Wednesday, October 25, 2017

ಪಟಾಕಿ, ಫೇಸ್ ಬುಕ್, ಮತ್ತು ಪ್ರಕಾಶ್ ರೈ

ಪಟಾಕಿಗಳ ಹಿನ್ನೆಲೆ ಏನೇ ಇರಲಿ, ಪಟಾಕಿಯಲ್ಲಿರುವ ರಾಸಾಯನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅದರಲ್ಲೂ ಮಧ್ಯರಾತ್ರಿಯವರೆಗೆ ಧಂ ಡಂ ಸದ್ದು ಮನೆಯಲ್ಲಿರುವ ವಯೋವೃದ್ಧರಿಗೆ ಕಿರಿಕಿರಿ ಜೊತೆಗೆ ಅನಾರೋಗ್ಯ ಉಂಟು ಮಾಡಬಹುದು. ಅದೆಲ್ಲದರ ಜೊತೆಗೆ ಈವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆಯಲ್ಲ, ಚೀನಾದವರು ಪಟಾಕಿಯೊಳಗೆ ಭಯಂಕರ ರಾಸಾಯನಿಕ ತುಂಬಿದ್ದಾರೆ, ಹಾಗಾಗಿ ಅದರಿಂದ ಮಾರಣಾಂತಿಕ ರೋಗಗಳೂ ಬರಬಹುದು..ಇನ್ನು ಗಣಪತಿ ಹಬ್ಬಕ್ಕೆ ಗಣಪತಿ ಮೂರ್ತಿಯನ್ಯಾಕೆ ಕೂರಿಸಬೇಕು ಅಲ್ಲವೇ..? ಅದನ್ನು ತೆಗೆದುಕೊಂಡು ಕೆರೆಯಲ್ಲಿ ಮುಳುಗಿಸಿದರೆ ಮತ್ತದೇ ಜಲಮಾಲಿನ್ಯ...
ನಮಗೆಲ್ಲಾ ಹಬ್ಬ ಎಂದರೆ ಏನು ನೆನಪಾಗುತ್ತದೆ..? ನನಗಂತೂ ಗೌರಿಗಣೇಶ ಹಬ್ಬ ಎಂದಾಕ್ಷಣ ವಾರದ ಮುಂಚೆ ಖಾಲಿ ಬೆಂಕಿಪೊಟ್ಟಣಗಳಿಂದ ಒಂದು ಮಂಟಪ ಕಟ್ಟಿ, ಅದಕ್ಕೆ ಬಣ್ಣದ ಕಾಗದ ಅಂಟಿಸುವುದು ನೆನಪಿಗೆ ಬರುತ್ತಿದೆ. ಹಬ್ಬದ ಮೊದಲ ದಿನ ಪುಟ್ಟ ಗೌರಿ ಪ್ರತಿಮೆ, ಎರಡನೆಯ ದಿನ ತುಸುದೊಡ್ಡದಾದ ಗಣೇಶ ಪ್ರತಿಮೆ ಇಟ್ಟು ಪೂಜಿಸುವುದೇ ನೆನಪಿಗೆ ಬರುತ್ತದೆ. ಹಬ್ಬದ ದಿನ ಕಾಯಿಕಡುಬು, ಎಳ್ಳುಂಡೆ, ಸೇವಿಗೆ ನೆನಪಿಗೆ ಬರುತ್ತದೆ. ದೀಪಾವಳಿ ಎಂದರೆ ಎಣ್ಣೆ ಸ್ನಾನ, ದೀಪಗಳ ಬೆಳಕು, ಪಟಾಕಿಗಳ ಸಡಗರ, ಮನೆಯಲ್ಲಿ ಖರ್ಜಿಕಾಯಿ ಪಾಯಸದ ಅಡುಗೆ...ಷಷ್ಟಿ-ನಾಗರಪಂಚಮಿ ಎಂದರೆ ಬೆಳಿಗ್ಗೆ ಫಲಾಹಾರ-ವಿಧವಿಧ ವಡೆ, ಸಂಕ್ರಾಂತಿಗೆ ಬೆಲ್ಲದನ್ನ, ದನದ ಪಂದ್ಯ, ಉಗಾದಿಗೆ ಒಬ್ಬಟ್ಟು ಹೋಳಿಗೆ, ನೀರೆರೆಚೋ ಆಟ, ...ಹೀಗೆ ಒಂದೊಂದು ಹಬ್ಬಕ್ಕೂ ಒಂದೊಂದು ವಿಶೇಷತೆ, ಆಚರಣೆ ಶೈಲಿ, ಅಡುಗೆ ಹೀಗೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿವೆ. ಹಾಗಾಗಿಯೇ ಹಬ್ಬ ಎಂದಾಕ್ಷಣ ಇದೆಲ್ಲದರ ಜೊತೆಗೆ ನಾವು ಆಚರಿಸುತ್ತಿದ್ದ ರೀತಿ, ಆವತ್ತಿನ ಬಾಲ್ಯ, ಅಪ್ಪ ಅಮ್ಮ ಅಕ್ಕ ತಂಗಿ ಗೆಳೆಯರು ಸಂಭ್ರಮ ಮನಸ್ಸು ತುಂಬಿಬಿಡುತ್ತದೆ. ಅದೇ ಇಲ್ಲವೇ ಬದುಕು. ನೆನೆಪುಗಳ ಆಗರ.
ಆದರೆ ಇತ್ತೀಚಿಗೆ ಅದೆಲ್ಲವನ್ನು ನಾವು ತಿಪ್ಪೆ ಸಾರಿಸುತ್ತಿದ್ದೇವೆ. ವರ್ಷಪೂರ್ತಿ ವಾಹನಗಳ ಹಾರನ್ಗಳಿಂದ ಇಡೀ ನಗರವನ್ನೇ ಗಬ್ಬೆಬ್ಬಿಸಿರುವ ನಾವು ಪಟಾಕಿ ಶಬ್ಧಕ್ಕೆ ಇಡೀ ಜಗತ್ತೇ ನಾಶವಾಗುತ್ತದೆ ಎನ್ನುವ ಒಣ ಪ್ರತಿಷ್ಠೆಯ ಮಾತುಗಳನ್ನಾಡುತ್ತೇವೆ. ಕೈಯಲ್ಲಿರುವ ಮೊಬೈಲ್ ನಿಂದ ಹಿಡಿದು ದಿನಂಪ್ರತಿ ಉಪಯೋಗಿಸುವ ಅದೆಷ್ಟೋ ವಸ್ತುಗಳು ಉಪಕರಣಗಳ ಮಾತೃ ಚೀನಾ ..ಅದು ಗೊತ್ತಿದ್ದರೂ ಪಟಾಕಿಯಲ್ಲಿ ಚೀನಾದವರು ರಾಸಾಯನಿಕ ತುಂಬಿದ್ದಾರೆ ಎನ್ನುತ್ತೇವೆ..ಇಡೀ ಕಾರ್ಖಾನೆಯ ಕಸವನ್ನೆಲ್ಲಾ ತಂದು ಕೆರೆಗೆ ಚರಂಡಿಗೆ ತುಂಬುವ ನಾವು ವರ್ಷಕ್ಕೊಮ್ಮೆ ಗಣಪತಿ ಮೂರ್ತಿ ನೀರಲ್ಲಿ ಮುಳುಗಿಸಿದರೆ ಜಲಮಾಲಿನ್ಯ ಎನ್ನುವ ಭಾಷಣ ಬಿಗಿಯುತ್ತೇವೆ..
ಇದೆಂತಹದ್ದು ಅರ್ಥವೇ ಆಗುವುದಿಲ್ಲ.
