Thursday, October 27, 2016

ಅಪ್ಪ ಅಂದರೆ ಏನೋ ಹರುಷವು...2

ನಮ್ಮ ಸಿನಿಮಾಕ್ಕೆ ಮಕ್ಕಳು ಬೇಕಾಗಿದ್ದಾರೆ ಎಂದಾಗ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದ ಎಲ್ಲಾ ಅಪ್ಪಂದಿರಲ್ಲಿ ನನ್ನಪ್ಪನ ಪ್ರತಿಬಿಂಬ ಕಾಣುತ್ತಿತ್ತು. ಮಕ್ಕಳು ಏನಾದರೂ ಮಾಡಿದರೆ ಅವರ ಖುಷಿ ಹೇಳತೀರದು.ನಮ್ಮದೇನು ಮುಗಿಯಿತಲ್ಲ, ಮಕ್ಕಳ ಭವಿಷ್ಯ ಸರಿಯಾದರೆ ಸಾಕು ಎನ್ನುವುದು ಎಲ್ಲಾ ಪ್ರತಿಯೊಬ್ಬ ಅಪ್ಪನ ಮನೋಭಾವ. ಕೆಲವು ವ್ಯತಿರಿಕ್ತ ಜನರೂ ಇರಬಹುದು. ಅದಿರಲಿ. ನಾನು ಓದುತ್ತಿದ್ದೆ. ಚೆನ್ನಾಗಿಯೇ. ಪಾಠಕ್ಕಿಂತ ಹೆಚ್ಚಾಗಿ ಕತೆ ಕಾದಂಬರಿ ಕವನಗಳನ್ನು. ನಮ್ಮಪ್ಪ ಮಾಸ್ತರರಾದ್ದರಿಂದ ಮನೆಯಲ್ಲಿ ಪುಸ್ತಕಗಳಿಗೆ ಕೊರತೆಯಿರಲಿಲ್ಲ. ಕೇವಲ ನಾಲ್ಕನೆಯ ತರಗತಿ ಓದಿದ ನನ್ನಮ್ಮ ತುಂಬಾ ಪುಸ್ತಕಗಳನ್ನು ಓದುತ್ತಿದ್ದರು. ಹಾಗಾಗಿ ನಾನು ಚಿಕ್ಕಂದಿನಲ್ಲಿಯೇ ಕಾದಂಬರಿ ಓದುವುದನ್ನು ರೂಢಿಸಿಕೊಂಡು ಬಿಟ್ಟಿದ್ದೆ. ನಾನು ಮೊದಲ ಕಾದಂಬರಿ ಓದಿದ್ದು ಅರ್ಪಣೆ ಎಂಬುದು. ಅದರ ಲೇಖಕರ ಹೆಸರು ನೆನಪಿಲ್ಲ. ಆದರೆ ಬರೀ ರೇಡಿಯೋ ಒಂದೇ ಮನರಂಜನೆಯ ಸಾಧನವಾಗಿದ್ದ ಆ ಸಮಯದಲ್ಲಿ ಪುಸ್ತಕಗಳು ಭರಪೂರ ಮನರಂಜನೆ ಒದಗಿಸುತ್ತಿದ್ದದ್ದು ಸತ್ಯ. ನನ್ನ ಐದನೆಯ ತರಗತಿಯಿಂದ ಆರನೆಯ ತರಗತಿ ವರೆಗಿನ ಒಂದು ವರ್ಷದ ಅವಧಿಯಲ್ಲಿ ನಾನು ಭೈರಪ್ಪನವರ ಹತ್ತಕ್ಕೂ ಹೆಚ್ಚು  ಕಾದಂಬರಿಗಳನ್ನು ಓದಿಬಿಟ್ಟಿದ್ದೆ. ಆನಂತರ ಕೈಗೆ ಸಿಕ್ಕ ಪುಸ್ತಕಗಳು, ಕಾದಂಬರಿಗಳು ಓದುತ್ತಿದ್ದೆ. ನಮ್ಮಪ್ಪ ಓದು ಓದು ಅದರಿಂದ ಮನಸ್ಸು ವಿಶಾಲವಾಗುತ್ತದೆ ಎನ್ನುತ್ತಿದ್ದರು.
