Saturday, May 7, 2016

ತಿಥಿ ಸಿನಿಮಾದಿಂದ ಕಲಿಯಬೇಕಾದದ್ದು...

ಕನ್ನಡದಲ್ಲಿ ತಿಥಿ ಎನ್ನುವ ಸಿನಿಮಾ ಈಗ ಸದ್ದು ಮಾಡುತ್ತಿದೆ. ಕನ್ನಡದ, ಮೈಸೂರು ಮಂಡ್ಯ ಪ್ರಾದೇಶಿಕ ಸೊಗಡನ್ನು ಅಲ್ಲಿಯ ಸ್ಥಳೀಯರನ್ನು  ಸಿನೆಮಾದಲ್ಲಿನ ಪಾತ್ರಗಳನ್ನಾಗಿ  ಬಳಸಿ ಒಂದು ಸಾವಿನ ಮತ್ತದರ ಉತ್ತರಾಧಿಕ್ರಿಯಾ ಸುತ್ತ  ನಡೆಯುವ ಕತೆಯನ್ನು ಸ್ವಾಭಾವಿಕವಾಗಿ ತೆರೆಯ ಮೇಲೆ ತರಲಾಗಿದೆ. ಭಾಷೆಯ ಸೊಗಡನ್ನು ಅರಿತಿರುವವರಿಗೆ ಸಿನಿಮಾ ಹಬ್ಬ, ಹಾಗೆಯೇ ಭಾಷೆಯ ಸೊಗಡು ಗೊತ್ತಿಲ್ಲದಿದ್ದರೂ ಸಿನಿಮಾ ಒಂದು ಅನುಭವವಾಗಿ ಕಾಡುತ್ತದೆ. ಹಾಗಾಗಿ ಕನ್ನಡಕ್ಕೆ ಬಂದ ಅಪರೂಪದ ಚಿತ್ರ ತಿಥಿ.
ಇದಿಷ್ಟರ ಜೊತೆಗೆ ತಿಥಿ ಸಿನಿಮಾದಲ್ಲಿ ಒಬ್ಬ ಚಿತ್ರಕರ್ಮಿ ಕಲಿಯಬೇಕಾದ ಹಲವಾರು ಅಂಶಗಳಿವೆ. ನಮ್ಮ ಚಿತ್ರರಂಗದಲ್ಲಿ ಸಿನಿಮಾಕ್ಕೆ ಅದರದೇ ಆದ ನಂಬಿಕೆ, ಸಿದ್ಧಸೂತ್ರಗಳಿವೆ. ಮೊದಲನೆಯದಾಗಿ ಕಲಾತ್ಮಕ ಮತ್ತು ಕಮರ್ಷಿಯಲ್ ಎನ್ನುವ ಒಂದು ಸುಳ್ಳು ವಿಭಜನೆ. ಹಾಗೆ ನೋಡಿದರೆ ನಮ್ಮಲ್ಲಿ ಕಲಾತ್ಮಕ ಚಿತ್ರಗಳು ಎಂದಾಕ್ಷಣ ಅದರಲ್ಲಿ ಮನರಂಜನೀಯ ಅಂಶಗಳು ಕಡಿಮೆ ಎನ್ನುವ ನಿರ್ಧಾರಕ್ಕೆ ಪ್ರೇಕ್ಷಕ ಇರಲಿ, ಸಿನಿಮಾ ಮಂದಿಯೇ ಬಂದು ಬಿಡುತ್ತಾರೆ. ನಿಧಾನಗತಿಯ ಕ್ಯಾಮೆರಾ ಚಲನೆ, ಹಾಡು ಹೊಡೆದಾಟ ಇರಬಾರದು, ಮತ್ತು