Friday, March 25, 2016

ಸೆನ್ಸಾರ್ ...ಸೆನ್ಸ್ ಇರಲಿ ಸಾರ್..?

ಮೊನ್ನೆ ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿನ ಒಂದಷ್ಟು ಬೈಗುಳಿಗೆ ಮ್ಯೂಟ್ ಮಾಡಿದ್ದರಿಂದ ಸೆನ್ಸಾರ್ ಮಂಡಳಿ ಸಿನೆಮಾದವರ ಕೆಂಗಣ್ಣಿಗೆ ಗುರಿಯಾದದ್ದು ಸತ್ಯ. ಹಾಗೆ ನೋಡಿದರೆ ಸೆನ್ಸಾರ್ ಮಂದಿ ಮತ್ತು ಸಿನೆಮಾದವರ ಶೀತಲ ಸಮರ ನಿನ್ನೆ ಈವತ್ತಿನದಲ್ಲ.  ಸಂಸ್ಕಾರ ಚಿತ್ರಕ್ಕೆ ಪ್ರಮಾಣ ಪತ್ರವನ್ನೇ ನೀಡಲು ಸಾಧ್ಯವಿಲ್ಲ ಎನ್ನುವುದರ ಜೊತೆಗೆ ಮೊನ್ನೆ ಮೊನ್ನೆ ಗಾಳಿಬೀಜ ಎನ್ನುವ ಚಿತ್ರಕ್ಕೂ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಹಾಗೆಯೇ ಕೆಲವು ಸಿನಿಮಾಗಳನ್ನು ಪೂರ್ಣಪ್ರಮಾಣದ ಚಲನಚಿತ್ರ ಎನ್ನಲು ಸಾಧ್ಯವಿಲ್ಲ ಎಂದು ಪ್ರಮಾಣ ಪತ್ರ ನಿರಾಕರಿಸಿದ ಪ್ರಸಂಗಗಳೂ ಇವೆ. ಹಾಗೆ ನೋಡಿದರೆ ಸೆನ್ಸಾರ್ ಮಂದಿ ಒಂದು ಸಿನೆಮಾವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅದವರ ಕೆಲಸ. ಅವರು ಸಿನಿಮಾ ನೋಡುವ ಹಾಗೆ ನಾವೂ ನೋಡಲಾಗುವುದಿಲ್ಲ. ದಿನಕ್ಕೆರಡು ಸಿನೆಮಾದಿಂದ ನಾಲ್ಕೈದು ಸಿನಿಮಾಗಳವರೆಗೆ ಸಿನಿಮಾ ನೋಡುವ ಅನಿವಾರ್ಯ ಅವರಿಗೆ ಬಂದೊದಗುತ್ತದೆ. ಬೋರ್ ಆದರೆ ಬೇರೆ ಕಡೆ ಗಮನ ಹರಿಸುವುದಾಗಲಿ, ನಿದ್ರೆ ಬಂತೆಂದು ಮಲಗುವುದಾಗಲಿ, ಎದ್ದು ಹೊರಗೆ ಬಂದು ಸ್ವಲ್ಪ ಹೊತ್ತು ಕಾಲ ಹರಣಮಾಡುವುದಾಗಲಿ ಮಾಡುವ ಸ್ವತಂತ್ರ ಅವರಿಗಿಲ್ಲ. ನೋಡಬೇಕು, ನೋಡಲೇ ಬೇಕಷ್ಟೇ. ಪಕ್ಕದಲ್ಲಿ ಸೆನ್ಸಾರ್ ಸ್ಕ್ರಿಪ್ಟ್ ಇಟ್ಟುಕೊಂಡು ಸಿನಿಮಾ ನೋಡುತ್ತಾ ಸ್ಕ್ರಿಪ್ಟ್ ಗಮನಿಸುತ್ತಾ ಅಲ್ಲಿರುವುದು ಇಲ್ಲಿರುವುದು ಎರಡೂ ಸರಿ ಇದೆಯಾ ಎಂದು ಪರೀಕ್ಷೆ ಮಾಡುತ್ತಾ ನೋಡಾದ ಮೇಲೆ ಅದರ ಬಗೆಗೆ ಚರ್ಚೆ ಮಾಡಿ ಸೆನ್ಸಾರ್ ಮಂಡಳಿಯ ನೀತಿ ನಿಯಮಗಳ ಒಳಗೆ ಸಿನಿಮಾ ಇದೆಯೇ ಎಂಬುದನ್ನು ತುಲನೆ ಮಾಡಿ ಆನಂತರವೇ ಸೆನ್ಸಾರ್ ಪ್ರಮಾಣ ಪತ್ರ ನೀಡುತ್ತಾರೆ. ಇದು ಕಷ್ಟದ ಯಾತನಮಯ ಕೆಲಸವಲ್ಲದೇ ಮತ್ತೇನು..? ಸೆನ್ಸಾರ್ ಮಂಡಳಿಯವರಿಗೆ ಆಯ್ಕೆಗಳಿಲ್ಲ. ಈ ಸಿನಿಮಾ ಬೇಡ ಅನಿಸುತ್ತೆ, ಇದು ಚಂದ ಅನಿಸುತ್ತೆ ಎನ್ನುವ ಮಾತೆ ಇಲ್ಲ, ಎಲ್ಲವನ್ನು ನೋಡಬೇಕು.
ನನ್ನದೇ ಸಿನಿಮಾದ ಸೆನ್ಸಾರ್ ಸಮಯದಲ್ಲಿ ನನಗೆ ಅಂತಹ ಕೆಟ್ಟ ಅನುಭವವೇನೂ ಆಗಲಿಲ್ಲ. ಸಿನೆಮದಲ್ಲಿದ್ದ ಅಷ್ಟೂ ಕ್ರೌರ್ಯ, ರಕ್ತ, ಹಿಂಸೆಗೆ ಮೊದಲೇ ನನಗ್ಯಾವ ಪ್ರಮಾಣ ಪತ್ರ ಬರುತ್ತದೆ ಎಂಬುದನ್ನು ನಾನು ಊಹಿಸಿದ್ದೆ. ಆದರೂ ಅದೆಲ್ಲಿ ಅಲ್ಲಿ  ಮಂಕು ಮಾಡಿ, ಇಲ್ಲಿ ಕತ್ತರಿಸಿ ಎನ್ನುತ್ತಾರೋ ಎನ್ನುವ ಭಯ ನಮ್ಮದಾಗಿತ್ತು. ಏಕೆಂದರೆ ನಮ್ಮ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ರಕ್ತವಿತ್ತು. ಹಿಂಸೆಯಿತ್ತು. ಅದನ್ನೆಲ್ಲಾ ಸುಮ್ಮನೆ ಬ್ಲರ್ ಮಾಡಿ ಎಂದಿದ್ದರೂ ನಮ್ಮ ಸಿನಿಮಾದ ಬಹುತೇಕ ಕಡೆಯಲ್ಲಿ ಬರೀ ಮಂಕು ಮಂಕು ಕಾಣಿಸುತ್ತಿತ್ತೇನೋ? ಆದರೆ ಸೆನ್ಸಾರ್ ಅಧಿಕಾರಿ ಅದ್ಯಾವುದನ್ನೂ ಹೇಳಲಿಲ್ಲ. ಬದಲಿಗೆ, ನಿಮ್ಮ ಸಿನಿಮಾ ಚೆನ್ನಾಗಿದೆ, ಸಿನಿಮಾದ ಒಟ್ಟಾರೆ ಭಾವ ಕೆಡಬಾರದು ಎಂದು ನಾನು ನಿಮಗೆ ರಕ್ತವಿದ್ದ ಕಡೆಗೆ ಬ್ಲರ್ ಮಾಡಲು ಹೇಳುತ್ತಿಲ್ಲ, ಆದರೆ ಸ್ವಾಮೀಜಿ ಮತ್ತು ಆ ಹೆಂಗಸಿನ ದೃಶ್ಯವನ್ನು ಕತ್ತರಿಸಲೇಬೇಕು ಎಂದಿದ್ದರು.
