದರ್ಭ ಬಂದುಬಿಡುತ್ತದೆ.. ಮುಂದೇನಾಗುತ್ತದೆ. ಸ್ನೇಹ-ಕ್ರಾಂತಿಯ ನಡುವಿನ ಸಂಘರ್ಷದಲ್ಲಿ ಯಾವುದು ಗೆಲ್ಲುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ದಯವಿಟ್ಟು ಸಿನಿಮಾ ನೋಡಿ !
ಸಿನಿಮಾದ ನಿರೂಪಣೆ ನಿಮಗೆಲ್ಲೂ ಬೋರ್ ತರಿಸುವುದಿಲ್ಲ. ಮೊದ ಒಂದು ಘಂಟೆಗೂ ಹೆಚ್ಚು ಅವಧಿ ಗೆಳೆಯರ ಬಾಲ್ಯದ ದಿನಗಳ ತುಂಟಾಟದಲ್ಲೇ ಕಳೆದುಹೋಗುತ್ತದೆ. ಈ ಒಂದು ಘಂಟೆಯ ಅವಧಿಯಲ್ಲಿ ನಡೆಯುವ ಘಟನೆಗಳು ಅವರ ಗೆಳೆತನದ ಗಟ್ಟಿತನವನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುತ್ತದೆ. ಹಾಗೆ ಊಳಿಗಮಾನ್ಯ ಪದ್ಧತಿಯ ಒಳಹೂರಣವನ್ನು ಬಿಚ್ಚಿಡುತ್ತಾ ಕ್ರಾಂತಿಯ ಕಿಡಿಯು ಯಾವಾಗಲಾದರೂ ಸಿಡಿಯಬಹುದೆಂಬ ಸೂಚನೆ ಕೊಡುತ್ತದೆ.
ಇಲ್ಲಿ ಪ್ರಶಂಸಿಸಬೇಕಾದದ್ದು ನಿರ್ದೇಶಕ ಬರ್ಟಲೂಸಿಗೆ. ಅವನು ಚಿತ್ರೀಕರಿಸಿರುವ ಪರಿಗೆ. ೧೯೭೫ರಲ್ಲೇ ತಾಂತ್ರಿಕವಾಗಿ ತುಂಬಾ ಶ್ರೀಮಂತವಾಗಿ ಚಿತ್ರವನ್ನು ನಿರ್ದೇಶಿಸಿದ್ದಾನೆ. ದಂಗೆಯ ಸಮಯದಲ್ಲಿ ಕ್ರಾಂತಿಕಾರಿಯೊಬ್ಬ ತನ್ನ ಕಿವಿಯನ್ನೆ ಕತ್ತರಿಸಿ ಜಮೀನುದಾರನ ಕೈಗೆ ಕೊಡುವ ದೃಶ್ಯ ಒಂದೇ ಶಾಟ್ ನಲ್ಲಿದೆ. ಅದೆಷ್ಟು ನೈಜವಾಗಿ ಬಂದಿದೆಯೆಂದರೆ ನಿಜವಾಗಿಯೂ ಕಿವಿ ಕತ್ತರಿಸಿ ಕೊಟ್ಟುಬಿಟ್ಟನೇನೋ ಎಂಬ ಭಾವ ಮೂಡಿಸುತ್ತದೆ. ಹಾಗಿದೆ ದೃಶ್ಯ ವೈಭವ.
ಆಲ್ಫೆಡೊ ಪಾತ್ರ ನಿರ್ವಹಿಸಿರುವ ನಟ ರಾಬರ್ಟ್ ಡಿ ನೀರೋ ತುಂಬಾ ಲೀಲಾ ಜಾಲವಾಗಿ ಹಾಗೂ ನಿರ್ಭಿಡೆಯಿಂದ ಪಾತ್ರ ನಿರ್ವಹಿಸಿದ್ದಾನೆ. ತುಂಬಾ ಅಸಡ್ಡೆಯ, ಮೋಜುಗಾರನಾಗಿ,ಬೇಜವಾಬ್ದಾರಿ ಯುವಕನಾಗಿ,ಮೊದಲಾರ್ಧದವರೆಗೂ ಸಾಗುವ ಪಾತ್ರವನ್ನು ಅಷ್ಟೇ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾನೆ. ಜೆರಾರ್ಡ್ ಡೆಪಾರ್ಡು, ಓಲ್ಮೊ ಡಾಲ್ಕೋ ನ ಪಾತ್ರಕ್ಕೆ ಪರಕಾಯ ಪ್ರವೇಶ  ಮಾಡಿದ್ದಾನೆ.
ಸಿನಿಮಾದ ಬಗ್ಗೆ ಸಂಕ್ಷಿಪ್ತ ವಿವರ :
ನಿರ್ದೇಶನ : ಬರ್ನಾಡೋ ಬಾರ್ಟೋಲುಸಿ
ನಿರ್ಮಾಪಕ : ಆಲ್ಬರ್ಟೊ ಗ್ರಿಮಾಡಿ
ತಾರಾಗಣ : ರಾಬರ್ಟ್ ಡಿ ನೀರೋ, ಜೆರಾರ್ಡ್ ಡೆಪಾರ್ಡಿಯೂ, ಡೊಮಿನಿಕ್ ಸಾಂಡಾ, ಡೊನಾಲ್ಡ್ ಸುದರ್ಲ್ಯಾಂಡ್.
ಸಂಗೀತ :  ಎನಿಯೋ ಮೊರಿಕೋನ್
ಛಾಯಾಗ್ರಹಣ : ವಿಟ್ಟೋರಿಯೋ ಸ್ಪೊರಾರೋ
ಬಿಡುಗಡೆಯ ದಿನಾಂಕ : ಆಗಸ್ಟ್ 15, 1976
ಅವಧಿ : ಇಟಲಿ - 311 ನಿಮಿಷಗಳು
       ಡೆನ್ಮಾರ್ಕ್ - 302 ನಿಮಿಷಗಳು
     ಯು.ಎಸ್.ಎ - 311ನಿಮಿಷಗಳು
ದೇಶ : ಇಟಲಿ
ಭಾಷೆ : ಇಟಾಲಿಯನ್, ಇಂಗ್ಲಿಷ್
ಕೊಸರು : ಚಿತ್ರದ ಚಿತ್ರಕಥೆಯನ್ನು ಕಾಲಗಳ ಆಧಾರದ ಮೇಲೆ ರಚಿಸಲಾಗಿದೆ. ಉದಾಹರಣೆಗೆ ಮಕ್ಕಳು ಒಬ್ಬರನ್ನೊಬ್ಬರು ಬೇಸಿಗೆ ಕಾಲದಲ್ಲಿ ಸಂಧಿಸಿದರೆ, ಮಳೆಗಾಲದಲ್ಲಿ ಯುವಕರಾದ ಗೆಳೆಯರು ಬೇಟಿಯಾಗುತ್ತಾರೆ. ಮತ್ತು, ದಂಗೆ ನಡೆದು ಜಮೀನಿನ ಆಕ್ರಮಣ ಚಳಿಗಾಲದಲ್ಲಿ ನಡೆದರೆ, ಎರಡನೇ ಮಹಾಯುದ್ಧವನ್ನು ವಸಂತಕಾಲದಲ್ಲಿ ತೋರಿಸಲಾಗಿದೆ.