ಆದರೆ ಓದುತ್ತಾ ಓದುತ್ತಾ ಬರೆಯುವ ಮನಸ್ಸಾಯಿತು. ಹಾಗಾಗಿ ಏಳನೆಯ ತರಗತಿಯಲ್ಲಿ ಮೊದಲ ಕತೆ ಬರೆದೆ. ಸಂಕೋಚದಲ್ಲಿಯೇ ನಮ್ಮಪ್ಪನಿಗೆ ತೋರಿಸಿದೆ. ನಮ್ಮಪ್ಪ ಅದೆಷ್ಟು ಖುಷಿ ಪಟ್ಟರೆಂದರೆ ಕುಣಿದಾಡಿಬಿಟ್ಟರು. ಅವರ ಓರಗೆಯ ಗೆಳೆಯರು ನಿನ್ನ ಮಗ ತರಗತಿಯ ಪುಸ್ತಕಗಳಿಗಿಂತ ಬೇರೆ ಪುಸ್ತಕಗಳನ್ನೇ ಓದುತ್ತಾನೆ, ಹೀಗಾದರೆ ಅವನು ಓದಿನಲ್ಲಿ ಹಿಂದುಳಿದು ಬಿಡುತ್ತಾನೆ ಎಂದರೆ, ರಿಸಲ್ಟ್ ಬರಲಿ ನೋಡೋಣ ಎಂದು ತುಂಬು ಭರವಸೆಯಿಂದ ಹೇಳುತ್ತಿದ್ದರು. ಅವರ ಭರವಸೆಯನ್ನು ನಾನು ಕೊನೆಯವರೆಗೂ ಉಳಿಸಿಕೊಂಡಿದ್ದೆ.
ನನ್ನ ಮೊದಲ ಕತೆ ದಿನಪತ್ರಿಕೆಯಲ್ಲಿ ಪ್ರಕಟವಾಯಿತು, ಅದು ನಮ್ಮ ಮನೆಗೆ ಅಂಚೆಯ ಮೂಲಕ ತಲುಪಿತು. ನಾನು ನನ್ನ ಕತೆಯನ್ನು ಪತ್ರಿಕೆಗೆ ಕಳುಹಿಸಿದ್ದನ್ನು ಹೇಳಿರಲಿಲ್ಲ. ದಿನಪತ್ರಿಕೆ ಅಂಚೆಯ ಮೂಲಕ ಮನೆಗೆ ಬಂದಾಗ ಎಲ್ಲರಿಗೂ ಆಶ್ಚರ್ಯ ಮತ್ತು ಗಾಬರಿ. ಅದರಲ್ಲಿದ್ದ ನನ್ನ ಕತೆ ನೋಡಿ, ನಮ್ಮಪ್ಪ ಅಕ್ಷರಶಃ ಕುಣಿದಾಡಿಬಿಟ್ಟರು. ತಮ್ಮ ಶಾಲೆಯ ಸಹೋದ್ಯೋಗಿಗಳಿಗೆ ತೋರಿಸಿ ಕತೆಯನ್ನು ಓದಿ ಹೇಳಿಯೇಬಿಟ್ಟರು. ಈ ವಯಸ್ಸಿಗೆ ನಿಮ್ಮ ಮಗನಿಗೆ ಇದೆಲ್ಲಾ ಹೇಗೆ ಬಂತು ಎನ್ನುವ ಮೆಚ್ಚುಗೆಯ ಮಾತುಗಳು ಅವರನ್ನು ಅಟ್ಟಕ್ಕೇರಿಸಿದ್ದವು. ಅದೊಂದು ಪತ್ರಿಕೆಯನ್ನು ಜತನದಿಂದ ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು. ಮನೆಗೆ ನೆಂಟರು ಬಂದರೆ, ದಾರಿಯಲ್ಲಿ ಯಾರಾದರೂ ಸಿಕ್ಕರೆ, ಹೀಗೆ ಎಲ್ಲರಿಗೂ ಹೆಮ್ಮೆಯಿಂದ ಪತ್ರಿಕೆಯನ್ನು