Wednesday, January 25, 2017

ಅವರು ಗಡ್ಡಪ್ಪ.. ನಾವೂ ದಡ್ಡಪ್ಪ...


ನಾವು ಚಿತ್ರಕರ್ಮಿಗಳು ಸ್ಫೂರ್ತಿಗೊಳಗಾಗುವುದು ತಪ್ಪಲ್ಲ. ಯಾವುದೇ ಕತೆ ಕವನ ಸ್ಫೂರ್ತಿಯಿಲ್ಲದೆ ಹುಟ್ಟುವ ಸಂಭವ ಕಡಿಮೆ. ಸಿನಿಮಾಕ್ಕೆ, ಪುಸ್ತಕಕ್ಕೆ ಅಥವಾ ವರದಿಗಳಿಗೆ ಒಂದಷ್ಟು ಬರೆಯಬಹುದೇನೋ? ಆದರೆ ಸ್ಫುರಿಸದೆ ಜನ್ಮ ತಾಳುವ ಕತೆಗೆ ಆಯಸ್ಸು ಕಡಿಮೆಯೇ..?
ಹಾಗಾದರೆ ನಾವು ಯಾವುದರಿಂದ ಸ್ಫೂರ್ತಿಗೊಳ್ಳಬೇಕು ಎಂಬುದು ಪ್ರಶ್ನೆ. ಸಧ್ಯಕ್ಕೆ ಒಂದು ಸಿನಿಮಾ ಎರ್ರಾಬಿರ್ರಿ ಯಶಸ್ವೀಯಾಗಿಬಿಡುತ್ತದೆ. ಆ ತಕ್ಷಣಕ್ಕೆ ನಮಗದು ಸ್ಫೂರ್ತಿ. ಈ ತರಹದ ಚಿತ್ರವನ್ನು ನಾವೂ ಮಾಡಬೇಕು ಎನಿಸುತ್ತದೆ. ಅಥವಾ ಅದರಲ್ಲಿನ ಕತೆಯ ಎಳೆ ನಮ್ಮ ಮನದಾಳದಲ್ಲಿ ಈ ಮೊದಲೆಲ್ಲೋ ಜನ್ಮ ತಾಳಿದ್ದರೆ ಆಗ ಅದಕ್ಕೆ ಹುರುಪು ಬಂದು, ನಾನು ಮೊದಲೇ ಈ ಐಡಿಯಾ ಅಂದುಕೊಂಡಿದ್ದೆನಲ್ಲಾ .. ಎನಿಸಿ ಮತ್ತೆ ಅದಕ್ಕೆ ಮಸಾಲೆ ಅರೆಯಲು ಪ್ರಾರಂಭಿಸುತ್ತೇವೆ. ಇದು ಸರಿಯಾದದ್ದೇ. ಆದರೆ ಕೆಲವೊಮ್ಮೆ ಅಥವಾ ಬಹುತೇಕ ನಾವುಗಳ ಮೂಲಕೃತಿಯ ಅಂತಃಸತ್ವವನ್ನು ಅರಿತುಕೊಳ್ಳುವುದಿಲ್ಲ. ಅಥವಾ ಅಭ್ಯಾಸ, ಅಧ್ಯಯನ ಮಾಡುವುದಿಲ್ಲ.