4 comments:

 1. nanna tamma burn maaDi koTTa CD mele 1900 anta ittu. movie play maaDuvaaga maatra the 'the legend of 1900' anta bantu. haagu mitra Raghu kooda ee pic bagge heLidrinda iadanna noDde. wow what a movie..nanna tangi makkaLu ibbaroo budding pianists..avarigoo recommend maaDidde ee chitravanna. nimma review made me recall this. have yet to watch 1900. i have that movie with me now. hey i am totally in love with Ennio Morricone...thank u :-)

  ReplyDelete
 2. ಹಾಗಾದರೆ ಐದು ಗ೦ಟೆ ಹದಿನೈದು ನಿಮಿಷಗಳ ಮಾಯಾಲೋಕಕ್ಕೆ ಸಿದ್ದವಾಗಿದ್ದೀರಿ ಎ೦ದರ್ಥ.ಧನ್ಯವಾದಗಳು...ಇತ್ತೀಚಿಗೆ ಯಾವ ಸಿನಿಮಾ ನೋಡಿದ್ರೇ..? ಯಾವ ಬುಕ್ ಓದಿದ್ರೀ...?

  ReplyDelete
 3. ನೋಡಬೇಕು. ನನ್ನ ಕ್ಯೂ ನಲ್ಲಿದೆ. ಬರ್ನಾಡೋ ಬಾರ್ಟೋಲುಸಿ ಚಿತ್ರಗಳು ಕಾವ್ಯತ್ಮಕವಾಗಿರುತ್ತವೆ. ಅದ್ಭುತ ಟೇಕ್ ಗಳು.
  ಸದ್ಯಕ್ಕೆ ನೋಡಿದ ಚಿತ್ರಗಳಲ್ಲಿ ಇಷ್ಟವಾದುವುಗಳು
  The Spirit of the Beehive,
  The Conformist,
  Make Way for Tomorrow(1937)
  Forbidden Games(1942)

  ReplyDelete
 4. ಫಾರ್ಬಿಡನ್ ಡ್ರೀಮ್ ಒ೦ದು ನೋಡಿರಲಿಲ್ಲ. ಈಗ ನೀವು ಹೇಳಿದ ಮೇಲೆ ನೋಡಬೇಕೆನಿಸಿದೆ...ಥ್ಯಾಂಕ್ಸ್...

  ReplyDelete