ಇಸ್ಲಾಂ, ಕ್ರೈಸ್ತ, ಬೌದ್ಧ ಹೀಗೆ ಯಾವುದನ್ನಾದರೂ ನಮ್ಮದು ಎಂದರೆ ಅದು ಕೋಮುವಾದವಲ್ಲ, ಆದರೆ ನಾನೊಬ್ಬ ಹಿಂದೂ ಎಂದರೆ ಅದೇಗೆ ಕೋಮುವಾದ ಎನಿಸುತ್ತದೆ ಗೊತ್ತಾಗುವುದಿಲ್ಲ. ಇಲ್ಲಿಯವರೆಗೆ ಜಾತಿ-ಧರ್ಮದ ಕಾರಣಗಳಿಂದ ಉರುಳಿದ ಹೆಣಗಳನ್ನು ಲೆಕ್ಕ ಹಾಕಿದರೆ ಅದ್ಯಾರದ್ದು ಕೋಮುವಾದ ಭಯೋತ್ಪಾದಕತೆ ಎಂಬುದು ಗೊತ್ತಾಗುತ್ತದೆ. ವರ್ಷಾರಂಭಕ್ಕೆ ಮಧ್ಯರಾತ್ರಿಯವರೆಗೆ ಕುಡಿದು ಕುಣಿದು ಕುಪ್ಪಳಿಸಿದರೆ ಅದಕ್ಕೆ ಅನುಮತಿ ಇದೆ, ಅದು ಸಂಭ್ರಮಾಚರಣೆ, ಕ್ರಿಕೆಟ್ ಗೆದ್ದಾಗ ಮಧ್ಯರಾತ್ರಿ ಪಟಾಕಿ ಹೊಡೆದರೆ ವಯೋವೃದ್ಧರ ಕಿವಿಗೆ ತಂಪಾಗುತ್ತದೆ...ಗೋಮಾಂಸ ತಿನ್ನುವುದು ತಪ್ಪು ಎಂದರೆ ಹಂದಿ ಮಾಂಸ ತಿನ್ನುವ ಹಾಗೆಯೇ ಇಲ್ಲ ಎಂದರೆ ಅದು ಪದ್ಧತಿ..ನಮ್ಮ ಹಬ್ಬಗಳ ಬಗ್ಗೆ ನಾವೆಲ್ಲಾ ವೈಜ್ಞಾನಿಕ ದೃಷ್ಟಿಕೋನದಿಂದ ಮಾತನಾಡಿ, ದೊಡ್ಡ ಪಂಡಿತರ ಹಾಗೆ ಹಾಗೆಲ್ಲಾ ಮಾಡುವುದರ ಅಗತ್ಯವಿಲ್ಲ, ಅದು ಮೂಢನಂಬಿಕೆ ಎನ್ನುತ್ತೇವೆ. ನಮ್ಮದೇ ಸರ್ಕಾರ ಕೂಡ ಒಂದಷ್ಟು ನಿಬಂಧನೆ ಹೂಡುತ್ತದೆ, ಆದರೆ ಇತರೆ ಧರ್ಮದ ಹಬ್ಬ ಆಚರಣೆಗಳ ಬಗ್ಗೆ ಅವರು ಸೊಲ್ಲೆತ್ತುವುದಿಲ್ಲ, ಅದವರ ಪದ್ಧತಿ ಎಂದು ನಾವೆ ದನಿಗೂಡಿಸುತ್ತೇವೆ, ಅವರು ಬಲಿಕೊಡಲಿ, ಚಾವಟಿಯಿಂದ ಬೆನ್ನ ಮೇಲೆ ರಕ್ತ ಬರುವ ಹಾಗೆ ಬಡಿದುಕೊಳ್ಳಲಿ, ಉಪವಾಸ ವಿರಲಿ.. ಅದೆಲ್ಲದರ ಬಗ್ಗೆ ನಮ್ಮದು ಪ್ರಗತಿಪರವಾದ. ಅಲ್ಲಿ ವೈಜ್ಞಾನಿಕತೆ-ವಾಸ್ತವತೆ ಕಂಬಳಿಹೊದ್ದು ಮಲಗಿಬಿಟ್ಟಿರುತ್ತದೆ.