ಈಗ ಸಧ್ಯಕ್ಕೆ ತಿಥಿ ಚಿತ್ರವನ್ನೇ ತೆಗೆದುಕೊಳ್ಳಿ. ಅದರಲ್ಲಿದ್ದ ಪಾತ್ರಗಳು ಪಾತ್ರಧಾರಿಗಳು ಕತೆ ಎಲ್ಲವೂ ಉತ್ತಮವಾದದ್ದೇ. ಮತ್ತದು ನೈಜವಾಗಿ ಬರಲು ಅದರ ಬರಹಗಾರ/ನಿರ್ದೇಶಕರ ವಿಷನ್, ಪ್ರತಿಭೆ ಕಾರಣ. ಅದೆಲ್ಲದರ ಜೊತೆಗೆ ಅದರಲಿದ್ದ ಕತೆ. ತಿಥಿಯ ಬಗ್ಗೆ ಒಂದು ಸಿನಿಮಾ ಮಾಡಿದ್ದಾರೆ, ನಾವು ಮದುವೆ ಇಟ್ಟುಕೊಂಡು ಸಿನಿಮಾ ಮಾಡಿಬಿಡೋಣ ಎಂದುಕೊಂಡು ಹೊರಡುವುದು ಜಾಣತನ ಎನಿಸುವುದಿಲ್ಲ. ತಿಥಿಯಲ್ಲಿ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಕೆರಳಿಸುವ ಕತೆ ಇದೆ. ಹುಡುಗಿಯ ಹಿಂದೆ ಬೀಳುವ ಹುಡುಗನಿಗೆ ಹುಡುಗಿ ಸಿಗುತ್ತಾಳಾ ಎನ್ನುವ ಕತೆಯ ಜೊತೆಗೆ, ಹಣಕ್ಕಾಗಿ ಪರಿಪಾಟಲು ಪಡುವ ತಮ್ಮಣ್ಣ, ಸುತ್ತಿ ಬಳಸಿ ಅಲ್ಲಲ್ಲೇ ಓಡಾಡುವ ಗಡ್ಡಪ್ಪ ಅವರ ಮುಂದಿನ ನಡೆಗಳು ಕುತೂಹಲ ಹುಟ್ಟಿಸುತ್ತವೆ. ಪ್ರಾರಂಭದಿಂದ ತಮ್ಮಣ್ಣನಿಗೆ ಹಣ ಸಿಕ್ಕೆಬಿಟ್ಟಿತು, ಆಲ್ ಇಸ್ ವೆಲ್ ಎಂದುಕೊಂಡರೆ ಕೊನೆಯಲ್ಲಿ ಉಲ್ಟಾ ಆಗುತ್ತದೆ, ಹಾಗೆಯೇ ಪ್ರಾರಂಭದಿಂದಲೂ ಸ್ವಲ್ಪವೂ ಮೃದುಧೋರಣೆ ತೋರದೆ ತಿರಸ್ಕರಿಸುತ್ತಲೇ ಸಾಗುವ ಕಾವೇರಿ, ಕೊನೆಯಲ್ಲಿ ಅಚಾನಕ್ ಆಗಿ ಅಭಿಗೆ ಒಲಿಯುತ್ತಾಳೆ. ನಿರೀಕ್ಷೆ ಮೀರಿ ಇದೆಲ್ಲವೂ ಚಿತ್ರದಲ್ಲಿ ಸಾಗುತ್ತದೆ. ಹಾಗಾಗಿಯೇ ತಿಥಿ ಕಲಾತ್ಮಕವಾಗಿಯೂ, ಕಮರ್ಷಿಯಲ್ ಆಗಿಯೂ ಸೂಪರ್ ಎನಿಸಿಕೊಳ್ಳುತ್ತದೆ. ಈ ಅಂತಃಸತ್ವವನ್ನು ಅರಿತುಕೊಳ್ಳದೆ ಬರೀ ತಿಥಿಯ ಮೇಲ್ಪದರವನ್ನು ಕಣ್ಣಿಗೊತ್ತಿಕೊಂಡಾಗ ವಿಕೃತಿಗಳು ಜನ್ಮ ತಾಳುತ್ತವೆ.
ಹಾಗೆಯೇ ತಿಥಿಯ ಕಲಾವಿದರನ್ನು ತೆಗೆದುಕೊಳ್ಳೋಣ. ಕ್ಯಾಮೆರಾ ಎದುರಿಸಿ ಗೊತ್ತಿಲ್ಲದ, ಹಳ್ಳಿಜನ ಅವರು. ನಿರ್ದೇಶಕರು/ಬರಹಗಾರರು ಅವರನ್ನು ಅರ್ಥೈಸಿಕೊಂಡು, ಅಧ್ಯಯನ ಮಾಡಿ, ಅವರ ವ್ಯಕ್ತಿತ್ವ, ಶಕ್ತಿಯನ್ನು ಅರಿತುಕೊಂಡು, ದೌರ್ಬಲ್ಯಗಳನ್ನು ನೆನಪಲ್ಲಿಟ್ಟುಕೊಂಡು ಪಾತ್ರ ಹೆಣೆದಿದ್ದು ಗೊತ್ತೇ ಇದೆ. ಹಾಗೆಯೇ ಸಂಭಾಷಣೆಗಳೂ ಕೂಡ ಆ ಸಂದರ್ಭಕ್ಕೆ ಅವರು ಮಾತಾಡುವುದೇ ಆಗಿತ್ತು.