ತೋರಿಸುತ್ತಿದ್ದರು. ಕೇಳಿದವರಿಗೆ ಅದರ ಜೆರಾಕ್ಸ್ ತೆಗೆಸಿಕೊಟ್ಟಿದ್ದರು. ನಮ್ಮಪ್ಪನ ಸಂಭ್ರಮದ ಅತಿರೇಕಕ್ಕೆ ಅಮ್ಮ ಒಮ್ಮೆ ಸಾಕು ಬಿಡಿ, ಅದೇನು ಎಲ್ಲರಿಗೂ ತೋರಿಸಿಕೊಂಡು ಓಡಾಡ್ತೀರಿ ಎಂದದ್ದಕ್ಕೆ ಅಮ್ಮನಿಗೆ ರೇಗಿದ್ದರು.
ನಾನು ಕಾಲೇಜಿಗೆ ಮೈಸೂರಿಗೆ ಸೇರಿಕೊಂಡೆ. ಹಾಸ್ಟೆಲ್ಲಿನಲ್ಲಿ ಮಾಡುವುದಕ್ಕೆ ಕೆಲಸವಾದರೂ ಏನಿತ್ತು. ಕತೆ ಬರೆಯುತ್ತಾ ಹೋದೆ. ವಾರಕ್ಕೆ ಎರೆಡೆರಡು ಪತ್ರಿಕೆಯಲ್ಲಿ ನನ್ನ ಕತೆಗಳು ಪ್ರಕಟವಾಗತೊಡಗಿದವು. ತಿಂಗಳ ಕಥಾ ಸ್ಪರ್ಧೆಯಲ್ಲಿ ನನಗೆ ಬಹುಮಾನಗಳು ಬರತೊಡಗಿದವು. ಅನನ್ಯ, ರಾಬಿನ್ ವೆಂಶಿ, ನಾಗೇಂದ್ರಕುಮಾರ್ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕತೆಗಳನ್ನು ಬರೆಯತೊಡಗಿದ್ದೆ. ಪ್ರತಿ ಭಾನುವಾರ ಒಂದಲ್ಲ ಒಂದು ಪತ್ರಿಕೆಯಲ್ಲಿ ನನ್ನ ಕತೆಗಳು ಪ್ರಕಟವಾದವು. ಕರ್ನಾಟಕದ ಬಹುತೇಕ ದಿನಪತ್ರಿಕೆ, ವಾರಪತ್ರಿಕೆಗ, ಮಾಸಿಕಗಳಲ್ಲಿ ನನ್ನ ಕತೆಗಳು ಪ್ರಕಟವಾದವು. ಆದರೆ ಅದ್ಯಾವುದನ್ನು ನಾನು ಮನೆಗೆ ತಿಳಿಸಲು ಹೋಗಲೇ ಇಲ್ಲ. ಅದನ್ನು ಸಂಗ್ರಹಿಸಿ ಒಂದು ಫೈಲ್ ಮಾಡಿ ಇಡತೊಡಗಿದ್ದೆ. ಗೆಳೆಯರು ಕೇಳಿದ್ದಕ್ಕೆ ನಮ್ಮಪ್ಪ ಬರೀ ಒಂದು ಕತೆ ಪ್ರಕಟವಾಗಿದ್ದಕ್ಕೆ ಆ ಪರಿ ಸಂಭ್ರಮ ಪಟ್ಟರು, ಈ ಸಾರಿ ರಜೆಗೆ ಮನೆಗೆ ಹೋದಾಗ ಈ ಬಂಡಲ್ ಇಡ್ತೇನೆ..ಆವಾಗ ಅಷ್ಟೇ..ಎನ್ನುತ್ತಿದ್ದೆ. ನನ್ನ ಉದ್ದೇಶವೂ ಅದೇ ಆಗಿತ್ತು..ಅಷ್ಟೂ ಪ್ರಕಟಿತ ಕತೆಯನ್ನು ಅವರ ಮುಂದಿಟ್ಟು ಅವರ ಖುಷಿಯನ್ನು ನೋಡುವುದಿತ್ತು..