ಈ ಮಧ್ಯೆ ಪ್ರಕಾಶ್ ರೈ ನಂತಹ ನಟ ಅನಿಸಿದ್ದನ್ನು ಅನಿಸಿದ ಹಾಗೆಯೇ  ಮಾತನಾಡುತ್ತಾರೆ, ದಾಖಲಿಸುವ ಮುನ್ನ ಚರ್ಚಿಸಿದ್ದರೆ, ಎಲ್ಲಾ ದಿಕ್ಕುಗಳಿಂದ ನೋಡಿದ್ದರೆ ಆಗುತ್ತಿತ್ತೇನೋ? ಆದರೆ ಅವರ ಮಾತಿಗೆ ತಲೆದೂಗುವರ ಸಂಖ್ಯೆ ಹತ್ತಿರದಲ್ಲಿ ಸಾಕಷ್ಟಿರುತ್ತದಲ್ಲ, ಅದನ್ನು ಖಂಡಿಸುವವರನ್ನು ಹತ್ತಿರ ಬಿಟ್ಟುಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ, ನನ್ನದೇ ಸರಿ ಎನ್ನುವ ಅಹಂ ಹೀಗೆ ಮಾಡಿಸುತ್ತದೆ. ಮತ್ತೊಬ್ಬ ನಾನು ಪ್ರಗತಿಪರ ಚಿಂತಕ, ಬುದ್ದಿಜೀವಿ ಜಾತ್ಯಾತೀತ ಹಾಗೆ ಹೀಗೆ ಎನ್ನುತ್ತಾನೆ.ಬಾರಪ್ಪ ಚರ್ಚೆಗೆ ಕೂರೋಣ ಎಂದರೆ ಆಸಾಮಿ ನಾಪತ್ತೆಯಾಗುತ್ತಾನೆ. ಅಂಬೇಡ್ಕರ್ ಬುದ್ಧನನ್ನು ಬಸವಣ್ಣ ನನ್ನು ಮಾತಿನ ಮಧ್ಯ ಎಳೆದು ತರುವವರನ್ನು ಕರೆದು ಬನ್ನಿ ಕುಳಿತುಕೊಂಡು ಅಂಬೇಡ್ಕರ್ ಬರಹಗಳ ಮಾತನಾಡೋಣ, ಬುದ್ಧನ ಪಂಚಶೀಲ ತತ್ವಗಳಲ್ಲಿ ನೀನು ಯಾವುದನ್ನು ಅಳವಡಿಸಿಕೊಂಡಿದ್ದೀಯ, ಬಸವಣ್ಣನ ಕಳಬೇಡ ಕೊಲಬೇಡ ವಚನದಲ್ಲಿನ ಸಾಲುಗಳಲ್ಲಿ ಯಾವುದು ನಿನ್ನ ಬದುಕಿನಲ್ಲಿ ಹಾಸುಹೊಕ್ಕಾಗಿದೆ..  ಎಂದರೆ ಸೊಲ್ಲೆತ್ತೆವುದಿಲ್ಲ. ಸಧ್ಯಕ್ಕೆ ನಾನೊಬ್ಬ ಹಿಂದೂ ಎಂದರೆ ಬೇರೆಯ ತರಹದ ದೃಷ್ಟಿ ನಮ್ಮನ್ನು ದಿಟ್ಟಿಸತೊಡಗುತ್ತದೆ.ಸಧ್ಯಕ್ಕೆ ಗಾಬರಿ ತರುವ ಸಂಗತಿ ಇದೆ ಅನಿಸುತ್ತದೆ. ಮೊದಲೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಚರ್ಚೆ ನಡೆಯುತ್ತಿತ್ತು. ಈಗ ವ್ಯಕ್ತಿಗತ ನಿಂದನೆ ಜಗಳ ಕಿತ್ತಾಟ, ದೂಷಣೆಗಳೇ ತುಂಬಿಹೋಗಿವೆ. ಗುಂಪುಗಾರಿಕೆಗಳು, ವಿಧವಿಧದ ಫೋಟೋಶಾಪ್ ಸೃಷ್ಟಿಗಳು ಇದೆಲ್ಲದ್ದಕ್ಕಿಂತ ಗಾಬರಿ ತರಿಸುವಂತಹದ್ದು ನನ್ನದೇ ಸರಿ ಎನ್ನುವ ಭಾವ ಮತ್ತೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳಲೂ ತಾಳ್ಮೆಯಿಲ್ಲದಂತಹ ದಾರ್ಷ್ಟ್ಯ.