ಸಿನಿಮಾ ಕತೆ ಕಡ್ಡಾಯವಾಗಿ ಸಾಮಾಜಿಕ ಕಳಕಳಿಯನ್ನು ಅಂದರೆ ಯಾವುದಾದರೂ ಸಾಮಾಜಿಕ ಸಮಸ್ಯೆಯನ್ನು ಕುರಿತಿರಬೇಕು ಎಂಬುದು. ಈ ನೀತಿ ನಿಯಮ ಅದ್ಯಾರು ಮಾಡಿದರೋ ಗೊತ್ತಿಲ್ಲ, ಹಾಗೆಯೇ ಇದೆಲ್ಲೂ ದಾಖಲಾಗೂ ಇಲ್ಲ. ಆದರೆ ಈ ಅಲಿಖಿತ ನಿಯಮವನ್ನು ಪಾಲಿಸಿಕೊಂಡು ಬರುವವರಿಗೆ ನಮ್ಮಲ್ಲಿ ಕಡಿಮೆಯಿಲ್ಲ. ಒಂದು ಕಲಾತ್ಮಕ ಚಿತ್ರವೆಂದರೆ ಅದಕ್ಕೆ ಸಬ್ಸಿಡಿ, ಪ್ರಶಸ್ತಿ ಹಣವೇ ಮುಖ್ಯ  ಆದಾಯ, ಬಿಡುಗಡೆ ಆಗಬಹುದು, ಆಗದೆಯೂ ಇರಬಹುದು ಎನ್ನುವಂತಿದೆ ಸಧ್ಯದ ಸನ್ನಿವೇಶ. ಇಂತಹ ಸಂದರ್ಭದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ ತಿಥಿ ಚಿತ್ರದ ಬಿಡುಗಡೆಗಾಗಿ ಪ್ರೇಕ್ಷಕ ಕಾದದ್ದು, ನೋಡಿ ಖುಷಿ ಪಡುತ್ತಿರುವುದನ್ನು ನೋಡಿದರೆ ಕಲಾತ್ಮಕ, ಅವಾರ್ಡ್ ಸಿನಿಮಾ, ಮನರಂಜನೆ ಸಿನಿಮಾ ಇವುಗಳ ನಡುವಣ ಅಂತರವಿಲ್ಲ. ಎಲ್ಲದಕ್ಕೂ ಒಂದೇ ಶಬ್ದ ಮತ್ತು ಒಂದೇ ಅರ್ಥ ಅದು ಸಿನಿಮಾ ಎನ್ನುವುದು ತಿಥಿಯ ಮೂಲಕ ಕಲಿತಂತಾಗಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸ್ಟಾರ್ ಕಾಸ್ಟ್, ಸ್ಟಾರ್ ನಿರ್ದೇಶಕರಿಲ್ಲದೆ ಪ್ರಶಸ್ತಿ ಪುರಸ್ಕೃತ ಚಿತ್ರವೊಂದಕ್ಕೆ ಪ್ರೇಕ್ಷಕ ಕಾದದ್ದು, ಸಪ್ನಾದಂತಹ ಚಿತ್ರಮಂದಿರ ಹೌಸ್ ಫುಲ್ ಆದದ್ದು  ತಿಥಿಯ ಮೂಲಕವೇ.