ಇಲ್ಲಿ ಮತ್ತೊಂದು ವಿಷಯವೂ ಇದೆ. ಕನ್ನಡ ಭಾಷೆಯ ಎಷ್ಟೋ ಬೈಗುಳಗಳು ಅಲ್ಲಿನವರಿಗೆ ಆ ಸಮಯದಲ್ಲಿ ನೋಡುವವರಿಗೆ ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಕನ್ನಡದ ಒಂದು ಸಿನೆಮವಿದೆ. ಅದರಲ್ಲಿ ಒಂದು ಶಬ್ದ ಬಂದು ಹೋಗುತ್ತದೆ. ಮಾತಿನ ಭರದಲ್ಲಿ ಬಂದು ಹೋಗುವ ಆ ಅಶ್ಲೀಲ ಪದ ಬಹುತೇಕರಿಗೆ ಗೊತ್ತೇ ಇಲ್ಲದ ಕಾರಣ ಈವತ್ತಿಗೂ ಸಿನಿಮಾದ ಆ ದೃಶ್ಯದಲ್ಲಿ ಆ ಶಬ್ದ ಹಾಗೆಯೇ ಉಳಿದುಕೊಂಡಿದೆ. ಹಾಗೆಯೇ ಎರಡ್ಮೂರು ವರ್ಷದ ಹಿಂದೆ ಬಿಡುಗಡೆಯಾದ ರಿಮೇಕ್ ಚಿತ್ರದಲ್ಲಿ ಮಾತೀನ ಭರದಲ್ಲಿ ಬರುವ ಸಂಭಾಷಣೆಯಲ್ಲಿ ಮತ್ತೊಂದು ಅಶ್ಲೀಲ[?] ಶಬ್ದ ನುಸುಳಿದೆ. ಆದರೆ ಅದೂ ಕೂಡ ಸೆನ್ಸಾರ್ ನಿಂದ ತಪ್ಪಿಸಿಕೊಳ್ಳಲು ಕಾರಣ ಆ ಶಬ್ದ ಬಳಕೆ ಸೆನ್ಸಾರ್ ಮಂಡಳಿಯ ನೋಡುಗರಿಗೆ ಗೊತ್ತಿಲ್ಲದೇ ಇದ್ದದ್ದು. ಹೀಗೆ ಹಲವಾರು ಚಿತ್ರಗಳಲ್ಲಿ ಈ ರೀತಿ ಆದ ಅನುಭವವಿದೆ.
ಹಾಗೆಯೇ ಇಲ್ಲಿ ಸೆನ್ಸಾರ್ ಮಂಡಳಿ ನೋಡಿ, ಪರೀಷ್ಕೃತ ವೀಕ್ಷಣೆಗೆ ಬಾಂಬೆಗೆ ಹೋದರೆ ಅಲ್ಲಿ ಕನ್ನಡ ಪದಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಮೊನ್ನೆ ಮೊನ್ನೆ ಒಂದು ಸಿನೆಮಾಗೆ ಹಾಗೆ ಆಯಿತು. ಇಲ್ಲಿ ವೀಕ್ಷಿಸಿ ಸುಮಾರಷ್ಟು ಕತ್ತರಿ ಪ್ರಯೋಗ ಹೇಳಿದಾಗ ಆ ಸಿನೆಮಾವನ್ನು ಟ್ರಿಬ್ಯೂನಲ್ ಗೆ ಕಳುಹಿಸಲಾಯಿತು. ಅಲ್ಲಿ ಬಿಚ್, ಡರ್ಟಿ ಬಿಚ್, ಬಾಸ್ಟರ್ಡ್ ಪದಗಳನ್ನು ಮ್ಯೂಟ್ ಮಾಡಲಾಯಿತು. ಕನ್ನಡದ ದ್ವಂದ್ವಾರ್ಥ, ಅಶ್ಲೀಲ ಎನಿಸುವ ಪದಗಳು ಹಾಗೆಯೇ ಉಳಿದುಕೊಂಡಿದ್ದವು. ಹಾಗೆಯೇ ಟ್ರಿಬ್ಯೂನಲ್ ಮತ್ತು ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಸೆನ್ಸಾರ್ ವೀಕ್ಷಣೆಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಚುಂಬನ, ಒಂದಷ್ಟು ತೆರೆದೆದೆ ಮುಂತಾದ ಬಿಚ್ಚಾಟಗಳಿಗೆ ಹಿಂದೆ ಮುಂದೆ ನೋಡದೆ ನಮ್ಮಲ್ಲಿ ಎ ಕೊಟ್ಟರೆ, ಅದೇ ಟ್ರಿಬ್ಯೂನಲ್ ನಲ್ಲಿ ಯುಎ ಆಗುತ್ತದೆ. ಅದಕ್ಕೆ ಕಾರಣವಿದೆ. ಅಲ್ಲಿ ಅಂದರೆ ಬಾಲಿವುಡ್ ನಲ್ಲಿ ಚುಂಬನ ಹೆಚ್ಚು ಕಡಿಮೆ ಸರ್ವೇ ಸಾದಾರಣ. ವಿ ವಾಹಿನಿಯ ಹಲವಾರು ಧಾರಾವಾಹಿಗಳಲ್ಲೇ ಚುಂಬನದ ದೃಶ್ಯಗಳು ಸರ್ವೇ ಸಾದಾರಣ ಆದ್ದರಿಂದ ಅಲ್ಲಿ ಅದಕ್ಕೆ ಸ್ವಲ್ಪ ಮಟ್ಟದ ರಿಯಾಯತಿ ಸಿಕ್ಕಿ ಬಿಡುತ್ತದೆ. ಆದರೆ ನಮ್ಮಲ್ಲಿ ಅದಕ್ಕೆ ಎ ಠಸ್ಸೆ ಬೀಳುತ್ತದೆ.
ಆದರೆ ಇದೆಲ್ಲದಕ್ಕೂ ಕಿರಿ ಕಿರಿ ಎನಿಸುವುದು ಧೂಮ್ರಪಾನ ಮತ್ತು ಮಧ್ಯಪಾನದ ಸಂದೇಶ. ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕ ಬಿಟ್ಟಿಯಾಗಿ ಸರ್ಕಾರದ ಸಂದೇಶವನ್ನು ಪ್ರಚಾರ ಮಾಡಬೇಕಾದದ್ದು ಯಾವ ನ್ಯಾಯ? ಇಷ್ಟಕ್ಕೂ ಸರ್ಕಾರಕ್ಕೆ ಅದರದ್ದೇ ಆದ ಫಂಡ್ಸ್ ಇದೆ. ಪ್ರತಿಯೊಂದು ಸಾರ್ವಜನಿಕ ಹಿತಾಸಕ್ತಿಯ ಸಂದೇಶಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ ಧೂಮ್ರಪಾನಕ್ಕೆ ಮಾತ್ರ ಸಿನೆಮಾದವರ ತಲೆ ತಿನ್ನುತ್ತದೆ. ಅತ್ಲಾಗೆ ಧೂಮಪಾನದಿಂದ ಕ್ಯಾನ್ಸರ್ ಬಂದು ಸತ್ತೆ ಹೋಗುತ್ತೀರಿ ಎನ್ನುವ ಸರ್ಕಾರ ಮಾತ್ರ ಅದನ್ನು ಬ್ಯಾನ್ ಮಾಡುವುದಿಲ್ಲ. ಬದಲಿಗೆ ಅದಿರಲಿ, ಅದರ ಹಣವೂ ಬರುತಿರಲಿ, ನೀವು ಮಾತ್ರ ಸಿನಿಮಾದಲ್ಲಿ ತೋರಿಸಬೇಡಿ, ತೋರಿಸಿದರೆ ಅದರ ಕೆಳಗೆ ಸಂದೇಶ ಬರಲಿ ಎನ್ನುತ್ತದೆ ಸರ್ಕಾರ. ಆದರೆ ನಮ್ಮ ಸಿನೆಮಾಗಳಲ್ಲಿ ಅದೊಂದೇ ಇರುವುದಿಲ್ಲವಲ್ಲ. ಕತೆಗೆ ಬೇಕಾದಂತೆ ಅತ್ಯಾಚಾರ ಇರುತ್ತದೆ, ಕೊಲೆ ಇರುತ್ತದೆ..