ಆದರೆ ಬದುಕು ದಿಕ್ಕು ಬದಲಿಸಿತ್ತು. ಅದೊಂದು ದಿನ ಅಚಾನಕ್ ಆಗಿ ನಮ್ಮಣ್ಣ ಹಾಸ್ಟೆಲ್ಲಿಗೆ ಬಂದವನು ಅಪ್ಪನಿಗೆ ಹುಷಾರಿಲ್ಲ ಎಂದದ್ದಷ್ಟೇ, ಅದಾದ ಒಂದೇ ತಿಂಗಳಿಗೆ ಅಪ್ಪ ನಮ್ಮೊಂದಿಗಿರಲಿಲ್ಲ. ನಾನು ಅಪ್ಪನಿಗಾಗಿ ಬೇಡದ ಮೂರು ವರ್ಷಗಳ ಕಾಲೇಜ್ ವ್ಯಾಸಂಗವನ್ನು ಮಾಡಿದ್ದೆ, ಸಿನಿಮಾದ ಆಸೆಯನ್ನು ಅದುಮಿಟ್ಟುಕೊಂಡಿದ್ದೆ..
ಅದೊಂದು ದಿನ ಹಾಸ್ಟೆಲ್ನಿಂದ ತೆರವು ಮಾಡಿಕೊಂಡು ಮನೆಗೆ ಬಂದು ಕತೆಗಳ ಬಂಡಲನ್ನು ಅಮ್ಮನ ಮುಂದೆ ತೆರೆದಿಟ್ಟೆ. ನಿಮ್ಮಪ್ಪ ಇದ್ದಿದ್ರೆ ಇಷ್ಟೂ ಪ್ರಕಟಣೆ ನೋಡಿ ಅದೆಷ್ಟು ಖುಷಿ ಪಡುತ್ತಿದ್ದರೋ? ಎಂದು ಕಣ್ಣೀರಾದರು. ನಾನು ಬಂಡಲನ್ನು ಹಾಗೆಯೇ ಕಟ್ಟಿ ಅಟ್ಟಕ್ಕೆ ಬೀಸಾಕಿದೆ.
ಅದಾದ ನಂತರ ನಾನು ಹೊಸ ಕತೆಯನ್ನು ಬರೆದಿಲ್ಲ. ಬರೆದರೆ ಓದುವುದಕ್ಕೆ ಓದುಗರಿರಬಹುದು, ಆದರೆ ಸಂಭ್ರಮಿಸಲು ಅಪ್ಪ ಇಲ್ಲವಲ್ಲ...


1 comment:

  1. Very touching..... ಹೃದಯಸ್ಪರ್ಶೀ ಮನಸಿನ ಮಾತುಗಳು. ಅಪ್ಪ ಎಲ್ಲೂ ಹೋಗಿಲ್ಲ. ನಿಮ್ಮ ಕತೆಗಳೆಲ್ಲವನ್ನು ಮರೆಯಲ್ಲಿ ನಿಂತು ಓದುತ್ತಿರುತ್ತಾರೆ. ಅಪ್ಪ ಅಲ್ಲೆಲ್ಲೋ ನಿಂತು ಸದಾ ಕಾಲ ನಿಮ್ಮ ಬೆನ್ನು ತಟ್ಟುವ ಕೆಲಸಗಳನ್ನು ಮಾಡುತ್ತಿರಿ. Wish you All the best!

    ReplyDelete