ಇನ್ನು ಎರಡನೆಯದಾಗಿ ನೀವು ಗಾಂಧಿನಗರಕ್ಕೆ ತಿಥಿಯಂತಹ ಚಿತ್ರದ ಕತೆಯನ್ನು ಯಾವುದೇ ನಿರ್ಮಾಪಕರ ಹತ್ತಿರಕ್ಕಾದರೂ ಹೋದರೆ ಅವರು ಸಿನಿಮಾ ಮಾಡುವರೇ..? ನೆವರ್. ಕತೆಯಿರಲಿ. ಸಿನಿಮಾದ ಶೀರ್ಷಿಕೆಯನ್ನೇ ಮೊದಲಿಗೆ ತೆಗೆದು ಬೀಸಾಕುತ್ತಿದ್ದರು. ಸಿನಿಮಾದ ಹೆಸರೇ ತಿಥಿ ಎಂದಾಕ್ಷಣ ಅಲ್ಲೇ ಹೌಹಾರದೆ ಇರುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿ ನೆಗೆಟಿವ್, ಪೊಸಿಟಿವ್ ಕ್ಯಾಚಿ ಹೀಗೆ ಟೈಟಲ್ ವಿಷಯದಲ್ಲೂ ಒಂದಷ್ಟು ವಿಂಗಡಣೆ ಇವೆ. ಅಂತಹುದರಲ್ಲಿ ತಿಥಿ ನೆಗಟಿವ್ ಎನ್ನುವ ಲಿಸ್ಟ್ ಗೆ ಸೇರುತ್ತದೆ. ನಾನು ನನ್ನದೇ ಸಿನಿಮಾ ಮೃತ್ಯು ಎಂದು ಶೀರ್ಷಿಕೆ ಇಟ್ಟಾಗ ಅದೆಷ್ಟು ಜನರು ಹೌಹಾರಿದ್ದರೆಂದರೆ ಪ್ರತಿಯೊಬ್ಬರೂ ಈ ವಿಷಯದಲ್ಲಿ ಸಲಹೆ ಕೊಟ್ಟಿದ್ದರು. ಮೊದಲ ಸಿನಿಮಾ, ಇದು ಆಗಲ್ಲ, ಈ ಟೈಟಲ್ ನೆಗೆಟಿವ್ ಎಂದಿದ್ದರು. ಅದೆಷ್ಟರ ಮಟ್ಟಿಗೆ ನಿಜವೋ ಸುಳ್ಳೋ ಆ ಸಿನಿಮಾ ಆ ಶೀರ್ಷಿಕೆ ಇಟ್ಟುಕೊಂಡು ಎರಡ್ಮೂರು ವರ್ಷ ಒದ್ದಾಡಿ ಕೊನೆಗೆ ಬೇರೆ ದಾರಿ ಕಾಣದೆ ಬದಲಾವಣೆ ಮಾಡಬೇಕಾಯಿತಾದರೂ ಅದರ ಫಲಿತಾಂಶ ಮಾತ್ರ ಅಷ್ಟೇ ಆದದ್ದು ಬೇರೆ ವಿಷಯ ಬಿಡಿ. ಆದರೆ ವಾಹಿನಿಯವರು ಆವಾಗೆಲ್ಲಾ ದಂಡಿ ದಂಡಿಯಾಗಿ ಸಿನಿಮಾ ಉಪಗ್ರಹ ಪ್ರಸಾರದ ಹಕ್ಕಿಗೆ ತೆಗೆದುಕೊಳ್ಳುತ್ತಿದ್ದರಲ್ಲ, ನಾವು ಅವರನ್ನು ಸಮೀಪಿಸಿದಾಗ ಸಿನಿಮಾ ನೋಡಿ ಮೆಚ್ಚಿದ ಅವರು ರಿಜೆಕ್ಟ್ ಮಾಡಿದ್ದು ಮಾತ್ರ ಟೈಟಲ್ ನಿಂದಾಗಿ ಎಂದರು. ಅವರು ಕೊಟ್ಟ ಕಾರಣ, "ಅಲ್ರೀ .. ಮೃತ್ಯು ಅಂತ ಹೆಸರು ಇಟ್ಟಿದ್ದೀರಾ..? ನಾವು ಅದನ್ನು ಟಿವಿಲಿ ಪ್ರಸಾರ ಮಾಡುವಾಗ ಮುಂದಿನವಾರ ನಿಮ್ಮ ಮನೆಗೆ ಮೃತ್ಯು, ನಿಮ್ಮ ಮನೆಯಲ್ಲಿ ಮೃತ್ಯು ಅಂತ ಅನೌನ್ಸ್ ಮಾಡೋಕ್ಕಾಗುತ್ತೆನ್ರಿ .." ಎಂದಿದ್ದರು. ನನಗೂ ಹೌದಲ್ಲ ಎನಿಸಿತ್ತು. ಹಾಗೆಯೇ ಜನ ಹೇಗೆ ಚಿತ್ರಮಂದಿರಕ್ಕೆ ಬರ್ತಾರೀ..ಬಾ ಮೃತ್ಯುಗೆ ಹೋಗೋಣ, ಮೃತ್ಯುಗೆ ಹೋಗಿದ್ಯಾ, ಮೃತ್ಯು ನೋಡಾಯ್ತಾ..? ಎಂದೆಲ್ಲಾ ಮಾತಾಡೋದು ನೆಗಟಿವ್ ವೈಬ್ರೇಶನ್ ಆಲ್ವಾ ಎಂದಿದ್ದರು..ಈಗ ತಿಥಿ ಅದೆಲ್ಲವನ್ನು ಮೀರಿ ನಿಂತಿದೆ. ಈಗಲೂ ಸಿನಿಮಾದಲ್ಲಿ ಪ್ರಸಾರವಾಗಬೇಕಾದರೆ ಮುಂದಿನವಾರ ನಿಮ್ಮ ಮನೆಯಲ್ಲಿ ತಿಥಿ ಎನ್ನಲೇಬೇಕು, ಬಾ ತಿಥಿಗೆ
ಹೋಗೋಣ, ತಿಥಿ ಎಲ್ಲಿ? ಎನ್ನಲೇ ಬೇಕು. ಆದರೆ ನೆಗಟಿವ್, ಪೊಸಿಟಿವ್ ಗಳಿಗಿಂತ ಸಿನಿಮಾ ಮುಖ್ಯ, ಅದನ್ನು ಜನರಿಗೆ ತಲುಪಿಸುವುದು ಮುಖ್ಯ ಎನ್ನುವುದನ್ನು ಸಿನಿಮಾ ತೋರಿಸಿಕೊಟ್ಟಿದೆ.
ಮೂರನೆಯದಾಗಿ ಸಿನಿಮಾ ಕತೆ. ಚಿತ್ರಕತೆ. ಕತೆ ಎನ್ನುವುದು ಒಂದು ಪ್ರವಾಹ. ಅದು ಹರಿಯುತ್ತಾ ಸಾಗಬೇಕು. ನಾವೆಲ್ಲಾ ಒಂದು ಡಿಫರೆಂಟ್ ಎನ್ನುವ ಕತೆ ಮಾಡಬೇಕು ಎಂದೆ ಒದ್ದಾದುತ್ತೇವೆ, ದೃಶ್ಯಗಳು ಅದ್ಭುತವಾಗಿ ಡಿಫರೆಂಟ್ ಆಗಿರಬೇಕು ಎನ್ನುವ ಹವಣಿಕೆ ಸಿನೆಮಾವನ್ನು ದೃಶ್ಯಗಳನ್ನೂ ವಿಕೃತ ಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು. ಈ ಡಿಫರೆಂಟ್ ಭೂತದಿಂದಾಗಿ ಅಸಹಜ ಪಾತ್ರಗಳು ಅಸಹಜ ಸನ್ನಿವೇಶಗಳು ಸೃಷ್ಟಿಯಾಗಿ ಹೇವರಿಕೆ ಹುಟ್ಟಿಸುತ್ತಿವೆ. ಆದರೆ ತಿಥಿ ಚಿತ್ರದಲ್ಲಿನ ಚಿತ್ರಕತೆ ಪ್ರವಾಹವಾಗಿ ಹರಿಯುತ್ತದೆ. ಬೇಕು ಬೇಡದ ಸನ್ನಿವೇಶಗಳು ಎನ್ನುವ ವಿಭಜನೆಯೇ ಇಲ್ಲದೆ ಸಿನಿಮಾ ಮುಂದು ಸಾಗುತ್ತದೆ. ಈ ಮಾತನ್ನು ಯಾಕೆ ಹೇಳಿದೆನೆಂದರೆ ಮುಖ್ಯವಾಹಿನಿಯ ಸಿನಿಮಾದಲ್ಲಿ  ಸಂಕಲನದ ಹಂತದಲ್ಲಿ ಫೈನಲ್ ಟ್ರಿಮ್ ನಡೆಯುವಾಗ ಲ್ಯಾಗ್ ಎನಿಸುವ ಶಾಟ್ ಗಳು ಮೊದಲಿಗೆ ಕತ್ತರಿಗೆ ಒಳಗಾಗುತ್ತವೆ, ಆನಂತರ ಅನವಶ್ಯಕ ಎನಿಸುವ ದೃಶ್ಯಗಳು.. ಹೀಗೆ ಉದ್ದ ಕಡಿತವಾಗುತ್ತಾ ಸಾಗುತ್ತದೆ. ಆ ಸಿನಿಮಾತಂಡ ಅದೇ ಕತೆಯಲ್ಲಿ ಮುಳುಗಿಹೋಗಿರುತ್ತಾದ್ದರಿಂದ ಅವರಿಗೆ ಆ ಕತೆ ತೀರಾ ಚಿರಪರಿಚಿತವಾಗಿರುತ್ತಾದ್ದರಿಂದ ಸಿನಿಮಾದಲ್ಲಿನ ಡೀಟೇಲ್ಸ್ ಇಷ್ಟು ಬೇಕಾ? ಜಾಸ್ತಿಯಾಯಿತು ಎನಿಸಿ ಮೊದಲಿಗೆ ಶಾಟ್ಸ್ ಲೆಕ್ಕದಲ್ಲಿ, ಆನಂತರ ಸೀನ್ ಲೆಕ್ಕದಲ್ಲಿ ಕತ್ತರಿಸಿ, ಸಿನಿಮಾದ ಒಟ್ಟಾರೆ ಉದ್ದ ಇಷ್ಟೇ ಇರಬೇಕು ಎನ್ನುವ ಸುಳ್ಳು ನಿಯಮವನ್ನು ಪಾಲಿಸಲು ಪ್ರಯತ್ನಿಸುತ್ತಾರೆ. ಆದರೆ ಹೊಸದಾಗಿ ನೋಡುವ ಪ್ರೇಕ್ಷಕನಿಗೆ ಡೀಟೇಲ್ಸ್ ಸಿಗುವುದಿಲ್ಲ. ಎಲ್ಲವೂ ಹೀಗೆ ಬಂದು ಹಾಗೆ ಹೋದಂತೆ ಭಾಸವಾಗುತ್ತದೆ. ಸಿನಿಮಾದ ಒಟ್ಟಾರೆ ಫೀಲ್ ಸಿಗುವುದೇ ಇಲ್ಲ. ಆದರೆ ತಿಥಿಯಲ್ಲಿ ಹಾಗಾಗಿಲ್ಲ. ಅಲ್ಲಿ ಉದ್ದನೆಯ ಶಾಟ್ಸ್ ಗಳಿವೆ. ಕೋಳಿ, ಹಸು ದನ ಕರುಗಳ ಉದ್ದುದ್ದದ ರಿಯಾಕ್ಷನ್ ಸ್ ಇವೆ. ಲ್ಯಾಗ್ ಎಂದು ಅದನ್ನೆಲ್ಲಾ ಕತ್ತರಿಸಿದ್ದರೆ ಈಗ ಸಿಗುವ ಫೀಲ್ ಮಂಗಮಾಯವಾಗುತ್ತಿದ್ದರಲ್ಲಿ ಸಂದೇಹವಿಲ್ಲ.