ನಾನು ಶಾಲಾಕಾಲೇಜು ದಿನಗಳಿಂದ ಓದಿಕೊಂಡು ಆರಾಧಿಸಿದ್ದವರು ಫೇಸ್ ಬುಕ್ ನಲ್ಲಿ ನೇರ ಸಿಕ್ಕಿ ಚಿಕ್ಕವರಾಗಿದ್ದಾರೆ. ಇವರೇನಾ ಅವರು ಎನ್ನುವಂತಾಗಿದ್ದಾರೆ. ಬಹುಶಃ ಪುಸ್ತಕದ ರೂಪದಲ್ಲಷ್ಟೇ ಅವರ ಬರಹಗಳಲ್ಲಷ್ಟೇ ಅವರನ್ನು ಕಾಣಿಸಿದ್ದ ಅವರೆಲ್ಲಾ ನೆರಾನೆರಾ ನಿಂತದ್ದೇ ಅವರೇ ತೀರಾ ತೆರೆದುಕೊಂಡಿದ್ದಾರೆ. ಆಡುವ ಮಾತೆಲ್ಲಾ ದಾಖಲಿಸುವಂತಹ ಫೇಸ್ ಬುಕ್ ಅವರನ್ನು ಚಿಕ್ಕವನನ್ನಾಗಿ ಮಾಡಿಬಿಟ್ಟಿದೆಯೇನೋ ಎನಿಸುತ್ತದೆ. ಆ ಪುಸ್ತಕದಲ್ಲಿ ಹಾಗೆ ಹೇಳಿದ್ದರು, ಈ ರೀತಿ ಚಿತ್ರಣವನ್ನು ಈ ಕತೆಯಲ್ಲಿ ತಂದಿದ್ದರು ಎಂದುಕೊಂಡು ಅದರ ಸರಿ ತಪ್ಪು ಕಂಡುಕೊಂಡು ಅದನ್ನು ಅಳವಡಿಸಿಕೋಳ್ಳಲು ಪ್ರಯತ್ನಿಸುತ್ತಿದ್ದ ಮಾದರಿವ್ಯಕ್ತಿತ್ವ ಎಂದುಕೊಂಡಿದ್ದ ನನಗೆ ಅವರ ಏಕಮುಖ ಚಿಂತನೆ ಬರಹ ಅಯ್ಯಯ್ಯೋ ಎನಿಸಿದೆ. ಸಧ್ಯಕ್ಕೆ ಫೇಸ್ಬುಕ್ ಬೇಸರ ತರಿಸುತ್ತದೆ. ಗೆಳೆಯರು ಸಿಕ್ಕರೆ ಒಂದಷ್ಟು ಟೈಮ್ ಪಾಸ್, ಫನ್ನಿ ವೀಡಿಯೋಸ್ ಬಿಟ್ಟರೆ ಮತ್ತೆಲ್ಲಾ ಜಗಳಗಳೇ...
ಹಾಗಾಗಿಯೇ ಪುಸ್ತಕಗಳೇ ಚಂದ, ಅದೇ ಖುಷಿ,, ಟಪಟಪ ಟೈಪಿಸಿ ಗಂಟೆಗಟ್ಟಲೆ ಮಾತನಾಡುವುದಕ್ಕಿಂತ ಎರಡು ನಿಮಿಷ ಕರೆ ಮಾಡಿದರೆ ಮುಗಿಯುತ್ತದಲ್ಲ ಎನಿಸಿದೆ. ಹಾಗಾಗಿಯೇ ಒಂದಷ್ಟು ಪುಸ್ತಕಗಳ ರಾಶಿ, ಸಿನಿಮಾದ ರಾಶಿಗಳನ್ನು ಗುಡ್ಡೆ ಹಾಕಿಕೊಂಡಿದ್ದೇನೆ. ಹಬ್ಬ ಹರಿದಿನ ಸಂಭ್ರಮ ಪೂಜೆ, ಬರಹ, ಕುಟುಂಬದ ಜೊತೆಗಿನ ಓಡಾಟ, ಮನೆಯಲ್ಲಿಯೇ ಕುಳಿತು ಒಂದಷ್ಟು ಹರಟೆ...ಮತ್ತೆ ದಶಕಗಳ ಹಿಂದಕ್ಕೆ ಸಾಗುತ್ತಿದ್ದೇನೆ. ಅದರಲ್ಲಿಯೇ ಖುಷಿ ಎನಿಸುತ್ತಿದೆ.

No comments:

Post a Comment