ಮೋಸ ದಗಾ ವಂಚನೆ ಇರುತ್ತದೆ. ಆದರೆ ಸರ್ಕಾರ ಅದ್ಯಾವುದನ್ನು ಕೇರ್ ಮಾಡುವುದಿಲ್ಲ. ಅತ್ಯಾಚಾರ, ಕೊಲೆ ದೃಶ್ಯಗಳು ಬಂದಾಗ ಅದರ ಬಗ್ಗೆ ಏನೂ ಹೇಳುವುದಿಲ್ಲ, ಒಂದಷ್ಟು ಎಲ್ಲಿಯಾದರೂ ದೇಹಭಾಗ ಕಾಣಿಸಿದರೆ, ರಕ್ತ ಕಾಣಿಸಿದರೆ ಮಂಕು ಮಾಡಿ ಎನ್ನುತ್ತದೆ, ಆದರೆ ಸಂದೇಶ ಹಾಕುವ ಗೊಡವೆ ಇಲ್ಲ..ಆದರೆ ಧೂಮಪಾನ.. ಅದಕ್ಕಂತೂ ಹಾಕಲೇಬೇಕು. ಮೊನ್ನೆ ದುನಿಯಾ ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರದಲ್ಲಿ ಮೂರು ಜನ ಕಿರಾತಕರು ಒಂದು ಹುಡುಗಿಯನ್ನು ರೇಪ್ ಮಾಡಿ ಸಾಯಿಸುವ ದೃಶ್ಯವಿತ್ತು. ಅದರಲ್ಲಿ ಚೆನ್ನಾಗಿ ಕುಡಿದು ಸಿಗರೇಟು ಸೇದುತ್ತಾ ಅತ್ಯಾಚಾರ ಮಾಡುತ್ತಾರೆ, ಕೊಲೆ ಮಾಡುತ್ತಾರೆ, ಅಷ್ಟೂ ದೃಶ್ಯದಲ್ಲಿ ತೆರೆಯ ಮೇಲೆ ಧೂಮಪಾನ, ಮದ್ಯಪಾನ ಮಾಡಬೇಡಿ ಅರ್ಥದ ಸಂದೇಶ ಬರುತ್ತಲೇ ಇರುತ್ತದೆ. ಬೇಕಿದ್ದರೆ ರೇಪ್, ಕೊಲೆ ಮಾಡಿ ಆದರೆ ಧೂಮಪಾನ, ಮದ್ಯಪಾನ ಮಾತ್ರ ಮಾಡಬೇಡಿ ಎನ್ನುವ ಅರ್ಥ ಕೊಡುವುದಿಲ್ಲವೇ ಇದು..?
ಏನೇ ಆಗಲಿ. ಸಿನಿಮಾಕ್ಕೆ ಸೆನ್ಸಾರ್ ಬೇಕು. ಇಲ್ಲವಾದಲ್ಲಿ ನಮ್ಮಲ್ಲಿನ ಕೆಲವು ಕಿರಾತಕರು ದೃಶ್ಯಮಾಧ್ಯಮವನ್ನು ವಿಕೃತ, ಹಿಂಸೆ, ಅಶ್ಲೀಲ ಗಳಿಗೆ ಬಳಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗಂತ ಸಿನಿಮಾದ ಒಟ್ಟಾರೆ ಭಾವವನ್ನು ಗಮನಿಸದೆ ಸುಖಾಸುಮ್ಮನೆ ಕತ್ತರಿ ಪ್ರಯೋಗ ಮಾಡುವುದರ ಬಗ್ಗೆ ಸೆನ್ಸಾರ್ ಮಂಡಳಿ ಯೋಚಿಸಿದರೆ ಒಳ್ಳೆಯದು.

No comments:

Post a Comment