ಆದರೆ ನಾವು ಅದನ್ನು ತಪ್ಪಾಗಿ ಅರ್ಥೈಸಿಕೊಂಡೆವು. ತಿಥಿ ಕಲಾವಿದರ ಬಲ ಎಂದರೆ ದ್ವಂದ್ವಾರ್ಥ ಪೋಲಿ ಮಾತುಗಳು ಎಂದುಕೊಂಡದ್ದೆ ಪುಂಖಾನುಪುಂಖವಾಗಿ ಅದನ್ನು ಬರೆದು ಅವರನ್ನು ಬಳಸಿಕೊಂಡು ಸಿನಿಮಾ ಮಾಡಲು ತೊಡಗಿದೆವು. ತಿಥಿಯ ನಂತರ ಈವರೆಗೆ ಎರಡು ಚಿತ್ರಗಳು ಬಿಡುಗಡೆಯಾಗಿವೆ, ಇನ್ನು ಮೂರ್ನಾಲ್ಕು ಚಿತ್ರಗಳು ಇಷ್ಟರಲ್ಲೇ ಬಿಡುಗಡೆಯಾಗಲಿವೆ. ಎಲ್ಲದರಲ್ಲೂ ಸಾಮಾನ್ಯವಾದ ಒಂದೇ ಅಂಶ ಎಂದರೆ ಅದು ದ್ವಂದ್ವಾರ್ಥ, ಪೋಲಿ, ಅಶ್ಲೀಲ ಬೈಗುಳಯುಕ್ತ ಮಾತುಗಳು.ಸುಮ್ಮನೆ ಗಮನಿಸಿ, ನಮಗೊಂದಿಷ್ಟು ಕಲಾವಿದರಿದ್ದಾರೆ, ಅವರಿಗೆ ಅವರದೇ ಆದ ಬಲಾಬಲಗಳಿವೆ ಎಂಬುದನ್ನು ಅರ್ಥೈಸಿಕೊಂಡು, ಅವರನ್ನು ಬಳಸಿಕೊಂಡರೆ, ಹಣ ಹಾಕಲು ನಿರ್ಮಾಪಕರು ಸಿಗುತ್ತಾರೆ ಎಂದುಕೊಳ್ಳುವುದಾದರೆ, ಒಂದೊಳ್ಳೆ ಹಳ್ಳಿಸೊಗಡಿನ ಚಿತ್ರವನ್ನೇ ಮಾಡಬಹುದಲ್ಲವೇ? ಬದಲಿಗೆ ಅವಸರದ ಅಡುಗೆಯಿಂದ ಲಾಭವಿದೆಯೇ? ಇಷ್ಟಕ್ಕೂ ಸಿನಿಮಾ ದೃಶ್ಯ ಮಾಧ್ಯಮವಲ್ಲವೇ? ಬರೀ ಅಶ್ಲೀಲ ದ್ವಂದ್ವಾರ್ಥದ ಮಾತುಗಳಿಂದಲೇ ಯಶಸ್ಸಿದೆಯೇ..? ಖಂಡಿತಾ ಇಲ್ಲ.