ನಾಲ್ಕನೆಯದಾಗಿ ಪಾತ್ರಗಳು ಮತ್ತು ಕಲಾವಿದರು. ತಿಥಿ ಸಿನಿಮಾವನ್ನು ಯಾರೇ ವೃತ್ತಿಪರ ಕಲಾವಿದರ ಕೈಯಲ್ಲಿ ಮಾಡಿಸಲು ಹೋಗಿದ್ದರೆ ನಿರ್ದೇಶಕರು ಹರಸಾಹಸ ಪಡಬೇಕಾಗುತ್ತಿತ್ತು, ಅಷ್ಟೇ ಅಲ್ಲ. ಮತ್ತು ಅಷ್ಟು ಸಾಹಸ ಪಟ್ಟರೂ ಆ ನೈಜತೆ ಬರುತ್ತಿತ್ತಾ ಎನ್ನುವುದು ಪ್ರಶ್ನೆ. ನಾವೀಗಾಗಲೇ ನೋಡಿದ್ದೇವೆ. ಇತ್ತೀಚಿಗೆ ಬಂದ ಚಿತ್ರಗಳಲ್ಲಿ ನೈಜತೆ ಮಾಯವಾಗಿ ಕಲಾವಿದರೆಲ್ಲಾ ಕೃತಕವಾಗಿ ಕಂಡ ಉದಾಹರಣೆಯನ್ನು. ಹಾಗಾಗಿ ಒಂದು ಪ್ರಾಂತ್ಯದ ಸೊಬಗನ್ನು ತರಲು ತಿಥಿ ಚಿತ್ರತಂಡ ಅಲ್ಲಿಯದೇ ಜನರನ್ನು ಪಾತ್ರಧಾರಿಗಳನ್ನಾಗಿ ಆಯ್ದು ಕೊಂಡದ್ದು ಕಾಸ್ಟಿಂಗ್-ತಾರಾಗಣದ ಆಯ್ಕೆ ಎನ್ನುವುದಕ್ಕೆ ಹೊಸ ಭಾಷೆ ಬರೆದಿದೆ.
2002 ರಲ್ಲಿ ಬಿಡುಗಡೆಯಾದ ಮೊರೆಲ್ಲಿ ಫೆರ್ನಂಡಿಸ್ ನಿರ್ದೇಶನದ ಬ್ರೆಜಿಲ್ ಚಿತ್ರ ಸಿಟಿ ಆಫ್ ಗಾಡ್ ಚಿತ್ರದಲ್ಲೂ ಇಂತಹದ್ದೇ ಪ್ರಯೋಗ ನಡೆದಿತ್ತು. ಇಡೀ ಚಿತ್ರದಲ್ಲಿ ಒಬ್ಬೆ ಒಬ್ಬ ಕಲಾವಿದನನ್ನು ಹೊರಟು ಪಡಿಸಿ ನಿರ್ದೇಶಕರು ಉಳಿದೆಲ್ಲಾ ಪಾತ್ರಧಾರಿಗಳನ್ನು ಅಲ್ಲಿಯ ಸ್ಥಳೀಯ ಕಲಾವಿದರನ್ನು ಹುಡುಕಿದ್ದರು. ಹಾಗಾಗಿಯೇ ಸಿಟಿ ಆಫ್ ಗಾಡ್  ಮಾಸ್ಟರ್ ಪೀಸ್ ಎನಿಸಿಕೊಂಡದ್ದು. ಹಾಗೆಯೇ ಆ ವಿಷಯದಲ್ಲಿ ತಿಥಿ ಕೂಡ ಕನ್ನಡದಲ್ಲಿ ಮಾಸ್ಟರ್ ಪೀಸ್ ಎಂದರೆ ತಪ್ಪಾಗಲಾರದು.
ಇನ್ನು ಐದನೆಯದಾಗಿ ಕತೆ-ನಿರೂಪಣೆ ವಿಷಯಕ್ಕೆ ಬಂದರೆ ಸಿನಿಮಾ ಸಿದ್ಧಸೂತ್ರಗಳನ್ನು ಬೀಸಾಕುವುದರ ಮೂಲಕ ನಮಗೆಲ್ಲಾ ಪಾಠ ಕಲಿಸಿದೆ. ಶೀರ್ಷಿಕೆ ಮುನ್ನ, ಮಧ್ಯಂತರದ ಶಾಕ್, ಕ್ಲೈಮಾಕ್ಸ್ ಹೀಗೆ ಇದಾವುದನ್ನು ತಲೆ ಗೆಡಿಸಿಕೊಳ್ಳದೆ ಸಿನಿಮಾ ಮಾಡಲಾಗಿದೆ. ಕತೆಗೆ ತಕ್ಕಂತೆ ನಿರೂಪಣೆ ಸಾಗುತ್ತದೆ. ಪಾತ್ರಧಾರಿಗಳು ಸನ್ನಿವೇಶಕ್ಕೆ ತಕ್ಕಂತೆ ಮಾತನಾಡುತ್ತಾರೆ. ಅದರಲ್ಲಿ ಪಂಚಿಂಗ್ ಇರಬಹುದು, ಹಾಸ್ಯ ಇರಬಹುದು ಫಿಲಾಸಫಿ ಇರಬಹುದು, ಬೈಗುಳ ಇರಬಹುದು. ಯಾವುದೂ ಬಲವಂತವಾಗಿ ತುರುಕಲಾಗಿಲ್ಲ. ಅದು ಕತೆಯ ಜೊತೆಗೆ ದೃಶ್ಯದ ಓಘಕ್ಕೆ ಸಹಾಯವಾಗುವಂತೆ ಹೆಚ್ಚೂ ಇಲ್ಲದೆ, ಕಡಿಮೆಯೂ ಇಲ್ಲದೆ ಸ್ಫುರಿಸಿದೆ. ಇದು ಪಂಚಿಂಗ್, ಇದು ಮುಖ್ಯವಾದದ್ದು, ಇಲ್ಲಿ ಸ್ಟ್ರೆಸ್ ಮಾಡಿ ಹೇಳ್ಬೇಕು, ಎಂದೆಲ್ಲಾ ಮಾತುಗಾರಿಕೆಯನ್ನು ವಿಭಜಿಸದೆ ಮತ್ತದರ ಪರಿವೂ ಇಲ್ಲದೆ ಪಾತ್ರಗಳು ಮಾತಾಡುತ್ತವೆ. ಸಂಭಾಷಣೆಗಳು ಇಚ್ಚಿತ ಭಾವವನ್ನು ಯಶಸ್ವಿಯಾಗಿ ಕೊಟ್ಟಿದೆ.
ಈ ಎಲ್ಲವೂ ತಿಥಿಯ ಚಿತ್ರದ ಕೊಡುಗೆ. ಒಬ್ಬ ಸಿನಿಮಾ ಕರ್ಮಿ ಹಾಲಿವುಡ್, ಬಾಲಿವುಡ್ ಸಿನೆಮಾಗಳಿಂದ ಕಲಿಯುತ್ತಾ ಸಿನಿಮಾ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನೋಡಿದರೆ ತಿಥಿ ಮಾಸ್ಟರ್ ಡಿಗ್ರಿ ಮಾಡಿದಷ್ಟು ವಿಷಯಗಳನ್ನು ನಮಗೆ ತಿಳಿಸುತ್ತದೆ. ನೋಡುತ್ತಾ, ಖುಷಿ ಪಡಿಸುತ್ತಾ, ಕಲಿಸುತ್ತಾ ಸಾಗುವ ಸಿನಿಮಾ ತಿಥಿ, ನಿರ್ದೇಶಕ ರಾಮ್ ರೆಡ್ಡಿ,  ಬರಹಗಾರ ಈರೆ ಗೌಡ ಮತ್ತು ಅಷ್ಟೂ ಕಲಾವಿದರನ್ನು ಮೆಚ್ಚಿಕೊಳ್ಳುತ್ತಾ ಅವರ ಅದ್ಭುತ ಪ್ರತಿಭೆಗಳ ಬಗ್ಗೆ ಹೆಮ್ಮೆ ಪಡುತ್ತಾ ಸಿನಿಮಾ ನೋಡುವ ಖುಷಿ ನಮ್ಮ ನಿಮ್ಮದಾಗಲಿ..

No comments:

Post a Comment