ಚಿತ್ರರಂಗಕ್ಕೆ ಇದೇನೂ ಹೊಸದಲ್ಲ. ನಮ್ಮಲ್ಲಿ ಅಂತಃಸತ್ವ ಅರಿಯದೆ ಸಿನಿಮಾ ಮಾಡುವವರು ಕಡಿಮೆಯೇನಲ್ಲ. ಪೋಲಿಸ್ ಸ್ಟೋರಿ ಬಂದಾಕ್ಷಣ ಅಕ್ಕನ್-ಅಮ್ಮನ್ ಬೈಗುಳದ ಸಿನಿಮಾಗಳು ಸಾಲು ಸಾಲಾಗಿ ಬಂದವು, ಆದರೆ ಮಾಸ್ಟರ್ ಪೀಸ್ ಎನಿಸಿಕೊಂಡದ್ದು ಪೋಲಿಸ್ ಸ್ಟೋರಿ ಮಾತ್ರ. ಹಾಗೆಯೇ ಓಂ ಬಂದಾಕ್ಷಣ ಲಾಂಗು ಹಿಡಿದು ಝಳಪಿಸುವ ಚಿತ್ರಗಳು ಅಬ್ಬರಿಸಿದವು. ಆದರೆ ಓಂ ಮೀರಿಸಿದ ಚಿತ್ರ ಬರಲಿಲ್ಲ. ಎ ಚಿತ್ರದ ನಂತರ ತಿಕ್ಕಲು ನಿರೂಪಣೆಯ, ಮುಂಗಾರುಮಳೆ ನಂತರ ಮಾತಿನ ಮಂಟಪದ ಚಿತ್ರಗಳು ಬಂದವು, ಹೋದವು. ಹೊಸಬರು, ಯುವ ನಿರ್ದೇಶಕರು ಎಲ್ಲರೂ ಜಾಲಾಡಿದರು, ಆದರೆ ಸಿನೆಮಾಗಳ ಗುಣಮಟ್ಟ ಕುಸಿಯಿತೆ ಹೊರತು ಮೇಲೇಳಲಿಲ್ಲ.
ಇನ್ನು ಟ್ರೈಲರ್ ಗಳದ್ದೂ ಅದೇ ಕತೆ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಕನ್ನಡದ ಮಟ್ಟಿಗೆ ಟ್ರೈಲರ್ ಜಗತ್ತಿನಲ್ಲಿ ಅಬ್ಬರಿಸಿದ ಚಿತ್ರ. ಅದರಲ್ಲಿ ದ್ವಂದ್ವಾರ್ಥ ಇತ್ತಾದರೂ ಅದಕ್ಕೂ ಮೀರಿದ ತುಂಟತನವಿತ್ತು, ಮಾಧುರ್ಯವಿತ್ತು, ಭಾವನೆ ಇತ್ತು. ಆದರೆ ಅದು ಎರ್ರಾಬಿರ್ರಿ ಹಿಟ್ ಆದದ್ದೇ ಆದದ್ದು ಅದರ ಅಂತಃಸತ್ವ ಅರಿಯದ ಗೆಳೆಯರು ದ್ವಂದ್ವಾರ್ಥ ತುಂಬಿದ ಕಿವಿ ಮುಚ್ಚಿಕೊಳ್ಳುವ, ನಾಲ್ಕುಜನ ಗೆಳೆಯರು, ಖಾಸಗಿಯಾಗಿ ಮಾತಾಡಿಕೊಳ್ಳುವ ಭಾಷೆಯನ್ನೂ ಹೆಣ್ಣು ಗಂಡು ಬೇಧವಿಲ್ಲದೆ, ವಯೋಮಿತಿಯ ಅಂತರವಿಲ್ಲದೆ ಆಡುವ ಅಸಹ್ಯಗಳನ್ನು ಟ್ರೈಲರ್ ನಲ್ಲಿ ಬಿತ್ತರಿಸಿದರು. ಡಬಲ್ ಮೀನಿಂಗ್ ಇದ್ದರೆ ಯೂ ಟ್ಯೂಬ್ ಗೆ ಲೈಕ್ಸ್ ಜಾಸ್ತಿಯಾಗುತ್ತದೆ ಎಂದು ಅದ್ಯಾವ ಪುಣ್ಯಾತ್ಮ ಹೇಳಿದನೋ? ಈವತ್ತಿಗೆ ಸುಮ್ಮನೆ ತೆರೆದುನೋಡಿ, ಒಳ್ಳೊಳ್ಳೆ ಚಿತ್ರದ ಟ್ರೈಲರ್ ಗಿಂತ ಅಶ್ಲೀಲ-ದ್ವಂದ್ವಾರ್ಥ ಸಂಭಾಷಣೆ ಇರುವ ಟ್ರೈಲರ್ ಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಹುಡುಗ ಹುಡುಗಿ ಮಾತಾಡುವ ಮಾತಿನಲ್ಲಿ ಸೆಕ್ಸ್ ಒಂದೇ ತುಂಬಿರುತ್ತದೆ, ಎನ್ನುವ ಕಲ್ಪನೆ ನೀಡುವ ಟ್ರೈಲರ್ ಗಳು ನೋಡಲು ಖುಷಿ ಕೊಡುತ್ತವೆಯೋ ಅಥವಾ ಮುಜುಗರ ತರುತ್ತವೋ? ಅವರವರ ಭಾವಕ್ಕೆ ಭಕುತಿಗೆ ಎಂದುಕೊಂಡು ಅವರವರವ ಇಷ್ಟಕ್ಕೆ ಬಿಟ್ಟುಬಿಡಬಹುದೇನೋ?ಆದರೆ ಇಂದಿನ ಯುವಜನಾಂಗ ಬರೀ ಸೆಕ್ಸ್ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತದೆ, ಅಶ್ಲೀಲವಾಗಿ ಲಿಂಗ ತಾರತಮ್ಯವಿಲ್ಲದೆ ಹಿಗ್ಗಾಮುಗ್ಗಾ ಪೋಲಿ ಮಾತುಗಳನ್ನು ಆಡುತ್ತದೆ, ಜವಾಬ್ದಾರಿಯುತವಾಗಿ ಮುಂದಿನ ಪೀಳಿಗೆಗೆ ಮಾದರಿಯಾಗುವುದಿಲ್ಲ ಎಂಬಿತ್ಯಾದಿ  ಸಂದೇಶಗಳನ್ನು ನಮ್ಮ ಸಿನೆಮಾಗಳ ಮೂಲಕ ಸಾರ್ವಜನಿಕರಿಗೆ ನಾವೇ ಉಣ ಬಡಿಸಿದಂತಾಗುತ್ತದೆ ಅಲ್ಲವೇ?
ಇದರ ಜೊತೆಗೆ ನಾವು ಅಂದರೆ ಚಿತ್ರಕರ್ಮಿಗಳು ಒಂದು ಮಿತಿಯನ್ನು ನಾವೇ ಹಾಕಿಕೊಂಡಹಾಗಾಗುತ್ತದೆಯಲ್ಲದೇ, ಪ್ರೇಕ್ಷಕರನ್ನೂ ನಿರ್ಧಿಷ್ಟಮಿತಿಗೆ ಸೀಮಿತಗೊಳಿಸಿದಂತಾಗುತ್ತದೆಯಲ್ಲವೇ? ಚಿತ್ರರಂಗದ ಗುಣಮಟ್ಟವೂ ಕುಸಿಯುವುದರ ಜೊತೆಗೆ ಸಿನಿಮಾ ಎಂದರೆ ಒಂದು ಕತೆಯ ದೃಶ್ಯಕಾವ್ಯ ಎಂಬುದು ಹಾರಿಹೋಗಿ, ಸಿನಿಮಾ ಎಂದರೆ ಪೋಲಿಮಾತುಗಳು, ಸಿನಿಮಾ ಎಂದರೆ ಬೈಗುಳಗಳೂ ಎನಿಸಿಬಿಡುತ್ತದಂತೂ ಸತ್ಯ.ಏನಂತೀರಿ..?

1 comment:

  1. ನಿಜ...ತರ್ಲೆ ವಿಲ್ಲೇಜ್ ಬಂದಾಗಲೇ ಅನ್ಸಿತ್ತು...ಎಲ್ಲ ಡಬಲ್ ಮೀನಿಂಗು ಸಾರ್

    ReplyDelete